ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Surendra Pai Column: ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತುವ ಹೊಣೆ ಯಾರದ್ದು ?

ಅಧಿಕಾರ, ಸ್ಥಾನಮಾನ ಸಿಕ್ಕ ತಕ್ಷಣ ಬಹಳಷ್ಟು ರಾಜಕಾರಣಿಗಳು ಸಹಜವಾಗಿ ಭವಿಷ್ಯದ ಚುನಾವಣೆ ಮತ್ತು ತಮ್ಮ ಕ್ಷೇತ್ರದಲ್ಲಿನ ಮತಗಳಿಕೆಯನ್ನು ಗಮನದಲ್ಲಿಟ್ಟುಕೊಂಡು, ಅದಕ್ಕೆ ಪೂರಕವಾಗುವಂಥ ಒಂದಷ್ಟು ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡಿ, ನಾಮಫಲಕದ ಮೇಲೆ ತಮ್ಮ ಹೆಸರನ್ನು ಕೆತ್ತಿಸಿ, ಇದು ತಮ್ಮ ಸಾಧನೆ ಎಂದು ಬೀಗುವುದು ಕಂಡು ಬರುತ್ತದೆ

ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತುವ ಹೊಣೆ ಯಾರದ್ದು ?

ಅಂಕಣಕಾರ ಸುರೇಂದ್ರ ಪೈ

Profile Ashok Nayak Feb 24, 2025 7:53 AM

ಕಳಕಳಿ

ಸುರೇಂದ್ರ ಪೈ, ಭಟ್ಕಳ

ಇಂದಿನ ಕೃತಕ ಬುದ್ಧಿಮತ್ತೆಯ ಯುಗದಲ್ಲಿ, ಜೀವನ ಮೌಲ್ಯಗಳ ಬಗ್ಗೆ ಒಂದಿಷ್ಟು ಚಿಂತನೆ ಮಾಡಬೇಕಾಗಿದೆ. ಮೌಲ್ಯಯುತ ಜೀವನ ನಡೆಸುವಂತಾಗಲು ಮೌಲ್ಯಯುತ ಶಿಕ್ಷಣವನ್ನು ಅಳವಡಿಸಿಕೊಳ್ಳಬೇಕಾದ್ದು ತೀರಾ ಅಗತ್ಯವಾಗಿದೆ. ಸಂಸದೆ ಸುಧಾ ಮೂರ್ತಿಯವರು ರಾಜ್ಯಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಾ, “ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡಲು ಅವರಿಗೆ ಮೌಲ್ಯಗಳನ್ನು ಕಲಿಸಬೇಕಿದೆ; ಅದಕ್ಕಾಗಿ ಶಾಲೆ ಗಳಲ್ಲಿ ಕಥೆ ಹೇಳುವಿಕೆಯನ್ನು ಉತ್ತೇಜಿಸಲು ವಿಶಾಲ ಕೊಠಡಿಗಳನ್ನು ರೂಪಿಸಬೇಕಿದೆ, ನೀತಿಕಥೆಗಳನ್ನು ಹೇಳಲು ಸುಂದರ ವಾತಾವರಣವನ್ನು ನಿರ್ಮಿಸಬೇಕಿದೆ" ಎಂದಿದ್ದು ಗಮನ ಸೆಳೆಯಿತು.

ಅಧಿಕಾರ, ಸ್ಥಾನಮಾನ ಸಿಕ್ಕ ತಕ್ಷಣ ಬಹಳಷ್ಟು ರಾಜಕಾರಣಿಗಳು ಸಹಜವಾಗಿ ಭವಿಷ್ಯದ ಚುನಾವಣೆ ಮತ್ತು ತಮ್ಮ ಕ್ಷೇತ್ರದಲ್ಲಿನ ಮತಗಳಿಕೆಯನ್ನು ಗಮನದಲ್ಲಿಟ್ಟುಕೊಂಡು, ಅದಕ್ಕೆ ಪೂರಕವಾಗುವಂಥ ಒಂದಷ್ಟು ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡಿ, ನಾಮ ಫಲಕದ ಮೇಲೆ ತಮ್ಮ ಹೆಸರನ್ನು ಕೆತ್ತಿಸಿ, ಇದು ತಮ್ಮ ಸಾಧನೆ ಎಂದು ಬೀಗುವುದು ಕಂಡು ಬರುತ್ತದೆ.

ಅಂಥವರ ನಡುವೆ, ನಮ್ಮ ನೆಲ-ಜಲ-ಸಂಸ್ಕೃತಿ-ಪರಂಪರೆಯ ಮಹತ್ವವನ್ನರಿತು, ಮಕ್ಕ ಳಲ್ಲಿ ಸೂಕ್ತ ಕಲಿಕಾ ವಯಸ್ಸಿನಲ್ಲೇ ನೀತಿಕಥೆಗಳೆಂಬ ಮೌಲ್ಯಗಳ ಬೀಜವನ್ನು ಬಿತ್ತುವ ಮೂಲಕ ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡಬೇಕೆಂಬ ನಿಸ್ವಾರ್ಥ ಆಶಯವನ್ನು ಪ್ರಕಟಿಸಿದ ಸುಧಾ ಮೂರ್ತಿಯವರಂಥವರು ರಾಜ್ಯಸಭಾ ಸದಸ್ಯೆ ಯಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎನ್ನಬೇಕು.

ಆದರೂ ಕೆಲವರು, ಸುಧಾ ಮೂರ್ತಿಯವರ ‘ಎ.ಸಿ.ಹಾಲ್’ ಪರಿಕಲ್ಪನೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. “ಕಥೆ ಹೇಳಲು/ಕೇಳಲು ಎ.ಸಿ.ಹಾಲ್ ಏಕೆ ಬೇಕು? ಒಂದು ಮರದಡಿ ಯಲ್ಲಿ ಕೂತು ಕಥೆ ಕೇಳಿದರೆ ಮಕ್ಕಳಿಗೆ ಅರ್ಥವಾಗುವುದಿಲ್ಲವೇ?" ಎಂಬಿತ್ಯಾದಿ ವಿತಂಡ ವಾದವನ್ನು ಮಾಡುವವರ ಸಂಖ್ಯೆ ಕಡಿಮೆಯೇನಿಲ್ಲ.

ಸುಧಾ ಅವರು ತಮ್ಮ ಎನ್‌ಜಿಒ ಮೂಲಕ ಅಳವಡಿಸಿಕೊಂಡು ಯಶಸ್ವಿಯಾದ ನಿದರ್ಶನ ವನ್ನು ಅಂದು ವಿವರಿಸಿದರೇ ಹೊರತು, ಕಡ್ಡಾಯವಾಗಿ ಎ.ಸಿ.ಹಾಲ್ ಆಗಬೇಕೆಂದು ಹೇಳಲಿಲ್ಲ; ಬದಲಿಗೆ, ಭೌಗೋಳಿಕ ಪ್ರದೇಶಕ್ಕನುಗುಣವಾಗಿ ಫೋನ್ ಸಹ ಆಗಬಹುದು ಎಂದಿದ್ದಾರೆ.

ಆದರೆ, ನೀತಿಕಥೆಗಳಲ್ಲಿ, ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಲು ಪ್ರತ್ಯೇಕ ವಾದೊಂದು ವಿಶಾಲ ಕೊಠಡಿ ಇರಬೇಕೆಂಬುದು ಒಪ್ಪಿಕೊಳ್ಳತಕ್ಕ ಸಂಗತಿ. ಏಕಾಗ್ರತೆಗೆ ಪೂರಕವಾಗುವ ವಾತಾವರಣವನ್ನು ನಿರ್ಮಿಸಿದಾಗ ಮಕ್ಕಳು ಯಾವುದೇ ವಿಷಯವನ್ನು ಪರಿಣಾಮಕಾರಿಯಾಗಿ ಕಲಿಯಬಲ್ಲರು. ಆದರೆ, ಇಂದಿನ ಬಹುತೇಕ ಸರಕಾರಿ ಶಾಲೆ ಗಳಲ್ಲಿರುವ ಜೀರ್ಣಾವಸ್ಥೆಯಲ್ಲಿನ ಕೊಠಡಿಗಳನ್ನು ಗಮನಿಸಿದಾಗ, ಸುಧಾ ಅವರು ಉಲ್ಲೇ ಖಿಸಿದಂಥ ನೂತನ ಪರಿಕಲ್ಪನೆಗೆ ಸರಕಾರವು ಜೀವ ನೀಡುವುದು ಸೂಕ್ತವಾಗ ಬಲ್ಲದು ಎನಿಸುತ್ತದೆ.

‘ಧರಣಿಮಂಡಲ ಮಧ್ಯದೊಳಗೆ’ ಎಂದು ಶುರುವಾಗುವ ‘ಗೋವಿನ ಹಾಡು’ ಪದ್ಯವನ್ನು ಪ್ರಾಥಮಿಕ ಶಾಲಾ ಹಂತದಲ್ಲಿ ಕೇಳುತ್ತಾ ಪ್ರಾಮಾಣಿಕತೆಯ ಮೌಲ್ಯವನ್ನು ಮೈಗೂಡಿಸಿ ಕೊಂಡವರು ನಮ್ಮಲ್ಲಿ ಸಾಕಷ್ಟಿದ್ದಾರೆ. ಕಾರಣ, ಬಾಲ್ಯದಲ್ಲಿ ಕೇಳಿದ ನೀತಿಕಥೆಗಳು, ಸದಾ ಶಯದ ಪರಿಕಲ್ಪನೆಗಳು ಹಸಿಮಣ್ಣಿನಂಥ ಮಕ್ಕಳ ಮನಸ್ಸಿನಲ್ಲಿ ಸ್ಪಷ್ಟವಾಗಿ ಅಚ್ಚೊತ್ತಿ, ಸಕಾರಾತ್ಮಕ ಪರಿವರ್ತನೆಗೆ ಕಾರಣವಾಗುತ್ತವೆ. 90ರ ದಶಕದ ಪೂರ್ವದಲ್ಲಿ ತಂತ್ರಜ್ಞಾನವು ನಮ್ಮನ್ನು ಅಷ್ಟಾಗಿ ಬಾಧಿಸಿರಲಿಲ್ಲ; ಆಗ ಜನರು ಮಾನವೀಯ ಸಂಬಂಧಗಳಿಗೆ, ಮೌಲ್ಯ ಯುತ ಜೀವನಕ್ಕೆ ಬೆಲೆ ಕೊಡುತ್ತಿದ್ದರು.

ಮಕ್ಕಳಿಗೆ ಚಿಕ್ಕಂದಿನಿಂದಲೇ ಜೀವನಮೌಲ್ಯವನ್ನು ಕಲಿಸುವ ಕೆಲಸವನ್ನು ಅವಿಭಕ್ತ ಕುಟುಂಬಗಳು ಮಾಡುತ್ತಿದ್ದವು. ದಸರೆ/ಬೇಸಗೆ ರಜೆಗೆಂದು ನಗರದಿಂದ ಹಳ್ಳಿಗೆ ಮಕ್ಕಳು ಹೋದಾಗಲೂ, ಅನೇಕ ನೀತಿಕಥೆಗಳು ಅಜ್ಜಿಯಿಂದ ಹೊಮ್ಮುತ್ತಿದ್ದವು. ಮನೆಯಲ್ಲಿ ಧಾರ್ಮಿಕ ಪ್ರವಚನ ನಡೆಯುತ್ತಿತ್ತು. ರಾಮಾಯಣ, ಮಹಾಭಾರತ, ಪಂಚತಂತ್ರ ಕಥೆಗಳು, ಚಂಪಕ-ಚಂದಮಾಮ, ಬಾಲಮಿತ್ರ-ಬಾಲಮಂಗಳದಂಥ ಕಥಾಪುಸ್ತಕಗಳ ಸಾಂಗತ್ಯ ಮಕ್ಕಳಿಗೆ ಸಿಗುತ್ತಿತ್ತು.

ಪರಿಣಾಮವಾಗಿ ಅವರು ನೀತಿವಂತರಾಗುವಂಥ ಅವಕಾಶವಿತ್ತು. ಅಂದಿನ ಸಮಾಜವೂ ಅದಕ್ಕೆ ಪೂರಕ ವಾತಾವರಣವನ್ನು ಕಲ್ಪಿಸಿತ್ತು; ಆಗ ಕೋರ್ಟು-ಕಚೇರಿಗೆ ಅಲೆಯುವು ದಕ್ಕಿಂತಲೂ ಊರಿನ ಹಿರಿಯರ ಸಮ್ಮುಖದಲ್ಲೇ ಸಮಸ್ಯೆ/ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳ ಲಾಗುತ್ತಿತ್ತು. ಅರ್ಥಾತ್, ಜನರು ಮೌಲ್ಯಗಳಲ್ಲಿ ನಂಬಿಕೆಯಿಟ್ಟಿದ್ದರು.

ಇಂದು ಅವಿಭಕ್ತ ಕುಟುಂಬಗಳು ಬಹುತೇಕ ಮಾಯವಾಗಿರುವುದರಿಂದ ಪುಟ್ಟ ಮಕ್ಕಳಿಗೆ ಅಜ್ಜ-ಅಜ್ಜಿಯ ಸಾಂಗತ್ಯ ಸಿಗುತ್ತಿಲ್ಲ, ಹೀಗಾಗಿ ಅವರಿಗೆ ನೀತಿಕಥೆಗಳನ್ನು ಹೇಳುವ ಪರಿಪಾಠ ಇಲ್ಲವಾಗುತ್ತಿದೆ. ಶಾಲೆಗಳು ಕೂಡ ಪೋಷಕರ ಆಸೆಗೆ ತಕ್ಕಂತೆ, ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ತಯಾರು ಮಾಡುವ ಹುಕಿಯಲ್ಲಿ, ಕೇವಲ ಅಂಕಗಳಿಕೆಯ ಗುರಿ ಯಿಟ್ಟುಕೊಂಡು ಬೋಧಿಸುತ್ತಿವೆಯೇ ಹೊರತು, ನೀತಿಶಿಕ್ಷಣ, ಉತ್ತಮ ಸಂಸ್ಕಾರ ಗಳನ್ನು ಅವು ನೀಡುವುದು ದುಸ್ತರವಾಗಿದೆ.

‘ಕೃತಕ ಬುದ್ಧಿಮತ್ತೆ’ಯೊಂದಿಗೆ ಪಳಗುವಂತೆ ನಾವು ಮಕ್ಕಳಿಗೆ ಪ್ರೋತ್ಸಾಹಿಸುತ್ತಿದ್ದೇವೆಯೇ ವಿನಾ, ಮನೆಯಲ್ಲಿ -ಸಮಾಜದಲ್ಲಿ ಹಿರಿಯರೊಂದಿಗೆ ಹೇಗೆ ವ್ಯವಹರಿಸಬೇಕೆಂದು ಹೇಳಿಕೊಡುತ್ತಿಲ್ಲ. ಇಲ್ಲಿ ತಪ್ಪಾಗುತ್ತಿರುವುದು ನಮ್ಮಂಥ ಹಿರಿಯರಿಂದಲೇ ವಿನಾ ಮಗು ವಿನಿಂದಲ್ಲ. ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವತ್ತ ಅಥವಾ ಅದಕ್ಕೆ ಪೂರಕ ವಾತಾವರಣ ಕಲ್ಪಿಸುವತ್ತ ನಾವು ಉತ್ಸಾಹ ತೋರುತ್ತಿಲ್ಲ.

ನಮ್ಮ ಮಗುವು ನೆರೆಮನೆಯ ಮಗುವಿಗಿಂತ ಹೆಚ್ಚು ಅಂಕ ಗಳಿಸಬೇಕೆಂಬ ಪೈಪೋಟಿಗೆ ಸಿಲುಕಿ ಮಗುವಿನ ಮೇಲೆ ಒತ್ತಡ ಹೇರುತ್ತಿದ್ದೇವೆಯೇ ಹೊರತು, ಎಳೆ ವಯಸ್ಸಿನಲ್ಲೇ ಅದರ ಮನದಲ್ಲಿ ಗಟ್ಟಿಯಾಗಿ ಬೇರೂರಬೇಕಾದ ಮೌಲ್ಯಗಳ ಬೀಜವನ್ನು ಬಿತ್ತುತ್ತಿಲ್ಲ. ಇಂದು ಶಿಕ್ಷಕರೊಂದಿಗೆ ಮಕ್ಕಳ ಪೋಷಕರು ಭೇಟಿ/ಸಂವಹನ ನಡೆಸಿದರೆ, “ಮಕ್ಕಳು ನಮ್ಮ ಮಾತನ್ನು ಕೇಳುವುದಿಲ್ಲ, ಓದುವುದಿಲ್ಲ, ಬೇರಾವುದೇ ಕೆಲಸ ಮಾಡಲು ಆಸಕ್ತಿ ಹೊಂದಿಲ್ಲ, ಯಾವಾಗಲೂ ಮೊಬೈಲ್ ಹಿಡಿದಿರುತ್ತಾರೆ, ಸರಿಯಾಗಿ ಊಟ ಮಾಡುವುದಿಲ್ಲ" ಎಂಬಿ ತ್ಯಾದಿ ಸಮಸ್ಯೆಗಳನ್ನು ಹೇಳುವುದು ಸಾಮಾನ್ಯವಾಗಿದೆ.

ಇದಕ್ಕೆಲ್ಲಾ ಕಾರಣ, ಮನೆಯಲ್ಲಿ ಮಕ್ಕಳ ಪಾಲನೆ-ಪೋಷಣೆ ‘ನಿಜಾರ್ಥದಲ್ಲಿ’ ಆಗದಿರು ವುದು. ಅಂದರೆ, ತಮ್ಮ ಮಕ್ಕಳೊಂದಿಗೆ ಒಂದರ್ಧ ಗಂಟೆ ಸಮಯ ಕಳೆಯಲೂ ಸಾಧ್ಯ ವಾಗದಷ್ಟರ ಮಟ್ಟಿಗೆ ಪೋಷಕರು ತಂತಮ್ಮ ವ್ಯವಹಾರದಲ್ಲಿ ವ್ಯಸ್ತರಾಗಿರುವುದು! ಅದೇ, ಚಿಕ್ಕ ವಯಸ್ಸಿನಲ್ಲೇ ನೀತಿಕಥೆ, ಮೌಲ್ಯಾಧಾರಿತ ಶಿಕ್ಷಣವನ್ನು ಮಕ್ಕಳಿಗೆ ನಾವು ನೀಡಿದ್ದರೆ, ನೀತಿಗೆ ಹೊರತಾದ ವರ್ತನೆ/ಧೋರಣೆ ತಮ್ಮಿಂದ ವ್ಯಕ್ತವಾದಾಗಲೆಲ್ಲಾ ‘ನಾವು ನಡೆದು ಕೊಳ್ಳುತ್ತಿರುವುದು ತಪ್ಪು’ ಎಂಬ ಭಾವ ಮಕ್ಕಳಲ್ಲಿ ಒಡಮೂಡುತ್ತಿತ್ತು.

ಬಾಲ್ಯದಲ್ಲಿ ದೊಡ್ಡವರು ಹೇಳುವ ನೀತಿಕಥೆಗಳು ಮಕ್ಕಳಲ್ಲಿ ತಮ್ಮದೇ ಆದ ಕಲ್ಪನಾ ಲೋಕವನ್ನು ಸೃಷ್ಟಿಸಿಬಿಡುತ್ತವೆ. ಮಗುವಿನ ‘ಶೃತಿಪಟಲ’ದ ಮೂಲಕ ಹಾದು ‘ಸ್ಮೃತಿ ಪಟಲ’ದಲ್ಲಿ ಬೇರೂರುವಂಥ ಶಕ್ತಿ ನೀತಿಕಥೆಗಳಿಗಿದೆ. ಆದರೆ, ರಾತ್ರಿ ಮಲಗುವಾಗ ಅಮ್ಮ-ಅಜ್ಜಿ ಕಥೆ ಹೇಳುತ್ತಾ ಮಕ್ಕಳನ್ನು ತಮ್ಮ ತೊಡೆಯ ಮೇಲೆ ಮಲಗಿಸಿಕೊಳ್ಳುತ್ತಿದ್ದ ಪರಿ
ಪಾಠವೇ ಈಗ ಬಹುತೇಕ ಕಮ್ಮಿಯಾಗಿದೆಯಲ್ಲಾ, ಇದಕ್ಕೇನನ್ನುವುದು?!

ನಮ್ಮ ನಡುವೆಯಿರುವ ನೀತಿಕಥೆಗಳು, ಮಕ್ಕಳ ಹಾಡುಗಳು ಅಗಣಿತ; ಆದರೆ ಅವನ್ನೆಲ್ಲಾ ಮಕ್ಕಳ ಕಿವಿಗೆ ಉಣಿಸುವವರಾರು ಎಂಬುದೇ ಯಕ್ಷಪ್ರಶ್ನೆ. ವಾಸ್ತವವಾಗಿ ಮಗುವು ಬಾಲ್ಯ ದಲ್ಲಿ ತನ್ನ ಸುತ್ತಲ ಪರಿಸರ, ಪೋಷಕರ ನಡವಳಿಕೆಯಿಂದಲೇ ಸಾಕಷ್ಟು ಕಲಿಯುತ್ತದೆ; ದುರದೃಷ್ಟವಶಾತ್ ಅಂಥ ಪರಿಸರವನ್ನು ಮಗುವಿಗೆ ಎಳವೆಯಲ್ಲೇ ಕಟ್ಟಿಕೊಡುವಲ್ಲಿ ನಾವು ಸೋತಿದ್ದೇವೆ.

ಪ್ರೀತಿ, ವಾತ್ಸಲ್ಯ, ದಯೆ, ಪರೋಪಕಾರ, ಕರುಣೆಯಂಥ ಮಾನವೀಯ ಮೌಲ್ಯಗಳು ಹೇಗೆ ಬದುಕನ್ನು ಶ್ರೀಮಂತಗೊಳಿಸುತ್ತವೆ ಎಂಬುದನ್ನು ಮಕ್ಕಳಿಗೆ ತಿಳಿಸಿಕೊಡಬೇಕಾದ ಪೋಷಕರೇ ಆ ಮೌಲ್ಯಗಳಿಂದ ದೂರ ಸರಿದುಬಿಟ್ಟರೆ, ಮಕ್ಕಳನ್ನು ಅರಿವಿನ ಕೊರತೆ ಮತ್ತು ಅನಾಥಪ್ರಜ್ಞೆ ಕಾಡುವುದು ಸಹಜವಲ್ಲವೇ? ಇನ್ನು, ಶಾಲೆಯಲ್ಲಿ ಮೌಲ್ಯಶಿಕ್ಷಣ ನೀಡೋಣವೆಂದರೆ, ಹಲವು ಶಾಲೆಗಳಲ್ಲಿ ನಿಗದಿತ ‘ವಿಷಯ ಶಿಕ್ಷಕರೇ’ ಇಲ್ಲದಿರುವಾಗ, ನೀತಿಕಥೆ ಹೇಳುವವರನ್ನು ಎಲ್ಲಿಂದ ತರೋದು? ಇಂದಿನ ಪಠ್ಯಪುಸ್ತಕಗಳಲ್ಲಿ ಅಳವಡಿ ಸಲಾಗಿರುವ ಪಾಠಗಳ ಬಗ್ಗೆಯೇ ವಾದ-ವಿವಾದಗಳು ನಡೆಯುತ್ತಿರುವಾಗ, ಮೌಲ್ಯಶಿಕ್ಷಣದ ಪಠ್ಯಕ್ರಮದಲ್ಲಿ ಎಂಥ ಪಾಠಗಳನ್ನು ಅಳವಡಿಸಬೇಕು ಎಂಬುದೇ ಸವಾಲಾಗಿದೆ.

ಮೌಲ್ಯಶಿಕ್ಷಣವನ್ನು ಬೋಧಿಸಲು ನಿಯೋಜಿತರಾದವರಿಗೆ ವಿಶೇಷ ತರಬೇತಿ ನೀಡುವ ಹೊಣೆಯಾರದ್ದು ಎಂಬುದಿನ್ನೂ ಸ್ಪಷ್ಟವಾಗಿಲ್ಲ. ಇವೆಲ್ಲಾ ತೊಡಕುಗಳನ್ನು ಮೀರಿ ಶಾಲೆಯಲ್ಲಿ ಮೌಲ್ಯಶಿಕ್ಷಣ ನೀಡಲು ಮುಂದಾದರೂ, ಪೋಷಕರು ಆ ನಿಲುವನ್ನು ಹೇಗೆ ಸ್ವೀಕರಿಸುತ್ತಾರೆಂಬುದು ಒಂದು ಪ್ರಶ್ನಾರ್ಥಕ ಚಿಹ್ನೆಯಾಗಿ ಬಿಡುತ್ತದೆ. ಏಕೆಂದರೆ, ಇಂಥ ಮೌಲ್ಯಕ್ಕಿಂತ, ಮಕ್ಕಳು ವಿಷಯವಾರು ಗಳಿಸಬೇಕಾದ ಅಂಕಗಳಿಗೆ ಅನಿವಾರ್ಯವಾಗಿ ಪ್ರಾಧಾನ್ಯ ನೀಡಬೇಕಿರುವಂಥ ಕಾಲಘಟ್ಟವಿರುವಾಗ, ನೀತಿಶಿಕ್ಷಣದಿಂದಾಗಿ ಮಕ್ಕಳು ಉತ್ತಮ ನಾಗರಿಕರಾಗಲಿ ಎಂದು ಹಂಬಲಿಸುವ ಪೋಷಕರು ವಿರಳವೆನ್ನಬೇಕು.

ಸವಾಲುಗಳೇನೇ ಇರಲಿ, ಮೌಲ್ಯವಿಲ್ಲದ ಜೀವನವು ಉಪ್ಪಿಲ್ಲದ ಊಟದಂತೆ ಸಪ್ಪೆ; ಅದು ಜೀವನವನ್ನು ಸುಂದರವಾಗಿ ರೂಪಿಸದು. ಆದ್ದರಿಂದ, ಮಕ್ಕಳಿಗೆ ಪ್ರಾಥಮಿಕ ಹಂತ ದಿಂದಲೇ ಮನೆಯಲ್ಲಿ ನೀತಿಕಥೆಗಳನ್ನು ಹೇಳುವುದರೊಂದಿಗೆ, ಶಾಲೆಯಲ್ಲಿ ಸಂಸ್ಕಾರ ಯುತ/ಮೌಲ್ಯಾಧರಿತ ಶಿಕ್ಷಣಕ್ಕೆ ಒತ್ತು ನೀಡಬೇಕು ಮತ್ತು ಅಂಥ ವಿಶೇಷ ತರಗತಿಗಳನ್ನು ಕಡ್ಡಾಯಗೊಳಿಸಬೇಕು, ಇನ್ನಿತರ ಕ್ರಿಯಾಶೀಲ ಚಟುವಟಿಕೆಗಳಿಗೂ ಅವಕಾಶ ಕಲ್ಪಿಸ ಬೇಕು.

ಮಾತೃಭಾಷೆಯಲ್ಲಿರುವ, ಚಿತ್ತಾಕರ್ಷಕ ಚಿತ್ರಗಳೊಂದಿಗಿನ ನೀತಿಕಥೆಯ ಪುಸ್ತಕಗಳು ಮಕ್ಕಳ ಕೈಗೆಟುಕುವಂತಾಗಬೇಕು. ಆಗ ಮಾತ್ರವೇ ಅವು ಮಕ್ಕಳ ಮನಸ್ಸಿನಲ್ಲಿ ದೀರ್ಘಕಾಲ ಉಳಿಯಲು ಸಾಧ್ಯವಾಗುತ್ತದೆ. ಎಳವೆಯಲ್ಲಿ ಮಕ್ಕಳ ಮನಸ್ಸು ಹಸಿಮಣ್ಣಿನ ಗೋಡೆ ಯಂತಿರುತ್ತದೆ. ಆ ಘಟ್ಟದಲ್ಲಿ ನೀತಿಕಥೆಗಳ ಮೂಲಕ ಉತ್ತಮ ಜೀವನ ಮೌಲ್ಯಗಳನ್ನು ಅದರಲ್ಲಿ ನಾಟಿಸಿದರೆ, ಭವಿಷ್ಯದಲ್ಲಿ ಮಕ್ಕಳು ಉತ್ತಮ ನಾಗರಿಕರಾಗುತ್ತಾರೆ. ಆದರೆ ಇಂಥ ಮೌಲ್ಯವನ್ನು ಬಿತ್ತುವ ಹೊಣೆ ಹೊರಲು ನಾವು ಸಿದ್ಧರಿರಬೇಕಷ್ಟೇ...

(ಲೇಖಕರು ಹವ್ಯಾಸಿ ಬರಹಗಾರರು)