Microfinance ordinance: ಮೈಕ್ರೋ ಫೈನಾನ್ಸ್‌ಗಳು ಸಾಲಕ್ಕೆ ಭದ್ರತೆ ಕೇಳುವಂತಿಲ್ಲ, ನಿಯಮ ಮೀರಿದ್ರೆ 10 ವರ್ಷ ಜೈಲು, 5 ಲಕ್ಷ ದಂಡ!
Microfinance ordinance: ಸುಗ್ರೀವಾಜ್ಞೆಯು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು, ಸಂಸ್ಥೆಗಳು ಅಥವಾ ಲೇವಾದೇವಿದಾರನು ನೀಡುವ ದುಬಾರಿ ಬಡ್ಡಿ ದರ ಮೂಲಕ ಬಲವಂತದ ವಸೂಲಾತಿ ವಿಧಾನಗಳಿಂದ ಬಡ ವರ್ಗದ ಜನರನ್ನು ರಕ್ಷಿಸಲು ನೆರವಾಗಲಿದೆ. ಕರ್ನಾಟಕ ಕಿರು (Micro) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶದಲ್ಲಿ ಏನೆಲ್ಲಾ ಅಂಶಗಳಿವೆ ಎಂಬ ಕುರಿತ ಮಾಹಿತಿ ಇಲ್ಲಿದೆ.
![ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲಕ್ಕೆ ಭದ್ರತೆ ಕೇಳುವಂತಿಲ್ಲ](https://cdn-vishwavani-prod.hindverse.com/media/original_images/Microfinance_ordinance.jpg)
![Profile](https://vishwavani.news/static/img/user.png)
ಬೆಂಗಳೂರು: ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ರೂಪಿಸಿರುವ ಸುಗ್ರೀವಾಜ್ಞೆಗೆ (Microfinance Ordinance) ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೊನೆಗೂ ಸಹಿ ಹಾಕಿದ್ದಾರೆ. ಈ ಸುಗ್ರೀವಾಜ್ಞೆಯು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು, ಸಂಸ್ಥೆಗಳು ಅಥವಾ ಲೇವಾದೇವಿದಾರನು ನೀಡುವ ದುಬಾರಿ ಬಡ್ಡಿ ದರ ಮೂಲಕ ಬಲವಂತದ ವಸೂಲಾತಿ ವಿಧಾನಗಳಿಂದ ಬಡ ವರ್ಗದ ಜನರನ್ನು ರಕ್ಷಿಸಲು ನೆರವಾಗಲಿದೆ. ಇದರಿಂದ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ನೋಂದಣಿ, ಸಾಲ ನೀಡಿಕೆ ಮಾನದಂಡ ರೂಪಿಸುವುದು, ಬಲವಂತದ ವಸೂಲಿ ವಿರುದ್ಧ ದಂಡನೆ, ದೂರು ಬಂದರೆ ಪ್ರಕರಣ ದಾಖಲಿಸುವುದು, ಒಂಬುಡ್ಸ್‌ಮನ್ ನೇಮಕ, ಪರಿಹಾರ ಕೊಡಿಸುವುದು ಸೇರಿ ಇನ್ನಿತರ ಅಧಿಕಾರಗಳು ರಾಜ್ಯ ಸರ್ಕಾರಕ್ಕಿರಲಿವೆ.
ಈ ಕರ್ನಾಟಕ ಕಿರು (Micro) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಇದರಲ್ಲಿ ಏನೆಲ್ಲಾ ಅಂಶಗಳಿವೆ ಎಂಬ ಕುರಿತ ಮಾಹಿತಿ ಇಲ್ಲಿದೆ.
ಸಾಲ ನೀಡಿಕೆ ಸಂಸ್ಥೆಗಳ ನೋಂದಣಿ ಕಡ್ಡಾಯ
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆ ಅಥವಾ ಲೇವಾದೇವಿದಾರರು, ಈ ಅಧ್ಯಾದೇಶದ ಪ್ರಾರಂಭದ ದಿನಾಂಕದಿಂದ 30 ದಿನಗಳೊಳಗಾಗಿ, ನಿಯಮಾನುಸಾರ ಕಾರ್ಯವಹಿಸುತ್ತೇವೆ ಎಂಬ ಲಿಖಿತ ಮುಚ್ಚಳಿಕೆಯನ್ನು ಜಿಲ್ಲೆಯ ನೋಂದಣಿ ಪ್ರಾಧಿಕಾರಿಯ ಮುಂದೆ ನೋಂದಣಿಗಾಗಿ ಅರ್ಜಿ ಸಲ್ಲಿಸಬೇಕು. ನೋಂದಣಿಯಾಗದೆ ಯಾವುದೇ ಸಾಲಗಳನ್ನು ಮಂಜೂರು ಮಾಡುವಂತಿಲ್ಲ. ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಒಂದು ವರ್ಷದ ಅವಧಿಗಾಗಿ ಮಾತ್ರ ಪರವಾನಗಿ ಸಿಗಲಿದೆ. ನಂತರ ಅದನ್ನು ನವೀಕರಿಸಿಕೊಳ್ಳಬೇಕಾಗುತ್ತದೆ. ನಿಯಮ ಉಲ್ಲಂಘಿಸಿದ್ದಲ್ಲಿ ಫೈನಾನ್ಸ್ ಸಂಸ್ಥೆಗಳ ಪರವಾನಗಿ ರದ್ದಾಗಲಿದೆ.
ನಿಯಮ ಮೀರಿದ್ರೆ 10 ವರ್ಷ ಜೈಲು ಶಿಕ್ಷೆ, 5 ಲಕ್ಷ ದಂಡ
ಈ ಅಧ್ಯಾದೇಶದ 8ನೇ ಪ್ರಕರಣದ ಉಲ್ಲಂಘನೆಗಾಗಿ ದಂಡ ವಿಧಿಸಹುದಾಗಿದೆ. ನಿಯಮ ಉಲ್ಲಂಘಿಸುವ ಯಾರೇ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಬಹುದು. ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟರ ಮೂಲಕ 10 ವರ್ಷಗಳಿಗೆ ವಿಸ್ತರಿಸಬಹುದಾದ ಅವಧಿಯ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆ ವಿಧಿಸಬಹುದು. ಈ ಅಧ್ಯಾದೇಶದಡಿಯಲ್ಲಿನ ಅಪರಾಧಗಳು ಸಂಜ್ಞೆಯವಾಗಿರಲಿದ್ದು, ಜಾಮೀನುರಹಿತವಾಗಿದೆ.
ಯಾವುದೇ ಭದ್ರತೆ ಕೇಳುವಂತಿಲ್ಲ
ಸರ್ಕಾರವು ಅಧಿಸೂಚನೆಯ ಮೂಲಕ ಸಾಲನೀಡಿಕೆ ಮಾನದಂಡಗಳು, ಸಂಗ್ರಹಣೆ ಮತ್ತು ವಸೂಲಾತಿ ಪದ್ಧತಿಗಳನ್ನು ನಿರ್ದಿಷ್ಟಪಡಿಸಬಹುದು. ಇನ್ನು ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MFI) ಅಥವಾ ಸಾಲ ನೀಡಿಕೆ ಏಜೆನ್ಸಿಗಳು, ಲೇವಾದೇವಿದಾರರು ಭದ್ರತೆಯನ್ನು ಕೇಳುವಂತಿಲ್ಲ. ಸಾಲಕ್ಕಾಗಿ ಗಿರವಿ, ಒತ್ತೆ ಅಥವಾ ಯಾವುದೇ ಇತರ ರೂಪದ ಭದ್ರತೆಯನ್ನು ಸಾಲಗಾರನಿಂದ ಭದ್ರತೆಯಾಗಿ ಪಡೆಯಬಾರದು. ಈ ಸುಗ್ರೀವಾಜ್ಞೆ ಪ್ರಾರಂಭದ ದಿನಾಂಕಕ್ಕೆ ಮೊದಲು ಸಾಲಗಾರನಿಂದ ಪಡೆಯಲಾದ ಯಾವುದೇ ಭದ್ರತೆಗಳನ್ನು ವಾಪಸ್ ನೀಡಬೇಕು.
ಬಲವಂತದ ಕ್ರಮದ ವಿರುದ್ಧ ದಂಡನೆ
ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲಗಾರರಿಂದ ಹಣ ವಸೂಲಾತಿಗಾಗಿ ಸ್ವತಃ ಅಥವಾ ಅದರ ಏಜೆಂಟರ ಮೂಲಕವಾಗಲಿ ಯಾವುದೇ ಇತರ ಬಲವಂತದ ಕ್ರಮವನ್ನು ಬಳಸಬಾರದು. ನಿಯಮ ಮೀರಿದರೆ ದಂಡನೆಗೆ ಒಳಗಾಗಲಿದ್ದಾರೆ. ಹಾಗೂ ಸಂಸ್ಥೆಯ ನೋಂದಣಿಯನ್ನು ಅಮಾನತ್ತುಪಡಿಸಲು ಅಥವಾ ರದ್ದುಪಡಿಸಲು ನೋಂದಣಿ ಪ್ರಾಧಿಕಾರಿಕ್ಕೆ ಅಧಿಕಾರವಿರುತ್ತದೆ.
ಪೊಲೀಸರು ದೂರು ನಿರಾಕರಿಸುವಂತಿಲ್ಲ
ಮೈಕ್ರೋ ಫೈನಾನ್ಸ್ ಸಂಸ್ಥೆಗಳು ನಿಯಮ ಉಲ್ಲಂಘಿಸಿದರೆ ಸಾಲಗಾರರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಳ್ಳಲು ನಿರಾಕರಿಸುವಂತಿಲ್ಲ. ಅಲ್ಲದೆ ಪೊಲೀಸ್ ಉಪ ಅಧೀಕ್ಷಕ ಹುದ್ದೆಗೆ ಕಡಿಮೆಯಿಲ್ಲದ ಪೊಲೀಸ್ ಅಧಿಕಾರಿಗಳು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬಹುದು.
ಒಂಬುಡ್ಸ್ ಪರ್ಸನ್‌ನ ನೇಮಕ
ವಿವಾದಗಳನ್ನು ಇತ್ಯರ್ಥಪಡಿಸುವುದಕ್ಕಾಗಿ, ಸಾಲಗಾರ ಮತ್ತು ಲೇವಾದೇವಿದಾರನ ನಡುವೆ ಮಧ್ಯಸ್ಥಗಾರನಾಗಿ ಕಾರ್ಯನಿರ್ವಹಿಸಲು ಸರ್ಕಾರವು ಅಧಿಸೂಚನೆಯ ಮೂಲಕ ಒಂಬುಡ್ಸ್ ಪರ್ಸನ್‌ನನ್ನು ನೇಮಕ ಮಾಡಬಹುದು.
ಸಾಲಗಾರನಿಗೆ ಪರಿಹಾರ
ಲೈಸೆನ್ಸು ರಹಿತ ಮತ್ತು ನೋಂದಾಯಿತವಲ್ಲದ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಬಲವಂತದ ಸಾಲ ವಸೂಲಿ ಮಾಡಿದರೆ, ಸಾಲಗಾರನು ಪಾವತಿಸಬೇಕಾದ ಯಾವುದಾದರೂ ಬಡ್ಡಿಯ ಮೊತ್ತವಿದ್ದಲ್ಲಿ ಅದನ್ನೂ ಒಳಗೊಂಡಂತೆ “ಸಮಾಜದ ದುರ್ಬಲ ವರ್ಗದವರಿಗಾಗಿ" ಮುಂಗಡ ನೀಡಿದ ಪ್ರತಿಯೊಂದು ಸಾಲವನ್ನು ಸಂಪೂರ್ಣವಾಗಿ ತೀರಿಕೆಯಾಗಿದೆಯೆಂದು ಭಾವಿಸಲಾಗುತ್ತದೆ.
ನಿಯಮಗಳ ರಚನಾಧಿಕಾರ
ಈ ಅಧ್ಯಾದೇಶದ ಉಪಬಂಧಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಯಾವುದೇ ತೊಂದರೆ ಉದ್ಭವಿಸಿದಲ್ಲಿ ರಾಜ್ಯ ಸರ್ಕಾರವು ಸರ್ಕಾರಿ ರಾಜಪತ್ರದಲ್ಲಿ ಪ್ರಕಟಿಸಿದ ಆದೇಶದ ಮೂಲಕ, ತೊಂದರೆಗಳನ್ನು ನಿವಾರಿಸುವ ಉದ್ದೇಶಗಳಿಗಾಗಿ ಉಪಬಂಧಗಳನ್ನು ರಚಿಸಬಹುದು.
ಸುಗ್ರೀವಾಜ್ಞೆಯ ಆದೇಶ ಪ್ರತಿ ಇಲ್ಲಿದೆ micro-finance
ಈ ಸುದ್ದಿಯನ್ನೂ ಓದಿ | Microfinance Ordinance: ಸಾಲಗಾರರ ಕಿರುಕುಳಕ್ಕೆ ಬ್ರೇಕ್; ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ
ಕಾನೂನು ಶೀಘ್ರದಲ್ಲಿ ಜಾರಿ: ಸಿಎಂ
ಸುಗ್ರೀವಾಜ್ಞೆ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಮೈಕ್ರೋ ಫೈನಾನ್ಸ್ ಕಂಪೆನಿಗಳು ಸಾಲ ವಸೂಲಿಯ ನೆಪದಲ್ಲಿ ಸಾಲ ಪಡೆದವರಿಗೆ ನೀಡುತ್ತಿರುವ ಕಿರುಕುಳವನ್ನು ತಡೆಯಲು ರೂಪಿಸಲಾದ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ದೊರೆತಿದೆ. ಈ ಕಾನೂನು ಶೀಘ್ರದಲ್ಲಿ ಜಾರಿಗೆ ಬಂದು ಮೈಕ್ರೋ ಫೈನಾನ್ಸ್‌ಗಳ ನಿಯಮ ಬಾಹಿರ ಸಾಲ ವಸೂಲಿ, ಕಿರುಕುಳಗಳ ವಿರುದ್ಧ ಜನರಿಗೆ ರಕ್ಷಣೆ ನೀಡಲಿದೆ. ಮೈಕ್ರೋ ಫೈನಾನ್ಸ್‌ಗಳ ಕಿರುಕುಳಕ್ಕೆ ಹೆದರಿ ಯಾರೊಬ್ಬರೂ ದುಡುಕಿನ ನಿರ್ಧಾರ ಕೈಗೊಳ್ಳದಿರಿ. ನಿಮ್ಮ ಜೊತೆ ನಮ್ಮ ಸರ್ಕಾರ ಇದೆ ಎಂದು ತಿಳಿಸಿದ್ದಾರೆ.