Cauvery Aarti: ಕಾವೇರಿ ಆರತಿ ವಿಷಯಕ್ಕೆ ಕಾನೂನು ಮೂಲಕವೇ ಉತ್ತರ: ಡಿ.ಕೆ.ಶಿವಕುಮಾರ್
Cauvery Aarti: ಕೃಷ್ಣರಾಜ ಸಾಗರ ಜಲಾಶಯದಲ್ಲಿ ಕಾವೇರಿ ಆರತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್, ಶುಕ್ರವಾರ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. ಈ ಸಂಬಂಧ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.


ಬೆಂಗಳೂರು: "ಕಾವೇರಿ ಆರತಿಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ನೋಟೀಸ್ಗೆ ಸರ್ಕಾರ ಕಾನೂನು ಮೂಲಕವೇ ಉತ್ತರ ನೀಡಲಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಭಾನುವಾರ ಉತ್ತರಿಸಿದರು. ಕಾವೇರಿ ಆರತಿ (Cauvery Aarti) ಹಿನ್ನೆಲೆಯಲ್ಲಿ ಹೈಕೋರ್ಟ್ ನೋಟೀಸ್ ಕೊಟ್ಟಿರುವ ಬಗ್ಗೆ ಕೇಳಿದಾಗ, "ಪೂಜೆ ಪ್ರಾರ್ಥನೆ ಮಾಡಲು ಯಾರೂ ಬೇಡ ಎನ್ನುವುದಿಲ್ಲ. ಕೆಲವರಿಗೆ ಆತಂಕ ಇದೆ. ಆದನ್ನು ಸರ್ಕಾರ ನಿವಾರಣೆ ಮಾಡಲಿದೆ. ಆರತಿ ಮಾಡಲು ಯಾರೂ ಅನುಮತಿ ಕೇಳುತ್ತಿಲ್ಲ. ಅಲ್ಲಿ ಪ್ರತಿನಿತ್ಯ ಆರತಿ ನಡೆಯುತ್ತಿದೆ" ಎಂದು ಹೇಳಿದರು.
ಅಶೋಕ್ ಬಳಿ ನಾನು ಹೋಗಿ ಭವಿಷ್ಯ ಕೇಳುವೆ
ಆಗಸ್ಟ್ ತಿಂಗಳಲ್ಲಿ ರಾಜ್ಯದಲ್ಲಿ ಬದಲಾವಣೆ ಆಗಲಿದೆ ಎಂಬ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಅಶೋಕ್ ಅವರು ಜ್ಯೋತಿಷ್ಯ ಹೇಳಲು ಆರಂಭಿಸಿದ್ದಾರಾ? ಅವರು ಜ್ಯೋತಿಷ್ಯ ಕಲಿತಿದ್ದರೆ ನನಗೂ ಸಮಯ ಕೊಡಿಸಿ. ನಾನು ಹೋಗಿ ಭವಿಷ್ಯ ಕೇಳುತ್ತೇನೆ" ಎಂದು ಛೇಡಿಸಿದರು.
ಸುರ್ಜೇವಾಲ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದು, ಶಾಸಕರನ್ನು ಪ್ರತ್ಯೇಕವಾಗಿ ಭೇಟಿ ಮಾಡುವರೇ ಎಂದು ಕೇಳಿದಾಗ, "ಹೌದು, ಅವರು ಶಾಸಕರ ಜತೆ ಖುದ್ದಾಗಿ ಭೇಟಿ ಮಾಡಲಿದ್ದಾರೆ. ಈ ಬಗ್ಗೆ ಅವರೇ ಶಾಸಕರಿಗೆ ತಿಳಿಸಿದ್ದಾರೆ. ನಾನು ಕೂಡ ಶಾಸಕರಿಗೆ ಮಾಹಿತಿ ನೀಡುತ್ತೇನೆ" ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | DK Shivakumar:ವಿಶ್ವದಲ್ಲೇ ಅತಿ ಎತ್ತರದ ಮೇಲ್ಗಾಲುವೆ ಗುಬ್ಬಿಯಲ್ಲಿ ನಿರ್ಮಾಣ; ಡಿಕೆಶಿ ಮೆಚ್ಚುಗೆ
ಸರಕಾರಕ್ಕೆ ಹೈಕೋರ್ಟ್ ನೋಟೀಸ್
ಕೃಷ್ಣರಾಜ ಸಾಗರ ಜಲಾಶಯದ ಬಳಿ ಉದ್ದೇಶಿತ ಕಾವೇರಿ ಆರತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಶುಕ್ರವಾರ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. ಇದು ಸಂಭಾವ್ಯ ಪರಿಸರ ಮತ್ತು ಸುರಕ್ಷತಾ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದೆ. ಎಲ್ಲಾ ಪ್ರತಿವಾದಿಗಳು ಎರಡು ವಾರಗಳಲ್ಲಿ ತಮ್ಮ ಉತ್ತರಗಳನ್ನು ಸಲ್ಲಿಸುವಂತೆ ಕೋರ್ಟ್ ನಿರ್ದೇಶಿಸಿತ್ತು.
ಅರ್ಜಿದಾರರಾದ ಸುನಂದಾ ಜಯರಾಮ್ ಪರವಾಗಿ ಹಾಜರಾದ ವಕೀಲ ರಾಜಣ್ಣ ಆರ್ ಅವರ ಪ್ರಾಥಮಿಕ ವಾದಗಳನ್ನು ಪರಿಗಣಿಸಿದ ನಂತರ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ನೇತೃತ್ವದ ವಿಭಾಗೀಯ ಪೀಠ, ಎಲ್ಲಾ ಪ್ರತಿವಾದಿಗಳು ಎರಡು ವಾರಗಳಲ್ಲಿ ತಮ್ಮ ಉತ್ತರಗಳನ್ನು ಸಲ್ಲಿಸುವಂತೆ ನಿರ್ದೇಶಿಸಿತ್ತು.
ಡ್ಯಾಮ್ ಬಳಿ 120 ಅಡಿಯ ಕಾವೇರಿ ವಿಗ್ರಹ ಸ್ಥಾಪಿಸಲಾಗುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದ್ದು, ಅದರ ಕಾಮಗಾರಿಗೆ ಯಂತ್ರಗಳನ್ನು ಉಪಯೋಗಿಸಿರುವ ಫೋಟೊ ಸಹ ಸಲ್ಲಿಕೆ ಮಾಡಲಾಗಿದೆ.
ಕಾಮಗಾರಿಗೆ ಅಗೆಯುವುದರಿಂದ ಡ್ಯಾಂಗೆ ಹಾನಿಯಾಗುವುದಿಲ್ಲವೇ? ಜಲಾಶಯದ ಸುರಕ್ಷತೆ ಸಮಿತಿಯ ಅನುಮತಿ ಏಕೆ ಪಡೆದಿಲ್ಲ? ಮನರಂಜನಾ ಪಾರ್ಕ್ ಕಾಮಗಾರಿಗೆ ತಾಂತ್ರಿಕ ತಜ್ಞರ ಅನುಮತಿ ಪಡೆಯಲಾಗಿದೆಯೇ? ಕಾವೇರಿ ಪ್ರತಿಮೆ ಸ್ಥಾಪಿಸುವಾಗ ತಜ್ಞರ ಸಲಹೆ ಪಾಲಿಸಲಾಗಿದೆಯೇ ಎಂದು ಸರ್ಕಾರವನ್ನು ಹಾಗೂ ಕಾವೇರಿ ನೀರಾವರಿ ನಿಗಮವನ್ನು ಹೈಕೋರ್ಟ್ ಪ್ರಶ್ನಿಸಿತ್ತು.
ಇದನ್ನೂ ಓದಿ: Cauvery Aarti : ಕಾವೇರಿ ಆರತಿ: ರೈತರ ತೀವ್ರ ವಿರೋಧದಿಂದ ಕಾಮಗಾರಿ ಸ್ಥಗಿತ
ಇದಕ್ಕೆ ಉತ್ತರಿಸಿದ ಸರ್ಕಾರ ಸದ್ಯಕ್ಕೆ ಕಾವೇರಿ ಪ್ರತಿಮೆ ಮಾತ್ರ ಸ್ಥಾಪಿಸಲು ಟೆಂಡರ್ ನೀಡಲಾಗಿದೆ. ಕಾವೇರಿ ಪ್ರತಿಮೆ ಸ್ಥಾಪನೆಗೆ ತಾಂತ್ರಿಕ ತಜ್ಞರ ಅನುಮತಿ ಪಡೆಯಲಾಗಿದೆ. ಮನರಂಜನಾ ಪಾರ್ಕ್ ಟೆಂಡರ್ ಪೂರ್ಣಗೊಂಡಿಲ್ಲವೆಂದು ಹೈಕೋರ್ಟ್ಗೆ ತಿಳಿಸಿದೆ. ಈ ಬೆಳವಣಿಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಮನರಂಜನಾ ಪಾರ್ಕ್ ಹಾಗೂ ಕಾವೇರಿ ಆರತಿ ಯೋಜನೆಗಳಿಗೆ ತುಸು ಹಿನ್ನಡೆಯಾದಂತಾಗಿದೆ.