Viral News: ಒಂದು ಗಂಟೆಗೆ 15 ಬಾರಿ ವಾಂತಿ ಮಾಡುವ ಮಹಿಳೆ; ಏನಿದು ಅಪರೂಪದ ಕಾಯಿಲೆ?
ಮ್ಯಾಸಚೂಸೆಟ್ಸ್ನ 29 ವರ್ಷದ ಶಾರಿಸ್ ಗೆರೋನಿಯನ್ ಎಂಬ ಮಹಿಳೆ ಅಪರೂಪದ ಸೈಕ್ಲಿಕ್ ಓಮಿಟ್ ಸಿಂಡ್ರೋಮ್ (ಸಿವಿಎಸ್)ನಿಂದ ಬಳಲುತ್ತಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಇದರಿಂದ ಒತ್ತಡ, ಆತಂಕ ಅಥವಾ ಮುಟ್ಟಿನ ಪೂರ್ವ ಲಕ್ಷಣಗಳು ಕಂಡುಬಂದಾಗ ಒಂದು ಗಂಟೆಯಲ್ಲಿ 15 ಬಾರಿ ವಾಂತಿ ಮಾಡುತ್ತಾಳಂತೆ.


ಬೋಸ್ಟನ್: ಈಗ ಹಣ, ಆಸ್ತಿಗಿಂತ ದೇಹದ ಆರೋಗ್ಯವೇ ದೊಡ್ಡ ಸಂಪತ್ತು ಎನಿಸಿಕೊಂಡಿದೆ. ಯಾರ ಬಳಿ ಹೋಗಿ ಕೇಳಿದರೂ ಒಂದಿಲ್ಲೊಂದು ಆರೋಗ್ಯ ಸಮಸ್ಯೆ ತೆರೆದಿಡುತ್ತಾರೆ. ಇತ್ತೀಚೆಗೆ ಮ್ಯಾಸಚೂಸೆಟ್ಸ್ನ ಮಹಿಳೆಯೊಬ್ಬಳು ಹಲವು ವರ್ಷಗಳಿಂದ ಅಪರೂಪದ ಕಾಯಿಲೆಯೊಂದಿಗೆ ಹೋರಾಡಿದ ಅನುಭವವನ್ನು ಹಂಚಿಕೊಂಡಿದ್ದಾಳೆ. ಈ ವಿಚಿತ್ರ ಕಾಯಿಲೆಯ ಸುದ್ದಿ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್(Viral News) ಆಗಿದೆ. ಆ ಮಹಿಳೆಗೆ ಒತ್ತಡ, ಆತಂಕ ಅಥವಾ ಮುಟ್ಟಿನ ಪೂರ್ವ ಲಕ್ಷಣಗಳು ಕಂಡುಬಂದಾಗ ಒಂದು ಗಂಟೆಯಲ್ಲಿ 15 ಬಾರಿ ವಾಂತಿ ಮಾಡುತ್ತಿದ್ದೆ ಎಂದು ತನ್ನ ಕಷ್ಟವನ್ನು ಹೇಳಿದ್ದಾಳೆ.
29 ವರ್ಷದ ಶಾರಿಸ್ ಗೆರೋನಿಯನ್ ಎಂಬ ಮಹಿಳೆ ಅಪರೂಪದ ಸೈಕ್ಲಿಕ್ ಓಮಿಟ್ ಸಿಂಡ್ರೋಮ್ (ಸಿವಿಎಸ್)ನಿಂದ ಬಳಲುತ್ತಿದ್ದಳು. ಇದು ಜನಸಂಖ್ಯೆಯ 2%ರಷ್ಟು ಜನರಲ್ಲಿ ಮಾತ್ರ ಕಂಡುಬರುತ್ತದೆ. ಈ ರೋಗವು ಮಹಿಳೆಯರು, ಯುವ ವಯಸ್ಕರು ಮತ್ತು ಮೈಗ್ರೇನ್ ಇತಿಹಾಸ ಹೊಂದಿರುವ ಜನರಲ್ಲಿ ಸಾಮಾನ್ಯವಾಗಿದೆ ಎನ್ನಲಾಗಿದೆ.
ಸೈಕ್ಲಿಕ್ ಓಮಿಟ್ ಸಿಂಡ್ರೋಮ್ನಿಂದ ಎದುರಾದ ಸಮಸ್ಯೆಗಳು
ಸೈಕ್ಲಿಕ್ ಓಮಿಟ್ ಸಿಂಡ್ರೋಮ್ ಬಹಳ ಅಪರೂಪದ ಕಾಯಿಲೆ. ಇದರಿಂದ ಬಳಲುತ್ತಿರುವ ಶಾರಿಸ್, ಆಗಾಗ್ಗೆ ವಾಂತಿ ಮಾಡುವುದರಿಂದ ತೂಕ ಕಡಿಮೆಯಾಗಿದೆಯಂತೆ. ಈ ಸಮಯದಲ್ಲಿ ಅವಳು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು ಮತ್ತು ದೊಡ್ಡ ಸಮಸ್ಯೆ ಎಂದರೆ ಈ ಕಾರಣದಿಂದಾಗಿ ಅವಳು ಕೆಲಸ ಕಳೆದುಕೊಂಡಿದ್ದಳು. ಅದು ಅಲ್ಲದೇ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಗಳನ್ನು ಮಾಡಿದ್ದಳಂತೆ.
ಸೈಕ್ಲಿಕ್ ಓಮಿಟ್ ಸಿಂಡ್ರೋಮ್ ಪತ್ತೆಯಾಗಿದ್ದು ಯಾವಾಗ?
ಶಾರಿಸ್ಗೆ ಈ ಲಕ್ಷಣಗಳು 2021ರಲ್ಲಿ ಶುರುವಾಗಿತ್ತು. ಮೊದಲಿಗೆ ವೈದ್ಯರಿಗೆ ಅವಳ ಅನಾರೋಗ್ಯದ ಬಗ್ಗೆ ತಿಳಿದಿರಲಿಲ್ಲ. ಶುರುವಿನಲ್ಲಿ ವೈದ್ಯರು ಅವಳ ಸಮಸ್ಯೆಯನ್ನು ಮೈಗ್ರೇನ್ ಕಾಯಿಲೆ ಎಂದು ಪರಿಗಣಿಸಿ ಚಿಕಿತ್ಸೆ ನೀಡದ್ದರು. ಆದರೆ ಅದರಿಂದ ಅವಳಿಗೆ ಪರಿಹಾರ ಸಿಗಲಿಲ್ಲ. ನಂತರ ಸರಿಯಾದ ಚಿಕಿತ್ಸೆಯನ್ನು ಪಡೆಯಲು ಶಾರಿಸ್ ಸುಮಾರು ಎರಡು ವರ್ಷಗಳ ಕಾಲ ಅನೇಕ ಪರೀಕ್ಷೆಗಳಿಗೆ ಒಳಗಾಗಬೇಕಾಯಿತು. ಇದರಲ್ಲಿ ಹಲವಾರು ರಕ್ತ ಪರೀಕ್ಷೆಗಳು, ಎಂಡೋಸ್ಕೋಪಿ ಮುಂತಾದ ಪರೀಕ್ಷೆಗಳನ್ನು ಮಾಡಲಾಗಿತ್ತು. 2023ರಲ್ಲಿ ಸೈಕ್ಲಿಕ್ ಓಮಿಟ್ ಸಿಂಡ್ರೋಮ್ (CVS) ಇರುವುದು ಪತ್ತೆಯಾಯಿತು.
ಸಿವಿಎಸ್ನ ಲಕ್ಷಣಗಳು ಮತ್ತು ವಾಂತಿಯಾಗಲು ಕಾರಣಗಳು
ಸಿವಿಎಸ್ನ ಲಕ್ಷಣಗಳಲ್ಲಿ ದೀರ್ಘಕಾಲದ ಕರುಳು-ಮಿದುಳಿನ ಸಮಸ್ಯೆಗಳು, ಆಗಾಗ್ಗೆ ವಾಂತಿ ನಂತರ ಸಾಮಾನ್ಯ ಜ್ವರ, ಹೊಟ್ಟೆಯ ಅಸ್ವಸ್ಥತೆ, ಅತಿಸಾರ, ತಲೆನೋವು, ಲೈಟ್ ಸೆನ್ಸಿಟಿವಿಟಿ ಮತ್ತು ತಲೆತಿರುಗುವಿಕೆ ಮುಂತಾದವು ಕಂಡುಬರುತ್ತವೆ. ಈ ಎಲ್ಲ ಲಕ್ಷಣಗಳು ವಾಂತಿಯ ಸಮಯದಲ್ಲಿ ಕಾಣಿಸಿಕೊಳ್ಳಬಹುದು.
ಸೈಕ್ಲಿಕ್ ಓಮಿಟ್ ಸಿಂಡ್ರೋಮ್ ಚಿಕಿತ್ಸೆ
ಸಿವಿಎಸ್ ಚಿಕಿತ್ಸೆಯಲ್ಲಿ ಮುಖ್ಯ ವಿಷಯವೆಂದರೆ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು. ಇದು ರೋಗಲಕ್ಷಣಗಳನ್ನು ಗುರುತಿಸುವುದು ಮತ್ತು ವಾಂತಿಯಾಗುವ ಸಂದರ್ಭಗಳನ್ನು ತಪ್ಪಿಸುವುದು. ಇದರಲ್ಲಿ ಬೆಂಜೊಡಿಯಜೆಪೈನ್ ಚಿಕಿತ್ಸೆಯು ಆತಂಕದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೈಗ್ರೇನ್ ಔಷಧಿಗಳು ಮತ್ತು ಇತರ ಔಷಧಿಗಳು ಆತಂಕ ಮತ್ತು ವಾಕರಿಕೆಯನ್ನು ಕಡಿಮೆ ಮಾಡುತ್ತದೆ.
ಸ್ವಂತ ಅನುಭವ ಆಧರಿಸಿ ಸಿನಿಮಾ ನಿರ್ಮಿಸಿದ ಶಾರಿಸ್
ಶಾರಿಸ್ಗೆ ಪ್ರತಿ ವಾರ ವಾಂತಿಯ ಸಮಸ್ಯೆ ಕಾಡುತ್ತದೆಯಂತೆ. ಆದರೆ ಈಗ ಅವುಗಳ ತೀವ್ರತೆ ಕಡಿಮೆಯಾಗಿದೆ ಮತ್ತು ನಾಲ್ಕು ಅಥವಾ ಐದು ದಿನಗಳ ಬದಲು ಒಂದು ಅಥವಾ ಎರಡು ದಿನಗಳು ಮಾತ್ರ ಇರುತ್ತದೆ ಎಂದು ಹೇಳಿದ್ದಾಳೆ. ಶಾರಿಸ್ ಈಗ ತನ್ನ ಸ್ವಂತ ಅನುಭವಗಳನ್ನು ಮತ್ತು ತಾನು ಕಲಿತ ಪಾಠಗಳನ್ನು ಆಧರಿಸಿ 'ನಥಿಂಗ್ ಸಾಲಿಡ್' ಎಂಬ ಡಾರ್ಕ್ ಕಾಮಿಡಿ ಚಿತ್ರವನ್ನು ಬರೆದು ನಿರ್ದೇಶಿಸಿದ್ದಾಳೆ. ಇದನ್ನು ಅವಳು 'ವಾಮ್-ಕಾಮ್' ಎಂದು ವಿವರಿಸಿದ್ದಾಳೆ.