Nelamangala News: ನೆಲಮಂಗಲ: ಶಾಲೆಯ ಚಾವಣಿ ಬಿದ್ದು ವಿದ್ಯಾರ್ಥಿಗಳಿಗೆ ಗಾಯ
ಮಧ್ಯಾಹ್ನದ ಬಿಸಿಯೂಟ ಮಾಡುತ್ತಿದ್ದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಮೇಲೆ ಚಾವಣಿ ಕುಸಿದು ಬಿದ್ದಿರುವ ಆಘಾತಕಾರಿ ಘಟನೆ ಗುರುವಾರ (ಫೆ. 27) ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲುವಿನ ಹೊಸ ಕಾಲೋನಿಯಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮತ್ತು ಓರ್ವ ಅಡುಗೆ ಸಹಾಯಕಿ ಗಾಯಗೊಂಡಿದ್ದಾರೆ.

ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲುವಿನ ಹೊಸ ಕಾಲೋನಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಅನಾಹುತ.

ನೆಲಮಂಗಲ: ಮಧ್ಯಾಹ್ನದ ಬಿಸಿಯೂಟ ಮಾಡುತ್ತಿದ್ದ ಸರ್ಕಾರಿ ಶಾಲೆಯ (Government school) ವಿದ್ಯಾರ್ಥಿಗಳ ಮೇಲೆ ಚಾವಣಿ ಬಿದ್ದಿರುವ ಆಘಾತಕಾರಿ ಘಟನೆ ಗುರುವಾರ (ಫೆ. 27) ನೆಲಮಂಗಲ ತಾಲೂಕಿನಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಭಾರೀ ಅನಾಹುತ ತಪ್ಪಿದಂತಾಗಿದೆ. ಸದ್ಯ ಗಾಯಗೊಂಡ ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ (Nelamangala News). ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲುವಿನ ಹೊಸ ಕಾಲೋನಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಇಬ್ಬರು ವಿದ್ಯಾರ್ಥಿಗಳು ಹಾಗೂ ಓರ್ವ ಅಡುಗೆ ಸಹಾಯಕಿ ಸೇರಿ ಮೂವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಂದಿನಂತೆ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಮಾಡುತ್ತಿದ್ದ ವೇಳೆ ದಿಢೀರನೇ ಚಾವಣಿ ಕುಸಿದು ಬಿದ್ದಿದ್ದು, ಹೆಚ್ಚಿನ ಅನಾಹುತ ತಪ್ಪಿದೆ. ಶಾಲೆಯಲ್ಲಿ ಒಟ್ಟು 24 ವಿದ್ಯಾರ್ಥಿಗಳು ಇದ್ದ ವೇಳೆ ಚಾವಣಿ ಕುಸಿದಿದೆ. ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳು ಮತ್ತು ಓರ್ವ ಅಡುಗೆ ಸಹಾಯಕಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕಳಪೆ ಕಾಮಗಾರಿ
ಕಳಪೆ ಕಾಮಗಾರಿಯಿಂದಾಗಿ ಚಾವಣಿ ಕುಸಿದಿದೆ ಎನ್ನುವ ಆರೋಪ ಕೇಳಿ ಬಂದಿದೆ. ಕಳೆದ ವರ್ಷವಷ್ಟೇ ಶಾಲಾ ಕಟ್ಟಡದ ಕಾಮಗಾರಿ ನಡೆದಿತ್ತು. ಅದಾಗ್ಯೂ ಇದೀಗ ಕಟ್ಟಡ ಕುಸಿದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದ್ದು, ಸ್ಥಳೀಯರು, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Kalaburagi News: ದೇಶದ 28 ವಿವಿಗಳ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲ ಪತ್ತೆ; ಆರೋಪಿ ಬಂಧನ
ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿದು ನಾಲ್ಕು ಮಕ್ಕಳಿಗೆ ಗಾಯ
ದಕ್ಷಿಣ ಕನ್ನಡ: ಸರ್ಕಾರಿ ಶಾಲೆಯ ಚಾವಣಿ ಕುಸಿದು ನಾಲ್ವರು ಮಕ್ಕಳು ಗಾಯಗೊಂಡ ಘಟನೆ ಕಳೆದ ವರ್ಷ ಆಗಸ್ಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಂತೂರು ಶಾಲೆಯಲ್ಲಿ ನಡೆದಿತ್ತು. ವಿದ್ಯಾರ್ಥಿಗಳು ಹೊರಗೆ ಆಟ ಆಡುತ್ತಿರುವಾಗ ಈ ದುರ್ಘಟನೆ ನಡೆದಿದ್ದರಿಂದ ಅದೃಷ್ಟವಶಾತ್ 180 ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದರು. ಗಾಯಗೊಂಡ ಫಾತಿಮತ್ ಸುಹಾನ, ರಶ್ಮಿ, ದೀಕ್ಷೀತಾ ಹಾಗೂ ಯಶ್ಮಿತಾ ಎಂಬುವವರಿಗೆ ಬಳಿಕ ಚಿಕಿತ್ಸೆ ನೀಡಲಾಗಿತ್ತು.
ಈ ಘಟನೆ ಸಂಬಂಧಪಟ್ಟಂತೆ ಶಾಲೆಯ ಮುಖ್ಯೋಪಾಧ್ಯಾಯ ರಮೇಶ್ ಕುಂತೂರು ಹಾಗೂ ಫೀಲ್ಡ್ ಎಂಜಿನಿಯರ್‌ನನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಮಾನತುಗೊಳಿಸಿದ್ದರು. ವಿಪತ್ತು ಪರಿಹಾರ ನಿಧಿಯಲ್ಲಿ ಶಾಲೆ ದುರಸ್ತಿಗೆ ಅನುದಾನ ಬಂದಿತ್ತು. ಶಾಲೆಯಲ್ಲಿ ವಿದ್ಯಾರ್ಥಿಗಳು ಇರುವ ವೇಳೆಯೇ ದುರಸ್ತಿ ಕಾಮಗಾರಿ ನಡೆದಿದ್ದು, ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಲಾಗಿತ್ತು ಎಂಬ ಆರೋಪವೂ ಕೇಳಿ ಬಂದಿತ್ತು.