Pralhad Joshi: ಕಾಂಗ್ರೆಸ್‌ನ ತುಷ್ಟೀಕರಣ ರಾಜಕೀಯಕ್ಕೆ ಕರ್ನಾಟಕ ಪ್ರಯೋಗಾಲಯ: ಜೋಶಿ ಆರೋಪ
Pralhad Joshi: ಸಂವಿಧಾನದ 15(1)ರ ಅಡಿಯಲ್ಲಿ ಗುತ್ತಿಗೆಯಲ್ಲಿ ಧರ್ಮಾಧಾರಿತ ಮೀಸಲಾತಿ ಕಲ್ಪಿಸಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ. ಆದರೂ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ತೀರಾ ತುಷ್ಟೀಕರಣ ರಾಜಕೀಯಕ್ಕೆ ಇಳಿದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ.

ನವದೆಹಲಿ: ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ (Congress) ಕರ್ನಾಟಕವನ್ನು ತುಷ್ಟೀಕರಣ ರಾಜಕೀಯದ ಪ್ರಯೋಗಾಲಯ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಆರೋಪಿಸಿದ್ದಾರೆ. ದೆಹಲಿಯಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ, ಕರ್ನಾಟಕವನ್ನು ತುಷ್ಟೀಕರಣ ರಾಜಕೀಯದ ಪ್ರಯೋಗಾಲಯವಾಗಿ ಪರಿವರ್ತಿಸುವ ಕೆಲಸ ನಡೆಯುತ್ತಿದ್ದು, ಇದಕ್ಕೆ ಅವಕಾಶ ಕೊಡುವುದಿಲ್ಲ. ಈ ವಿಷಯವನ್ನು ನಾವು ದೇಶಾದ್ಯಂತ ಎತ್ತುತ್ತೇವೆ ಎಂದು ಎಚ್ಚರಿಸಿದರು. ಡಿಜೆ ಹಳ್ಳಿ, ಕೆಜಿ ಹಳ್ಳಿ, ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಹೀಗೇ ವರ್ತಿಸಿದೆ. ಈಗ ನೋಡಿದರೆ ಕಾಮಗಾರಿ ಗುತ್ತಿಗೆಯಲ್ಲಿ ಶೇ. 4ರಷ್ಟು ಮೀಸಲಾತಿ ಕಲ್ಪಿಸುತ್ತಿದೆ. ಕಾಂಗ್ರೆಸ್‌ನ ತುಷ್ಟೀಕರಣ ಮಿತಿಮೀರಿದೆ ಎಂದು ಕಿಡಿಕಾರಿದರು.
ಸಂವಿಧಾನದ ಪ್ರಕಾರ ಧರ್ಮಾಧಾರಿತ ಗುತ್ತಿಗೆ ಮೀಸಲಾತಿ ಅಸಾಧ್ಯ
ಸಂವಿಧಾನದ 15(1) ನೇ ವಿಧಿ ʼಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಸಾಧ್ಯವಿಲ್ಲʼ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ ಮತ್ತು ಸುಪ್ರೀಂ ಕೋರ್ಟ್ ಸಹ ಹಲವು ಬಾರಿ ಇದನ್ನು ಎತ್ತಿ ಹಿಡಿದಿದೆ. ಆದಾಗ್ಯೂ ಕರ್ನಾಟಕ ಕಾಂಗ್ರೆಸ್ ಸರ್ಕಾರ 2 ಕೋಟಿ ರೂ.ವರೆಗಿನ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ಕಲ್ಪಿಸುತ್ತಿರುವುದೇಕೆ? ಎಂದು ಜೋಶಿ ಪ್ರಶ್ನಿಸಿದರು.
ಸಂವಿಧಾನದ 15(1) ರ ಅಡಿಯಲ್ಲಿ ಗುತ್ತಿಗೆಯಲ್ಲಿ ಧರ್ಮಾಧಾರಿತ ಮೀಸಲಾತಿ ಕಲ್ಪಿಸಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ. ಆದರೂ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ತೀರಾ ತುಷ್ಟೀಕರಣ ರಾಜಕೀಯಕ್ಕೆ ಇಳಿದಿದೆ ಎಂದು ದೂರಿದರು.
ಕರ್ನಾಟಕ ಸರ್ಕಾರ ವಕ್ಫ್ (ತಿದ್ದುಪಡಿ) ಮಸೂದೆಗೆ ವಿರೋಧ ತೋರಿದೆ. ಕರ್ನಾಟಕದ ವಕ್ಫ್‌ನಲ್ಲಿ ಏನು ನಡೆಯುತ್ತಿದೆ? ಎಂಬುದು ಗೊತ್ತಿದೆ. ವಕ್ಫ್ ಮಂಡಳಿ ಹೆಸರಲ್ಲಿ ಭೂ ಕಬಳಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಜೋಶಿ ಹೇಳಿದರು.
ಈ ಸುದ್ದಿಯನ್ನೂ ಓದಿ | ADA Recruitment 2025: ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯಲ್ಲಿದೆ 137 ಹುದ್ದೆ; ಹೀಗೆ ಅಪ್ಲೈ ಮಾಡಿ
1960ರಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಕದ ರೈತರೊಬ್ಬರ ಜಮೀನನ್ನು ವಕ್ಫ್ ಕಬಳಿಸಿದ್ದಲ್ಲದೆ, ಬೆಳೆದ ನಾಶಪಡಿಸಿತ್ತು. ಇದರಿಂದ ಮನನೊಂದ ರೈತ ಆತ್ಮಹತ್ಯೆಗೆ ಶರಣಾಗಿದ್ದರು. ಇಂಥ ಅನೇಕ ಘಟನೆಗಳಿವೆ. ಹೀಗಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆಗೆ ವಿರೋಧಿಸುತ್ತದೆ ಎಂದರೆ ನಿಜಕ್ಕೂ ಶೋಚನೀಯ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು.