Fire Accident: ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ; ಹಸು ಸಜೀವ ದಹನ, ರೈತನಿಗೆ ಗಾಯ
Fire Accident: ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಹಸುವೊಂದು ಸಜೀವ ದಹನವಾಗಿರುವ ಘಟನೆ ಪಾವಗಡ ತಾಲೂಕಿನ ಕಾರನಾಗನಹಟ್ಟಿ ಗ್ರಾಮದಲ್ಲಿ ಮಂಗಳವಾರ ಸಂಜೆ ಜರುಗಿದೆ. ಹಸುಗಳನ್ನು ರಕ್ಷಿಸಲು ಮುಂದಾದ ರೈತ ಬಡನಾಗಪ್ಪಗೆ ಸುಟ್ಟ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
![ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ; ಹಸು ಸಜೀವ ದಹನ, ರೈತನಿಗೆ ಗಾಯ](https://cdn-vishwavani-prod.hindverse.com/media/original_images/Fire_Accident_U8bQ7k4.jpg)
ಆಕಸ್ಮಿಕ ಬೆಂಕಿಗೆ ಹುಲ್ಲಿನ ಬಣವೆ ಭಸ್ಮ
![Profile](https://vishwavani.news/static/img/user.png)
ಪಾವಗಡ: ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ (Fire Accident) ಪರಿಣಾಮ ಹಸುವೊಂದು ಸಜೀವ ದಹನವಾಗಿರುವ ಘಟನೆ ಪಾವಗಡ ತಾಲೂಕಿನ ಕಾರನಾಗನಹಟ್ಟಿ ಗ್ರಾಮದಲ್ಲಿ ಮಂಗಳವಾರ ಸಂಜೆ ಜರುಗಿದೆ. ಪಾವಗಡ ತಾಲೂಕಿನ ಕಾರನಾಗನಹಟ್ಟಿ ಗ್ರಾಮದ ಬಡನಾಗಪ್ಪ ಎನ್ನುವವರ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ಆವರಿಸಿಕೊಂಡಿದೆ, ಪರಿಣಾಮ ಹುಲ್ಲಿನ ಬಣವೆ ಸಮೀಪದಲ್ಲಿ ಕಟ್ಟಿ ಹಾಕಿದ್ದ ಐದು ಹಸುಗಳ ಪೈಕಿ ಬೆಂಕಿಯ ತೀವ್ರತೆಗೆ ಒಂದು ಹಸು ಸಜೀವ ದಹನವಾಗಿದ್ದು, ಮತ್ತೊಂದು ಹಸು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಹಸುಗಳನ್ನು ರಕ್ಷಿಸಲು ಮುಂದಾದ ರೈತ ಬಡನಾಗಪ್ಪ ಅವರಿಗೆ ಸುಟ್ಟ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.
ಆಕಸ್ಮಿಕ ಅಗ್ನಿ ಅವಘಡದಿಂದ ರಾಸುಗಳ ಮೇವಿಗಾಗಿ ಸಂಗ್ರಹಿಸಿದ್ದ ಎರಡು ದೊಡ್ಡ ಹುಲ್ಲಿನ ಬಣವೆಗಳು ಸುಟ್ಟು ಹೋಗಿದ್ದು, ಪಕ್ಕದ ತೋಟದ ಮನೆಯಲ್ಲಿ ಶೇಖರಿಸಿದ್ದ ಶೇಂಗಾ, ಭತ್ತ ಹಾಗೂ ಇತರ ದವಸ ಧಾನ್ಯಗಳು ಸಹ ಬೆಂಕಿಯಲ್ಲಿ ಸುಟ್ಟು ಬೂದಿಯಾಗಿದ್ದು, ಲಕ್ಷಾಂತರ ರೂ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಈ ಸುದ್ದಿಯನ್ನೂ ಓದಿ | Road Accident: ಎತ್ತಿನಬಂಡಿಗೆ ಬೈಕ್ ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಸೇರಿ ಮೂವರ ಸಾವು
ಘಟನಾ ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಹೊರಕೆರಪ್ಪ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.
ಪಾವಗಡದ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಅವ್ಯವಸ್ಥೆ; ಶೌಚಗೃಹ ಇದ್ರೂ ಮಕ್ಕಳಿಗೆ ಬಯಲೇ ಗತಿ!
![Pavagada school](https://cdn-vishwavani-prod.hindverse.com/media/images/Pavagada_school.width-800.jpg)
ಪಾವಗಡ: ಪಟ್ಟಣದ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ (Ambedkar Residential school) ಅವ್ಯವಸ್ಥೆಯ ಆಗರವಾಗಿದ್ದು, ಮೂಲ ಸೌಕರ್ಯಗಳಿಲ್ಲದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಸ್ವಚ್ಛತೆಯಿಲ್ಲದೆ ಗಬ್ಬು ನಾರುವ ಕೊಠಡಿಗಳು, ಹರಿದ ಹಾಸಿಗೆ-ದಿಂಬು ಹಾಗೂ ಶೌಚಗೃಹಗಳಿದ್ದರೂ ಬಯಲು ಶೌಚಕ್ಕೆ ಹೋಗುವ ದುಸ್ಥಿತಿ ಇಲ್ಲಿರುವುದರಿಂದ ಮಕ್ಕಳು ಸಮಸ್ಯೆ ಎದುರಿಸುವಂತಾಗಿದೆ. ಈ ವಸತಿ ಶಾಲೆಯಲ್ಲಿ 1 ರಿಂದ 5ನೇ ತರಗತಿವರೆಗೆ ಸೇರಿ ಸುಮಾರು 125 ಬಾಲಕ, ಬಾಲಕಿಯರು ವ್ಯಾಸಂಗ ಮಾಡುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳೇ ಆಗಿದ್ದಾರೆ. ಹೊರಗಡೆಗೆ ಸುಸಜ್ಜಿತ ಕಟ್ಟಡದ ರೀತಿ ಕಂಡರೂ ಒಳಗೆ ಮಾತ್ರ ಸೂಕ್ತ ನಿರ್ವಹಣೆ, ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.
![Pavagada school (1)](https://cdn-vishwavani-prod.hindverse.com/media/images/Pavagada_school_1.width-800.jpg)
ಸ್ವಚ್ಛತೆ ಇಲ್ಲದೆ ಮಕ್ಕಳು ಮಲಗುವ ಕೋಣೆಗಳು ಗಬ್ಬು ನಾರುತ್ತಿದ್ದು, ಹರಿದ ಹಾಸಿಗೆ ಮತ್ತು ದಿಂಬುಗಳನ್ನು ಬಳಸುವ ಸ್ಥಿತಿ ಇದೆ. ಇನ್ನು ಶೌಚಗೃಹಗಳು ಚೆನ್ನಾಗಿದ್ದರೂ ಮಕ್ಕಳನ್ನು ಸಿಬ್ಬಂದಿ ಹೊರಗೆ ಕಳುಹಿಸುತ್ತಾರೆ. ಇದರಿಂದ ಪುಟಾಣಿ ಹೆಣ್ಣು ಮಕ್ಕಳು ಕೈಯಲ್ಲಿ ಚೆಂಬು ಹಿಡಿದು ಬಹಿರ್ದೆಸೆಗೆ ಹೋಗುವ ಪರಿಸ್ಥಿತಿ ಇದೆ. ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದರೆ, ನಮ್ಮಲ್ಲಿ ಶೌಚಗೃಹಗಳು ಇವೆ, ಮಕ್ಕಳು ಹೊರಗೆ ಯಾಕೆ ಹೋಗುತ್ತಿದ್ದಾರೆ ತಿಳಿಯದು ಎಂದು ವಾರ್ಡನ್ ಹೇಳುತ್ತಾರೆ.
ಇದಷ್ಟೇ ಅಲ್ಲದೇ ಮದ್ಯಪಾನ ಮಾಡಿದ ಸಿಬ್ಬಂದಿಯೊಬ್ಬರು ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಕಂಡುಬಂದಿದೆ. ಇದರ ಬಗ್ಗೆ ಪ್ರಶ್ನಿಸಿದ್ದಕ್ಕೆ ಆ ಸಿಬ್ಬಂದಿ, ಹೊರಗುತ್ತಿಗೆಯವರಾಗಿದ್ದು ಅವರನ್ನು ಕೆಲಸದಿಂದ ತೆಗೆಯುತ್ತೇವೆ ಎಂದು ವಾರ್ಡನ್ ಹೇಳಿದ್ದಾರೆ.
ಹೈಟೆಕ್ ವಸತಿ ನಿಲಯ ಎಂಬಂತೆ ಈ ಶಾಲೆಗೆ ಅನುದಾನ ಖರ್ಚು ಮಾಡುತ್ತಾರೆ. ಆದರೆ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಸರ್ಕಾರದ ಅನುದಾನವನ್ನು ಮಕ್ಕಳ ಹೆಸರಿನಲ್ಲಿ ಪಡೆದು ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ. ಮಕ್ಕಳಿಗೆ ಮಾತ್ರ ಯಾವುದೇ ಸೌಲಭ್ಯ ಕಲ್ಪಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
![pavagada school (3)](https://cdn-vishwavani-prod.hindverse.com/media/images/pavagada_school_3.width-800.jpg)
(ವರದಿ: ಇಮ್ರಾನ್ ಉಲ್ಲಾ. ಪಾವಗಡ)