Lokesh Kaayarga Column: ಆಟೋ-ಬೈಕ್ ಟ್ಯಾಕ್ಸಿ ‘ಡಿಕ್ಕಿ’ ತಪ್ಪಿಸಬಾರದೇಕೆ ?
‘‘ಅರ್ಧ ಎಕರೆ ಜಮೀನಿದೆ ಸಾರ್. ಅತ್ಲಾಗೂ ಇಲ್ಲ, ಇತ್ಲಾಗೂ ಇಲ್ಲ. ನನ್ನ ದುಡಿಮೆಯಲ್ಲಿಯೇ ತಂಗಿ ಮದುವೆ ಮಾಡ್ಬೇಕು. ಬೆಳಿಗ್ಗೆ 9ರಿಂದ ಸಂಜೆ 5ರ ತನಕ ಆಫೀಸ್‌ನಲ್ಲಿ ದುಡೀತೀನಿ. ಆರರಿಂದ 12 ಗಂಟೆ ತನಕ ಬೈಕ್ ಓಡಿಸ್ತೀನಿ. ಪರವಾಗಿಲ್ಲ ಸಾರ್, ಕೆಲವು ದಿನ ಒಳ್ಳೆಯ ಸಂಪಾದನೆ ಇರುತ್ತದೆ. ಕೆಲ ದಿನ ಅಷ್ಟಕ್ಕಷ್ಟೇ’’ ಅಂದ. ಆಗಲೇ ಬೈಕ್ ಟ್ಯಾಕ್ಸಿ ನಿಷೇಧದ ಕೂಗು ಜೋರಾಗಿತ್ತು.


ಲೋಕಮತ
kaayarga@gmail.com
ಬಾಡಿಗೆ ಆಟೋ, ಟ್ಯಾಕ್ಸಿ, ಬೈಕ್‌ಗಳಲ್ಲಿ ಸಂಚರಿಸುವಾಗ ಚಾಲಕರನ್ನು ಮಾತಿಗೆಳೆಯುವುದು ನನ್ನ ಅಭ್ಯಾಸ. ‘ನಿಮ್ದು ಯಾವೂರು’ ಎಂದು ಕೇಳಿದರೆ ಕೆಲವರು ‘ ನಮ್ದು ಇಲ್ಲೇ’ ಎಂದು ಚುಟುಕಾಗಿ ಮುಗಿಸುತ್ತಾರೆ. ಅವರ ಧ್ವನಿಯಲ್ಲಿಯೇ ಅವರ ಮಾತಿನ ಆಸಕ್ತಿ ಉಳ್ಳವರೋ ಇಲ್ಲವೂ ಎಂದು ತಿಳಿಯುತ್ತದೆ. ಕೆಲವರು, ನಮ್ಮ ಮಾತು ಆರಂಭಿಸಲು ಕಾಯ್ತಾ ಇರ್ತಾರೆ. ಯಾವೂರು ಎಂದರೆ ಸಾಕು, ಅವರ ಊರು, ಕುಟುಂಬ, ಅಲ್ಲಿನ ಸಮಸ್ಯೆ, ಇಲ್ಲಿನ ಸಂಕಟ ಎಲ್ಲವನ್ನೂ ಒಂದೇ ಬಾರಿಗೆ ಉಸುರಿ ಬಿಡುತ್ತಾರೆ. ವಾಹನದಿಂದ ಇಳಿಯುವ ಹೊತ್ತಿಗೆ ಅವರು ತೀರಾ ಪರಿಚಿತ ವ್ಯಕ್ತಿ ಎನಿಸಿ ಬಿಡುತ್ತಾರೆ. ಇನ್ನು ಕೆಲವರು, ವಾಹನ ಏರುವ ಮುನ್ನವೇ ‘ಇಷ್ಟು ಎಕ್ಸ್‌ಟ್ರಾ ಕೊಡಿ, ವಾಪಸ್ ಬರುವಾಗ ಯಾರೂ ಸಿಗುವುದಿಲ್ಲ’ ಎಂದು ಹೇಳಿ ಆರಂಭದಲ್ಲೇ ನಿಮ್ಮ ಮೂಡ್ ಆಫ್ ಮಾಡಿ ಬಿಡುತ್ತಾರೆ. ಇನ್ನು ಕೆಲವರಿಗೆ ಬೈಕ್ ಸವಾರರು, ಪೊಲೀಸರು, ನಾಯಕರ ಮೇಲೆ ಸಿಟ್ಟು. ಅವೆಲ್ಲ ವನ್ನೂ ನಿಮ್ಮ ಮುಂದೆ ಕಾರಿಕೊಳ್ಳುತ್ತಾರೆ. ಪತ್ರಕರ್ತರಾದವರಿಗೆ ಇವೆಲ್ಲವೂ ಅನುಭವ ದ್ರವ್ಯಗಳು.
ಒಂದೆರಡು ತಿಂಗಳ ಹಿಂದಿನ ಮಾತು. ರಾತ್ರಿ ರಾಜರಾಜೇಶ್ವರಿ ನಗರದ ನಮ್ಮ ಕಚೇರಿಯಿಂದ ಬೆಂಗಳೂರು ಸೆಟಲೈಟ್ ಬಸ್ ನಿಲ್ದಾಣಕ್ಕೆ ಬೈಕ್ ಟ್ಯಾಕ್ಸಿ ಹಿಡಿದಿದ್ದೆ. ಯಾವೂರು ಎಂದಿದ್ದಕ್ಕೆ ‘ಮಂಡ್ಯ’ ಎಂದ ಯುವಕನಿಗೆ ‘ಮಂಡ್ಯದಲ್ಲಿ ಎಲ್ಲಿ’ ಎಂದು ಮರು ಪ್ರಶ್ನೆ ಕೇಳಿದ್ದೆ. ಪಾಂಡವಪುರ ಎಂದ ಆತ ಬಳಿಕ ಬಳಿಕ ತಾನೇ ಮಾತಿಗೆ ಶುರು ಹಚ್ಚಿಕೊಂಡಿದ್ದ. ಆತನ ಹೆಸರು ಜಗದೀಶ. ಡಿಗ್ರಿ ಪಾಸಾಗಿ ನಾಲ್ಕೈದು ವರ್ಷದಿಂದ ಖಾಸಗಿ ಕಂಪನಿಯಲ್ಲಿ ದುಡಿಯುತ್ತಿದ್ದ. ಮಾಸಿಕ 40 ಸಾವಿರ ಗಳಷ್ಟು ಸಂಪಾದನೆ ಇತ್ತು.
ಇದನ್ನೂ ಓದಿ: Lokesh Kaayarga Column: ನ್ಯಾ.ಗವಾಯಿ ನಡೆ ನ್ಯಾಯಾಂಗಕ್ಕೆ ಮೇಲ್ಪಂಕ್ತಿ
‘‘ಅರ್ಧ ಎಕರೆ ಜಮೀನಿದೆ ಸಾರ್. ಅತ್ಲಾಗೂ ಇಲ್ಲ, ಇತ್ಲಾಗೂ ಇಲ್ಲ. ನನ್ನ ದುಡಿಮೆಯಲ್ಲಿಯೇ ತಂಗಿ ಮದುವೆ ಮಾಡ್ಬೇಕು. ಬೆಳಿಗ್ಗೆ 9ರಿಂದ ಸಂಜೆ 5ರ ತನಕ ಆಫೀಸ್‌ನಲ್ಲಿ ದುಡೀತೀನಿ. ಆರರಿಂದ 12 ಗಂಟೆ ತನಕ ಬೈಕ್ ಓಡಿಸ್ತೀನಿ. ಪರವಾಗಿಲ್ಲ ಸಾರ್, ಕೆಲವು ದಿನ ಒಳ್ಳೆಯ ಸಂಪಾದನೆ ಇರುತ್ತದೆ. ಕೆಲ ದಿನ ಅಷ್ಟಕ್ಕಷ್ಟೇ’’ ಅಂದ. ಆಗಲೇ ಬೈಕ್ ಟ್ಯಾಕ್ಸಿ ನಿಷೇಧದ ಕೂಗು ಜೋರಾಗಿತ್ತು. ‘‘ಬ್ಯಾನ್ ಮಾಡಿದ್ರೆ ಏನು ಮಾಡೋಕಾಗುತ್ತೆ ಸಾರ್, ದುಡಿದು ತಿನ್ನುವವರಿಗೆ ಅಷ್ಟಿಷ್ಟು ಕೈ ಸಂಪಾದನೆಗೆ ಇದೊಂದು ಅವಕಾಶ. ನಾವೇನೂ ಲಂಚ ಹೊಡೆಯಕ್ಕಾಗಲ್ಲ, ದರೋಡೆಗಿಳಿಯೊಕ್ಕಾಗಲ್ಲ..’’ ಎಂದ.
ತಂಗಿಗಾಗಿ ದಿನದ 14 ತಾಸು ಎಡೆಬಿಡದೆ ದುಡಿಯುತ್ತಿದ್ದ ಜಗದೀಶ ಈಗ ಏನು ಮಾಡುತ್ತಿದ್ದಾನೋ ಗೊತ್ತಿಲ್ಲ. ಬೈಕ್ ಟ್ಯಾಕ್ಸಿಗೆ ಹೈಕೋರ್ಟ್ ನಿಷೇಧ ಹೇರಿ 15 ದಿನಗಳ ಮೇಲಾಯಿತು. ಜಗದೀಶನಂತೆ ನಾನಾ ವೃತ್ತಿಯಲ್ಲಿದ್ದುಕೊಂಡು ಬದುಕಿನ ಬಂಡಿ ಎಳೆಯಲು ಬದಲಿ ಮಾರ್ಗಗಳನ್ನು ಆಶ್ರಯಿಸಿದ್ದ ರಾಜ್ಯದ ಲಕ್ಷಾಂತರ ಯುವಕರು ಈಗ ಏನು ಮಾಡುತ್ತಿದ್ದಾರೋ ಗೊತ್ತಿಲ್ಲ. ಆದರೆ, ‘‘ನಾವೇನು ದರೋಡೆ ಮಾಡೋಕಾಗುತ್ತಾ..’’ ಎಂಬ ಆತನ ಮಾತು ಈಗಲೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿ ಬಿಟ್ಟಿದೆ. ಮನೆಯ ಜವಾಬ್ದಾರಿ ಹೊತ್ತು ಬೆಂಗಳೂರಿನಂತಹ ಮಹಾನಗರದಲ್ಲಿ 15 ಸಾವಿರದಿಂದ 20-30 ಸಾವಿರ ಸಂಬಳಕ್ಕೆ ದುಡಿಯುವ ಯುವಕರಿಗೆ ತಮ್ಮ ಹೊರೆ ಇಳಿಸಿಕೊಳ್ಳಲು ಇರುವ ಮಾರ್ಗಗಳು ಅಷ್ಟಕ್ಕಷ್ಟೇ. ವೃತ್ತಿಯನ್ನು ಆಧರಿಸಿ ಘನತೆಯನ್ನು ಅಳೆಯುವ ದೇಶದಲ್ಲಿ ಪಾಶ್ಚಾತ್ಯ ರಂತೆ ಸಿಕ್ಕಿದ ಉದ್ಯೋಗಗಳೆಲ್ಲವನ್ನೂ ಮಾಡುವಂತಿಲ್ಲ. ಅಲ್ಲಿನಂತೆ ಗಂಟೆಗಳ ಲೆಕ್ಕದಲ್ಲಿ ದುಡಿಯುವ ಅವಕಾಶಗಳೂ ಇಲ್ಲ.

ಇಲ್ಲಿ ಜಗದೀಶನಂಥವರು ಮಾತ್ರ ಅಲ್ಲ. ಬೈಕ್ ಟ್ಯಾಕ್ಸಿ ಓಡಿಸಿಕೊಂಡೇ ತಮ್ಮ ವಿದ್ಯಾಭ್ಯಾಸದ ಖರ್ಚನ್ನು ನೋಡಿಕೊಂಡವರಿದ್ದಾರೆ. ಯಾವುದೋ ಕೋರ್ಸಿಗೆ ಸೇರಿಕೊಂಡು ಬೈಕ್ ಟ್ಯಾಕ್ಸಿ ಓಡಿಸುತ್ತಲೇ ಅಪ್ಪ- ಅಮ್ಮನಿಗೆ ಹೊರೆಯಾಗದಂತೆ ಅಥವಾ ಅವರನ್ನೂ ಸಾಕುತ್ತಲೇ ತಮ್ಮ ವಿದ್ಯೆಯ ದಾರಿ ಕಂಡುಕೊಂಡವರಿದ್ದಾರೆ. ಓಲಾ, ಉಬರ್, ರ್ಯಾಪಿಡೋ ಬುಕ್ ಮಾಡಿದಾಗ ಅವರ ಹೆಸರು ನೋಡಿದಾಗಲೇ ಅವರು ಇಂಥಾ ರಾಜ್ಯದವರೆಂದು ಗುರುತಿಸಬಹುದು. ಹೊರ ರಾಜ್ಯದವರ ಪೈಕಿ ನಾನು ಮಾತನಾಡಿಸಿದವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದರು, ಇಲ್ಲವೇ ಸಣ್ಣ ಪುಟ್ಟ ಉದ್ಯೋಗ ಹಿಡಿದವರಾಗಿದ್ದರು. ಈಗ ಇವರೆಲ್ಲರ ಸಂಪಾದನೆಯ ದಾರಿಗಳು ಬಂದ್ ಆಗಿವೆ. ಬೈಕ್ ಟ್ಯಾಕ್ಸಿ ಸಂಘಟನೆಗಳ ಪ್ರಕಾರ ಬೆಂಗಳೂರು ಒಂದರಲ್ಲಿಯೇ 1 ಲಕ್ಷಕ್ಕೂ ಅಧಿಕ ಗಿಗ್ ಕಾರ್ಮಿಕರು ಬೈಕ್ ಟ್ಯಾಕ್ಸಿ ಸೇವೆಯನ್ನು ಅವಲಂಬಿಸಿದ್ದರು. ನಿಷೇಧದಿಂದಾಗಿ ಇವರೆಲ್ಲರೂ ನಿರುದ್ಯೋಗಿ ಗಳಾಗಿದ್ದಾರೆ. ಇವರನ್ನು ನಂಬಿದ ಕುಟುಂಬಗಳೂ ಮಕ್ಕಳ ಶಾಲಾ ಶುಲ್ಕ, ಬಾಡಿಗೆ ಮತ್ತು ಆಹಾರಕ್ಕಾಗಿ ಪರದಾಡುತ್ತಿವೆ.
ಬೆಂಗಳೂರಿನಂತಹ ನಗರಗಳಲ್ಲಿ ಬೈಕ್ ಟ್ಯಾಕ್ಸಿಗಳು ಮಿತವ್ಯಯದ ಮತ್ತು ಸುಲಭವಾಗಿ ಲಭ್ಯ ವಿರುವ ಸಾರಿಗೆ ಆಯ್ಕೆಯಾಗಿದ್ದವು. ಟ್ರಾಫಿಕ್ ದಟ್ಟಣೆಯನ್ನು ತಪ್ಪಿಸಲು ಮತ್ತು ತಮ್ಮ ಆಯ್ಕೆಯ ಗಮ್ಯವನ್ನು ತ್ವರಿತವಾಗಿ ಸೇರಲು ಬೈಕ್ ಟ್ಯಾಕ್ಸಿಗಳು ಸಾರ್ವಜನಿಕರಿಗೆ ಅನುಕೂಲವಾಗಿತ್ತು. ವಿದ್ಯಾರ್ಥಿಗಳು, ನೌಕರರು, ಸಣ್ಣ ವ್ಯಾಪಾರಿಗಳು ಮತ್ತು ದಿನಗೂಲಿ ಕಾರ್ಮಿಕರು ಸೇರಿದಂತೆ ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಈ ಸೇವೆಯನ್ನು ಬಳಸುತ್ತಿದ್ದರು. ನಿಷೇಧದಿಂದ ಅವರ ಪ್ರಯಾಣ ವೆಚ್ಚ ಹೆಚ್ಚಾಗಿದೆ. ಪರ್ಯಾಯ ಮಾರ್ಗಗಳು ಸೀಮಿತವಾಗಿವೆ.
ಹೈಕೋರ್ಟ್‌ನಲ್ಲಿ ಬೈಕ್ ಟ್ಯಾಕ್ಸಿ ನಿಷೇಧ ಆದೇಶ ತಡೆ ಕೋರಿದ ಅರ್ಜಿಗೆ ಪುರಸ್ಕಾರ ಸಿಕ್ಕಿಲ್ಲ. 1988ರ ಮೋಟಾರು ವಾಹನ ಕಾಯಿದೆ ಸೆಕ್ಷನ್ 93 ರ ಅಡಿಯಲ್ಲಿ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರವು ಯಾವುದೇ ನಿರ್ದಿಷ್ಟ ನಿಯಮಗಳನ್ನು ಅಥವಾ ಮಾರ್ಗಸೂಚಿ ಗಳನ್ನು ರೂಪಿಸಿಲ್ಲ. ಈ ಕಾರಣದಿಂದ ವೈಯಕ್ತಿಕ ನೋಂದಣಿ ಹೊಂದಿರುವ ದ್ವಿಚಕ್ರ ವಾಹನಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವುದು ಕಾನೂನು ಉಲ್ಲಂಘನೆ. ಸರಕಾರವು ಸೂಕ್ತ ನಿಯಮಗಳನ್ನು ರೂಪಿಸುವವರೆಗೂ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಯನ್ನು ಅನುಮತಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ವಾದ- ಪ್ರತಿವಾದದ ಸಂದರ್ಭದಲ್ಲಿ ಈ ಆದೇಶದಿಂದ ಸಾವಿರಾರು ಯುವಕರ ಬದುಕಿನ ದಾರಿಗೆ ತೊಂದರೆಯಾಗಲಿದೆ ಎಂಬ ವಾದವನ್ನು ನ್ಯಾಯಪೀಠವೂ ಒಪ್ಪಿಕೊಂಡಿದೆ. ಈ ಕಾರಣಕ್ಕಾಗಿಯೇ ಸೂಕ್ತ ನಿಯಮಾವಳಿ ರಚಿಸಲು ನ್ಯಾಯಾಲಯ ರಾಜ್ಯ ಸರಕಾರಕ್ಕೆ ಹಲವು ಬಾರಿ ಗಡುವು ನೀಡಿತ್ತು. ಆದರೆ ಸರಕಾರ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗೆ ಸಂಬಂಧಿಸಿ ಯಾವುದೇ ನಿಯಮ ಗಳನ್ನು ರೂಪಿಸುವ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಅಹವಾಲು ಹೊತ್ತು ಯಾರೇ ಬಂದರೂ ಅದನ್ನು ಆಲಿಸಬೇಕಾಗಿರುವುದು ಚುನಾಯಿತ ಸರಕಾರದ ಕೆಲಸ. ಆದರೆ ಬೈಕ್ ಟ್ಯಾಕ್ಸಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರಾಗಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಾಗಲಿ ಈ ತನಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನುವುದು ಗಮನಾರ್ಹ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ‘‘ವೈಯಕ್ತಿಕ ನೋಂದಣಿ ಹೊಂದಿರುವ ದ್ವಿಚಕ್ರ ವಾಹನಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವುದನ್ನು ಸರಕಾರ ವಿರೋಧಿಸುತ್ತದೆ. ಬೈಕ್ ಟ್ಯಾಕ್ಸಿಗಳು ಪ್ರಯಾಣಿಕರಿಗೆ, ವಿಶೇಷವಾಗಿ ಮಹಿಳೆಯರಿಗೆ ಸುರಕ್ಷಿತ ಸಾರಿಗೆ ವಿಧಾನವಲ್ಲ’ ಎಂದು ಹೇಳಿದ್ದಾರೆ. ಹಾಗೆಂದು ಮೋಟಾರು ವಾಹನ ನಿಯಮ ತಿದ್ದುಪಡಿ ಮಾಡಿ ಸುರಕ್ಷತೆಯನ್ನು ಖಾತರಿಗೊಳಿಸಬೇಕೆಂಬ ಬೇಡಿಕೆಗೆ ಮಣೆ ಹಾಕಲು ಅವರು ಸಿದ್ದರಿಲ್ಲ.
ಸಾರಿಗೆ ಸುರಕ್ಷತೆ ಎಷ್ಟು ಮುಖ್ಯವೋ ಸಮರ್ಪಕ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿರುವುದು ಸರಕಾರದ ಕರ್ತವ್ಯ. ಬೈಕ್ ಟ್ಯಾಕ್ಸಿ ನಿಷೇಧಿಸಿದ ಸರಕಾರ ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಪರ್ಯಾಯ ಸಾರಿಗೆಯ ವ್ಯವಸ್ಥೆ ಮಾಡಿದ್ದರೆ ಈ ನಡೆಯನ್ನು ಒಪ್ಪಿಕೊಳ್ಳಬಹುದಿತ್ತು. ಆದರೆ ಬೆಂಗಳೂರಿನ ಅರ್ಧಕ್ಕಿಂತ ಹೆಚ್ಚು ಬಡಾವಣೆಗಳಿಗೆ ಇನ್ನೂ ಸಾರ್ವಜನಿಕ ಸಾರಿಗೆಯ ಅನುಕೂಲ ವಿಲ್ಲ. ಇಲ್ಲಿ ಬಸ್ ಬಿಡಿ, ರಿಕ್ಷಾ ಕೂಡ ಹೋಗಲಾರದ ಅದೆಷ್ಟೋ ಇಕ್ಕಟ್ಟಾದ, ಜನನಿಬಿಡ ಬಡಾವಣೆ ಗಳಿವೆ. ಇವರು ಈಗಲೂ ಬೇಸಿಗೆ, ಮಳೆ, ಚಳಿಯನ್ನು ಸಹಿಸಿಕೊಂಡು ಕಿ.ಮೀ.ಗಟ್ಟಲೆ ನಡೆದು ಬಸ್ ಅಥವಾ ಮೆಟ್ರೊ ಹಿಡಿಯಬೇಕಾದ ಅನಿವಾರ್ಯತೆ ಇದೆ.
ದುಬಾರಿಯಾದರೂ ಬೆಂಗಳೂರಿನ ಉದ್ಯೋಗಸ್ಥರು, ವಿದ್ಯಾರ್ಥಿಗಳು ಈಗ ಮೆಟ್ರೊ ರೈಲು ನೆಚ್ಚಿಕೊಂಡಿದ್ದಾರೆ. ಆದರೆ ನಾಲ್ಕೈದು ಕಿ.ಮೀ ದೂರವಿರುವ ತಮ್ಮ ಬಡಾವಣೆಗಳಿಂದ ಮೆಟ್ರೋ ಸ್ಟೇಷನ್ ತನಕ ಬರಬೇಕಾದರೆ ನಿಯಮಿತವಾಗಿ ಬಸ್ ಸೌಕರ‌್ಯಗಳಿಲ್ಲ. ಇದ್ದರೂ ‘ಶಕ್ತಿ’ಯುತ ಮಹಿಳೆಯರಿಂದ ತುಂಬಿ ತುಳುಕುವ ಬಸ್‌ಗಳೇ ಹೆಚ್ಚು. ತಮ್ಮ ದ್ವಿಚಕ್ರವನ್ನು ವಾಹನದಲ್ಲಿ ಮೆಟ್ರೋ ತಲುಪುವ ಎಂದರೆ ಪಾರ್ಕಿಂಗ್‌ನದ್ದೇ ದೊಡ್ಡ ತಲೆ ನೋವು. ಇವರೆಲ್ಲರೂ ಅನ್ಯ ಮಾರ್ಗ ಗಳಿಲ್ಲದೆ ಆಟೋ ಅಣ್ಣಂದಿರನ್ನುಆಶ್ರಯಿಸಲೇಬೇಕು.
ಬೈಕ್ ಟ್ಯಾಕ್ಸಿಗಳನ್ನು ಖಂಡತುಂಡವಾಗಿ ವಿರೋಧಿಸುವ ರಿಕ್ಷಾ ಚಾಲಕರ ಸಂಘಗಳು, ಈ ಬೆಳವಣಿಗೆಯ ಬಳಿಕವಾದರೂ ಗ್ರಾಹಕರೊಂದಿಗೆ ಸೌಜನ್ಯದೊಂದಿಗೆ ವರ್ತಿಸುವ, ಅವರು ಕರೆದಲ್ಲಿಗೆ ಬರುವ, ಬಾಡಿಗೆ ವಿಚಾರದಲ್ಲಿ ಜಗಳಕ್ಕಿಳಿಯದಿರುವ ನಿರ್ಣಯ ಅಂಗೀಕರಿಸಿದ್ದರೆ ನಾಗರಿಕರಿಗೆ ತೊಂದರೆ ಇರುತ್ತಿರಲಿಲ್ಲ. ಆದರೆ ಬೈಕ್ ಟ್ಯಾಕ್ಸಿ ಸ್ಥಗಿತಗೊಂಡ ಬಳಿಕ ಬಹುತೇಕ ಕಡೆಗಳಲ್ಲಿ ಆಟೋ ಕನಿಷ್ಠ ಬಾಡಿಗೆ ದರ 50 ರು.ಗಳಿಗೇರಿದೆ. ಈ ಬಗ್ಗೆ ನಾಗರಿಕರಿಂದ ದೂರುಗಳು ಬರುತ್ತಲೇ ಇವೆ. ಜುಲೈ ಒಂದರ ಒಂದೇ ದಿನ ಸಾರಿಗೆ ಇಲಾಖೆ ಅಧಿಕಾರಿಗಳು ಅಧಿಕ ಪ್ರಯಾಣ ದರ ವಸೂಲಿ ಮಾಡಿದ ಆರೋಪದಲ್ಲಿ 299 ಪ್ರಕರಣ ದಾಖಲಿಸಿಕೊಂಡು, 114 ಆಟೋಗಳನ್ನು ಜಪ್ತಿ ಮಾಡಿದ್ದಾರೆ. ಅಂದರೆ ಬೆಂಗಳೂರಿನಾದ್ಯಂತ ವಸೂಲಿ ಪ್ರಮಾಣ ಯಾವ ಪ್ರಮಾಣದಲ್ಲಿರಬಹುದು ನೀವೇ ಊಹಿಸಿ.
ಹೊಟ್ಟೆಪಾಡಿಗೆ ಆಟೋ ಓಡಿಸುವವರನ್ನು ದೂರುವುದು ನನ್ನ ಉದ್ದೇಶವಲ್ಲ. ಒಂದು ರುಪಾಯಿ ಚಿಲ್ಲರೆ ಬಾಕಿ ಇದ್ದರೂ ನಿಯತ್ತಿನಿಂದ ಮರಳಿಸುವ, ದಾರಿ ಗೊತ್ತಿಲ್ಲದ ಊರಿಗೆ ತಾವೇ ಕರೆದು ಕೊಂಡು ಹೋಗಿ ಸುರಕ್ಷಿತವಾಗಿ ತಲುಪಿಸುವ ಆಟೋ ಚಾಲಕರನ್ನು ಕಂಡಿದ್ದೇನೆ. ಕೇಳಿದ್ದೇನೆ. ಆದರೆ ಆಟೋ ಏರಿದಲ್ಲಿಂದ ಇಳಿಯುವ ತನಕ ನಮ್ಮಲ್ಲಿನ ಹಿಂಜರಿಕೆ ಭಾವ ಲಾಗಾಯ್ತಿನಿಂದ ಬಂದದ್ದು. ದುರದೃಷ್ಟವಶಾತ್ ಅದು ಈಗಲೂ ಮುಂದುವರಿದಿದೆ.
ಆಟೋ ಚಾಲಕರು ಮತ್ತು ಬೈಕ್ ಟ್ಯಾಕ್ಸಿ ಚಾಲಕರ ನಡುವಣ ಸಂಘರ್ಷವೇನಿದ್ದರೂ ಹೊಟ್ಟೆಪಾಡಿ ನದ್ದು. ಇವರನ್ನು ಬಳಸಿಕೊಂಡು ಅಗ್ರಿಗೇಟರ್ ಸಂಸ್ಥೆಗಳು ಈಗಲೂ ಕುಳಿತಲ್ಲಿಯೇ ಲಾಭ ಮಾಡಿ ಕೊಳ್ಳುತ್ತಿವೆ. ಆದರೆ ನೀತಿ, ನಿಯಮ ರೂಪಿಸಬೇಕಾದ, ಕಾನೂನಿನ ಉಲ್ಲಂಘನೆಯನ್ನು ನೋಡಿಯೂ ಕಣ್ಣು ಮುಚ್ಚಿ ಕೂರುವ ಸರಕಾರವೇ ಇಲ್ಲಿ ಮುಖ್ಯ ಆರೋಪಿ. ಇದಕ್ಕೂ ಕಾಯಿದೆಯ ನೆಪ ಹೇಳುತ್ತಿರುವುದು ದಿಕ್ಕು ತಪ್ಪಿಸುವ ತಂತ್ರ. 2021ರಲ್ಲಿ ರಾಜ್ಯ ಸರಕಾರವೇ ಇ-ಬೈಕ್ ಟ್ಯಾಕ್ಸಿ ನೀತಿಯನ್ನು ಪರಿಚಯಿಸಿತ್ತು, ಆದರೆ ಸುರಕ್ಷತೆ ಮತ್ತು ದುರುಪಯೋಗದ ನೆಪದಲ್ಲಿ 2024ರಲ್ಲಿ ಈ ಆದೇಶ ವಾಪಸ್ ಪಡೆದಿತ್ತು. ಇದರ ಹಿಂದಿದ್ದ ಒತ್ತಡಗಳೇನೆನ್ನುವುದು ನಾವು ಊಹಿಸಲಾಗದ ವಿಚಾರಗಳಲ್ಲ.
ಕೇಂದ್ರ ಸರಕಾರದ ಮೋಟಾರು ವಾಹನ ಕಾಯ್ದೆ 1988ರ ಅಡಿಯಲ್ಲಿ ದ್ವಿಚಕ್ರ ವಾಹನಗಳನ್ನು ‘ಗುತ್ತಿಗೆ ಸಾರಿಗೆ’ (ಕಾಂಟ್ರಾಕ್ಟ್ ಕ್ಯಾರೇಜ್) ಎಂದು ಬಳಸಲು ಅವಕಾಶವಿದೆ. ಬೈಕ್‌ಗಳನ್ನು ಟ್ಯಾಕ್ಸಿ ಯಾಗಿ ಬಳಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಕೇಂದ್ರ ಸರಕಾರವೇ ಸ್ಪಷ್ಟಪಡಿಸಿದೆ. ಆದರೆ, ಇದರ ನಿಯಮಾವಳಿಗಳನ್ನು ರೂಪಿಸುವ ಮತ್ತು ಪರವಾನಗಿ ನೀಡುವ ಅಧಿಕಾರವನ್ನು ರಾಜ್ಯ ಸರಕಾರಗಳಿಗೆ ನೀಡಲಾಗಿದೆ.
ಕೇಂದ್ರ ಸರಕಾರವು 2016ರಲ್ಲಿಯೇ ಟ್ಯಾಕ್ಸಿ ಸಂಬಂಧಿತ ಮಾರ್ಗಸೂಚಿಗಳನ್ನು ಮುಂದಿಟ್ಟಿದೆ. ಅದರಲ್ಲಿ ಬೈಕ್ ಟ್ಯಾಕ್ಸಿಗಳಿಗೂ ಅವಕಾಶ ನೀಡುವ ಪ್ರಸ್ತಾಪವೂ ಇದೆ. ಸರ್ವರಿಗೂ ಸಾರ್ವಜನಿಕ ಸಾರಿಗೆ ಇಲ್ಲವೇ ಅಗ್ಗದ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸಾಧ್ಯವಿಲ್ಲ. ಈ ಕಾರಣದಿಂದ ಬೈಕ್ ಟ್ಯಾಕ್ಸಿ ಗಳಿಗೆ ಅನುಮತಿ ನೀಡಬಹುದೆನ್ನುವುದು ಕೇಂದ್ರ ಸರಕಾರದ ನಿಲುವು. ರಾಜ್ಯ ಸರಕಾರವೇ ತನ್ನ ಅಫಿಡವಿಟ್ ನಲ್ಲಿ ತಿಳಿಸಿರುವಂತೆ ಮಹಾರಾಷ್ಟ್ರ, ತೆಲಂಗಾಣ, ಉತ್ತರ ಪ್ರದೇಶ, ರಾಜಸ್ಥಾನ, ಗೋವಾ ಸೇರಿದಂತೆ ಸುಮಾರು ಎಂಟು ರಾಜ್ಯಗಳು ಸೂಕ್ತ ನಿಯಮಾವಳಿ ರೂಪಿಸಿ ಬೈಕ್ ಟ್ಯಾಕ್ಸಿ ಗಳಿಗೆ ಅನುಮತಿ ನೀಡಿವೆ.
ಹಾಗಿದ್ದರೆ ಕರ್ನಾಟಕದಲ್ಲಿ ಈ ನಿಯಮ ರೂಪಿಸಲು ಸರಕಾರದ ಕೈಯನ್ನು ಜಗ್ಗುತ್ತಿರುವ ಶಕ್ತಿಗಳು ಯಾವುದೆಂದು ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಬೇಕು. ಉದ್ಯೋಗ ಕಳೆದುಕೊಂಡಿರುವ ಬೈಕ್ ಟ್ಯಾಕ್ಸಿ ಸವಾರರು ಖುದ್ದು ಸಿಎಂ ಅವರನ್ನು ಕಂಡು ಕಣ್ಣೀರಿಟ್ಟು ಮನವಿ ಅರ್ಪಿಸಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಈ ತನಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗಿಗ್ ಕಾರ್ಮಿಕರ ಬಗ್ಗೆ ವಿಶೇಷ ಕಾಳಜಿ ತೋರಿಸುವ, ಅವರ ರಕ್ಷಣೆಗಾಗಿ ವಿಶೇಷ ಯೋಜನೆ ರೂಪಿಸಬೇಕೆಂದು ಸಲಹೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಾಗಲಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಾಗಲಿ ಬೈಕ್ ಟ್ಯಾಕ್ಸಿ ಸವಾರರ ಪತ್ರಕ್ಕೆ ಸ್ಪಂದಿಸಿಲ್ಲ.
ಕರ್ನಾಟಕದಲ್ಲಿ ಕಾಂಗ್ರೆಸ್ ಶಾಸಕರ ಅಹವಾಲಿಗೆ ಸ್ಪಂದಿಸಲು ಹೈಕಮಾಂಡ್ ಪ್ರತಿನಿಧಿ ರಣದೀಪ್ ಸುರ್ಜೇವಾಲಾ ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಎಲ್ಲರನ್ನೂ ಖುದ್ದಾಗಿ ಕರೆದು ಸಮಸ್ಯೆಗಳು ಮತ್ತು ಬೇಡಿಕೆಗಳ ಬಗ್ಗೆ ವಿಚಾರಿಸುತ್ತಿದ್ದಾರೆ. ಈ ಶಾಸಕರ ಬೇಡಿಕೆ ಅವರ ಹೊಟ್ಟೆಪಾಡಿನದ್ದಾಗಿರಲು ಸಾಧ್ಯವೇ ಇಲ್ಲ. ಆದರೆ ರಾಜ್ಯದ ಕೋಟ್ಯಂತರ ಪ್ರಯಾಣಿಕರು ಮತ್ತು ಲಕ್ಷಾಂತರ ಸವಾರರ ಸುರಕ್ಷತೆ ಮತ್ತು ಜೀವನೋಪಾಯಕ್ಕೆ ಸಂಬಂಧಿಸಿದ ಬೈಕ್ ಟ್ಯಾಕ್ಸಿಯ ಪ್ರಶ್ನೆಯನ್ನು ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸುವುದು ಮತ್ತು ಆಟೋ-ಬೈಕ್ ಟ್ಯಾಕ್ಸಿ ಸವಾರರ ನಡುವಣ ಸಂಭಾವ್ಯ ಘರ್ಷಣೆಯನ್ನು ತಪ್ಪಿಸುವುದು ಸರಕಾರದ ಕರ್ತವ್ಯ. ಪ್ರಜೆಗಳಿಂದ ಆಯ್ಕೆಯಾದ ಸರಕಾರ, ತನಗೆ ಇದರಲ್ಲಿ ಆಸಕ್ತಿ ಇಲ್ಲ ಎನ್ನುವುದಾದರೆ ಈ ಸರಕಾರದ ಮೇಲೆ ಜನರೇ ನಿರಾಸಕ್ತಿ ತಾಳುತ್ತಾರೆ. ಇದರಲ್ಲಿ ಸಂಶಯವಿಲ್ಲ.