Huskur Jatre: ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಅನಾಹುತ; ತೇರು ಉರುಳಿ ಬಿದ್ದು ವ್ಯಕ್ತಿ ಸಾವು
Huskur Jatre: ಆನೇಕಲ್ ತಾಲೂಕಿನ ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆಯಲ್ಲಿ ದುರ್ಘಟನೆ ನಡೆದಿದೆ. ಬಿರುಗಾಳಿ ಸಹಿತ ಮಳೆಯಿಂದಾಗಿ ಆಯತಪ್ಪಿ ತೇರು ಬಿದ್ದಿದೆ. ತೇರಿನಲ್ಲಿ ಇದ್ದ ಹಲವರಿಗೆ ಗಾಯಗಳಾಗಿವೆ. ತೇರು ಎಳೆದು ತರುವಾಗ ಅವಘಡ ಸಂಭವಿಸಿದೆ.


ಬೆಂಗಳೂರು: ಆನೇಕಲ್ ತಾಲೂಕಿನ ಐತಿಹಾಸಿಕ ಹುಸ್ಕೂರಿನ ಮದ್ದೂರಮ್ಮ ಜಾತ್ರೆಯಲ್ಲಿ ಅನಾಹುತ ನಡೆದಿದ್ದು, ತೇರು ಧರೆಗುರುಳಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆಯಲ್ಲಿ ದುರ್ಘಟನೆ ನಡೆದಿದೆ. ಜಾತ್ರೆಗೆ ವಿವಿಧ ಗ್ರಾಮಗಳಿಂದ 150 ಕ್ಕೂ ಹೆಚ್ಚು ಅಡಿ ಎತ್ತರದ ಕುರ್ಜುಗಳು ಆಗಮಿಸಿದ್ದವು. ಈ ವೇಳೆ ತೇರು ಎಳೆದು ತರುವಾಗ ಅವಘಡ ಸಂಭವಿಸಿದೆ.
ಮದ್ದೂರಮ್ಮ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಟ್ರ್ಯಾಕ್ಟರ್ ಹಾಗೂ ನೂರಾರು ಎತ್ತುಗಳ ಮೂಲಕ ಎಳೆದು ತರುವ ಹೆಸರಾಂತ ಜಾತ್ರೆ ಇದಾಗಿದೆ. ಬಿರುಗಾಳಿ ಸಹಿತ ಮಳೆಯಿಂದಾಗಿ ಆಯತಪ್ಪಿ ತೇರು ಬಿದ್ದಿದೆ. ತೇರಿನಲ್ಲಿ ಇದ್ದ ಹಲವರಿಗೆ ಗಾಯಗಳಾಗಿವೆ. ಕಳೆದ ವರ್ಷ ಹೀಲಲಿಗೆ ತೇರು ಬಿದ್ದಿತ್ತು. ಜಾತ್ರೆಮಯ ಸಂಭ್ರಮದ ದಿನ ಸೂತಕದ ಛಾಯೆ ಆವರಿಸಿದೆ.
ಈಗಲಾದರೂ ಜಂಭದ ಪ್ರದರ್ಶನ ನಿಲ್ಲಲಿ: ರವಿ ಕೃಷ್ಣಾರೆಡ್ಡಿ
ಮದ್ದೂರಮ್ಮ ಜಾತ್ರೆಯಲ್ಲಿ ತೇರು ಉರುಳಿ ವ್ಯಕ್ತಿಯೊಬ್ಬ ಸಾವಿಗೀಡಾದ ಬಗ್ಗೆ ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಪ್ರತಿಕ್ರಿಯಿಸಿದ್ದು, ಆಯೋಜಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈಗಲಾದರೂ ಜನ ಈ ಜಂಭದ ಪ್ರದರ್ಶನ ನಿಲ್ಲಿಸಬೇಕು. 50-60 ಅಡಿಗಿಂತ ಹೆಚ್ಚಿಗೆ ತೇರು ಇರಬಾರದು ಮತ್ತು ಸರ್ಕಾರ ಎಲ್ಲಾ ರೀತಿಯ ರಕ್ಷಣೆಯ ವ್ಯವಸ್ಥೆ ಮಾಡಬೇಕು ಎಂದು ರವಿ ಕೃಷ್ಣಾರೆಡ್ಡಿ ಆಗ್ರಹಿಸಿದ್ದಾರೆ.
ನಮ್ಮ ಆನೇಕಲ್ ತಾಲೂಕಿನ ಹುಸ್ಕೂರು ಗ್ರಾಮದ ಮದ್ದೂರಮ್ಮ ದೇವಸ್ಥಾನಕ್ಕೆ ಬರುತ್ತಿದ್ದ ನೂರು ಅಡಿಗೂ ಎತ್ತರದ ದೊಡ್ಡನಾಗಮಂಗಲ ಮತ್ತು ರಾಯಸಂದ್ರ ಗ್ರಾಮಗಳ ಕುರ್ಜು/ತೇರುಗಳು ವಾಲಿ ಧರೆಗೆ ಉರುಳಿವೆ. ಸಾವುನೋವಿನ ವಿವರಗಳು ಗೊತ್ತಾಗಿಲ್ಲ. ಕಳೆದ ವರ್ಷವೂ ಇದೇ ರೀತಿ ನಮ್ಮ ಪಕ್ಕದೂರಿನ ಹೀಲಲಿಗೆಯ ಕುರ್ಜೂ ಸಹ ಹುಸ್ಕೂರಿಗೆ ಬರುವ ದಾರಿಯಲ್ಲಿ ಹೀಗೆ ಬಿದ್ದಿತ್ತು. ಪುಣ್ಯಕ್ಕೆ ಆಗ ಯಾರಿಗೂ ಪ್ರಾಣಾಪಾಯ ಆಗಿರಲಿಲ್ಲ.
ಈಗ ಎಲ್ಲರಲ್ಲೂ ದುಡ್ಡಿದೆ. ಅದರ ಜೊತೆಗೆ ಮದವೂ ಬಂದಿದೆ. ಅದು "ನಮ್ಮದೇ ದೊಡ್ಡದು" ಎಂದು ತೋರಿಸಿಕೊಳ್ಳುವ ಮದ. ಹಾಗಾಗಿಯೇ ಸುತ್ತಮುತ್ತಲ ಹತ್ತನ್ನೆರಡು ಹಳ್ಳಿಗಳಿಂದ ಹುಸ್ಕೂರಿನ ಮದ್ದೂರಮ್ಮ ದೇವಸ್ಥಾನಕ್ಕೆ ಬರುವ ಕುರ್ಜುಗಳ ಎತ್ತರವೂ ಪ್ರತಿವರ್ಷ ಏರುತ್ತಿದೆ. ಅಪಘಾತಗಳೂ ಹೆಚ್ಚುತ್ತಿವೆ.
ನಾವು ಚಿಕ್ಕವರಿದ್ದಾಗ ಇಂತಹ ಘಟನೆಗಳು ಅಪರೂಪಕ್ಕೆ ಆಗುತ್ತಿದ್ದವು. ಬಹುಶಃ 30 ವರ್ಷದ ಹಿಂದೆ ಆಗ ಅಪರೂಪಕ್ಕೆ ಎನ್ನುವಂತೆ ನಮ್ಮ ಆನೇಕಲ್ ತಾಲ್ಲೂಕಿನ ಮರಸೂರು ಮಡಿವಾಳದ ಸಪ್ಪಲಮ್ಮ ದೇವಸ್ಥಾನದ ಬಳಿಯೂ ಹೀಗೆ ಕುರ್ಜು ಉರುಳಿಬಿದ್ದು ನಾಲ್ಕೈದು ಜನ ಸತ್ತಿದ್ದರು.
ಇಂದು ನಡೆದಿರುವ ಘಟನೆಯಲ್ಲಿ ಸ್ಪಷ್ಟವಾಗಿ ತಾಲ್ಲೂಕು/ಜಿಲ್ಲಾಡಳಿತದ ಕರ್ತವ್ಯಲೋಪ ಎದ್ದು ಕಾಣಿಸುತ್ತಿದೆ. ಇಂತಹ ಅಪಾಯಕಾರಿ ಕೆಲಸಗಳಿಗೆ ಅನುಮತಿ ನೀಡುವುದೇ ತಪ್ಪು. ಮೊದಲೆಲ್ಲ 40-50 ಅಡಿ ಇರುತ್ತಿದ್ದ ಈ ತೇರುಗಳು ಈಗ 150 ಅಡಿ ಮುಟ್ಟಿವೆ. ಅದು ಕೇವಲ ಊರಿನ ಪುಡಾರಿಗಳ ಒಣ ಪ್ರತಿಷ್ಠೆ ಮತ್ತು ಮದದ ಕಾರಣಕ್ಕೆ. ಅದಕ್ಕೆ ಶಾಸಕರೂ ಸೇರಿದಂತೆ ಪ್ರಮುಖ ಪಕ್ಷಗಳ ಹಣವಂತ ರಾಜಕಾರಣಿಗಳ ಕುಮ್ಮಕ್ಕು. ಇಂತಹ ಜಂಭದ ಪ್ರದರ್ಶನ ಬೇಡ ಎಂದು ಹೇಳುವ ಜವಾಬ್ದಾರಿಯೇ ಈ ನಾಲಾಯಕ್'ಗಳಿಗೆ ಇಲ್ಲ.
ಅಂದಹಾಗೆ, ಮದ್ದೂರಮ್ಮ ಜಾತ್ರೆ ನಮ್ಮ ತಾಲೂಕಿನ ಅತಿದೊಡ್ಡ ಜಾತ್ರೆ. ಬೆಂಗಳೂರಿನಲ್ಲಿರುವ ತಮಿಳರ ಜೊತೆಗೆ ತಮಿಳುನಾಡಿನಿಂದಲೂ ಲಕ್ಷಾಂತರ ಜನರು ಈ ಜಾತ್ರೆಗೆ ಬರುತ್ತಾರೆ. ಒಂದು ದಿನ ಉಳಿದು ದೇವರಿಗೆ ಕುರಿಕೋಳಿ ಬಲಿಕೊಟ್ಟು, ಅಲ್ಲಿಯೇ ಮಾಂಸಾಹಾರ ತಯಾರಿಸಿ, ತಿಂದು ಹೋಗುತ್ತಾರೆ. ಅವರು ಇಷ್ಟು ದೊಡ್ಡಸಂಖ್ಯೆಯಲ್ಲಿ ಯಾವಾಗ ಬರಲು ಆರಂಭಿಸಿದರೋ ಗೊತ್ತಿಲ್ಲ. ಯಾಕೆಂದರೆ ಇದು ಸ್ಥಳೀಯರಿಗೂ ಬಹಳ ದೊಡ್ಡ ಹಬ್ಬ, ಜಾತ್ರೆ. ಬಹುಶಃ ನಾಳೆಯೋ, ನಾಡಿದ್ದೋ ಜಾತ್ರೆ. ಕುರ್ಜುಗಳು ಊರು ಬಿಡುವ ಹಿಂದಿನ ದಿನ ಊರಿನಲ್ಲಿ ಊರಹಬ್ಬ ಮಾಡುತ್ತಾರೆ. ಪ್ರತಿಯೊಂದು ಮನೆಯವರೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕುರಿ, ಕೋಳಿ, ಹಂದಿ, ಮೀನು ಸೇರಿದಂತೆ ವಿವಿಧ ಮಾಂಸದ ಭಕ್ಷ್ಯಗಳನ್ನು ಮಾಡಿ ನೆಂಟರಿಷ್ಟರನ್ನು ಕರೆದು ಭಾರೀ ಔತಣ ಮಾಡುತ್ತಾರೆ. ನಮ್ಮ ಊರು ಬೊಮ್ಮಸಂದ್ರವು ಹುಸ್ಕೂರಿನಿಂದ ಕೇವಲ ಐದಾರು ಕಿಲೋಮೀಟರ್ ದೂರ. ಅದು ಹೇಗೋ ಮದ್ದೂರಮ್ಮನ ಜಾತ್ರೆಗೆ ಊರಹಬ್ಬ ಮಾಡುವ ಪಟ್ಟಿಯಲ್ಲಿ ನಮ್ಮ ಊರು ಇಲ್ಲ. ನಮ್ಮ ಊರಿನಿಂದ ಒಂದೇ ಕಿಲೋಮೀಟರ್ ದೂರದಲ್ಲಿರುವ ಹೀಲಲಿಗೆಯಲ್ಲಿ ಮಾಡುತ್ತಾರೆ. ಕಳೆದ ವರ್ಷ ಹೀಲಲಿಗೆಯ ಕುರ್ಜು ಉರುಳಿಬಿದ್ದ ಕಾರಣ ಈ ವರ್ಷ ಅವರ ಊರಿನಲ್ಲಿ ಊರಹಬ್ಬವೂ ಇಲ್ಲ, ತೇರೂ ಇಲ್ಲ.
ಈಗಲಾದರೂ ಜನ ಈ ಜಂಭದ ಪ್ರದರ್ಶನ ನಿಲ್ಲಿಸಬೇಕು. 50-60 ಅಡಿಗಿಂತ ಹೆಚ್ಚಿಗೆ ತೇರು ಇರಬಾರದು. ಮತ್ತು ಸರ್ಕಾರ ಎಲ್ಲಾ ರೀತಿಯ ರಕ್ಷಣೆಯ ವ್ಯವಸ್ಥೆ ಮಾಡಬೇಕು. ಅಪಾಯ ಆದಾಗ ನೋಡೋಣ ಮತ್ತು ಕ್ರಮ ತೆಗೆದುಕೊಳ್ಳೋಣ ಎನ್ನುವುದು ಬೇಜವಾಬ್ದಾರಿ ಮಾತ್ರವಲ್ಲ, ಜೀವವಿರೋಧಿ ಸಹ.
ಅಂದಹಾಗೆ, ಕುರ್ಜಿಗೂ ತೇರಿಗೂ ಇರುವ ವ್ಯತ್ಯಾಸ ಏನು ಎಂದು ಬಹಳ ಜನಕ್ಕೆ ಪ್ರಶ್ನೆ ಇರಬಹುದು. ತೇರು ಅಥವ ರಥವನ್ನು ಜನರು ಎಳೆಯುತ್ತಾರೆ ಮತ್ತು ಅದು ಸಾಮಾನ್ಯವಾಗಿ ದೇವಸ್ಥಾನದ ಬಳಿಯೇ ಆರಂಭವಾಗಿ ಊರು ಸುತ್ತಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಬರುತ್ತದೆ. ಕುರ್ಜುಗಳು ಸಾಮಾನ್ಯವಾಗಿ ತೇರುಗಳಿಗಿಂತ ಎತ್ತರ ಮತ್ತು ಅವು ಹಲವು ಕಿಲೋಮೀಟರುಗಳ ದೂರದ ಗ್ರಾಮಗಳಿಂದ ಬರಬೇಕಾದ ಕಾರಣ ಅವನ್ನು ಎತ್ತುಗಳಿಂದ ಎಳೆಸಿಕೊಂಡು ಬರುತ್ತಾರೆ. ಈಗ ಸಂಪ್ರದಾಯಕ್ಕೆ ಇರಲಿ ಎಂದು ಎತ್ತುಗಳನ್ನು ನಾಮಕಾವಸ್ಥೆಗೆ ಕಟ್ಟಿ, ಟ್ರ್ಯಾಕ್ಟರುಗಳಿಂದ ಕುರ್ಜು ಎಳೆಯುತ್ತಾರೆ.
ಈ ಸುದ್ದಿಯನ್ನೂ ಓದಿ | Self Harming: ಮಂಡ್ಯದಲ್ಲಿ ರೈಲಿಗೆ ತಲೆಕೊಟ್ಟು ಎಎಸ್‌ಐ ಪುತ್ರಿ ಆತ್ಮಹತ್ಯೆ
ಈ ಬಾರಿಯಾದರೂ ಮದ್ದೂರಮ್ಮ ತಾಯಿ ಜನರಿಗೆ ಬುದ್ಧಿ ಕೊಡಲಿ. ಮುಂದಿನ ಬಾರಿಯಿಂದ ಯಾವುದೇ ಅವಘಡಗಳಿಗೆ ಮತ್ತು ಸಾವುನೋವುಗಳಿಗೆ ಅವಕಾಶ ಇಲ್ಲದ ರೀತಿಯಲ್ಲಿ ಜಾತ್ರೆ ನಡೆಯಲಿ ಎಂದು ಆಶಿಸಿದ್ದಾರೆ.