ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Vinegar: ಬಹುಪಯೋಗಿ ವಿನೆಗರ್‌; ಹೇಗೆಲ್ಲ ಪ್ರಯೋಜನಕಾರಿ?

ವಿನೆಗರ್‌ ರುಚಿ ಮತ್ತು ಘಮವನ್ನು ಹೆಚ್ಚಿಸುವುದು ಮಾತ್ರವಲ್ಲ, ಇನ್ನೂ ಬಹಳಷ್ಟು ಕೆಲಸಗಳನ್ನು ಮಾಡುವ ಸಾಮರ್ಥ್ಯ ಹೊಂದಿದೆ. ತನ್ನ ರೋಗಾಣು ವಿರೋಧಿ ಗುಣದಿಂದಾಗಿ ಹಲವು ಬಗೆಯ ಸ್ವಚ್ಛತಾ ಕಾರ್ಯದಲ್ಲಿಯೂ ಇದು ನೆರವಾಗಬಲ್ಲದು. ಕಲೆಗಳನ್ನು ತೆಗೆಯುವುದರಿಂದ ಹಿಡಿದು ಸಣ್ಣಪುಟ್ಟ ಮನೆಮದ್ದಾಗಿಯೂ ಇದು ಬಳಕೆಯಾಗಬಲ್ಲದು. ಆ ಕುರಿತಾದ ವಿವರ ಇಲ್ಲಿದೆ.

ದಿನ ನಿತ್ಯದ ಬಳಕೆಗೆ ವಿನೆಗರ್‌ ಪ್ರಯೋಜನಕಾರಿ

vinegar

Profile Pushpa Kumari Feb 24, 2025 7:00 AM

ನವದೆಹಲಿ: ಪೂರ್ವ ಏಷ್ಯಾದ ಹಲವಾರು ಬಗೆಯ ಅಡುಗೆಗಳಲ್ಲಿ ವಿನೆಗರ್‌ (Vinegar) ಬಳಕೆಯಲ್ಲಿದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ನೂಡಲ್ಸ್‌, ಫ್ರೈಡ್‌ ರೈಸ್‌ನಂಥ ಚೀನೀಯ ಅಡುಗೆಗಳಲ್ಲಿ ಇದರ ಬಳಕೆ ವ್ಯಾಪಕವಾಗಿದೆ. ವಿನೆಗರ್‌ ರುಚಿ ಮತ್ತು ಘಮವನ್ನು ಹೆಚ್ಚಿಸುವುದು ಮಾತ್ರವಲ್ಲ ಇನ್ನೂ ಬಹಳಷ್ಟು ವಿಧದಲ್ಲಿ ಪ್ರಯೋಜನಕಾರಿಯಾಗಿದೆ. ರೋಗ ನಿರೋಧಕ ಗುಣ ಹೊಂದಿರುವ ಇದು ಸ್ವಚ್ಛತಾ ಕಾರ್ಯದಲ್ಲಿಯೂ ನೆರವಾಗಬಲ್ಲದು. ಕಲೆಗಳನ್ನು ತೆಗೆಯುವುದರಿಂದ ಹಿಡಿದು ಸಣ್ಣಪುಟ್ಟ ಮನೆಮದ್ದಾಗಿಯೂ ಇದು ಬಳಕೆಯಾಗಬಲ್ಲದು. ವಿನೆಗರ್‌ ಯಾವೆಲ್ಲ ಕೆಲಸಗಳಿಗೆ ಉಪಯುಕ್ತ ಎನ್ನುವುದನ್ನು ನೋಡೋಣ.

ಅಡುಗೆಮನೆ ಸ್ವಚ್ಛತೆ: ಅಡುಗೆಮನೆಯಲ್ಲಿ ಆಗುವ ಕಲೆಗಳಿಗೆ ತುದಿ ಮೊದಲಿಲ್ಲ, ಎಣ್ಣೆ ಜಿಡ್ಡಿಗೆ ಮಿತಿಯಿಲ್ಲ. ಅಂತಹವುಗಳನ್ನು ಹೋಗಲಾಡಿಸಲು ವಿನೆಗರ್‌ ಅತೀ ಉಪಯುಕ್ತ. ಇದೊಂದು ಅದ್ಭುತವಾದ ನೈಸರ್ಗಿಕ ಸ್ವಚ್ಛತಾ ಸೇನಾನಿ. ಗ್ಯಾಸ್‌ ಒಲೆ ಅಥವಾ ಹಾಬ್‌, ಚಿಮಣಿ, ಮೈಕ್ರೋ ವೇವ್‌, ಅವನ್‌, ಅಡುಗೆಮನೆಯ ಕಟ್ಟೆ ಮತ್ತು ಗೋಡೆಗಳು, ಸಿಂಕ್‌ಗಳಿಗೂ ಇದನ್ನು ಬಳಸಬಹುದು. ವಿನೆಗರ್‌ ನೀರು ಬೆರೆಸಿ ಈ ಎಲ್ಲ ಭಾಗಗಳನ್ನೂ ಒರೆಸಬಹುದು.

ಕಲೆ ಮಾಯ: ಕೆಲವೊಮ್ಮೆ ಸ್ಟೀಲ್‌ ಅಥವಾ ಗಾಜಿನ ಪಾತ್ರೆಗಳ ಮೇಲೆ ಕಲೆಗಳಾಗಿರುತ್ತವೆ. ಕಟುವಾದ ಮಸಾಲೆಗಳು, ಎಣ್ಣೆ, ಅರಿಶಿನದ ಕಲೆಗಳು ಇತ್ಯಾದಿಗಳನ್ನು ತೆಗೆಯಲು ವಿನೆಗರ್‌ಗೆ ಕೊಂಚ ಬೇಕಿಂಗ್‌ ಸೋಡಾ ಮಿಶ್ರ ಮಾಡಿ, ಕಲೆಯಾದ ಭಾಗಕ್ಕೆ ಲೇಪಿಸಿ. ಕೆಲವು ನಿಮಿಷಗಳ ನಂತರ ಅದನ್ನು ಡಿಶ್‌ ಸೋಪಿನಿಂದ ತೊಳೆದರೆ ಕಲೆ ಮಾಯವಾಗುತ್ತದೆ. ಕಟಿಂಗ್‌ ಬೋರ್ಡ್‌ ಸ್ವಚ್ಛ ಮಾಡುವುದಕ್ಕೆ ವಿನೇಗರ್‌, ಬೇಕಿಂಗ್‌ ಸೋಡಾ ಮಿಶ್ರಣ ಬಹಳ ಒಳ್ಳೆಯದು.

ಬಟ್ಟೆಗೂ ಸೈ: ಕಲೆಯಾದ ಬಟ್ಟೆಗಳನ್ನು ಸ್ವಚ್ಛ ಮಾಡಲೂ ಇದು ಸಹಾಯಕ. ನೀರಿನೊಂದಿಗೆ ವಿನೇಗರ್‌ ಬೆರೆಸಿ, ಅದನ್ನು ಬಟ್ಟೆಯ ಕಲೆಯಾದ ಭಾಗಕ್ಕೆ ಲೇಪಿಸಿ. ಕೆಲಕಾಲ ಬಿಟ್ಟು ಬಟ್ಟೆ ತೊಳೆದರೆ ಈ ಕಲೆ ತೆಗೆಯುವುದು ಕಷ್ಟವಾಗುವುದಿಲ್ಲ.

ಕಿಟಕಿಗಳು: ಮನೆಯ ಕಿಟಕಿ, ಗಾಜುಗಳು ಕಲೆಯಾಗಿದ್ದರೆ ವಿನೇಗರ್‌ ನೀರನ್ನು ಸಿಂಪಡಿಸಿ, ಚೆನ್ನಾಗಿ ಒರೆಸಿ ಶುಚಿ ಮಾಡಬಹುದು. ಮಾತ್ರವಲ್ಲ ಕಿಟಕಿಯಿಂದ ಒಳ ನುಸುಳುವ ಜಿರಳೆ, ಹಲ್ಲಿ, ಇರುವೆ ಮುಂತಾದ ಕೀಟಗಳನ್ನು ತಡೆಯಲು, ಹತ್ತಿಯನ್ನು ವಿನೇಗರ್‌ನಲ್ಲಿ ಅದ್ದಿ ಕಿಟಕಿಯ ಬದಿಯಲ್ಲಿಡಿ. ಇದರ ಕಠೋರ ವಾಸನೆಯಿಂದ ಕೀಟಗಳು ದೂರ ಹೋಗುತ್ತವೆ.

ಬಾತ್‌ರೂಂ: ಅಡುಗೆಮನೆಗಿಂತಲೂ ಕೆಲವೊಮ್ಮೆ ಬಚ್ಚಲುಮನೆಯ ಸ್ವಚ್ಛತೆ ಸವಾಲೆನಿಸುತ್ತದೆ. ಕರೆಗಟ್ಟುವ ಸಿಂಕ್‌ ಮತ್ತು ಗೋಡೆಯನ್ನು ಶುಚಿ ಮಾಡುವುದರ ಜತೆಗೆ ಅವುಗಳ ಕೊಳೆ ವಾಸನೆಯನ್ನೂ ತೆಗೆಯುವುದು ಅಗತ್ಯ. ಇಂಥ ಹೊತ್ತಿನಲ್ಲಿ ನಿಂಬೆರಸದೊಂದಿಗೆ ವಿನೇಗರ್‌ ಬೆರೆಸಿ, ಸಿಂಕ್‌ ಮತ್ತು ಗೋಡೆಗಳನ್ನೆಲ್ಲ ಸ್ವಚ್ಛ ಮಾಡಿದರೆ ಕಲೆಯೂ ಮಾಯ, ವಾಸನೆಯೂ ಹೋಗುತ್ತದೆ.

ಇದನ್ನು ಓದಿ: Health Tips: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರ ಸೇವಿಸಿದ್ರೆ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡಬಹುದು!

ಕಾಲಿನ ಆರೈಕೆಗೆ: ಈಗಿನ್ನು ಬರಲಿರುವುದು ಬೇಸಗೆ. ಇಡೀ ದಿನ ಶೂ ಹಾಕುವ ಅನಿವಾರ್ಯತೆ ಇರುವವರಿಗೆ ಕಾಲೆಲ್ಲ ಬೆವರಿನ ವಾಸನೆಯಿಂದ ತುಂಬಿ ಹೋಗುತ್ತದೆ. ಸಣ್ಣ ಟಬ್‌ನಲ್ಲಿ ಬೆಚ್ಚಗಿನ ನೀರಿಗೆ ಸ್ವಲ್ಪ ವಿನೇಗರ್‌ ಬೆರೆಸಿ, ಅದರಲ್ಲಿ ನಾಲ್ಕಾರು ನಿಮಿಷಗಳ ಕಾಲ ಪಾದಗಳನ್ನು ನೆನೆಸಿಡಿ. ನಂತರ ಕಾಲನ್ನು ತಣ್ಣೀರಿನಿಂದ ತೊಳೆದರೆ ಬೆರಳುಗಳ ಸಂದಿಯಲ್ಲಿರುವ ಬ್ಯಾಕ್ಟೀರಿಯಗಳೆಲ್ಲ ತೊಲಗಿ, ಪಾದಗಳು ವಾಸನೆಯಿಂದ ಮುಕ್ತವಾಗುತ್ತವೆ.

ಕೂದಲಿನ ಹೊಳಪಿಗೆ: ಕೂದಲು ತೀರಾ ಒರಟಾಗಿ, ಗಂಟಾಗುತ್ತಿದ್ದರೆ ಆಪಲ್‌ ಸೈಡರ್‌ ವಿನೇಗರ್‌ ಇಂಥ ಸಮಸ್ಯೆಗೆ ಪರಿಹಾರ ನೀಡಬಲ್ಲದು. ಕೂಲಿನ ಹೊಳಪು ಹೆಚ್ಚಿಸಲು, ಆಪಲ್‌ ಸೈಡರ್‌ ವಿನೇಗರ್‌ ಮಿಶ್ರ ಮಾಡಿದ ನೀರನ್ನು ಕೂದಲಿಗೆ ಲೇಪಿಸಿ ಒಂದೆರಡು ನಿಮಿಷ ಬಿಟ್ಟು, ತಲೆಸ್ನಾನ ಮಾಡಿ. ಇದರಿಂದ ಕೂದಲಿನ ಹೊಳಪು ಹೆಚ್ಚಿ, ಮೃದುವಾಗುತ್ತವೆ.‌