ಬಿಎಂಸಿಯಲ್ಲಿ ಪ್ರಭಾರಿ ಡೀನ್ ಅಕ್ರಮದ್ದೇ ಭಾರೀ ಆಟ !
ಹೊಸ ನಿರ್ದೇಶಕರ ನೇಮಕ ಮಾಡುವ ಸಂಬಂಧ ಹೈಕೋರ್ಟ್ ಇತ್ತೀಚೆಗೆ ಮಧ್ಯಂತರ ಆದೇಶ ನೀಡಿ ದ್ದರೂ ಸರಕಾರ ನೂತನ ಅಧ್ಯಕ್ಷರ ನೇಮಕ ಪ್ರಕ್ರಿಯೆ ಆರಂಭಿಸಲು ಉತ್ಸಾಹ ತೋರಿಸುತ್ತಿಲ್ಲ. ಹೀಗಾಗಿ ನಿರ್ದೇಶಕರ ಹುದ್ದೆ ಆಕಾಂಕ್ಷಿಗಳು ಮತ್ತು ಬಿಎಂಸಿಯಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮಗಳ ವಿರೋಧ ಹೋರಾಟ ನಡೆಸುತ್ತಿರುವ ವೈದ್ಯರು, ಪ್ರೊಫೆಸರ್‌ಗಳು ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ.


ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
2 ವರ್ಷವಾದರೂ ನಿರ್ದೇಶಕರಿಲ್ಲ, ಸರಕಾರಕ್ಕೆ ಆಸಕ್ತಿ ಇಲ್ಲ
ಹೈಕೋರ್ಟ್ ಆದೇಶಕ್ಕೂ ಬೆಲೆ ಇಲ್ಲ
ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯ ಅನೇಕ ವೈದ್ಯಕೀಯ ಸಂಸ್ಥೆಗಳಲ್ಲಿ ಪ್ರಭಾರಿಗಳ ‘ಪರಾಕ್ರಮ’ವೇ ಹೆಚ್ಚಾಗಿದ್ದು, ಐತಿಹಾಸಿಕ (ಬೆಂಗಳೂರು ಮೆಡಿಕಲ್ ಕಾಲೇಜು) ಬಿಎಂಸಿಯ ಪ್ರಭಾರಿ ಡೀನ್ ಹಾಗೂ ಡೈರೆಕ್ಟರ್ ಸರಕಾರಕ್ಕೆ ತುಂಬಾ ‘ಭಾರ’ ವಾಗುತ್ತಿದ್ದಾರೆ.
ನಿಯಮದ ಪ್ರಕಾರ ಪ್ರಭಾರಿ( ಇನ್ ಚಾರ್ಜ್ ) ಹುದ್ದೆಗಳನ್ನು ಕೇವಲ 6 ತಿಂಗಳ ಅವಧಿಗೆ ಮಾತ್ರ ನೀಡಬಹುದು. ಆದರೆ ಸರಕಾರ ಬಿಎಂಸಿ ಡೀನ್ ಮತ್ತು ಡೈರೆಕ್ಟರ್ ಹುದ್ದೆಯನ್ನು ಕಳೆದ ಎರಡೂ ವರೆ ವರ್ಷಗಳಿಂದಲೂ ಪ್ರಭಾರಿಯ ತಳ್ಳುತ್ತಾ ಬಂದಿದೆ. ಇದರಿಂದ ಬಡ ರೋಗಿಗಳಿಗೆ ಜೀವ ನೀಡುವ ಸಂಸ್ಥೆಯಲ್ಲಿ ಅಕ್ರಮಗಳು ಹೆಚ್ಚಾಗುತ್ತಿದ್ದು, ಅರಾಜಕತೆ ತಾಂಡವ ಆಡುತ್ತಿದೆ ಎಂದು ಅಧಿಕಾರಿ ಗಳೇ ದೂರಿದ್ದಾರೆ. ಸಂಸ್ಥೆಯ ಆಡಳಿತ ಮತ್ತು ಸೇವಾ ನಿಯಮಗಳ ಜಾರಿಯನ್ನು ವಿರೋಧಿಸಿ ಅನೇಕ ತಜ್ಞವೈದ್ಯರು, ಪ್ರೊಫೆಸರ್‌ಗಳು ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಎಲ್ಲಾ ವಾಸ್ತವಗಳೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಗೊತ್ತಿದ್ದರೂ ಯಾವುದೇ ಕ್ರಮವಿಲ್ಲ ಎಂದು ವೈದ್ಯರೇ ದೂರುತ್ತಿದ್ದಾರೆ.
ಈ ಮಧ್ಯೆ, ಎರಡು ವರ್ಷಗಳಿಂದ ಪ್ರಭಾರಿ ಸೇವೆಯಲ್ಲಿರುವ ರಮೇಶ್ ಕೃಷ್ಣ ಅವರನ್ನು ತೆಗೆದು ಬಿಎಂಸಿಗೆ ಹೊಸ ನಿರ್ದೇಶಕರನ್ನು ನೇಮಕ ಮಾಡುವ ಪ್ರಯತ್ನದಲ್ಲಿ ಅನೇಕ ಬಾರಿ ವಿಫಲ ವಾಗಿದ್ದು, ಈ ವಿಚಾರದಲ್ಲಿ ಸರಕಾರ ಕಾರಣವಿಲ್ಲದೆ ಹಿಂದೇಟು ಹಾಕುತ್ತಿದೆ ಎಂದು ವೈದ್ಯರೇ ಹೇಳುತ್ತಿದ್ದಾರೆ.
ಹೊಸ ನಿರ್ದೇಶಕರ ನೇಮಕ ಮಾಡುವ ಸಂಬಂಧ ಹೈಕೋರ್ಟ್ ಇತ್ತೀಚೆಗೆ ಮಧ್ಯಂತರ ಆದೇಶ ನೀಡಿದ್ದರೂ ಸರಕಾರ ನೂತನ ಅಧ್ಯಕ್ಷರ ನೇಮಕ ಪ್ರಕ್ರಿಯೆ ಆರಂಭಿಸಲು ಉತ್ಸಾಹ ತೋರಿಸುತ್ತಿಲ್ಲ. ಹೀಗಾಗಿ ನಿರ್ದೇಶಕರ ಹುದ್ದೆ ಆಕಾಂಕ್ಷಿಗಳು ಮತ್ತು ಬಿಎಂಸಿಯಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮಗಳ ವಿರೋಧ ಹೋರಾಟ ನಡೆಸುತ್ತಿರುವ ವೈದ್ಯರು, ಪ್ರೊಫೆಸರ್‌ಗಳು ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ.
ಅದರಲ್ಲೂ ಬಿಎಂಸಿಯಲ್ಲಿ ವೈದ್ಯರ ಬಡ್ತಿ ಮತ್ತು ಸೇವಾ ಹಿರಿತನಕ್ಕೆ ಸಂಬಂಧಿಸಿದ ಪಟ್ಟಿಯಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ಕೋರ್ಟ್ ನಲ್ಲಿ ಪ್ರಶ್ನೆ ಮಾಡಲು ಸಜ್ಜಾಗಿದ್ದಾರೆ ಎಂದು ವೈದ್ಯ ಕೀಯ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ವಿಕ್ಟೋರಿಯಾ, ಮಿಂಟೋ ಆಸ್ಪತ್ರೆ, ಟ್ರಾಮಾ ಸೆಂಟರ್ ಸೇರಿದಂತೆ 5 ಆಸ್ಪತ್ರೆಗಳಲ್ಲಿ ಈಗ ಅಕ್ರಮದ ಕಮಟ ವಾಸನೆ ತೀವ್ರವಾಗಿದ್ದ ಹಿನ್ನೆಲೆಯಲ್ಲಿ ಸರಕಾರ 2 ವರ್ಷಗಳ ಹಿಂದೆಯೇ ಹೊಸ ನಿರ್ದೇಶಕ ರನ್ನು ನೇಮಿಸಲು ನಿರ್ಧರಿಸಿತ್ತು. ಜನವರಿ ವೇಳೆಗೆ ಬಿಎಂಸಿ ಮುಖ್ಯ ಆಡಳಿತಾಧಿಕಾರಿ ಅವರು ತಜ್ಞ ವೈದ್ಯರ ಮತ್ತು ಪ್ರೊಫೆಸರ್‌ಗಳ ಜೇಷ್ಠತಾ ಪಟ್ಟಿ ಸಿದ್ಧಪಡಿಸಿ ಪ್ರಕಟಿಸಬೇಕಿತ್ತು.
ವಿಚಿತ್ರವೆಂದರೆ, ಜೇಷ್ಠತಾ ಪಟ್ಟಿಯನ್ನು ನಿರ್ದೇಶಕ ಹುದ್ದೆ ಆಕಾಂಕ್ಷಿ, ಈಗಿನ ಪ್ರಭಾರಿ ನಿರ್ದೇಶಕರೇ ನಿಯಮ ಮೀರಿ ರಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ನಿರ್ದೇಶಕ ಹುದ್ದೆಗೆ ಅರ್ಹ ರಾಗಿದ್ದ ಅನೇಕ ಪ್ರೊಫೆಸರ್‌ಗಳು ಅನರ್ಹರಾಗುವಂತಾಗಿದ್ದು, ಇದರಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆಕಾಂಕ್ಷಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಬೆಂಗಳೂರು ಮೆಡಿಕಲ್ ಕಾಲೇಜಿನ ಪ್ರೊಫೆಸರ್‌ಗಳಲ್ಲಿ ಹಿರಿಯರೆನಿಸಿರುವ ಡಾ. ಕಾವ್ಯ ಅವರು ನಿಯಮದ ಪ್ರಕಾರ ಸೇವಾ ಜೇಷ್ಠತೆ ಹೊಂದಿದ್ದು, ನಿರ್ದೇಶಕ ಹುದ್ದೆಗೆ ಅರ್ಹರಾಗಿದ್ದಾರೆ. ಸರಕಾರ ಕೂಡ ಡಾ.ಕಾವ್ಯ ಅವರನ್ನು ನೂತನ ನಿರ್ದೇಶಕರನ್ನಾಗಿ ನೇಮಿಸಲು ಚಿಂತನೆ ನಡೆಸಿತ್ತು. ಆದರೆ ನಿಯಮ ಬಾಹಿರ ಜೇಷ್ಠತಾ ಪಟ್ಟಿಯಿಂದಾಗಿ ಡಾ.ಕಾವ್ಯ, ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ರವಿ, ಬಯೋಕೆಮಿಸ್ಟ್ರಿ ಪ್ರಭಾರಿ ಮುಖ್ಯಸ್ಥ ಡಾ.ವಿಶ್ವನಾಥ್, ಪ್ರಧಾನಮಂತ್ರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ದಿವ್ಯಪ್ರಕಾಶ್ ಹಾಗೂ ಡಾ.ಜಗದೀಶ್ ಸೇರಿದಂತೆ 10ಕ್ಕೂ ಹೆಚ್ಚು ಆಕಾಂಕ್ಷಿಗಳನ್ನು ಹುದ್ದೆಗೆ ಅನರ್ಹ ಎನ್ನುವಂತೆ ಮಾಡಲಾಗಿದೆ ಎಂದು ವೈದ್ಯರು ಆರೋಪಿಸಿದ್ದಾರೆ.
ಎಂಸಿಗೆ ನಿರ್ದೇಶಕರಾಗಲು ನಿಯಮದಂತೆ ತಜ್ಞವೈದ್ಯರು ಅಸೋಸಿಯಟ್ ಮತ್ತು ಪ್ರೊಫೆಸರ್ ಗಳಾಗಿ ಸೇವೆ ಸಲ್ಲಿಸಿರುವ 10 ಮಂದಿ ಹಿರಿಯ ಪ್ರೊಫೆಸರ್ ಗಳನ್ನು ಪಟ್ಟಿ ಮಾಡಬೇಕು. ದೀಪಕ್ ಶಿವಣ್ಣ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ, ರಾಮಚಂದ್ರರಾವ್ ಪ್ರಕರಣ ದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಅನ್ವಯ ವೈದ್ಯರ ಮತ್ತು ಪ್ರೊಫೆಸರ್‌ಗಳ ಸೇವಾ ಜೇಷ್ಠತೆಯನ್ನು ಕೆಪಿಎಸ್ ಸಿ( ಕರ್ನಾಟಕ ಲೋಕಸೇವಾ ಆಯೋಗ ) ಯಿಂದ ಆಯ್ಕೆಯಾದ ದಿನಾಂಕದಿಂದ ಸೇವೆಯನ್ನು ಪರಿಗಣಿಸಬೇಕು.
ಆದರೆ ಈಗ ಸಿದ್ಧವಾಗಿರುವ ಪಟ್ಟಿಯಲ್ಲಿ ವೈದ್ಯರು ಆರೋಗ್ಯ ಇಲಾಖೆಯಿಂದ ಬಿಎಂಸಿ ಸೇವೆಗೆ ವಿಲೀವಾಗಿರುವ ದಿನಾಂಕವನ್ನು ಪರಿಗಣಿಸಲಾಗಿದೆ. ಅರ್ಹರನ್ನು ಅನರ್ಹಗೊಳಿಸಲು ದುರುದ್ಧೇಶ ದಿಂದ ಕೋರ್ಟ್ ಆದೇಶವನ್ನೇ ಗಾಳಿಗೆ ತೂರಲಾಗಿದೆ ಎಂದು ಆಕ್ಷೇಪಿಸಿ 20ಕ್ಕೂ ಪ್ರೊಫೆಸರ್ ಗಳು ಸರಕಾರಕ್ಕೆ ಪತ್ರ ಬರೆದಿದ್ದಾರೆ. ಈ ಮಧ್ಯೆ ಕೂಡಲೇ ಕೆಪಿಎಸ್ ಸಿ ನೇಮಕ ಆಧರಿಸಿ ಜೇಷ್ಠತೆ ಪಟ್ಟಿ ಪ್ರಕಟಿಸುವಂತೆ ಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಆದರೂ ಅದರೂ ಸರಕಾರ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎನ್ನುತ್ತಿದ್ದಾರೆ ವೈದ್ಯರು.