Pathaan 2: ಶಾರುಖ್ ಖಾನ್ ಎದುರು ವಿಲನ್ ಆಗಿ ಅಬ್ಬರಿಸ್ತಾರಾ ಅಲ್ಲು ಅರ್ಜುನ್? ʼಪಠಾಣ್ 2ʼ ಚಿತ್ರದಲ್ಲಿರಲಿದೆ ಸ್ಟಾರ್‌ಗಳ ಸಮಾಗಮ
Pathaan 2: ದಕ್ಷಿಣ ಭಾರತದ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಇದೀಗ ಬಾಲಿವುಡ್ ಪ್ರವೇಶಿಸಲು ಸಜ್ಜಾಗಿದ್ದಾರೆ. ವಿಶೇಷ ಎಂದರೆ ಅವರು ಹೋರೋ ಬದಲು ವಿಲನ್ ಆಗಿ ಗಿಂದಿ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. 'ಪಠಾಣ್ 2' ಸಿನಿಮಾದಲ್ಲಿ ಶಾರುಖ್ ಖಾನ್-ದೀಪಿಕಾ ಪಡುಕೋಣೆ ಜತೆ ಅಲ್ಲು ಅರ್ಜುನ್ ನಟಿಸುತ್ತಿದ್ದಾರೆ ಎನ್ನಲಾಗಿದೆ.

ಅಲ್ಲು ಅರ್ಜುನ್ ಮತ್ತು ಶಾರುಖ್ ಖಾನ್.

ಮುಂಬೈ: ʼಪುಷ್ಪ 2' (Pushpa) ಚಿತ್ರದ ಮೂಲಕ ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಉತ್ತರ ಭಾರತದಲ್ಲಿಯೂ ಹವಾ ಎಬ್ಬಿಸಿದ್ದಾರೆ. ಕಳೆದ ವರ್ಷಾಂತ್ಯದಲ್ಲಿ ತೆರೆಕಂಡ ಈ ಚಿತ್ರದ ಹಿಂದಿ ಡಬ್ ಮೂಲ ತೆಲುಗಿಗಿಂತ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಸದ್ಯ ಈ ಯಶಸ್ಸಿನಲ್ಲಿ ತೇಲುತ್ತಿರುವ ಅಲ್ಲು ಅರ್ಜುನ್ ಬಾಲಿವುಡ್‌ಗೆ ಪಾದರ್ಪಣೆ ಮಾಡಲು ಸಜ್ಜಾಗಿದ್ದಾರೆ ಎನ್ನುತ್ತಿದೆ ಮೂಲಗಳು. ಅವರು ನಾಯಕನಾಗಿ ಅಲ್ಲ ಬದಲಾಗಿ ಪವರ್‌ಫುಲ್ ವಿಲನ್ ರೋಲ್ ಮೂಲಕ ಹಿಂದಿ ಚಿತ್ರರಂಗ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದೆ. ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ (Shah Rukh Khan) ಅವರ ʼಪಠಾಣ್ 2ʼ (Pathaan 2) ಸಿನಿಮಾದಲ್ಲಿ ಅಲ್ಲು ಅರ್ಜುನ್ ಅಭಿನಯಿಸುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
ಸತತ ಸೋಲಿನಿಂದ ಕಂಗೆಟ್ಟ ಶಾರುಖ್ ಖಾನ್ 2023ರಲ್ಲಿ ತೆರೆಕಂಡ 'ಪಠಾಣ್' ಚಿತ್ರದ ಮೂಲಕ ಕಂಬ್ಯಾಕ್ ಮಾಡಿದ್ದರು. ಹಲವು ವರ್ಷಗಳ ಬಳಿಕ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಜೋಡಿಯಾಗಿ ಕಾಣಿಕೊಂಡು ಮೋಡಿ ಮಾಡಿದ್ದರು. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಸ್ಪೈ ಆ್ಯಕ್ಷನ್ ಥ್ರಿಲ್ಲರ್ ಬಾಕ್ಸ್ ಆಫೀಸ್‌ನಲ್ಲಿ 1,050 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಈ ಚಿತ್ರವನ್ನು ನಿರ್ಮಿಸಿದ್ದ ಯಶ್ ರಾಜ್ ಫಿಲ್ಮ್ಸ್ ಇದೀಗ ಸಿನಿಮಾದ ಸೀಕ್ವೆಲ್‌ಗೆ ಸಿದ್ಧತೆ ನಡೆಸಿದೆ. ಈ ಚಿತ್ರದ ವಿಲನ್ ಪಾತ್ರಕ್ಕೆ ಅಲ್ಲು ಅರ್ಜುನ್ ಅವರನ್ನು ಸಂಪರ್ಕಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ.
ಅದಾಗ್ಯೂ ಈ ಬಗ್ಗೆ ಅಧಿಕೃತವಾಗಿ ಇನ್ನೂ ಮಾಹಿತಿ ಹೊರಬಿದ್ದಿಲ್ಲ. ಇದು ಪವರ್‌ಫುಲ್ ವಿಲನ್ ಪಾತ್ರವಾಗಿದ್ದು, ಶಾರುಖ್ ಖಾನ್ ಎದುರು ಅಲ್ಲು ಅರ್ಜುನ್ ಅಬ್ಬರಿಸಲಿದ್ದಾರೆ ಎನ್ನಲಾಗುತ್ತಿದೆ. ಬಹುಕೋಟಿ ರೂ. ವೆಚ್ಚದಲ್ಲಿ ಈ ಚಿತ್ರ ತಯಾರಾಗಲಿದ್ದು, ಶಾರುಖ್ ಖಾನ್ ಜತೆಗೆ ಅಲ್ಲು ಅರ್ಜುನ್ ಅವರನ್ನೂ ಗಮದಲ್ಲಿಟ್ಟು ಪಾತ್ರವನ್ನು ಕಟ್ಟಿಕೊಡಲಾಗುತ್ತಿದೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Pathaan 2: ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡಲು ಶಾರುಖ್ ಖಾನ್-ದೀಪಿಕಾ ಸಜ್ಜು; ಬರಲಿದೆ 'ಪಠಾಣ್ 2'
ಯಶ್ ರಾಜ್ ಫಿಲ್ಮ್ಸ್‌ನ ಸ್ಪೈ ಯೂನಿವರ್ಸ್‌ನ ಭಾಗವಾಗಿ ಈ ಚಿತ್ರ ತಾಯಾರಾಗಲಿದ್ದು, ಸದ್ಯ ಚಿತ್ರತಂಡ ಸ್ಕ್ರಿಪ್ಟ್ ಕೆಲಸದಲ್ಲಿ ನಿರತವಾಗಿದೆ. ಅಬ್ಬಾಸ್ ಟೈರ್ವಾಲಾ ಚಿತ್ರಕಥೆ ಬರೆಯುತ್ತಿದ್ದು, ಬಹುತೇಕ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ. ಸದ್ಯಕ್ಕಂತೂ ಚಿತ್ರ ಆರಂಭವಾಗುವ ಲಕ್ಷಣಗಳಿಲ್ಲ. ಪ್ರಸ್ತುತ ಶಾರುಖ್ ಖಾನ್ ʼಕಿಂಗ್ʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರ ಪುತ್ರಿ ಸುಹಾನಾ ಖಾನ್ ಕೂಡ ಅಭಿನಯಿಸುತ್ತಿದ್ದಾರೆ. 2026ರ ಮಧ್ಯ ಭಾಗದಲ್ಲಿ ಈ ಬಹು ನಿರೀಕ್ಷಿತ ಚಿತ್ರ ತೆರೆ ಕಾಣಲಿದೆ. ಈ ಸಿನಿಮಾದ ಬಳಿಕವಷ್ಟೇ ಶಾರುಖ್ ʼಪಠಾಣ್ 2ʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತ ಕಳೆದ ಸೆಪ್ಟೆಂಬರ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ದೀಪಿಕಾ ಸದ್ಯ ನಟನೆಗೆ ಬ್ರೇಕ್ ತೆಗೆದುಕೊಂಡಿದ್ದಾರೆ. ಚಿತ್ರರಂಗಕ್ಕೆ ಮರಳಿದ ಬಳಕ ಅವರು ʼಪಠಾಣ್ 2ʼ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಶೇಷ ಎಂದರೆ ಈ ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ಬದಲು ಹೊಸ ಪ್ರತಿಭೆಯೊಬ್ಬರು ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಸದ್ಯ ಸ್ಯಾಂಡಲ್‌ವುಡ್ ಸೂಪರ್ ಸ್ಟಾರ್ ಯಶ್ ನಿತೇಶ್ ತಿವಾರಿ ನಿರ್ದೇಶನದ ʼರಾಮಾಯಣʼದಲ್ಲಿ ರಾವಣನ ಪಾತ್ರ ನಿವರ್ಹಿಸುವ ಮೂಲಕ ಖಡಕ್ ವಿಲನ್ ಆಗಿ ಹಿಂದಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ ದಕ್ಷಿಣ ಭಾರತದ ಮತ್ತೊಬ್ಬ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ವಿಲನ್ ಆಗಿಯೇ ಬಾಲಿವುಡ್‌ಗೆ ಕಾಲಿಡುವ ಸಾಧ್ಯತೆ ಇದೆ.