ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Property Tax: ಮಾ.31ರೊಳಗೆ ಆಸ್ತಿ ತೆರಿಗೆ ಪಾವತಿಸದಿದ್ರೆ ದುಪ್ಪಟ್ಟು ದಂಡ ಖಚಿತ

ರಾಜ್ಯ ಸರ್ಕಾರವು ಕಳೆದ ವರ್ಷ ಬಿಬಿಎಂಪಿಯ ಕಾಯ್ದೆಗೆ ತಿದ್ದುಪಡಿ ಮಾಡಿ ಆಸ್ತಿ ತೆರಿಗೆ ಮೇಲಿನ ದಂಡ ಪ್ರಮಾಣವನ್ನು ಎರಡರಿಂದ ಒಂದು ಪಟ್ಟಿಗೆ ಇಳಿಕೆ ಮಾಡಿತ್ತು. ಜತೆಗೆ, ಒಂದು ವರ್ಷ ಕಾಲ ದಂಡ ಪ್ರಮಾಣವನ್ನು ₹100ಕ್ಕೆ ನಿಗದಿ ಪಡಿಸಿ ವಿನಾಯಿತಿ ನೀಡಿತ್ತು. ಇದೀಗ ಮಾ.31ಕ್ಕೆ ವಿನಾಯಿತಿ ಅವಧಿ ಮುಕ್ತಾಯಗೊಳ್ಳುತ್ತಿದೆ.

ಮಾ.31ರೊಳಗೆ ಆಸ್ತಿ ತೆರಿಗೆ ಪಾವತಿಸದಿದ್ರೆ ದುಪ್ಪಟ್ಟು ದಂಡ ಖಚಿತ

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Mar 15, 2025 12:59 PM

ಬೆಂಗಳೂರು: ಬೆಂಗಳೂರಿನ (Bengaluru) ಆಸ್ತಿ ಮಾಲೀಕರು ಇಲ್ಲಿ ಗಮನಿಸಬೇಕಾದ ಸುದ್ದಿ ಇದೆ. ಬಿಬಿಎಂಪಿ ಆಸ್ತಿ ತೆರಿಗೆ (Property Tax) ಬಾಕಿ ಇದ್ದರೆ ಮಾ.31ರೊಳಗೆ ತೆರಿಗೆ ಪಾವತಿಸಬೇಕು. ಇಲ್ಲದಿದ್ದರೆ ಏಪ್ರಿಲ್ 1ರಿಂದ ಶೇ.100ರಷ್ಟು ದಂಡ ಬೀಳಲಿದೆ. ಅಂದರೆ ದುಪ್ಪಟ್ಟು ಮೊತ್ತ ಕಟ್ಟಬೇಕಾಗಲಿದೆ. ಈ ಕುರಿತು ಬಿಬಿಎಂಪಿ (BBMP) ಸೂಚನೆ ನೀಡಿದೆ. ಏಪ್ರಿಲ್‌ 1ರಿಂದ ₹100ಕ್ಕೆ 100 ದಂಡ ವಿಧಿಸುವ ಹಾಗೂ ವಾರ್ಷಿಕ ಬಾಕಿ ಮೊತ್ತಕ್ಕೆ ಶೇ.9 ರಿಂದ 15 ರಷ್ಟು ದಂಡ ವಿಧಿಸುವ ನಿಯಮ ಜಾರಿಗೆ ಬರುತ್ತಿದೆ.

ರಾಜ್ಯ ಸರ್ಕಾರವು ಕಳೆದ ವರ್ಷ ಬಿಬಿಎಂಪಿಯ ಕಾಯ್ದೆಗೆ ತಿದ್ದುಪಡಿ ಮಾಡಿ ಆಸ್ತಿ ತೆರಿಗೆ ಮೇಲಿನ ದಂಡ ಪ್ರಮಾಣವನ್ನು ಎರಡರಿಂದ ಒಂದು ಪಟ್ಟಿಗೆ ಇಳಿಕೆ ಮಾಡಿತ್ತು. ಜತೆಗೆ, ಒಂದು ವರ್ಷ ಕಾಲ ದಂಡ ಪ್ರಮಾಣವನ್ನು ₹100ಕ್ಕೆ ನಿಗದಿ ಪಡಿಸಿ ವಿನಾಯಿತಿ ನೀಡಿತ್ತು. ಇದೀಗ ಮಾ.31ಕ್ಕೆ ವಿನಾಯಿತಿ ಅವಧಿ ಮುಕ್ತಾಯಗೊಳ್ಳುತ್ತಿದೆ. ಹೀಗಾಗಿ, ಏಪ್ರಿಲ್‌ 1 ರಿಂದ ₹100ಕ್ಕೆ 100 ದಂಡ ವಿಧಿಸುವ ಹಾಗೂ ವಾರ್ಷಿಕ ಬಾಕಿ ಮೊತ್ತಕ್ಕೆ ಶೇ.9 ರಿಂದ 15 ರಷ್ಟು ದಂಡ ವಿಧಿಸುವ ನಿಯಮ ಜಾರಿಗೆ ಬರುತ್ತಿದೆ.

ಉದಾಹರಣೆಗೆ 2022-23ನೇ ಸಾಲಿನ ಹಾಗೂ ಅದಕ್ಕಿಂತ ಹಿಂದಿನ ವರ್ಷದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿ ಮಾಲೀಕರು ₹1 ಸಾವಿರ ಆಸ್ತಿ ತೆರಿಗೆ ಬಾಕಿ ಇದ್ದರೆ, ₹1 ಸಾವಿರ ದಂಡದೊಂದಿಗೆ ಒಟ್ಟು ₹2 ಸಾವಿರ ಜತೆಗೆ ವಾರ್ಷಿಕ ಶೇ.9ರಷ್ಟು ಬಡ್ಡಿ ಸೇರಿಸಿ ಪಾವತಿಸಬೇಕಾಗಲಿದೆ. ಇನ್ನು 2023-24ನೇ ಸಾಲಿನ ಆಸ್ತಿ ತೆರಿಗೆ ದಂಡ ಇರುವುದಿಲ್ಲ. ಆದರೆ, ಶೇ.15ರಷ್ಟು ಬಡ್ಡಿ ಪಾವತಿ ಮಾಡಬೇಕಾಗಲಿದೆ. ಇನ್ನು 2024-25ನೇ ಸಾಲಿನ ಆಸ್ತಿ ತೆರಿಗೆಗೆ 2024ರ ಏಪ್ರಿಲ್‌ನಿಂದ ಈವರೆಗೆ ಶೇ.15ರಷ್ಟು ಬಡ್ಡಿ ಸಮೇತ ಪಾವತಿ ಮಾಡಬೇಕಾಗಲಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ತಪ್ಪು ಆಸ್ತಿ ಘೋಷಣೆ ಮಾಡಿಕೊಂಡವರಿಗೆ, ಆಸ್ತಿ ತೆರಿಗೆ ವ್ಯಾಪ್ತಿಗೆ ಬಾರದೇ ಇರುವ ಆಸ್ತಿಗಳಿಗೆ ಹಾಗೂ ಅನಿವಾರ್ಯ ಕಾರಣದಿಂದ ತಡವಾಗಿ ಆಸ್ತಿ ತೆರಿಗೆ ಪಾವತಿ ಮಾಡುವ ಆಸ್ತಿ ಮಾಲೀಕರಿಗೆ ಸೇರಿದಂತೆ ಎಲ್ಲರಿಗೂ ಒಂದೇ ಮಾದರಿಯಲ್ಲಿ ದಂಡ ವಿಧಿಸುವ ಪದ್ಧತಿ ಜಾರಿಯಾಗಲಿದೆ. ಕಾಯ್ದೆ ತಿದ್ದುಪಡಿಗೂ ಮುನ್ನಾ, ತಡವಾಗಿ ಆಸ್ತಿ ತೆರಿಗೆ ಪಾವತಿದಾರರಿಗೆ ಆಸ್ತಿ ತೆರಿಗೆ ಮೊತ್ತದೊಂದಿಗೆ ₹100 ದಂಡ ಮಾತ್ರ ವಿಧಿಸಲಾಗುತ್ತಿತ್ತು. ತಪ್ಪು ಆಸ್ತಿ ಘೋಷಣೆ ಮಾಡಿಕೊಂಡು ತೆರಿಗೆ ವಂಚನೆ ಪ್ರಕರಣದಲ್ಲಿ ಮಾತ್ರ ಆಸ್ತಿ ತೆರಿಗೆ ಮೊತ್ತದ ಎರಡು ಪಟ್ಟು ದಂಡ ವಿಧಿಸಲಾಗುತ್ತಿತ್ತು. ಇದೀಗ ಎಲ್ಲರಿಗೂ ಒಂದು ಮಾದರಿ ದಂಡ ವಿಧಿಸಲಾಗುತ್ತಿದೆ.

ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ 1,82,467 ಆಸ್ತಿ ಮಾಲೀಕರು ಸುಮಾರು ₹390 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ಮಹದೇವಪುರ, ಪೂರ್ವ ಹಾಗೂ ದಕ್ಷಿಣ ವಲಯದಲ್ಲಿ ಅತಿ ಹೆಚ್ಚಿನ ಪ್ರಮಾಣ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿದ್ದಾರೆ. ಕೊನೆಯ ಕ್ರಮವಾಗಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಂದ ವಸೂಲಿಗೆ ಕಟ್ಟಡ ಸೀಜ್‌ ಮಾಡುವುದು ಹಾಗೂ ಆಸ್ತಿ ಹರಾಜು ಹಾಕುವ ಕೆಲಸವನ್ನೂ ಮಾಡಲಾಗುತ್ತಿದೆ.

ಆಸ್ತಿ ತೆರಿಗೆ ಸುಸ್ತಿದಾರರುಗಳಿಗೆ ದಂಡವನ್ನು ಉಳಿಸಲು ಕಡೆಯ ಅವಕಾಶ ಮಾ.31 : 2025.

ಇಲ್ಲಿ ಪಾವತಿಸಿ : https://bbmptax.karnataka.gov.in

ಬೆಂಗಳೂರಿಗರೇ, ಕಸದ ಜೊತೆಗೆ ಇನ್ನು ಮುಂದೆ ಶುಲ್ಕವನ್ನೂ ಕೊಡಿ!

ಬಸ್ ಟಿಕೆಟ್ ದರ ಹೆಚ್ಚಳ, ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳದ ನಡುವೆ ಬೆಂಗಳೂರಿಗರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಬೆಂಗಳೂರಿನಲ್ಲಿ ಏಪ್ರಿಲ್‌ 1ರಿಂದ ಪ್ರತಿ ಮನೆಯಿಂದ ಸಂಗ್ರಹಿಸುವ ಕಸಕ್ಕೂ ಶುಲ್ಕ ವಸೂಲಿಗೆ ಸರ್ಕಾರ ಅನುಮೋದನೆ ನೀಡಿದೆ. ಇದು ವಸತಿ ಸೇರಿದಂತೆ ಎಲ್ಲ ಬಗೆಯ ಕಟ್ಟಡಗಳಿಗೂ ಅನ್ವಯ ಆಗಲಿದೆ. ಕೆಜಿ ಲೆಕ್ಕದಲ್ಲಿ ಬಳಕೆದಾರರ ಶುಲ್ಕವನ್ನು ವಿಧಿಸಲಾಗುತ್ತಿದೆ.

ತ್ಯಾಜ್ಯ ಸಂಸ್ಕರಣೆ ಮಾಡದ ಅಪಾರ್ಟ್ಮೆಂಟ್‌ಗಳು ಅಥವಾ ದೊಡ್ಡ ವಾಣಿಜ್ಯ ಸಂಸ್ಥೆಗಳಂತಹ ಬೃಹತ್ ತ್ಯಾಜ್ಯ ಉತ್ಪಾದಕರಿಂದ ಪ್ರತಿ ಕೆ.ಜಿ. ತ್ಯಾಜ್ಯಕ್ಕೆ 12 ರೂ. ಬಳಕೆದಾರ ಶುಲ್ಕ ವಿಧಿಸಲು ಸರ್ಕಾರವು ಅವಕಾಶ ನೀಡಿದೆ. ಕಟ್ಟಡದ ವಿಸ್ತೀರ್ಣದ ಆಧಾರದ ಮೇಲೆ ಬಳಕೆದಾರ ಶುಲ್ಕ ನಿರ್ಧರಿಸಲಾಗುತ್ತದೆ ಎನ್ನಲಾಗಿದೆ. 600 ಚದರ ಅಡಿ ವರೆಗಿನ ಕಟ್ಟಡಗಳು ತಿಂಗಳಿಗೆ 10 ರೂ., ವರ್ಷಕ್ಕೆ 120 ರೂ. ಪಾವತಿಸಬೇಕು. 4,000 ಚದರ ಅಡಿಗಿಂತ ದೊಡ್ಡ ಕಟ್ಟಡಗಳಿಗೆ ತಿಂಗಳಿಗೆ ಗರಿಷ್ಠ 400 ರೂ. ವರ್ಷಕ್ಕೆ 4,800 ರೂ. ಪಾವತಿಸಬೇಕಾಗಿದೆ ಎಂದು ಹೇಳಲಾಗಿದೆ.

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (BSWML) ಮನೆ-ಮನೆಗೆ ಕಸ ಸಂಗ್ರಹಣೆಗೆ ಬಳಕೆದಾರ ಶುಲ್ಕ ವಿಧಿಸುವ ಮೂಲಕ ವಾರ್ಷಿಕವಾಗಿ 600 ಕೋಟಿ ರೂ. ಹೆಚ್ಚುವರಿ ಆದಾಯ ಗಳಿಸುವ ನಿರೀಕ್ಷೆ ಹೊಂದಿದೆ. ಜುಲೈ 2022ರಲ್ಲಿ ಸ್ಥಾಪನೆಯಾದ ಬಿಎಸ್‌ಡಬ್ಲ್ಯೂಎಂಎಲ್, ನಗರದಲ್ಲಿ ಪ್ರತಿದಿನ ಉತ್ಪತ್ತಿಯಾಗುವ 6,000 ಟನ್ ತ್ಯಾಜ್ಯದ ಸಂಗ್ರಹಣೆ, ಸಾಗಣೆ ಮತ್ತು ವಿಲೇವಾರಿಗೆ ಜವಾಬ್ದಾರನಾಗಿದೆ. ಇದು ತ್ಯಾಜ್ಯ ಸಂಗ್ರಹಣೆಯಲ್ಲಿ ತೊಡಗಿರುವ ಆಟೋ ಟಿಪ್ಪರ್‌ಗಳಿಗೆ ವಾರ್ಷಿಕ ಸುಮಾರು 550 ಕೋಟಿ ರೂ.ಗಳನ್ನು ಖರ್ಚು ಮಾಡುತ್ತದೆ.

ಇದನ್ನೂ ಓದಿ: Gold Price Today: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ದರ ಹೀಗಿದೆ ನೋಡಿ