MGNREGA: ಹೀಗೊಂದು ವಂಚನೆ; ಗಂಡಸರಿಗೆ ಸೀರೆ ಉಡಿಸಿ ನರೇಗಾ ಹಣ ಲಪಟಾಯಿಸಲು ಸಂಚು
Yadagiri News: ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕೂಲಿ ಹಣ ಪಡೆಯಲು ಗಂಡಸರಿಗೆ ಸೀರೆ ಉಡಿಸಿ, ಮಹಿಳೆಯರ ಲೆಕ್ಕದಲ್ಲಿ ದಾಖಲೆ ಸೃಷ್ಟಿಸಿ, ಹಣ ಲಪಟಾಯಿಸುವ ಸಂಚು ನಡೆದಿದ್ದ ವಿವರ ಬಹಿರಂಗವಾಗಿದೆ. ಈ ವಿಚಿತ್ರ ಘಟನೆ ನಡೆದಿದ್ದು ಯಾದಗಿರಿಯಲ್ಲಿ.


ಯಾದಗಿರಿ: ವಂಚಕರು ಹಣ ಲಪಟಾಯಿಸಲು ಹೊಸ ಹೊಸ ಮಾರ್ಗವನ್ನು ಹುಡುಕುತ್ತಾರೆ. ಅದಕ್ಕೆ ಉತ್ತಮ ಉದಾಹರಣೆ ಈ ಪ್ರಕರಣ. ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA)ಯಲ್ಲಿ ಕೂಲಿ ಹಣ ಪಡೆಯಲು ಗಂಡಸರಿಗೆ ಸೀರೆ ಉಡಿಸಿ, ಮಹಿಳೆಯರ ಲೆಕ್ಕದಲ್ಲಿ ದಾಖಲೆ ಸೃಷ್ಟಿಸಿ, ಹಣ ಲಪಟಾಯಿಸುವ ಸಂಚು ನಡೆದಿದ್ದ ವಿವರ ಬಹಿರಂಗವಾಗಿದೆ. ಈ ವಿಚಿತ್ರ ಘಟನೆ ನಡೆದಿದ್ದು ಯಾದಗಿರಿಯಲ್ಲಿ(Yadagiri News). ಜಿಲ್ಲೆಯ ಮಲ್ದಾರ್ ಗ್ರಾಮದಲ್ಲಿ ನಡೆದ ಈ ವಂಚನೆಯ ಪ್ರಕರಣ ಸದ್ಯ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.
ಮಲ್ದಾರ್ ಗ್ರಾಮದಲ್ಲಿ ಸಣ್ಣಲಿಂಗಪ್ಪ ಅವರ ಹೊಲದಲ್ಲಿ 3 ಲಕ್ಷ ರೂ.ಯಲ್ಲಿ ನಾಲೆಯ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ವಂಚನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಣ ಲಪಟಾಯಿಸುವ ಉದ್ದೇಶದಿಂದ ಗಂಡಸರಿಗೆ ಸೀರೆ ಉಡಿಸಿದ್ದಾರೆ ಎನ್ನಲಾಗಿದೆ. ಹೆಂಗಸರ ಹೆಸರಿನಲ್ಲಿ ಹಣ ಲಪಟಾಯಿಸುವ ಸಂಚು ನಡೆದಿರುವ ಈ ಬಗ್ಗೆ ಘಟನೆ ತಿಳಿದು ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಸದ್ಯ ಗಂಡಸರಿಗೆ ಸೀರೆ ಉಡಿಸಿರುವ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ಸುದ್ದಿಯನ್ನೂ ಓದಿ: Yadagiri news: ಗಬ್ಬು ನಾರುವ ಚರಂಡಿ ಮಕ್ಕಳಿಂದ ಕ್ಲೀನ್ ಮಾಡಿಸಿದ ಹೆಡ್‌ಮಾಸ್ಟರ್!
ಪುರುಷರಿಗೆ ಸೀರೆ ಉಡಿಸಿ ಕೂಲಿ ಹಣ ದುರ್ಬಳಕೆ ಬಗ್ಗೆ ಆರೋಪಗಳು ಕೇಳಿ ಬಂದ ಬಗ್ಗೆ ಸ್ಪಷ್ಟನೆ ನೀಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾ ಹಕ ಅಧಿಕಾರಿ (ಸಿಇಒ) ಲವೀಶ ಒರಡಿಯಾ, ಫೆಬ್ರವರಿಯಲ್ಲಿ ನಡೆದ ಈ ಪ್ರಕರಣದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವೀರೇಶ ಎಂಬ ಹೊರಗುತ್ತಿಗೆ ನೌಕರರನ್ನು ಅಮಾನತು ಮಾಡಲಾಗಿದೆ. ನರೇಗಾ ಕಾಮಗಾರಿಗೆ ಸಂಬಂಧಿಸಿದಂತೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಕಾರ್ಮಿಕರ ಕೆಲಸದ ಹಾಜರಾತಿಯ ಫೋಟೊ ಅಪ್‌ಲೋಡ್ ಮಾಡಬೇಕಾದ ಅಧಿಕಾರಿಗಳೇ ಈ ರೀತಿಯ ವಂಚನೆಗೆ ಕುಮ್ಮಕ್ಕು ನೀಡುತ್ತಿರುವುದು ಕಳವಳಕಾರಿ. ಕೆಲಸ ಮಾಡದ ಪುರುಷರಿಗೆ ಸೀರೆ ತೊಡಿಸಿ ಮಹಿಳೆಯರ ಹೆಸರಿನಲ್ಲಿ ಹಣ ಕೊಳೆ ಹೊಡೆಯಲು ಮುಂದಾಗಿರುವುದು ಖಂಡನೀಯ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನರೇಗಾ ಯೋಜನೆಯಡಿ ಪ್ರತಿ ವರ್ಷ ಕನಿಷ್ಠ 100 ದಿನ ಉದ್ಯೋಗವನ್ನು ಒದಗಿಸುವ ಗುರಿಯನ್ನು ಹೊಂದಲಾಗಿದೆ. ಗ್ರಾಮಾಂತಾರ ಪ್ರದೇಶಗಳಿಂದ ನಗರಕ್ಕೆ ದೊಡ್ಡ ಪ್ರಮಾಣದಲ್ಲಿ ನಡೆಯುವ ವಲಸೆಯನ್ನು ತಡೆಯಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ಪರಿಚಯಿಸಿದೆ.
![]()
ಈ ಪ್ರಕರಣದಲ್ಲಿ ನನ್ನ ಪಾತ್ರವೇನೂ ಇಲ್ಲ. ಹೊರಗುತ್ತಿಗೆ ನೌಕರನೊಬ್ಬ ಈ ವಂಚನೆ ಎಸಗಿದ್ದಾನೆ. ಇಡೀ ಹಗರಣದ ಬಗ್ಗೆ ನನಗೆ ತಿಳಿದಿರಲಿಲ್ಲ. ಇದು ಗಮನಕ್ಕೆ ಬಂದ ಕೂಡಲೇ ವಂಚನೆ ಎಸಗಿದ ಹೊರಗುತ್ತಿಗೆ ನೌಕರ ವೀರೇಶನನ್ನು ಅಮಾನತುಗೊಳಿಸಿದ್ದೇನೆ. ಈಗ ನರೇಗಾ ಕೆಲಸವು ಗ್ರಾಮದಲ್ಲಿ ತಡೆರಹಿತವಾಗಿ ನಡೆಯುತ್ತಿದೆ. ನಾವು 2,500 ಕಾರ್ಮಿಕರಿಗೆ ಕೆಲಸ ನೀಡಿದ್ದೇವೆ
-ಚೆನ್ನಬಸವ, ಮಲ್ಹಾರ್ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿ