Kalaburagi News: ಕಳೆದು ಹೋಗಿದ್ದ 46.54 ಲಕ್ಷ ಮೌಲ್ಯದ 225 ಮೊಬೈಲ್ ಪತ್ತೆ; ಕಲಬುರಗಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ
Kalaburagi News: ದೂರುಗಳ ಸಂಬಂಧ ಮೊಬೈಲ್ಗಳ ಪತ್ತೆಗಾಗಿ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಎಲ್ಲಾ ಪೊಲೀಸ್ ಠಾಣೆಗಳ ಪೊಲೀಸ್ ಇನ್ಸ್ಪೆಕ್ಟರ್ಗಳ ಮುಂದಾಳತ್ವದಲ್ಲಿ ತಾಂತ್ರಿಕ ಮತ್ತು ಸೆನ್ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿ ಒಳಗೊಂಡ ತನಿಖಾ ತಂಡ ರಚಿಸಿ, ಮೊಬೈಲ್ಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗಿತ್ತು.


ಕಲಬುರಗಿ: ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ 46,54,000 ರೂ. ಮೌಲ್ಯದ 225 ಮೊಬೈಲ್ ಫೋನ್ಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ. ನಗರ ಪೊಲೀಸ್ ಆಯುಕ್ತಾಲಯ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಿಷನರ್ ಅವರು, ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ಗಳನ್ನು ಕಳೆದುಕೊಂಡಿರುವ ಬಗ್ಗೆ E Lost ಮತ್ತು CEIR PORTAL ನಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ ಪೊಲೀಸರ ಕ್ಷೀಪ್ರ ಕಾರ್ಯಾಚರಣೆ ಮೂಲಕ ಸುಮಾರು 225 ಮೊಬೈಲ್ಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದರು.
ದೂರುಗಳ ಸಂಬಂಧ ಮೊಬೈಲ್ಗಳ ಪತ್ತೆಗಾಗಿ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಎಲ್ಲಾ ಪೊಲೀಸ್ ಠಾಣೆಗಳ ಪೊಲೀಸ್ ಇನ್ಸ್ಪೆಕ್ಟರ್ ಅವರ ಮುಂದಾಳತ್ವದಲ್ಲಿ ತಾಂತ್ರಿಕ ಮತ್ತು ಸೆನ್ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿ ಒಳಗೊಂಡ ತನಿಖಾ ತಂಡ ರಚಿಸಿ, ಕಳೆದುಕೊಂಡ ಮೊಬೈಲ್ಗಳ ಪತ್ತೆಗಾಗಿ ಜಾಲ ಬೀಸಲಾಗಿತ್ತು. ಸುಮಾರು 225 ಮೊಬೈಲ್ ಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ನೀಡಲಾಗಿದೆ.
ಅಶೋಕ್ ನಗರ ಪೊಲೀಸ್ ಠಾಣೆ-29, ಬ್ರಹ್ಮಪುರ -51, ಸಬ್ ಅರ್ಬನ್- 29 ಮತ್ತು ಗುಲಬರ್ಗಾ ವಿವಿ ಠಾಣೆಯಲ್ಲಿ 21 ಮೊಬೈಲ್ಗಳನ್ನು ಕಳೆದುಕೊಂಡಿರುವ ಬಗ್ಗೆ ದೂರು ದಾಖಲಾಗಿದ್ದವು. ಉಳಿದ ಮೊಬೈಲ್ ಫೋನ್ಗಳ ಕಳೆದುಕೊಂಡಿರುವ ಬಗ್ಗೆ E Lost ಮತ್ತು CEIR PORTAL ನಲ್ಲಿ ದೂರು ಬಂದಿದ್ದವು. ದೂರಿನ ಮೇರೆಗೆ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ, ಕಳೆದುಹೋದ ಮೊಬೈಲ್ ಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ನಾಯಕ್ ಇದ್ದರು.
ಈ ಸುದ್ದಿಯನ್ನೂ ಓದಿ | Kantara Chapter 1: ʼಕಾಂತಾರʼ ಚಲನಚಿತ್ರಕ್ಕೆ ಮತ್ತೊಂದು ವಿಘ್ನ: ಹೃದಯಾಘಾತದಿಂದ ಕಲಾವಿದ ಸಾವು
ತನ್ನ ಜೊತೆ ಮಾತನಾಡದ ಸಮಾಜ ಕಲ್ಯಾಣ ಇಲಾಖೆ ಮಹಿಳಾ ಸಿಬ್ಬಂದಿಯನ್ನು ಇರಿದು ಕೊಂದ ದುಷ್ಟ
ವಿಜಯಪುರ: ತನ್ನೊಂದಿಗೆ ಮಾತನಾಡಲು ನಿರಾಕರಿಸಿದ್ದಾಳೆ ಎಂದು ಕೋಪಗೊಂಡ ವಿಕೃತನೊಬ್ಬ ಮಹಿಳೆೆಗೆ ಚಾಕುವಿನಿಂದ ಚುಚ್ಚಿ ಕೊಲೆ (Murder case) ಮಾಡಿರುವ ಘಟನೆ ಇಂಡಿ (Indi) ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ನಡೆದಿದೆ. ಮೃತಪಟ್ಟವಳು ಸಮಾಜ ಕಲ್ಯಾಣ ಇಲಾಖೆಯಲ್ಲಿ (Social Welfare Department) ಕಾರ್ಯ ನಿರ್ವಹಿಸುತ್ತಿದ್ದ ಮಹಿಳಾ (woman worker) ಸಿಬ್ಬಂದಿಯಾಗಿದ್ದು, ಇಂಡಿ ತಾಲೂಕಿನ ಕೊಟ್ನಾಳ ಗ್ರಾಮದ ರೇಣುಕಾ ಸಾಯಬಣ್ಣ ಕನ್ನೊಳ್ಳಿ (30) ಕೊಲೆಯಾದ ಮಹಿಳೆ. ಇಂಡಿ (Vijayapura news) ತಾಲೂಕಿನ ಅಗರಖೇಡ ಗ್ರಾಮದ ಸಂಜು ಬನಸೋಡೆ ಕೊಲೆ ಮಾಡಿದ ಆರೋಪಿ.
ರೇಣುಕಾ ಅವರು ಸಮಾಜ ಕಲ್ಯಾಣ ಇಲಾಖೆಯಲ್ಲಿ ಗುಮಾಸ್ತೆಯಾಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ರೇಣುಕಾ ಬುಧವಾರ (ಜೂ.11) ಕೊಟ್ನಾಳ ಗ್ರಾಮದಿಂದ ಬಸ್ ಮೂಲಕ ಬಂದಿಳಿದ್ದರು. ಈ ವೇಳೆ ಬೈಕ್ನಲ್ಲಿ ಆಗಮಿಸಿದ ಸಂಜು ಬನಸೋಡೆ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರೇಣುಕಾ ಅವರನ್ನು ಇಂಡಿ ತಾಲೂಕಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರೇಣುಕಾ ಕನ್ನೊಳ್ಳಿ ಮೃತಪಟ್ಟಿದ್ದಾರೆ.
ರೇಣುಕಾ ಸಾವಿನಿಂದ ಅವರ ತಾಯಿ ಸಹೋದರರ ಆಕ್ರಂದನ ಮುಗಿಲು ಮುಟ್ಟಿದೆ. ಕೊಲೆಯ ಕಾರಣದ ಕುರಿತು ರೇಣುಕಾ ತಾಯಿ ಹಾಗೂ ಸಹೋದರ ಮಾಹಿತಿ ನೀಡಿದ್ದಾರೆ. ರೇಣುಕಾರ ಪತಿ ಸಾಯಬಣ್ಣ ಅಗ್ನಿಶಾಮಕ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸಾಯಬಣ್ಣ ಸೇವೆಯಲ್ಲಿರುವಾಗಲೇ ಮೃತಪಟ್ಟ ಕಾರಣ ರೇಣುಕಾ ಅವರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ಸಿಕ್ಕಿದೆ. ತವರೂರು ಕೊಟ್ನಾಳದಿಂದ ನಿತ್ಯ ಇಂಡಿಯಲ್ಲಿನ ಸಮಾಜ ಕಲ್ಯಾಣ ಇಲಾಖೆಗೆ ಬಂದು ಹೋಗುತ್ತಿದ್ದರು. ಈ ವೇಳೆ ಇಂಡಿ ತಾಲೂಕಿನ ಅಗರಖೇಡ್ ಗ್ರಾಮದ ಸಂಜು ಬನಸೋಡೆ ಎಂಬ ಯುವಕ ರೇಣುಕಾಗೆ ತನ್ನ ಜೊತೆಗೆ ಮಾತನಾಡು ಎಂದು ಬೆನ್ನು ಬಿದ್ದಿದ್ದ. ಆತನ ಜೊತೆಗೆ ಮಾತನಾಡಲು ನಿರಾಕರಣೆ ಮಾಡಿದ ಪರಿಣಾಮ ಸಂಜು ಬನಸೋಡೆ ರೇಣುಕಾರಿಗೆ ಹರಿತವಾದ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ.
ಇಂಡಿ ಪಟ್ಟಣ ಠಾಣೆಯ ಪೊಲೀಸರು ಆರೋಪಿ ಸಂಜುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಕುರಿತು ತನಿಖೆ ಮುಂದವರೆದಿದೆ. ಇಂಡಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Indore Couple Missing: ರೇನ್ ಕೋಟ್, ಶರ್ಟ್ನಿಂದ ಸಿಕ್ತು ಕೊಲೆಯ ಸುಳಿವು; ಹಂತಕರ ಬಂಧನ ಹೇಗಿತ್ತು?