DK Shivakumar Birthday: ಕಬಿನಿ ಹಿನ್ನೀರಿನಲ್ಲಿ ಕುಟುಂಬದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಡಿಕೆಶಿ
DK Shivakumar Birthday: ಪಹಲ್ಗಾಮ್ ಉಗ್ರರ ದಾಳಿ ಹಿನ್ನೆಲೆಯಲ್ಲಿ ಯಾರೂ ನನ್ನ ಜನ್ಮದಿನವನ್ನು ಆಚರಣೆ ಮಾಡುವುದು ಬೇಡ ಎಂದು ಅಭಿಮಾನಿಗಳಿಗೆ ಡಿಕೆಶಿ ಮನವಿ ಮಾಡಿದ್ದರು. ಹೀಗಾಗಿ ಕುಟುಂಬಸ್ಥರೊಂದಿಗೆ ಮಾತ್ರ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.


ಮೈಸೂರು: ರಾಜಕೀಯದ ಒತ್ತಡದ ನಡುವೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ 63ನೇ ಹುಟ್ಟುಹಬ್ಬವನ್ನು (DK Shivakumar Birthday) ಕಬಿನಿ ಹಿನ್ನೀರಿನ ಸುಂದರ ನೈಸರ್ಗಿಕ ತಾಣದಲ್ಲಿ ಕುಟುಂಬದ ಸದಸ್ಯರೊಂದಿಗೆ ಆಚರಿಸಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಡಿಕೆಶಿ ಅವರು, ಈ ವರ್ಷದ ಹುಟ್ಟುಹಬ್ಬವನ್ನು(ಮೇ 15ರಂದು) ವಿಶೇಷವಾಗಿ ಕಬಿನಿಯಲ್ಲಿ ಕಾಲ ಕಳೆಯುವ ಮೂಲಕ ಆಚರಿಸಿದೆ. ಪ್ರಕೃತಿಯೊಂದಿಗೆ ಒಂದಾದ ಭಾವ, ಕಬಿನಿಯ ಸೌಂದರ್ಯ, ವನ್ಯಸಂಪತ್ತನ್ನು ಕಣ್ತುಂಬಿಕೊಂಡು, ಪ್ರಶಾಂತವಾದ ಜಗತ್ತಿಗೆ ಕಾಲಿಟ್ಟ ಅನುಭವವಾಯಿತು ಎಂದು ತಿಳಿಸಿದ್ದಾರೆ.
ಪಹಲ್ಗಾಮ್ ಉಗ್ರರ ದಾಳಿ ಹಿನ್ನೆಲೆಯಲ್ಲಿ ಯಾರೂ ನನ್ನ ಜನ್ಮದಿನವನ್ನು ಆಚರಣೆ ಮಾಡುವುದು ಬೇಡ ಎಂದು ಅಭಿಮಾನಿಗಳಿಗೆ ಡಿಕೆಶಿ ಮನವಿ ಮಾಡಿದ್ದರು. ಭಯೋತ್ಪಾದನೆ ವಿರುದ್ಧ ನಮ್ಮ ಯೋಧರು ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿರುವ ಸಂದರ್ಭವಿದು. ಹೀಗಾಗಿ ಯಾರೂ ನನ್ನ ಜನ್ಮದಿನ ಆಚರಣೆ ಮಾಡುವುದು. ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ, ಅದುವೇ ನನಗೆ ಶ್ರೀರಕ್ಷೆ ಎಂದು ಹೇಳಿದ್ದರು. ಹೀಗಾಗಿ ಕುಟುಂಬಸ್ಥರೊಂದಿಗೆ ಮಾತ್ರ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಇನ್ನು ಕಬಿನಿಯಲ್ಲಿ ಕಳೆದ ಸಮಯದ ಬಗ್ಗೆ ಪೋಸ್ಟ್ ಮಾಡಿರುವ ಡಿಕೆಶಿ ಅವರು, ಕಬಿನಿ ನಾ ನಿನ್ನ ಅಭಿಮಾನಿ! 200ರಷ್ಟು ಆನೆಗಳು, ಅಸಂಖ್ಯಾತ ಜಿಂಕೆಗಳನ್ನು ಕಬಿನಿ ವನ್ಯಜೀವಿ ಅಭಯಾರಣ್ಯದಲ್ಲಿ ಕಣ್ತುಂಬಿಕೊಂಡೆ - ಏನದ್ಭುತವಾದ ದೃಶ್ಯವದು!. ಕರ್ನಾಟಕದ ಅರಣ್ಯ ಸಂಪತ್ತಿನ ಆಗರವಾಗಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿರುವ ಕಬಿನಿ ಅಭಯಾರಣ್ಯವನ್ನು ಜೀವನದಲ್ಲಿ ಒಂದು ಬಾರಿಯಾದರೂ ಎಲ್ಲರೂ ನೋಡಲೇ ಬೇಕು. ಬನ್ನಿ ಕಬಿನಿಗೆ - ಪ್ರಕೃತಿಯೊಂದಿಗೆ ಒಂದಾಗಿರಿ ಎಂದು ಕರೆ ನೀಡಿದ್ದಾರೆ.
ಮತ್ತೊಂದೆಡೆ ಡಿ.ಕೆ. ಶಿವಕುಮಾರ್ ಅವರಿಗೆ ಬೆಂಬಲಿಗರಿಂದ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಮುಂದಿನ ಹುಟ್ಟುಹಬ್ಬದ ವೇಳೆಗೆ ಡಿ.ಕೆ. ಶಿವಕುಮಾರ್‌ಗೆ ರಾಜಕೀಯದಲ್ಲಿ ಉನ್ನತ ಹುದ್ದೆ ಸಿಗಲೆಂದು ಅಭಿಮಾನಿಗಳು ಆಶಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Karnataka Congress: ಕಾಂಗ್ರೆಸ್ ನಕ್ಷೆಯಲ್ಲಿ ತಿರುಚಿದ ಕಾಶ್ಮೀರ; ಟೀಕೆ, ಡಿಕೆಶಿ ಕಠಿಣ ಕ್ರಮ
ಆಫ್ರಿಕನ್ ಸಿಂಹ ದತ್ತು ಪಡೆದ ರಾಜ್ಯ ಯುವ ಕಾಂಗ್ರೆಸ್

ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಜನ್ಮದಿನದ ಪ್ರಯುಕ್ತ ಯುವ ಕಾಂಗ್ರೆಸ್ ವತಿಯಿಂದ ಮೈಸೂರು ಮೃಗಾಲಯದಲ್ಲಿ ಆಫ್ರಿಕನ್ ಸಿಂಹವನ್ನು ದತ್ತು ಪಡೆಯಲಾಗಿದೆ. ಮಂಜುನಾಥ್ ಗೌಡ ಅವರ ನೇತೃತ್ವದ ಪ್ರದೇಶ ಯುವ ಕಾಂಗ್ರೆಸ್, ಸಿಂಹವನ್ನು ಒಂದು ವರ್ಷಕ್ಕೆ ದತ್ತು ಪಡೆದಿದ್ದು, ಪ್ರತಿ ವರ್ಷ ದತ್ತು ನವೀಕರಣಕ್ಕೆ ನಿರ್ಧರಿಸಿದೆ. ವರ್ಷಕ್ಕೆ ದತ್ತು ಪಡೆಯಲು ಯುವ ಕಾಂಗ್ರೆಸ್ ವತಿಯಿಂದ ಮೈಸೂರು ಮೃಗಾಲಯಕ್ಕೆ 2 ಲಕ್ಷ ರೂ. ನೀಡಲಾಗಿದೆ.
ಇನ್ನು ಡಿ.ಕೆ. ಶಿವಕುಮಾರ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಚೆಸ್ ಸ್ಪರ್ಧೆ, ರಕ್ತದಾನ ಶಿಬಿರ, ವಿವಿಧ ದೇವಸ್ಥಾನಗಳಲ್ಲಿ ಡಿಕೆಶಿ ಹೆಸರಿನಲ್ಲಿ ಪೂಜೆ- ಅರ್ಚನೆ, ಅಂಧ ಮಕ್ಕಳಿಗೆ ನೆರವು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.