ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: 2028ರ ವಿಧಾನಸಭೆ ಚುನಾವಣೆಗೆ ಮಹಿಳಾ ಅಭ್ಯರ್ಥಿಗಳನ್ನು ರೆಡಿ ಮಾಡಿ: ಡಿಕೆಶಿ

DK Shivakumar: ಮೇ 20ರಂದು ಸರ್ಕಾರದ ಎರಡು ವರ್ಷಗಳ ಸಂಭ್ರಮಾಚರಣೆ ನಡೆಯಲಿದ್ದು, ರಾಜ್ಯದೆಲ್ಲೆಡೆ ಇದನ್ನು ಹಬ್ಬದಂತೆ ಕೊಂಡಾಡಬೇಕು. ಎಲ್ಲ ಗ್ರಾಮಗಳಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಮನೆ ಮುಂದೆ ರಂಗೋಲಿ ಸ್ಪರ್ಧೆ ನಡೆಸಬೇಕು. ಅತ್ಯುತ್ತಮವಾಗಿ ರಂಗೋಲಿ ಹಾಕಿದವರಿಗೆ ಬಹುಮಾನ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

1.23 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು: ಡಿಕೆಶಿ

Profile Siddalinga Swamy Mar 15, 2025 6:26 PM

ಬೆಂಗಳೂರು: ಮಹಿಳಾ ಮೀಸಲಾತಿ (Womens Reservation) ಜಾರಿಯಾದರೆ ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ (Assembly Election) 224 ಕ್ಷೇತ್ರಗಳ ಪೈಕಿ 74 ಕ್ಷೇತ್ರಗಳಲ್ಲಿ ಮಹಿಳೆಯರೇ ಅಭ್ಯರ್ಥಿಗಳಾಗುತ್ತಾರೆ. ಹೀಗಾಗಿ ಮಹಿಳಾ ಕಾಂಗ್ರೆಸ್ ವತಿಯಿಂದ ಮಹಿಳಾ ಅಭ್ಯರ್ಥಿಗಳನ್ನು ತಯಾರು ಮಾಡಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ನಗರದ ಕೆಪಿಸಿಸಿ ಭಾರತ ಜೋಡೋ ಭವನದಲ್ಲಿ ಶನಿವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಿಮ್ಮೆಲ್ಲರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು. ನೆಹರೂ ಅವರು ಒಂದು ಮಾತು ಹೇಳಿದ್ದಾರೆ. ಜನರನ್ನು ಜಾಗೃತರನ್ನಾಗಿ ಮಾಡಬೇಕಾದರೆ ಮಹಿಳೆಯರು ಜಾಗೃತರಾಗಿರಬೇಕು. ಆಕೆ ನಡೆದರೆ ಕುಟುಂಬ ನಡೆದಂತೆ, ಕುಟುಂಬ ನಡೆದರೆ ಗ್ರಾಮ ನಡೆದಂತೆ, ಸಮಾಜ ಹಾಗೂ ದೇಶ ನಡೆಯುತ್ತದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ 1.23 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ತಲುಪುತ್ತಿದೆ. 1.50 ಕೋಟಿ ಕುಟುಂಬಗಳಿಗೆ ಗೃಹಜ್ಯೋತಿ ಯೋಜನೆ ನೀಡಲಾಗುತ್ತಿದೆ. ರಾಜ್ಯದ ಎಲ್ಲ ಮಹಿಳೆಯರಿಗೂ ಬಸ್‌ನಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಿದ್ದೇವೆ ಎಂದರು.

ಇನ್ನು ಬಡವರಿಗೆ ನೀಡುವ ಮನೆ ಹಾಗೂ ನಿವೇಶನಗಳನ್ನು ಆ ಕುಟುಂಬದ ಮಹಿಳೆಯರ ಹೆಸರಿನಲ್ಲಿ ಮಾಡಬೇಕು ಎಂದು ಕಡ್ಡಾಯ ನಿಯಮ ಮಾಡಿದ್ದೇವೆ. ನನ್ನ ಕ್ಷೇತ್ರದಲ್ಲಿ ಆಶ್ರಯ 7 ಸಾವಿರ ನಿವೇಶನ ನೀಡಿದ್ದೆ. ಎಲ್ಲವನ್ನು ಮಹಿಳೆಯರ ಹೆಸರಿಗೆ ನಿವೇಶನ ಹಂಚಲಾಗಿದೆ. ಆದಾದ ನಂತರದ ಚುನಾವಣೆಯಲ್ಲಿ ಜನ ನನ್ನನ್ನು 30 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದರು ಎಂದು ಅವರು ತಿಳಿಸಿದರು.

ಡಿಕೆಶಿ ಹಂಚಿಕೊಂಡ ಪೋಸ್ಟ್‌ ಇಲ್ಲಿದೆ



18 ಕ್ಷೇತ್ರಗಳ ಉಪಚುನಾವಣೆಯಲ್ಲಿ 15ರಲ್ಲಿ ಸೋತು ಪಕ್ಷ ಕಷ್ಟದ ಪರಿಸ್ಥಿತಿಯಲ್ಲಿತ್ತು. ಮಾರ್ಚ್ 11ರಂದು ನಾನು ಅಧ್ಯಕ್ಷನಾಗಿ ನೇಮಕಗೊಂಡು 5 ವರ್ಷವಾಗಿದೆ. ನಾನು ಇಲ್ಲಿ ಅಧಿಕಾರ ಸ್ವೀಕರಿಸಿದ ದಿನ 'ನನಗೆ ಭವಿಷ್ಯ ಕಾಣಬೇಕಾದರೆ ಮಹಿಳೆ ಹಾಗೂ ಯುವಕರಿಂದ ಮಾತ್ರ ಸಾಧ್ಯ' ಎಂದು ಹೇಳಿದ್ದೆ. ಅದರಂತೆ ನಾವು ಚುನಾವಣೆ ಪ್ರಣಾಳಿಕೆ ಮಾಡುವಾಗ ಯುವಕರು ಹಾಗೂ ಮಹಿಳೆಯರಿಗೆ ಆದ್ಯತೆ ನೀಡಿದೆವು ಎಂದು ತಿಳಿಸಿದರು.

ನಮ್ಮ ಈ ಯೋಜನೆಗಳು ಜಾರಿ ಸಾಧ್ಯವೇ? ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಹಾಗೂ ದೇಶ ದಿವಾಳಿಯಾಗಲಿದೆ ಎಂದು ಪ್ರಧಾನಮಂತ್ರಿಯಾದಿಯಾಗಿ ಬಿಜೆಪಿ ನಾಯಕರು ಟೀಕೆ ಮಾಡಿದರು. ಆದರೆ ಈಗ ನಮ್ಮ ಮಾದರಿ ಅನುಸರಿಸಿ ಬಿಜೆಪಿ ರಾಜ್ಯಗಳು ಗ್ಯಾರಂಟಿ ಯೋಜನೆ ನೀಡುತ್ತಿವೆ. ನಾವು ಕಾರ್ಯಕರ್ತರಿಗಾಗಿ ಗ್ಯಾರಂಟಿ ಸಮಿತಿ ರಚಿಸಿದ್ದೇವೆ. ಇದರ ವಿರುದ್ಧ ಅಧಿವೇಶನದಲ್ಲಿ ವಿರೋಧ ಪಕ್ಷದವರು ನಮ್ಮ ಮೇಲೆ ವಾಗ್ದಾಳಿಗೆ ಮುಂದಾಗಿದ್ದಾರೆ. ಶಾಸಕರ ಹಕ್ಕು ಕಸಿಯುತ್ತಿದ್ದೀರಿ ಎಂದು ತಿಳಿಸಿದರು. ಕಾರ್ಯಕರ್ತರು ಅಧಿಕಾರಕ್ಕೆ ತಂದಿದ್ದಾರೆ. ಅದಕ್ಕಾಗಿ ಮಾಡಿದ್ದೇವೆ. ಅಧಿಕಾರಕ್ಕೆ ತರದಿದ್ದರೆ ನಾವು ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಾವು ಯಾರ ಹಕ್ಕನ್ನು ಕಸಿಯುತ್ತಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಫಲಾನುಭವಿಗಳಿಗೆ ಈ ಯೋಜನೆಗಳು ಸರಿಯಾಗಿ ತಲುಪುತ್ತಿವೆಯೇ ಇಲ್ಲವೇ ಎಂದು ಪರಿಶೀಲನೆಗೆ ಈ ಸಮಿತಿ ಮಾಡಿದ್ದೇವೆ. ತಾಲುಕು ಮಟ್ಟದಲ್ಲಿ ಕಚೇರಿ ನೀಡಿ ಅವರಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಇದನ್ನು ಸಹಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ನಾನು ಇತ್ತೀಚೆಗೆ ಉಡುಪಿಗೆ ಹೋಗಿದ್ದಾಗ ಅಲ್ಲಿನ ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆಗಳಿಗೆ ವಿರೋಧ ಮಾಡುತ್ತಿದ್ದರಂತೆ. ಅದಕ್ಕೆ ನಾನು ಅವರಿಗೆ ಒಂದು ಸವಾಲಾಕಿದೆ. ನಿಮ್ಮ ಪಕ್ಷದ ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳನ್ನು ತ್ಯಜಿಸಿರಿ ಎಂದು ಕರೆ ಕೊಡುವಂತೆ ಹೇಳಿದೆ. ಇದನ್ನು ಮಾಡಲು ಅವರಿಂದ ಸಾಧ್ಯವೇ? ಅವರ ಬೆಂಬಲಿಗರೇ ಅವರಿಗೆ ಛೀಮಾರಿ ಹಾಕುತ್ತಾರೆ ಎಂದು ಹೇಳಿದರು.

ನಮ್ಮ ಭಾಷೆಯನ್ನು ಮಾತೃಭಾಷೆ ಎಂದು ಕರೆಯುತ್ತೇವೆ. ನಮ್ಮ ನಾಡಿನ ದೇವತೆ ಚಾಮುಂಡೇಶ್ವರಿ, ಭುವನೇಶ್ವರಿ. ಹಳ್ಳಿಗಳಿಗೆ ಹೋದರೆ ಗ್ರಾಮ ದೇವತೆ ಕೇಳುತ್ತೇವೆ. ಭೂಮಿಯನ್ನು ಭೂತಾಯಿ ಎಂದು ಪರಿಗಣಿಸುತ್ತೇವೆ. ಯಾವುದೇ ಶುಭ ಕಾರ್ಯಕ್ರಮದಲ್ಲಿ ಆಹ್ವಾನ ನೀಡಬೇಕಾದರೆ ಮೊದಲು ಶ್ರೀಮತಿ ನಂತರ ಶ್ರೀ ಎಂದು ನಮೂದಿಸುತ್ತೇವೆ. ಹೀಗೆ ಪ್ರತಿ ಹಂತದಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ನೀವೆಲ್ಲರೂ ನಾಯಕಿಯರು ಎಂದು ತಿಳಿಸಿದರು.

50 ಸದಸ್ಯೆಯರನ್ನು ನೋಂದಾಯಿಸಿದರೆ ನಿರ್ದೇಶಕ ಹುದ್ದೆ

ಪ್ರತಿ ಗೃಹಲಕ್ಷ್ಮಿ ಫಲಾನುಭವಿಗಳಿಂದ 50 ಕಾಂಗ್ರೆಸ್ ಸದಸ್ಯರನ್ನಾಗಿ ಮಾಡಿಸಿ ಸಾಕು. ಪ್ರತಿ ವಿಧಾನಸಭೆಯಲ್ಲಿ ಕ್ಷೇತ್ರ ಅಥವಾ ತಾಲೂಕು ಮಟ್ಟದಲ್ಲಿ ಯಾರು ಅತಿ ಹೆಚ್ಚು ಮಹಿಳೆಯರನ್ನು ಪಕ್ಷದ ಸದಸ್ಯೆಯರನ್ನಾಗಿ ಮಾಡುತ್ತೀರೋ ಅವರಿಗೆ ತಾಲೂಕು ಮಟ್ಟದಲ್ಲಾದರೂ ನಿರ್ದೇಶಕ ಹುದ್ದೆ ನೀಡಲಾಗುವುದು. ಇದು ನನ್ನ ವಾಗ್ದಾನ, ಬದ್ಧತೆ. ಕರಾವಳಿ ಭಾಗದಲ್ಲಿ ನಮ್ಮ ಶಾಸಕರು ಹೆಚ್ಚಾಗಿ ಗೆದ್ದಿಲ್ಲ. ಅಲ್ಲಿನ ಮಹಿಳೆಯರು ಈ ಯೋಜನೆಗಳ ಫಲಾನುಭವಿಗಳಾಗಿಲ್ಲವೇ? ನೀವು ಅವರ ಬಳಿ ಹೋಗಿ, ಕಾಂಗ್ರೆಸ್ ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ಚರ್ಚೆ ಮಾಡಿ ಎಂದು ಕರೆ ನೀಡಿದರು.

ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂದು ಕಾಂಗ್ರೆಸ್ ಸರ್ಕಾರ ಲೋಕಸಭೆಯಲ್ಲಿ ತಿಳಿಸಿತ್ತು. ರಾಜ್ಯಸಭೆಯಲ್ಲಿ ಸಂಖ್ಯಾಬಲದ ಕೊರತೆಯಿಂದ ಅದು ಸಾಧ್ಯವಾಗಲಿಲ್ಲ. ಈಗ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಪ್ರಣಾಳಿಕೆಯಲ್ಲಿ ಈ ವಿಚಾರ ಪ್ರಸ್ತಾಪಿಸಿವೆ. ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ 224 ಕ್ಷೇತ್ರಗಳ ಪೈಕಿ 74 ಮಹಿಳಾ ಅಭ್ಯರ್ಥಿಗಳು ಬೇಕಾಗುತ್ತಾರೆ. ಈಗ ನಾವು 10-12 ಅಭ್ಯರ್ಥಿಗೆ ಟಿಕೆಟ್ ನೀಡುತ್ತಿದ್ದೇವೆ. ಈ 74 ಅಭ್ಯರ್ಥಿಗಳನ್ನು ಯಾರು ತಯಾರು ಮಾಡಬೇಕು? ನನಗೆ ನನ್ನ ಮಗಳು, ಪತ್ನಿಯನ್ನು ಅಭ್ಯರ್ಥಿ ಮಾಡುವುದು ಮುಖ್ಯವಲ್ಲ. ನಿಮ್ಮಂತಹ ಕಾರ್ಯಕರ್ತರು, ಜನಸಾಮಾನ್ಯರು ಪಕ್ಷದ ಅಭ್ಯರ್ಥಿಯಾಗುವ ಮಟ್ಟಕ್ಕೆ ಬೆಳೆಯಬೇಕು. ಆಗ ಮಾತ್ರ ನಾವು ನಿಮಗೆ ಶಕ್ತಿ ನೀಡಿದಂತಾಗುತ್ತದೆ ಎಂದರು.

ಒಂದೇ ದಿನದಲ್ಲಿ ಗಿಡ ಮರವಾಗಿ ಬೆಳೆದು ಹಣ್ಣು ಬಿಡುವುದಿಲ್ಲ. ಇದಕ್ಕೆ ಕಾಲಾವಕಾಶ ಬೇಕು. ಇದಕ್ಕಾಗಿ ನಾನು 'ನಾ ನಾಯಕಿ' ಕಾರ್ಯಕ್ರಮ ಮಾಡಿದೆ. ಈ ʼನಾ ನಾಯಕಿʼ ಕಾರ್ಯಕ್ರಮಕ್ಕೆ ನೀವೆಲ್ಲರೂ ಹೊಸ ರೂಪ ನೀಡಬೇಕು. ಇಂದು ಮಹಿಳಾ ದಿನ ಆಚರಿಸುತ್ತಿದ್ದೀರಿ. ಈ ಹಬ್ಬದಲ್ಲಿ ಸ್ವಯಂಪ್ರೇರಿತರಾಗಿ ಮಹಿಳೆಯರನ್ನು ಕರೆ ತರಬೇಕು. ಕಾಂಗ್ರೆಸಿಗರ ಪಾಲಿಗೆ ಪಕ್ಷದ ಕಚೇರಿ ದೇವಾಲಯವಿದ್ದಂತೆ. ಇಲ್ಲಿಗೆ ಜನರನ್ನು ಕರೆತರಬೇಕು. ನೀವು ವೇಗವಾಗಿ ಸಾಗಬೇಕಾದರೆ ಒಬ್ಬರೇ ಸಾಗಿ, ನೀವು ದೂರ ಕ್ರಮಿಸಬೇಕಾದರೆ ಒಟ್ಟಾಗಿ ಸಾಗಿ ಎಂದು ನಾನು ಹೇಳುತ್ತಿರುತ್ತೇನೆ. ನಾನು ಒಬ್ಬನೇ ಪಾದಯಾತ್ರೆ ಮಾಡಲು ಸಾಧ್ಯವೇ? ಹತ್ತಾರು ಜನ ಸೇರಿದ್ದಕ್ಕೆ ಅಲ್ಲವೇ ದೂರದ ಪಾದಯಾತ್ರೆ ಮಾಡಲು ಸಾಧ್ಯವಾಗಿದ್ದು. ಅವರು ಬಂದರೆ ನಮ್ಮ ಸ್ಥಾನ ಏನಾಗುತ್ತದೆಯೋ ಎಂಬ ಅಳುಕು ಬೇಡ. ನಿಮ್ಮ ಹಣೆಬರಹವನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಲ್ಲಿ ಶ್ರಮವಿದೆಯೋ ಅಲ್ಲಿ ಫಲವಿದೆ. ಎಲ್ಲಿ ಭಕ್ತಿ ಇರುತ್ತದೆಯೋ ಅಲ್ಲಿ ಭಗವಂತ ಇರುತ್ತಾನೆ. ಎಲ್ಲಿ ಮನಸ್ಸಿದೆಯೋ ಅಲ್ಲಿ ಮಾರ್ಗ ಇರುತ್ತದೆ. ಶ್ರಮಪಟ್ಟು ಸಂಘಟನೆ ಮಾಡಿ ಎಂದು ಸಲಹೆ ನೀಡಿದರು.

ಸರ್ಕಾರದ 2 ವರ್ಷದ ಸಂಭ್ರಮವನ್ನು ಎಲ್ಲೆಡೆ ಹಬ್ಬದಂತೆ ಆಚರಿಸಿ

ಮೇ 20ರಂದು ಸರ್ಕಾರದ ಎರಡು ವರ್ಷಗಳ ಸಂಭ್ರಮಾಚರಣೆ ನಡೆಯಲಿದ್ದು, ರಾಜ್ಯದೆಲ್ಲೆಡೆ ಇದನ್ನು ಹಬ್ಬದಂತೆ ಕೊಂಡಾಡಬೇಕು. ಎಲ್ಲ ಗ್ರಾಮಗಳಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಮನೆ ಮುಂದೆ ರಂಗೋಲಿ ಸ್ಪರ್ಧೆ ನಡೆಸಬೇಕು. ಅತ್ಯುತ್ತಮವಾಗಿ ರಂಗೋಲಿ ಹಾಕಿದವರಿಗೆ ಬಹುಮಾನ ನೀಡಲಾಗುವುದು. ಸರ್ಕಾರದ ವಿರುದ್ಧ ಯಾರು ಎಷ್ಟಾದರೂ ಧಿಕ್ಕಾರ ಕೂಗಲಿ, ಕುಣಿಯಲಿ ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚೆ ಮಾಡಿ ಹಣಕಾಸಿನ ವಿಚಾರ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.

ಪಕ್ಷವೇ ನಮಗೆ ತಂದೆ ತಾಯಿ, ಪಕ್ಷವೇ ನಮಗೆ ಬಂಧು ಬಳಗ. ಪಕ್ಷ ಅಧಿಕಾರಕ್ಕೆ ಬಂದಾಗ ನಾವು ನೀವು ಅಧಿಕಾರಕ್ಕೆ ಬರಲು ಸಾಧ್ಯ. ಪಕ್ಷವಿಲ್ಲದಿದ್ದರೆ ನಮಗಾರಿಗೂ ಅಧಿಕಾರ ಇರುವುದಿಲ್ಲ. ಇದಕ್ಕಾಗಿಯೇ ನಾನು ವ್ಯಕ್ತಿ ಪೂಜೆ ಬಿಡಿ, ಪಕ್ಷ ಪೂಜೆ ಮಾಡಿ ಎಂದು ಹೇಳುತ್ತಲೇ ಇರುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ಸೊಬಗು ಸಾಮಾಜಿಕ ಸಂಸ್ಥೆ ವತಿಯಿಂದ ‘ಮಹಿಳಾ ಸಮಾನತೆ ಮತ್ತು ಸಮತೆ ಕಡೆಗೆ ನಾವು ನೀವುʼ ಎಂಬ ಮಹಿಳಾ ಜಾಗೃತಿ ನಾಟಕ ಪ್ರದರ್ಶಿಸಲಾಯಿತು. ಇನ್ನು 52 ದಿನಗಳ ಕಾಲ ಏಕಾಂಗಿಯಾಗಿ ಅಟ್ಲಾಂಟಿಕ್ ಮಹಾಸಾಗರದ ಸ್ಪಾನಿಶ್ ದ್ವೀಪದಿಂದ ಆಂಟಿಗುವಾವರೆಗೂ 3 ಸಾವಿರ ಮೈಲು ದೂರವನ್ನು ದೋಣಿಯಲ್ಲಿ ಸಾಗಿದ ಭಾರತದ ಮೊದಲ ಮಹಿಳೆ ಎಂಬ ಸಾಧನೆ ಮಾಡಿರುವ ಖ್ಯಾತ ಸಾಹಿತಿ ಜಿ.ಎಸ್. ಶಿವರುದ್ರಪ್ಪ ಅವರ ಮೊಮ್ಮಗಳಾದ ಅನನ್ಯ ಪ್ರಸಾದ್ ಅವರನ್ನು ಡಿ.ಕೆ. ಶಿವಕುಮಾರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸನ್ಮಾನಿಸಿದರು.

ಈ ಸುದ್ದಿಯನ್ನೂ ಓದಿ | E Khata: ರಾಜ್ಯದ ಗ್ರಾಮೀಣ ಆಸ್ತಿಗಳಿಗೂ ಇ-ಖಾತಾ: ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಉಪಸ್ಥಿತರಿದ್ದರು.