Karnataka High Court: ವ್ಹೀಲಿಂಗ್ ಮಾಡುವವರೇ ಎಚ್ಚರಿಕೆ, ನಿಮಗೆ ಜಾಮೀನು ಕೂಡ ಸಿಗೊಲ್ಲ!
ಮೊದಲಿಗೆ ವ್ಹೀಲಿಂಗ್ ಬೃಹತ್ ನಗರ ಪ್ರದೇಶಗಳ ಹೆದ್ದಾರಿಗಳಿಗೆ ಸೀಮಿತವಾಗಿತ್ತು. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಣೆಯಾಗುತ್ತಿದೆ. ವ್ಹೀಲಿಂಗ್ ಚಾಲಕ, ಹಿಂಬದಿ ಸವಾರ ಮಾತ್ರವಲ್ಲದೇ ಸಾಮಾನ್ಯ ಜನರಿಗೂ ಗಂಭೀರ ಬೆದರಿಕೆ. ಕೆಲವು ಯುವಕರು ನಿಸ್ಸಂಶಯವಾಗಿ ಸಮಾಜದ ಸ್ವಾಸ್ಥ್ಯ ಮತ್ತು ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದಾರೆ," ಎಂದು ನ್ಯಾಯಾಲಯ ಹೇಳಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಶೋಕಿಗಾಗಿ, ಏರಿಯಾದಲ್ಲಿ ಹವಾ ಮೇಂಟೇನ್ ಮಾಡುವುದಕ್ಕಾಗಿ ವ್ಹೀಲಿಂಗ್ ಮಾಡುವುದನ್ನು ಮುಂದುವರಿಸಿರುವ ಪಡ್ಡೆಗಳು ಈ ನ್ಯೂಸನ್ನು ಗಮನವಿಟ್ಟು ಓದಬೇಕು. ಸಿಕ್ಕಿಬಿದ್ದರೆ ನಿಮಗೆ ಜಾಮೀನು ಕೂಡ ಸಿಗಲಾರದು. ʼಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಹೆಚ್ಚುತ್ತಿರುವ ವ್ಹೀಲಿಂಗ್‌ನಂಥ ಅಪಾಯಕಾರಿ ಚಟುವಟಿಕೆಗಳನ್ನು ನಿಗ್ರಹಿಸಲು ಕಾನೂನು ತಿದ್ದುಪಡಿ ಅಗತ್ಯವಿದೆʼ ಎಂದು ಹೇಳಿರುವ ಹೈಕೋರ್ಟ್, ಪದೇಪದೆ ವ್ಹೀಲಿಂಗ್ ಮಾಡಿ ಜನತೆಗೆ ಕಿರುಕುಳ ನೀಡುತ್ತಿದ್ದ ಗಂಗಾವತಿಯ ಆರೋಪಿಯೊಬ್ಬನಿಗೆ ಜಾಮೀನು ನಿರಾಕರಿಸಿದೆ.
ವ್ಹೀಲಿಂಗ್ ಆರೋಪಿ, ಕೊಪ್ಪಳ ಜಿಲ್ಲೆಯ ಗಂಗಾವತಿಯ ಅರ್ಬಾಜ್ ಖಾನ್ ಅಲಿಯಾಸ್ ಅರ್ಬಾಜ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ. "ರಾಜ್ಯ ಸರಕಾರವು ಭಾರತೀಯ ನಾಗರಿಕ ಸಂಹಿತೆ (ಬಿಎನ್‌ಎಸ್) ಮತ್ತು ಭಾರತೀಯ ಮೋಟಾರು ವಾಹನ ಕಾಯಿದೆಗೆ ಕಠಿಣ ನಿಬಂಧನೆ ಸೇರ್ಪಡೆ ಮಾಡುವ ಮೂಲಕ ಅಗತ್ಯ ತಿದ್ದುಪಡಿ ಮಾಡಬೇಕು" ಎಂದು ಹೈಕೋರ್ಟ್‌ನ ಧಾರವಾಡ ಪೀಠ ಆದೇಶಿಸಿದೆ.
''ವಿವೇಚನಾರಹಿತ ಚಾಲನೆ ನಿಯಂತ್ರಿಸಲು ಹಾಲಿ ಇರುವ ಕಾನೂನಿನ ನಿಬಂಧನೆಗಳು ಸಾಕಾಗುವುದಿಲ್ಲ ಎಂಬುದನ್ನು ಶಾಸಕಾಂಗ ಮನಗಾಣಬೇಕು. ಶಾಸನದ ಕೊರತೆಯನ್ನು ಗಮನಿಸಿ ಹೊಂದಿಕೆಯಾಗುವ ಮತ್ತು ಕಠಿಣ ನಿಬಂಧನೆ ಒಳಗೊಂಡಂತೆ ಬಿಎನ್‌ಎಸ್ ಮತ್ತು ಮೋಟಾರು ವಾಹನಗಳ ಕಾಯಿದೆಗೆ ಸೂಕ್ತ ತಿದ್ದುಪಡಿ ಮಾಡಬೇಕು,'' ಎಂದು ನ್ಯಾಯಪೀಠ ಹೇಳಿದೆ.
''ನ್ಯಾಯಾಲಯವು ತನ್ನ ಅಧಿಕಾರ ಚಲಾಯಿಸುವಾಗ ಏರುಗತಿಯಲ್ಲಿರುವ ಅಪಾಯಕಾರಿಯಾದ ವ್ಹೀಲಿಂಗ್‌ನಂತಹ ದುಸ್ಸಾಹಸ ಚಟುವಟಿಕೆಗಳನ್ನು ಹತ್ತಿಕ್ಕುವುದನ್ನು ಪರಿಗಣಿಸಬೇಕಿದ್ದು, ಸಮಾಜದ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡಿ ಆ ಮೂಲಕ ಸಾರ್ವಜನಿಕ ಸುವ್ಯವಸ್ಥೆ ಮತ್ತು ಜನರ ರಕ್ಷಣೆ, ಭದ್ರತೆಯ ಮೇಲೆ ಪರಿಣಾಮ ಉಂಟು ಮಾಡುವ ಕೆಲವು ನಿರ್ಲಜ್ಜ ಶಕ್ತಿಗಳ ಹುಟ್ಟಡಗಿಸಬೇಕಿದೆ. ಹಾಲಿ ಪ್ರಕರಣದಲ್ಲಿ ಅರ್ಜಿದಾರನ ವಿರುದ್ಧದ ಆರೋಪಗಳು ಜಾಮೀನು ಸಹಿತವಾಗಿವೆ. ಆದರೆ, ಆತ ಪದೇ ಪದೆ ಅಂತಹ ತಪ್ಪೆಸಗಿದ್ದಾನೆ. ಆರೋಪಿ ವಿರುದ್ಧ ಸಕ್ಷಮ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದ ಮಾತ್ರಕ್ಕೆ ಜಾಮೀನು ನೀಡಬೇಕು ಎಂದೇನೂ ಇಲ್ಲ,'' ಎಂದು ನ್ಯಾಯಾಲಯ ಹೇಳಿದೆ.
''ಮೊದಲಿಗೆ ವ್ಹೀಲಿಂಗ್ ಬೃಹತ್ ನಗರ ಪ್ರದೇಶಗಳ ಹೆದ್ದಾರಿಗಳಿಗೆ ಸೀಮಿತವಾಗಿತ್ತು. ಇತ್ತೀಚಿನ ದಿನಗಳಲ್ಲಿ ಅಂತಹ ಅಪಾಯಕಾರಿ ಚಟುವಟಿಕೆ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಣೆಯಾಗುತ್ತಿದೆ. ಯುವ ಸಮುದಾಯವು ವ್ಹೀಲಿಂಗ್ ಎದೆಗಾರಿಕೆ ಎಂದು ನಂಬಿದ್ದು, ಇಂತಹ ಚಟುವಟಿಕೆಯಿಂದ ಆಗಬಹುದಾದ ಗಂಭೀರ ಹಾನಿಯ ಬಗ್ಗೆ ಅರಿವಿಲ್ಲ. ವ್ಹೀಲಿಂಗ್ ದ್ವಿಚಕ್ರ ವಾಹನ ಚಾಲಕ, ಹಿಂಬದಿಯ ಸವಾರ ಮಾತ್ರವಲ್ಲದೇ ಸಾಮಾನ್ಯ ಜನರಿಗೂ ಗಂಭೀರ ಬೆದರಿಕೆಯಾಗಿದೆ. ಈ ಕೃತ್ಯದಲ್ಲಿ ತೊಡಗುವ ವಿವೇಚನಾರಹಿತ ಕೆಲವು ಯುವಕರು ನಿಸ್ಸಂಶಯವಾಗಿ ಸಮಾಜದ ಸ್ವಾಸ್ಥ್ಯ ಮತ್ತು ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದಾರೆ," ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: Bike wheeling: ವ್ಹೀಲಿಂಗ್ ಪುಂಡರ ಅಟ್ಟಹಾಸಕ್ಕೆ ಹಾಲು ತರಲು ಹೋಗಿದ್ದ ವ್ಯಕ್ತಿ ಬಲಿ