Janardhan Reddy: ಶಾಸಕ ಸ್ಥಾನದಿಂದ ಜನಾರ್ದನ ರೆಡ್ಡಿ ಅನರ್ಹ
Obulapuram Mining Case: ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ದೋಷಿ ಎಂದು ಸಿಬಿಐ ಕೋರ್ಟ್ ತೀರ್ಪು ನೀಡಿ 7 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್ ಸಮೀಪದ ಚಂಚಲಗುಡ ಜೈಲಿರುವ ಜನಾರ್ದನ ರೆಡ್ಡಿ ಅವರಿಗೆ ಮತ್ತೊಂದು ಶಾಕ್ ಎದುರಾಗಿದೆ. ಇದೀಗ ಅವರು ಶಾಸಕ ಸ್ಥಾನವನ್ನು ಕಳೆದುಕೊಂಡಿದ್ದಾರೆ.

ಜನಾರ್ದನ ರೆಡ್ಡಿ.

ಬೆಂಗಳೂರು: ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ(Obulapuram Mining Case) ಗಂಗಾವತಿ ಶಾಸಕ ಜನಾರ್ದನ ರೆಡ್ಡಿ (Janardhan Reddy) ದೋಷಿ ಎಂದು ಸಿಬಿಐ ಕೋರ್ಟ್ ತೀರ್ಪು ನೀಡಿ 7 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್ ಸಮೀಪದ ಚಂಚಲಗುಡ ಜೈಲಿರುವ ಜನಾರ್ದನ ರೆಡ್ಡಿ ಅವರಿಗೆ ಮತ್ತೊಂದು ಶಾಕ್ ಎದುರಾಗಿದೆ. ಇದೀಗ ಅವರು ಶಾಸಕ ಸ್ಥಾನವನ್ನೂ ಕಳೆದುಕೊಂಡಿದ್ದಾರೆ. ಈ ಬಗ್ಗೆ ಅದಿಕೃತ ಆದೇಶ ಹೊರ ಬಿದ್ದಿದೆ.
ಗಣಿಗಾರಿಕೆ ಪ್ರಕರಣ ಸುದೀರ್ಘ ವಿಚಾರಣೆ ನಡೆಸಿದ್ದ ಹೈದರಾಬಾದ್ ಸಿಬಿಐ ಕೋರ್ಟ್ 7 ವರ್ಷಗಳ ಶಿಕ್ಷೆ ನೀಡಿತ್ತು. ಶಾಸಕ ಸ್ಥಾನ ಉಳಿಸಿಕೊಳ್ಳಲು ಶಿಕ್ಷೆ ಕಡಿಮೆ ಮಾಡಿ ಎಂದು ರೆಡ್ಡಿ ಕೋರ್ಟ್ ಮುಂದೆ ಅಂಗಲಾಚಿ ಬೇಡಿಕೊಂಡಿದ್ದರು. ಆದರೆ ಕೋರ್ಟ್ ರೆಡ್ಡಿ ಮನವಿಯನ್ನು ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಜನಾರ್ದನ ರೆಡ್ಡಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಈ ಕುರಿತು ಆದೇಶ ಹೊರಡಿಸಿದ್ದಾರೆ.
ಸಿಬಿಐ ಕೋರ್ಟ್ ತೀರ್ಪು ಪ್ರಕಟವಾದ ತಕ್ಷಣದಿಂದಲೇ ಜಾರಿಗೆ ಬರುವಂತೆ ಜನಾರ್ದನ ರೆಡ್ಡಿ ಅವರನ್ನು ಶಾಸಕ ಸ್ಥಾನದಿಂದ 6 ವರ್ಷಗಳ ಕಾಲ ಅನರ್ಹಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ಅನರ್ಹತೆ ಜನಾರ್ದನ ರೆಡ್ಡಿ ಶಿಕ್ಷೆ ಮುಗಿಸಿ ಬಿಡುಗಡೆಯಾಗುವವರೆಗೆ ಅಥವಾ ಈ ಶಿಕ್ಷೆಗೆ ಕೋರ್ಟ್ ತಡೆ ನೀಡುವವರೆಗೆ ಇರಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ನಿಮಯದ ಪ್ರಕಾರ ಯಾವುದೇ ಶಾಸಕ 2 ವರ್ಷ ಅಥವಾ ಅದಕ್ಕಿತಂತ ಮೇಲ್ಪಟ್ಟು ಶಿಕ್ಷೆಗೆ ಗುರಿಯಾದರೆ ಶಾಸಕ ಸ್ಥಾನ ರದ್ದಾಗಲಿದೆ.
Gangavati MLA G Janardhan Reddy is disqualified from the Karnataka Assembly after his conviction by a CBI Spl Court in Hyderabad on May 6. The disqualification will continue for 6 yrs after his release unless stayed by a court.@EconomicTimes @ETPolitics pic.twitter.com/tWqffDbKMO
— KR Balasubramanyam / Baloo (@BalooET) May 8, 2025
ಈ ಸುದ್ದಿಯನ್ನೂ ಓದಿ: Janardhana Reddy: ಅಕ್ರಮ ಗಣಿಗಾರಿಕೆ ಕೇಸ್‌ನಲ್ಲಿ ಜನಾರ್ದನ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ; ಸಿಬಿಐ ಕೋರ್ಟ್ ಮಹತ್ವದ ತೀರ್ಪು
ಏನಿದು ಪ್ರಕರಣ?
ಇದು ಸುಮಾರು 13 ವರ್ಷಗಳ ಹಿಂದಿನ ಪ್ರಕರಣ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅಕ್ರಮ ಗಣಿಗಾರಿಕೆ ನಡೆದಿತ್ತು. ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಗಡಿ ಭಾಗವಾದ ಓಬಳಾಪುರಂ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆದ ಪ್ರಕರಣ ಇದಾಗಿದ್ದು, 2009ರಲ್ಲಿ ಅಂದಿನ ಆಂಧ್ರ ಪ್ರದೇಶ ಸರ್ಕಾರದ ಕೋರಿಕೆಯ ಮೇರೆಗೆ ಕೇಂದ್ರ ಸರ್ಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ಆರಂಭಿಸಿತ್ತು. ಸಿಬಿಐ 2011ರಲ್ಲಿ ಮೊದಲ ಚಾರ್ಜ್‌ಶೀಟ್ ಸಲ್ಲಿಸಿತ್ತು. ಜಾರ್ಚ್‌ಶೀಟ್‌ನಲ್ಲಿ ಜನಾರ್ದನ ರೆಡ್ಡಿ ಜತೆಗೆ ಐಎಎಸ್ ಅಧಿಕಾರಿ ಶ್ರೀಲಕ್ಷ್ಮೀ, ಜನಾರ್ದನ್ ರೆಡ್ಡಿ ಅವರ ಆಪ್ತ ಸಹಾಯಕ ಮೆಫಾಜ್ ಅಲಿ ಖಾನ್, ಮಾಜಿ ಸಚಿವೆ ಸಬಿತಾ ಇಂದ್ರಾ ರೆಡ್ಡಿ, ಬಿ.ವಿ.ಶ್ರೀನಿವಾಸ ರೆಡ್ಡಿ, ವಿ.ಡಿ.ರಾಜಗೋಪಾಲ್, ಕೃಪಾನಂದಂ ಅವರನ್ನೂ ಹೆಸರಿಸಲಾಗಿತ್ತು.
ಮನವಿ ತಿರಸ್ಕರಿಸಿದ ಕೋರ್ಟ್
ಮಂಗಳವಾರ (ಮೇ 6) ತೀರ್ಪು ಪ್ರಕಟವಾಗುತ್ತಿದ್ದಂತೆ ಜನಾರ್ದನ ರೆಡ್ಡಿ 7 ವರ್ಷಗಳ ಶಿಕ್ಷೆಯನ್ನು ಕಡಿಮೆ ಮಾಡಿ ಎಂದು ಕೋರ್ಟ್ಗೆ ಮನವಿ ಮಾಡಿದ್ದರು. ʼʼನಾನು ಈಗಾಗಲೇ 3 ವರ್ಷಗಳಿಗೂ ಹೆಚ್ಚು ಕಾಲ ಬಂಧನದಲ್ಲಿ ಕಳೆದಿದ್ದೇನೆ. ನನ್ನ ವಯಸ್ಸು ಮತ್ತು ನಾನು ಮಾಡಿದ ಸಾರ್ವಜನಿಕ ಸೇವೆಯನ್ನು ಪರಿಗಣಿಸಿ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿʼʼ ಎಂದು ಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಆದರೆ ಕೋರ್ಟ್ ಈ ಮನವಿಯನ್ನು ನಿರಾಕರಿಸಿತ್ತು. ʼʼನಿಮಗೆ 10 ವರ್ಷಗಳ ಶಿಕ್ಷೆಯನ್ನು ಏಕೆ ನೀಡಬಾರದು? ನೀವು ಜೀವಾವಧಿ ಶಿಕ್ಷೆಗೆ ಅರ್ಹರುʼʼ ಎಂದು ಕೋರ್ಟ್ ಮರು ಪ್ರಶ್ನಿಸಿತ್ತು.