Colonel Sofiya Qureshi: ಕರ್ನಲ್ ಸೋಫಿಯಾ ಖುರೇಷಿ ಮನೆ ಮೇಲೆ ದಾಳಿ ಎಂಬ ಫೇಕ್ ಪೋಸ್ಟ್; ಎಫ್‌ಐಆರ್ ದಾಖಲು
Colonel Sofiya Qureshi: ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ್ ಅವರ ಸೂಚನೆ ಮೇರೆಗೆ ಆರೋಪಿ ಅನೀಸ್ ಉದ್ದೀನ್ ವಿರುದ್ಧ ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕರ್ನಲ್ ಸೋಫಿಯಾ ಖುರೇಷಿ ಅವರ ಪತಿ ಮನೆ ಮೇಲೆ ಆರ್‌ಎಸ್‌ಎಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹರಿಬಿಟ್ಟ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.


ಬೆಳಗಾವಿ: ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ಕರ್ನಲ್ ಸೋಫಿಯಾ ಖುರೇಷಿ (Colonel Sofiya Qureshi) ಅವರ ಪತಿ ಮನೆ ಮೇಲೆ ಆರ್‌ಎಸ್‌ಎಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಕಿಡಿಗೇಡಿ ಅನೀಸ್ ಉದ್ದೀನ್ ವಿರುದ್ಧ ಬೆಳಗಾವಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ್ ಅವರ ಸೂಚನೆ ಮೇರೆಗೆ ಬಿಎನ್‌ಎಸ್ ಕಾಯ್ದೆಯಡಿ 353(2), 192 ಸೆಕ್ಷನ್ ಅಡಿಯಲ್ಲಿ ಆರೋಪಿ ಅನೀಸ್ ಉದ್ದೀನ್ ವಿರುದ್ಧ ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪ್ರಕರಣದ ಬಗ್ಗೆ ಇತ್ತೀಚೆಗ ಪ್ರತಿಕ್ರಿಯಿಸಿದ್ದ ಬೆಳಗಾವಿ ಎಸ್ಪಿ ಡಾ. ಭೀಮಾಶಂಕರ ಗುಳೇದ್ ಅವರು, ಫೇಕ್ ಪೋಸ್ಟ್ ಮಾಡಿದ್ದ ಆರೋಪಿ ಅನೀಸ್ ಉದ್ದೀನ್, ಕೆನಡಾದ ಕೊಲಂಬಿಯಾ ನಿವಾಸಿ ಎಂಬುದು ದೃಢಪಟ್ಟಿದೆ ಎಂದು ತಿಳಿಸಿದ್ದರು. 'ಎಕ್ಸ್‌ನ ವೆರಿಫೈಡ್ ಖಾತೆಯಿಂದ ಹರಡಲಾದ ಈ ಸುಳ್ಳು ಸುದ್ದಿಯನ್ನು ಬೆಳಗಾವಿ ಪೊಲೀಸರ ಸಾಮಾಜಿಕ ಜಾಲತಾಣ ತಂಡವು ಗಮನಿಸಿ, ನನ್ನ ಗಮನಕ್ಕೆ ತಂದಿದ್ದರು. ನಾನು ಈ ಪೋಸ್ಟ್‌ಗೆ ಕಾಮೆಂಟ್ ಮಾಡಿ, ತಕ್ಷಣವೇ ಈ ಮಾಹಿತಿಯನ್ನು ಡಿಲೀಟ್ ಮಾಡುವಂತೆ ಸೂಚಿಸಿದ್ದೆ. ನನ್ನ ಕಾಮೆಂಟ್ ನೋಡಿದ ಆತ ಕೂಡಲೇ ಪೋಸ್ಟ್ ಡಿಲೀಟ್ ಮಾಡಿದ್ದಾನೆ ಎಂದು ಎಸ್‌ಪಿ ಗುಳೇದ್ ಹೇಳಿದ್ದರು.
ನಂತರ, ಬೆಳಗಾವಿ ಪೊಲೀಸರು ಎಕ್ಸ್‌ನ ಮುಖ್ಯ ಕಚೇರಿಗೆ ಈ ಬಗ್ಗೆ ಮಾಹಿತಿ ಕೋರಿದಾಗ, ಈ ಸುಳ್ಳು ಸುದ್ದಿಯನ್ನು ಹರಡಿದವನು ಕೊಲಂಬಿಯಾ ಪ್ರಜೆ ಅನೀಸ್ ಉದ್ದೀನ್ ಎಂಬುದು ಸಾಬೀತಾಯಿತು ಎಂದು ತಿಳಿಸಿದ್ದರು.
ಈ ಘಟನೆಯ ಬೆನ್ನಲ್ಲೇ, ಗೋಕಾಕ್ ಪೊಲೀಸರು ಕರ್ನಲ್ ಸೋಫಿಯಾ ಖುರೇಷಿ ಅವರ ಮಾವನ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಭದ್ರತೆ ಒದಗಿಸಿದ್ದಾರೆ. 'ಕರ್ನಲ್ ಸೋಫಿಯಾ ಖುರೇಷಿ ಇಂದು ಭಾರತದ ಪ್ರತಿ ಮನೆಗೆ ಚಿರಪರಿಚಿತರಾಗಿದ್ದಾರೆ. ಆದ್ದರಿಂದ, ಅವರ ಕುಟುಂಬಸ್ಥರಿಗೂ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ ಎಂದಿದ್ದರು.
ಈ ಸುದ್ದಿಯನ್ನೂ ಓದಿ | Operation Sindoor: ಆಪರೇಷನ್ ಸಿಂದೂರ್ ಬಗ್ಗೆ ಅಪಪ್ರಚಾರ- ಚೀನಾದ ಖ್ಯಾತ ಟಿವಿ ಚಾನೆಲ್‌ನ ಎಕ್ಸ್ ಖಾತೆ ಬ್ಲಾಕ್!
ಈ ಸುಳ್ಳು ಸುದ್ದಿಯನ್ನು ಖಂಡಿಸಿರುವ ಬೆಳಗಾವಿ ಪೊಲೀಸರು, ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಜನತೆಗೆ ಮನವಿ ಮಾಡಿದ್ದರು.