Koppal News: ಪಿಡಿಒ ಮೇಲೆ ದರ್ಪ ಮೆರೆದ ಗ್ರಾಪಂ ಸದಸ್ಯೆ; ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಪಂ ಪಿಡಿಒ ರತ್ನಮ್ಮ ಗುಂಡಣ್ಣವರ್ ಅವರ ಮೇಲೆ ಸದಸ್ಯೆ ಚಪ್ಪಲಿಯಿಂದ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ. ಹಲ್ಲೆ ನಡೆಸುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ವಿಡಿಯೊ ನೋಡಿದವರು ಗ್ರಾಪಂ ಸದಸ್ಯೆಯ ಈ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಯಲಬುರ್ಗಾ: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಪಂ ಪಿಡಿಒ ರತ್ನಮ್ಮ ಗುಂಡಣ್ಣವರ್ ಅವರ ಮೇಲೆ ಸದಸ್ಯೆ ಚಪ್ಪಲಿಯಿಂದ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಗುರುವಾರ ನಡೆದಿದೆ (Koppal News). ಗ್ರಾಪಂ ಸದಸ್ಯೆ ಶಾಂತಮ್ಮ ಬಂಡಿವಡ್ಡರ್ ಹಲ್ಲೆ ಮಾಡಿರುವ ಸದಸ್ಯೆ. ಗ್ರಾಪಂ ಕಚೇರಿಯಲ್ಲಿ ಪಿಡಿಒ ರತ್ನಮ್ಮ, ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ಪಿಎಂ ಆವಾಸ್ ಯೋಜನೆಯ ಮನೆ ಹಂಚಿಕೆ ವಿಚಾರವಾಗಿ ಸಭೆ ಮಾಡುವ ವೇಳೆ ಹಲ್ಲೆ ನಡೆದಿದೆ. ಸಭೆ ನಡೆಯುವಾಗ ದಿಢೀರ್ ಆಗಿ ಆಗಮಿಸಿದ ಗ್ರಾಪಂ ಸದಸ್ಯೆ ಶಾಂತಮ್ಮ ಬಂಡಿವಡ್ಡರ್ ಪಿಡಿಒ ಜತೆಗೆ ವಾಗ್ವಾದಕ್ಕೆ ಇಳಿದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಎಲ್ಲರೂ ನೋಡ ನೋಡುತ್ತಿದ್ದಂತೆ ಚಪ್ಪಲಿಯಿಂದ ಥಳಿಸಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ ಸಿಬ್ಬಂದಿ ಜಗಳ ಬಿಡಿಸಿದ್ದಾರೆ.
ಘಟನೆಯ ಹಿನ್ನೆಲೆ
ಸ್ಥಳೀಯರೊಬ್ಬರಿಗೆ ನಿವೇಶನದ ಉತಾರ್ ನೀಡದಂತೆ ಕಳೆದ ಒಂದು ವರ್ಷದಿಂದ ಸದಸ್ಯೆ ಶಾಂತಮ್ಮ ಹಾಗೂ ಪುತ್ರ ಭೀಮೇಶ ಬಂಡಿವಡ್ಡರ್ ಪಿಡಿಒಗೆ ತಾಕೀತು ಮಾಡುತ್ತಿದ್ದರು. ಆದರೆ ಪಿಡಿಒ ರತ್ನಮ್ಮ ಗುಂಡಣ್ಣವರ್ ನಿವೇಶನದ ಮೂಲ ಮಾಲೀಕರಿಗೆ ಕಾನೂನಾತ್ಮಕವಾಗಿ ಆಸ್ತಿಯ ಉತಾರ್ ನೀಡಿದ್ದರು. ಅದನ್ನು ಯಾಕೆ ನೀಡಿದ್ದೀರಿ ಎಂದು ಆಕ್ರೋಶಗೊಂಡು ಸದಸ್ಯೆ ಶಾಂತಮ್ಮ ಹಲ್ಲೆ ನಡೆಸಿದ್ದಾರೆ ಎಂದು ಪಿಡಿಒ ದೂರಿದ್ದಾರೆ. ಸದಸ್ಯೆ ಮತ್ತು ಅವರ ಮಗನ ವಿರುದ್ಧ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ: Chalavadi Narayanaswamy: ದಲಿತರಿಗೆ ಮೀಸಲಿಟ್ಟ ಹಣ ಗ್ಯಾರಂಟಿಗೆ ಬಳಸದಿರಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ
ನೌಕರರ ಸಂಘ ಖಂಡನೆ
ಪಿಡಿಒ ರತ್ನಮ್ಮ ಅವರ ಮೇಲೆ ಶಾಂತಮ್ಮ ಹಲ್ಲೆ ನಡೆಸುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ವಿಡಿಯೊ ನೋಡಿದವರು ಆಘಾತ ವ್ಯಕ್ತಪಡಸಿದ್ದಾರೆ. ಗ್ರಾಪಂ ಸದಸ್ಯೆಯ ಈ ಕೃತ್ಯಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಡಿಒ ಮೇಲೆ ನಡೆದ ಹಲ್ಲೆಯನ್ನು ರಾಜ್ಯ ಪಿಡಿಒ ಸಂಘ ಹಾಗೂ ಸರ್ಕಾರಿ ನೌಕರರ ಸಂಘ ಖಂಡಿಸಿದೆ. ಘಟನೆ ನಿಜಕ್ಕೂ ಖಂಡನೀಯ. ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಂಘ ಒತ್ತಾಯಿಸಿದೆ.