Invest Karnataka: ಅಭಿವೃದ್ಧಿ ಹಂಚಿಕೆಗಾಗಿ ಬೃಹತ್ ರಾಜ್ಯಗಳ ವಿಭಜನೆ ಅತ್ಯವಶ್ಯ: ಮಾಂಟೆಕ್ ಸಿಂಗ್ ಅಹ್ಲುವಾಲಿಯಾ
Invest Karnataka: ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶ (ಜಿಮ್-25)ದಲ್ಲಿ 'ಭಾರತದ ಆರ್ಥಿಕ ಅಭಿವೃದ್ಧಿ ಮತ್ತು ಜಾಗತಿಕ ಸವಾಲುಗಳು' ಗೋಷ್ಠಿಯಲ್ಲಿ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಮಾತನಾಡಿದ್ದಾರೆ. ಅಭಿವೃದ್ಧಿಯ ಹಂಚಿಕೆ ಮತ್ತು ದಕ್ಷ ಆಡಳಿತ ದೃಷ್ಟಿಯಿಂದ ರಾಜ್ಯಗಳ ವಿಭಜನೆ ಅತ್ಯಗತ್ಯ.
![ಬೃಹತ್ ರಾಜ್ಯಗಳ ವಿಭಜನೆ ಅತ್ಯವಶ್ಯ: ಮಾಂಟೆಕ್ ಸಿಂಗ್ ಅಹ್ಲುವಾಲಿಯಾ](https://cdn-vishwavani-prod.hindverse.com/media/original_images/Montek_Singh_Ahluwalia.jpg)
![Profile](https://vishwavani.news/static/img/user.png)
ಬೆಂಗಳೂರು: ಪ್ರಗತಿಯ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ದೊಡ್ಡ ರಾಜ್ಯಗಳ ವಿಭಜನೆ ಹಾಗೂ ಹಲವು ನಗರಗಳ ಅಭಿವೃದ್ಧಿ ಅತ್ಯಗತ್ಯ ಎಂದು ಹೆಸರಾಂತ ಅರ್ಥಶಾಸ್ತಜ್ಞ ಹಾಗೂ ಕೇಂದ್ರ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಬುಧವಾರ ಪ್ರತಿಪಾದಿಸಿದರು. ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶ (Invest Karnataka)ದಲ್ಲಿ 'ಭಾರತದ ಆರ್ಥಿಕ ಅಭಿವೃದ್ಧಿ ಮತ್ತು ಜಾಗತಿಕ ಸವಾಲುಗಳು' ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವೇ ನಗರಗಳ ಅಭಿವೃದ್ಧಿಯಿಂದಾಗಿ ಹಲವು ಸಮಸ್ಯೆಗಳು ತಲೆದೋರಿವೆ ಎಂದರು. ಅಭಿವೃದ್ಧಿಯ ಹಂಚಿಕೆ ಮತ್ತು ದಕ್ಷ ಆಡಳಿತ ದೃಷ್ಟಿಯಿಂದ ರಾಜ್ಯಗಳ ವಿಭಜನೆ ಅತ್ಯಗತ್ಯ. ಉತ್ತರ ಪ್ರದೇಶವನ್ನು ಹರಿತ್ ಪ್ರದೇಶ, ಪೂರ್ವಾಂಚಲ್ ರಾಜ್ಯಗಳಾಗಿ ವಿಭಜಿಸುವ ಬಗ್ಗೆ ಈ ಹಿಂದೆ ಪ್ರಸ್ತಾಪವಾಗಿತ್ತು. ಹಾಗೆಯೇ ಮಹಾರಾಷ್ಟ್ರದಲ್ಲೂ ವಿದರ್ಭ ಪ್ರಾಂತ್ಯವನ್ನು ಪ್ರತ್ಯೇಕ ರಾಜ್ಯವನ್ನಾಗಿಸಬೇಕೆಂಬ ಕೂಗು ಇದೆ. ರಾಜ್ಯಗಳಲ್ಲಿ ಕೇವಲ ಒಂದೇ ನಗರಕ್ಕೆ ಅಭಿವೃದ್ಧಿ ಕೇಂದ್ರೀಕರಿಸುವುದರಿಂದ ಹಲವು ಸಮಸ್ಯೆಗಳು ತಲೆದೋರಿವೆ ಎಂದು ವಿವರಿಸಿದರು.
ಅತಿಹೆಚ್ಚು ತಲಾದಾಯ ಹೊಂದಿರುವ ರಾಜ್ಯಗಳ ಪೈಕಿ ದೇಶದಲ್ಲೇ 4ನೇ ಸ್ಥಾನದಲ್ಲಿರುವ ಕರ್ನಾಟಕದ ರಾಜಧಾನಿ ಬೆಂಗಳೂರು ಜಾಗತಿಕ ಭೂಪಟದಲ್ಲಿ ಗುರುತಿಸಿಕೊಂಡಿರುವ ಪ್ರಮುಖ ನಗರವಾಗಿದೆ. ಬಹುಹಿಂದೆ ಖ್ಯಾತ ಉದ್ಯಮಿ ಜೆ ಆರ್ ಡಿ ಟಾಟಾ ಅವರು ಇಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಸ್ಥಾಪಿಸಿದಾಗಿನಿಂದಲೂ ವಿಜ್ಞಾನ ಮತ್ತು ತಂತ್ರಜ್ಞಾನ ವಲಯದಲ್ಲಿ ಬೆಂಗಳೂರು ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ. ಇಲ್ಲಿನ ಹವಾಗುಣವೂ ಅನುಕೂಲಕರವಾಗಿದ್ದು, ಬೆಳವಣಿಗೆಗೆ ಪೂರಕವಾಗಿದೆ ಎಂದರು.
ನಮ್ಮಲ್ಲಿ ನಗರಾಡಳಿತಕ್ಕೆ ಹೆಚ್ಚಿನ ಅಧಿಕಾರ ಇಲ್ಲ. ಬದಲಿಗೆ ರಾಜ್ಯ ಸರ್ಕಾರಗಳೇ ಮುಖ್ಯ ನಿರ್ಧಾರಗಳನ್ನು ಕೈಗೊಳ್ಳುತ್ತವೆ. ಇದು ಬದಲಾಗಬೇಕು. ಗಾಂಧೀಜಿಯವರು ಹಿಂದೆ ನೀಡಿದ್ದ ಹೇಳಿಕೆಯಂತೆ, 'ನಿಜವಾದ ಭಾರತ ಗ್ರಾಮೀಣ ಪ್ರದೇಶದಲ್ಲಿದೆ' ಎಂಬ ಸ್ಥಿತಿ ಈಗ ಇಲ್ಲ. ನಗರಗಳು ಮಿತಿಮೀರಿ ಬೆಳೆಯುತ್ತಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಅಭಿವೃದ್ಧಿಯ ಹಂಚಿಕೆ ದೃಷ್ಟಿಯಿಂದ 2 ಮತ್ತು 3ನೇ ಸ್ತರದ ನಗರಗಳತ್ತ ಹೆಚ್ಚಿನ ಗಮನ ನೀಡಬೇಕಿದೆ ಎಂದು ಹೇಳಿದರು .
ಅರ್ಥಶಾಸ್ತ್ರಜ್ಞ ಸಲ್ಮಾನ ಸೋಝ್ ಗೋಷ್ಠಿ ನಿರ್ವಹಿಸಿದರು.
ಈ ಸುದ್ದಿಯನ್ನೂ ಓದಿ | Invest Karnataka: 'ನಾವೀನ್ಯತೆಗಳ ಭವಿಷ್ಯ’ ಪ್ರದರ್ಶನಕ್ಕೆ ಡಿಸಿಎಂ ಡಿಕೆಶಿ ಚಾಲನೆ; 40ಕ್ಕೂ ಹೆಚ್ಚು ಕಂಪನಿ ಭಾಗಿ
ಎರಡನೇ ಸ್ತರದ ನಗರಗಳಿಗೆ ಹೂಡಿಕೆ ಆಕರ್ಷಣೆಯಿಂದ ಪ್ರಗತಿ
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ಮಾಹಿತಿ ತಂತ್ರಜ್ಞಾನ, ಐಟಿ ಆಧಾರಿತ ಸೇವಾ ವಲಯ ಜತೆಗೆ ಬಾಹ್ಯಾಕಾಶ, ರಕ್ಷಣೆ, ಬಯೋಟೆಕ್ ಕ್ಷೇತ್ರದಲ್ಲೂ ಹೆಸರುವಾಸಿಯಾಗಿದೆ. ಆಯಾ ಪ್ರದೇಶಗಳ ಸಂಪನ್ಮೂಲ ಸಾಮರ್ಥ್ಯಕ್ಕೆ ಅನುಗುಣವಾಗಿ ಎರಡನೇ ಸ್ತರದ ನಗರಗಳಲ್ಲೂ ಹೂಡಿಕೆ ಉತ್ತೇಜಿಸಿದರೆ ಪ್ರಗತಿ ಸಾಧ್ಯವಾಗಲಿದೆ ಎಂದು ʼಟರ್ಬೊಸ್ಟಾರ್ಟ್ ಗ್ಲೋಬಲ್ʼ ಸಿಇಒ ವೆಂಕಟ್ ರಾಜು ಬುಧವಾರ ಅಭಿಪ್ರಾಯಪಟ್ಟರು.
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ನಡೆದ “ಬೆಳವಣಿಗೆಗೆ ಹೂಡಿಕೆಯ ಮರುಕಲ್ಪನೆ: ಕರ್ನಾಟಕದ ಕನಸು 2030 ಸಾಧಿಸಲು ಪೂರಕ ಐದು ವಲಯಗಳು” ಗೋಷ್ಠಿಯಲ್ಲಿ ಮಾತನಾಡಿದರು.
“ಪಾರದರ್ಶಕತೆ, ಸ್ಥಿರತೆ ಹಾಗೂ ಮುಂದುವರಿಕೆಯಂಥ ವಾತಾವರಣ ನಿರ್ಮಾಣವಾದಲ್ಲಿ ಉದ್ಯಮಿಗಳು ಹೂಡಿಕೆಗೆ ಮುಂದೆ ಬರುವುದು ನಿಶ್ಚಿತ. ಗ್ಲೋಬಲ್ ಕೆಪಬಲಿಟಿ ಸೆಂಟರ್‌ಗಳ (ಜಿಸಿಸಿ) ಸ್ಥಾಪನೆಗೆ ಒತ್ತು ಕೊಡುವ ಮೂಲಕ ರಾಜ್ಯ ಸರಕಾರ ಉತ್ತಮ ಕೆಲಸ ಮಾಡಿದೆ. ಉತ್ಪಾದನಾ ವಲಯ ಮತ್ತು ಪೂರೈಕೆ ಸರಳಪಳಿ ನಡುವೆ ಸಮತೋಲನ ಸಾಧಿಸಬೇಕಿದೆ. ಜಾಗತಿಕವಾಗಿ ಸವಾಲು ಹಾಗೂ ಅವಕಾಶಗಳು ಇದ್ದೇ ಇರುತ್ತವೆ ಎಂದ ವಿವರಿಸಿದರು.
“ದೇಶದ ಪ್ರಗತಿಗೆ ಹಾಗೂ ಬೆಂಗಳೂರಿಗೆ ವಿಶ್ವಮಟ್ಟದಲ್ಲಿ ಹೆಸರು ತಂದುಕೊಡುವಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪಾತ್ರ ದೊಡ್ಡದಿದೆ. ನಮ್ಮಲ್ಲಿ ಈಗ 1700 ಜಿಸಿಸಿ (ಗ್ಲೋಬಲ್ ಕೆಪಬಲಿಟಿ ಸೆಂಟರ್) ಕೇಂದ್ರಗಳಿವೆ. ಭಾರತವು ದೊಡ್ಡ ಮಾರುಕಟ್ಟೆಯಾಗಿರುವುದರಿಂದ ಇದು ಸಾಧ್ಯವಾಗಿದೆ,ʼʼ ಎಂದ ಕೆಪಿಐಟಿ ಟೆಕ್ನಾಲಜೀಸ್ ಕಂಪನಿಯ ಮುಖ್ಯ ಮಾರುಕಟ್ಟೆ ಅಧಿಕಾರಿ ಮೊಹಿತ್ ಕೊಚಾರ್, ಭಾರತದಲ್ಲಿ ಸಂಶೋಧನೆ ಮತ್ತು ವಿನ್ಯಾಸ ವಲಯದಲ್ಲಿ ವಿಫುಲ ಅವಕಾಶಗಳಿವೆ ಎಂದರು.
“ಹಸಿರು ಇಂಧನ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕರ್ನಾಟಕದಲ್ಲಿ ಹೂಡಿಕೆಗೆ ವಿಫಲ ಅವಕಾಶಗಳಿವೆ. ಸ್ವಿಟ್ಜರ್‌ಲೆಂಡ್ ಕಂಪನಿಗಳು ಆಸಕ್ತಿ ತೋರಿವೆʼʼ ಎಂದು ಉಡುಪಿ ಮೂಲದ ಸ್ವಿಟ್ಜರ್‌ಲೆಂಡ್ ಸಂಸದ ಹಾಗೂ ಸ್ವಿಜ್ ಇಂಡಿಯಾ ಪಾರ್ಲಿಮೆಂಟರಿ ಗ್ರೂಪ್ ಅಧ್ಯಕ್ಷ ಎಚ್.ಸಿ. ನಿಕ್ ಗುಗ್ಗರ್ ಹೇಳಿದರು.
“ಸುಸ್ಥಿರ ಅಭಿವೃದ್ಧಿ ಪರಿಕಲ್ಪನೆ ವಿಶ್ವದಾದ್ಯಂತ ಮುಂಚೂಣಿಯಲ್ಲಿದೆ. ಕರ್ನಾಟಕವು ಹಸಿರು ಇಂಧನ ವಲಯದಲ್ಲಿ ಹೂಡಿಕೆಗೆ ಒತ್ತುಕೊಟ್ಟಿದೆ. ಈಗಾಗಲೇ ಉದ್ಯಮಿಗಳಾದ ಆನಂದ್ ಮಹೀಂದ್ರಾ, ಸಜ್ಜನ್ ಜಿಂದಾಲ್ ಅವರು ಸೌರಶಕ್ತಿ, ಪವನ ಶಕ್ತಿ ವಲಯದಲ್ಲಿ ಸಾವಿರಾರು ಕೋಟಿ ರೂ. ಹೂಡಿಕೆಯನ್ನು ಘೋಷಿಸಿದ್ದು ಒಳ್ಳೆಯ ಬೆಳವಣಿಗೆಯಾಗಿದೆ. ಎಂದು ಐಬಿಸಿ (ಇಂಟರ್‌ನ್ಯಾಷನಲ್ ಬ್ಯಾಟರಿ ಕಂಪನಿ) ಸಿಇಒ ಪ್ರಿಯದರ್ಶಿ ಪಾಂಡ ಹೇಳಿದರು.
ನವೀಕರಿಸಬಹುದಾದ ಇಂಧನದಿಂದ ಉತ್ಪಾದಿಸಿದ ವಿದ್ಯುತ್‌ಶಕ್ತಿಯನ್ನು ಸಂಗ್ರಹಿಸುವ ಬ್ಯಾಟರಿ ಮೂಲಸೌಕರ್ಯ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕಿದೆ. ಆಗ ಮಾತ್ರ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಸಮತೋಲನ ಸಾಧಿಸಲು ಸಾಧ್ಯವಾಗಲಿದೆ. ಇದಕ್ಕಾಗಿ ಖಾಸಗಿ ಹೂಡಿಕೆದಾರರನ್ನೂ ಉತ್ತೇಜಿಸಬೇಕಿದೆ ಎಂದು ಪಾಂಡ ಅಭಿಪ್ರಾಯಪಟ್ಟರು.