ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RSS ABPS 2025: ಬಾಂಗ್ಲಾದೇಶದ ಹಿಂದೂ ಸಮಾಜ ಬೆಂಬಲಿಸಲು ಆರ್‌ಎಸ್‌ಎಸ್‌ ಪ್ರತಿನಿಧಿ ಸಭಾ ನಿರ್ಣಯ

RSS ABPS 2025: ಬಾಂಗ್ಲಾದೇಶದ ಹಿಂದೂ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳು ಅಲ್ಲಿನ ಮೂಲಭೂತವಾದಿ ಇಸ್ಲಾಮಿಕ್ ಶಕ್ತಿಗಳಿಂದ ಎದುರಿಸುತ್ತಿರುವ ನಿರಂತರ ಹಿಂಸಾಚಾರ ಮತ್ತು ದಬ್ಬಾಳಿಕೆಗಳ ಕುರಿತು ಅಖಿಲ ಭಾರತೀಯ ಪ್ರತಿನಿಧಿ ಸಭಾ ಕಳವಳ ವ್ಯಕ್ತಪಡಿಸಿದೆ.

ಬಾಂಗ್ಲಾದೇಶದ ಹಿಂದೂ ಸಮಾಜ ಬೆಂಬಲಿಸಲು ಪ್ರತಿನಿಧಿ ಸಭಾ ನಿರ್ಣಯ

Profile Prabhakara R Mar 22, 2025 4:06 PM

ಬೆಂಗಳೂರು: ಬಾಂಗ್ಲಾದೇಶದ ಹಿಂದೂ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಬೆಂಬಲಕ್ಕೆ ಒಗ್ಗಟ್ಟಿನಿಂದ ನಿಲ್ಲಲು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ (RSS ABPS 2025) ನಿರ್ಣಯ ಕೈಗೊಳ್ಳಲಾಗಿದೆ. ನಗರದ ಹೊರವಲಯದಲ್ಲಿರುವ ಜನಸೇವಾ ವಿದ್ಯಾ ಕೇಂದ್ರದಲ್ಲಿ ಆಯೋಜಿಸಿದ್ದ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ (Akhil Bharatiya Pratinidhi Sabha) ಈ ನಿರ್ಣಯ ಕೈಗೊಂಡಿದ್ದು, ಇನ್ನು ಬಾಂಗ್ಲಾದೇಶದಲ್ಲಿನ ಹಿಂದುಗಳ ರಕ್ಷಣೆಗೆ ಭಾರತ ಸರ್ಕಾರ ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಅಲ್ಲಿನ ಸರ್ಕಾರದೊಂದಿಗೆ ಚರ್ಚೆ ನಡೆಸಬೇಕು ಎಂದು ಪ್ರತಿನಿಧಿ ಸಭಾ ಆಗ್ರಹಿಸಿದೆ.

ಬಾಂಗ್ಲಾದೇಶದ ಹಿಂದೂ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳು ಅಲ್ಲಿನ ಮೂಲಭೂತವಾದಿ ಇಸ್ಲಾಮಿಕ್ ಶಕ್ತಿಗಳಿಂದ ಎದುರಿಸುತ್ತಿರುವ ನಿರಂತರವಾದ ಮತ್ತು ಯೋಜನಾಬದ್ಧ ರೀತಿಯಲ್ಲಿ ನಡೆಯುತ್ತಿರುವ ಹಿಂಸಾಚಾರ, ಅನ್ಯಾಯ ಮತ್ತು ದಬ್ಬಾಳಿಕೆಗಳ ಕುರಿತು ಅಖಿಲ ಭಾರತೀಯ ಪ್ರತಿನಿಧಿ ಸಭಾ ಗಂಭೀರವಾಗಿ ಕಳವಳವನ್ನು ವ್ಯಕ್ತಪಡಿಸುತ್ತದೆ. ಇದು ಮಾನವ ಹಕ್ಕು ಉಲ್ಲಂಘನೆಯ ಗಂಭೀರ ಪ್ರಕರಣವಾಗಿದೆ.

ಬಾಂಗ್ಲಾದೇಶದ ಇತ್ತೀಚಿನ ಆಡಳಿತ ಬದಲಾವಣೆಯ ಸಂದರ್ಭದಲ್ಲಿ, ಮಠಗಳು, ದೇವಸ್ಥಾನಗಳು, ದುರ್ಗಾಪೂಜಾ ಪೆಂಡಾಲುಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳ ಮೇಲಿನ ದಾಳಿ. ದೇವರ ಪ್ರತಿಮೆಗಳನ್ನು ವಿರೂಪಗೊಳಿಸುವುದು, ಬರ್ಬರ ಹತ್ಯೆಗಳು, ಆಸ್ತಿಪಾಸ್ತಿ ದರೋಡೆ, ಮಹಿಳೆಯರ ಅಪಹರಣ ಮತ್ತು ಅತ್ಯಾಚಾರ, ಬಲವಂತದ ಮತಾಂತರ ಮೊದಲಾದ ಅನೇಕ ಘಟನೆಗಳು ನಿರಂತರ ವರದಿಯಾಗುತ್ತಲಿವೆ. ಈ ಎಲ್ಲ ಘಟನೆಗಳ ಮತೀಯ ಆಯಾಮವನ್ನು ನಿರಾಕರಿಸುವುದು ಮತ್ತು ಅವು ಕೇವಲ ರಾಜಕೀಯ ಪ್ರೇರಿತ ಎಂದು ಸಾಧಿಸುವುದು ಸತ್ಯದ ನಿರಾಕರಣೆಯೇ ಆಗಿದೆ. ಏಕೆಂದರೆ ಅಂತಹ ಘಟನೆಗಳಿಗೆ ಬಲಿಯಾದವರು ಬಹುತೇಕ ಹಿಂದೂ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರೇ ಆಗಿದ್ದಾರೆ.

ಬಾಂಗ್ಲಾದೇಶದಲ್ಲಿ ಮುಸ್ಲಿಂ ಮತಾಂಧರಿಂದ ಹಿಂದೂ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ, ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ಹೊಸದೇನಲ್ಲ. ಬಾಂಗ್ಲಾದೇಶದದಲ್ಲಿ ಹಿಂದೂ ಜನಸಂಖ್ಯೆಯ ನಿರಂತರ ಇಳಿತ ಅವರ ಅಸ್ತಿತ್ವದ ಬಿಕ್ಕಟ್ಟನ್ನು ಎತ್ತಿ ತೋರಿಸುತ್ತದೆ (1951 ರಲ್ಲಿ 22%, ಇಂದು 7.95%). ಆದರೆ ಕಳೆದ ವರ್ಷ ಕಂಡ ಈ ಹಿಂಸಾಚಾರ ಮತ್ತು ದ್ವೇಷಕ್ಕೆ ಸರ್ಕಾರ ಮತ್ತು ಸಂಸ್ಥೆಗಳಿಂದ ಸಿಕ್ಕ ಬೆಂಬಲ ತೀವ್ರ ಕಳವಳಕಾರಿಯಾಗಿದೆ. ಇದರೊಂದಿಗೆ ಬಾಂಗ್ಲಾದೇಶದಲ್ಲಿ ನಿರಂತರವಾಗಿ ಬೆಳೆಯುತ್ತಿರುವ ಭಾರತ ವಿರೋಧಿ ಧೋರಣೆ ಎರಡೂ ದೇಶಗಳ ನಡುವಿನ ಸಂಬಂಧವನ್ನು ತೀವ್ರವಾಗಿ ಹಾನಿಗೊಳಿಸಬಹುದಾಗಿದೆ.

ಕೆಲವು ಅಂತಾರಾಷ್ಟ್ರೀಯ ಶಕ್ತಿಗಳು ಬುದ್ಧಿಪೂರ್ವಕವಾಗಿ ಭಾರತದ ನೆರೆಹೊರೆಯ ಪ್ರದೇಶದಲ್ಲಿ ಆವಿಶ್ವಾಸ ಮತ್ತು ವೈರುಧ್ಯದ ವಾತಾವರಣವನ್ನು ನಿರ್ಮಾಣ ಮಾಡುತ್ತ ಒಂದು ದೇಶವನ್ನು ಇನ್ನೊಂದರ ವಿರುದ್ಧವಾಗಿಸಿ ಅಸ್ಥಿರತೆಯನ್ನು ಪ್ರಸರಿಸುವ ಪ್ರಯತ್ನವನ್ನು ಮಾಡುತ್ತಿವೆ. ಭಾರತ ವಿರೋಧಿ ವಾತಾವರಣ, ಪಾಕಿಸ್ತಾನ ಮತ್ತು 'ಡೀಪ್ ಸ್ಟೇಟ್' ಶಕ್ತಿಗಳ ಸಕ್ರಿಯತೆಯ ಮೇಲೆ ದೃಷ್ಟಿಯಿರಿಸಬೇಕು ಮತ್ತು ಅವುಗಳನ್ನು ಬಹಿರಂಗಪಡಿಸಬೇಕು ಎಂದು ಚಿಂತನಶೀಲ ವರ್ಗ ಮತ್ತು ಅಂತಾರಾಷ್ಟ್ರೀಯ ವಿಷಯಗಳ ವಿಶೇಷಜ್ಞರಲ್ಲಿ ಪ್ರತಿನಿಧ ಸಭಾ ಆಗ್ರಹಿಸುತ್ತದೆ. ಇಲ್ಲಿನ ಸಂಪೂರ್ಣ ಪ್ರದೇಶವು ಸಮಾನ ಸಂಸ್ಕೃತಿ, ಇತಿಹಾಸ ಮತ್ತು ಸಾಮಾಜಿಕ ಸಂಬಂಧವನ್ನು ಹೊಂದಿದೆ ಎನ್ನುವ ತಥ್ಯವನ್ನು ಪ್ರತಿನಿಧಿ ಸಭಾ ಒತ್ತಿ ಹೇಳಬಯಸುತ್ತದೆ. ಹಾಗಾಗಿ ಒಂದು ಭಾಗದಲ್ಲಿ ಉಂಟಾಗುವ ತಳಮಳಗಳು ಇಡೀ ಪ್ರದೇಶದಲ್ಲಿ ಪ್ರಭಾವನ್ನು ಬೀರುತ್ತವೆ. ಜಾಗೃತ ಜನರು ಭಾರತ ಮತ್ತು ನೆರೆಹೊರೆಯ ದೇಶಗಳ ಈ ಸಮಾನ ಪರಂಪರೆಯನ್ನು ಬಲಪಡಿಸಲು ಪ್ರಯತ್ನಿಸಬೇಕೆಂದು ಪ್ರತಿನಿಧಿ ಸಭಾ ಬಯಸುತ್ತದೆ.

ಈ ಕಾಲಖಂಡದ ಒಂದು ಗಮನೀಯ ಸಂಗತಿಯೆಂದರೆ ಬಾಂಗ್ಲಾದೇಶದ ಹಿಂದೂ ಸಮುದಾಯವು ಈ ದೌರ್ಜನ್ಯವನ್ನು ಶಾಂತಿಯುತ, ಒಗ್ಗಟ್ಟಿನ ಮತ್ತು ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಎದುರಿಸಿದೆ. ಹಾಗೆಯೇ, ಈ ಗಟ್ಟಿತನಕ್ಕೆ ಭಾರತ ಮತ್ತು ವಿಶ್ವದೆಲ್ಲೆಡೆಯ ಹಿಂದೂ ಸಮಾಜದಿಂದ ನೈತಿಕ ಮತ್ತು ಮಾನಸಿಕ ಬೆಂಬಲ ದೊರಕಿದೆ ಎನ್ನುವುದೂ ಶ್ಲಾಘನೀಯ ವಿಷಯವಾಗಿದೆ. ಭಾರತ ಮತ್ತು ವಿಶ್ವದ ಅನೇಕ ದೇಶಗಳ ಹಿಂದೂ ಸಂಘಟನೆಗಳು ಹಿಂಸಾಚಾರದ ವಿರುದ್ಧ ಕಳವಳದ ಧ್ವನಿಯನ್ನೆತ್ತಿದವು ಹಾಗೂ ಪ್ರದರ್ಶನಗಳು ಮತ್ತು ಮನವಿಗಳ ಮುಖಾಂತರ ಬಾಂಗ್ಲಾದೇಶದ ಹಿಂದೂಗಳ ಭದ್ರತೆ ಮತ್ತು ಗೌರವದ ರಕ್ಷಣೆಯನ್ನು ಆಗ್ರಹಿಸಿದವು. ಈ ವಿಷಯವು ವೈಶ್ವಿಕ ಸಮುದಾಯದ ಅನೇಕ ನಾಯಕರುಗಳಿಂದ ಬೇರೆ ಬೇರೆ ಸ್ತರಗಳಲ್ಲಿ ಎತ್ತಲ್ಪಟ್ಟಿತು.

ಭಾರತ ಸರ್ಕಾರವು ಬಾಂಗ್ಲಾದೇಶದ ಹಿಂದೂ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಬೆಂಬಲಕ್ಕೆ ನಿಲ್ಲುವ ಮತ್ತು ಅವರ ರಕ್ಷಣೆಯ ಪ್ರತಿಪಾದನೆಯ ತನ್ನ ಪ್ರಬಲ ನಿರ್ಧಾರವನ್ನು ವ್ಯಕ್ತಪಡಿಸಿತು. ಭಾರತ ಸರ್ಕಾರವು ಈ ವಿಷಯವನ್ನು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದೊಡನೆ ಮತ್ತು ಅನೇಕ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಎತ್ತಿತು. ಬಾಂಗ್ಲಾದೇಶದ ಹಿಂದೂ ಸಮುದಾಯದ ಭದ್ರತೆ, ಗೌರವ ಮತ್ತು ಕಲ್ಯಾಣ ರಕ್ಷಣೆಗಾಗಿ ಮತ್ತು ಬಾಂಗ್ಲಾದೇಶದ ಸರ್ಕಾರದೊಂದಿಗೆ ನಿರಂತರ ಮತ್ತು ಅರ್ಥಪೂರ್ಣ ಸಂವಾದವನ್ನು ನಡೆಸುವ ಎಲ್ಲ ಪ್ರಯತ್ನಗಳನ್ನು ನಡೆಸಬೇಕು ಎಂದು ಪ್ರತಿನಿಧಿ ಸಭಾ ಭಾರತ ಸರ್ಕಾರವನ್ನು ಒತ್ತಾಯಿಸಿದೆ.

ಈ ಸುದ್ದಿಯನ್ನೂ ಓದಿ | Amit Shah: ಹಿಂದಿ ಹೇರುವುದಿಲ್ಲ, ಕರ್ನಾಟಕದ ಜತೆ ಕನ್ನಡದಲ್ಲೇ ಪತ್ರ ವ್ಯವಹಾರ: ಅಮಿತ್​ ಶಾ

ವಿಶ್ವಸಂಸ್ಥೆ ಮತ್ತು ವೈಶ್ವಿಕ ಸಮುದಾಯ ಮೊದಲಾದ ಅಂತಾರಾಷ್ಟ್ರೀಯ ಸಂಸ್ಥೆಗಳ ಪದಾಧಿಕಾರದ ಸ್ಥಾನದಲ್ಲಿರುವವರು ಬಾಂಗ್ಲಾದೇಶದ ಹಿಂದೂ ಮತ್ತಿತರ ಅಲ್ಪಸಂಖ್ಯಾತ ಸಮುದಾಯಗಳ ಮೇಲಿನ ಅಮಾನವೀಯ ವ್ಯವಹಾರವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಇಂತಹ ಹಿಂಸಾಚಾರದ ಚಟುವಟಿಕೆಗಳನ್ನು ನಿಲ್ಲಿಸಲು ಬಾಂಗ್ಲಾದೇಶದ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಪ್ರತಿನಿಧಿ ಸಭಾ ಅಭಿಪ್ರಾಯ ವ್ಯಕ್ತಪಡಿಸುತ್ತದೆ. ಹಾಗೆಯೇ, ವಿಶ್ವದ ಎಲ್ಲ ದೇಶಗಳ ಹಿಂದೂ ಸಮುದಾಯ ಮತ್ತು ನಾಯಕರು ಹಾಗೂ ಸಂಸ್ಥೆಗಳು ಬಾಂಗ್ಲಾದೇಶದ ಹಿಂದೂ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಬೆಂಬಲಕ್ಕೆ ಒಗ್ಗಟ್ಟಿನಿಂದ ನಿಲ್ಲಬೇಕು ಎಂದು ಅಖಿಲ ಭಾರತೀಯ ಪ್ರತಿನಿಧಿ ಸಭಾ ಆಗ್ರಹಿಸಿದೆ.