IPL 2025: ಆರ್‌ಸಿಬಿ ನಾಯಕ ರಜತ್ ಪಟಿದಾರ್‌ಗೆ ವಿರಾಟ್ ಕೊಹ್ಲಿ ವಿಶೇಷ ಸಂದೇಶ!
Virat Kohlli Special Message to Rajat Patidar: ಮುಂಬರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ನಿಮಿತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೂತನ ನಾಯಕನಾಗಿ ನೇಮಕಗೊಂಡಿರುವ ರಜತ್ ಪಾಟಿದಾರ್‌ಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಶೇಷ ಸಂದೇಶವನ್ನು ರವಾನಿಸಿದ್ದಾರೆ.
![ʻನಾಯಕತ್ವಕ್ಕೆ ನೀವು ಅರ್ಹರುʼ: ರಜತ್ ಪಾಟಿದಾರ್‌ಗೆ ಕೊಹ್ಲಿಯ ವಿಶೇಷ ಸಂದೇಶ!](https://cdn-vishwavani-prod.hindverse.com/media/original_images/Virat_Kohli-Rajat_Patidar1.jpg)
ರಜತ್ ಪಟಿದಾರ್‌ಗೆ ವಿರಾಟ್ ಕೊಹ್ಲಿ ವಿಶೇಷ ಸಂದೇಶ!
![Profile](https://vishwavani.news/static/img/user.png)
ಬೆಂಗಳೂರು: ಮುಂಬರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ನಿಮಿತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೂತನ ನಾಯಕನಾಗಿ ನೇಮಕಗೊಂಡಿರುವ ರಜತ್ ಪಾಟಿದಾರ್‌ಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಶೇಷ ಸಂದೇಶವನ್ನು ಬರೆದಿದ್ದಾರೆ. ನೀವು ಆರ್‌ಸಿಬಿ ತಂಡಕ್ಕೆ ನಾಯಕರಾಗಲು ಅರ್ಹರಾಗಿದ್ದೀರಿ ಎಂದು ಗುಣಗಾನ ಮಾಡಿದ್ದಾರೆ. ಗುರುವಾರ ಬೆಂಗಳೂರು ಫ್ರಾಂಚೈಸಿ ರಜತ್ ಪಾಟಿದಾರ್ ಅವರಿಗೆ ನಾಯಕತ್ವ ನೀಡಿದ ಸುದ್ದಿಯನ್ನು ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪ್ರಕಟಿಸಿದೆ.
2021ರಲ್ಲಿ ರಜತ್ ಪಾಟಿದಾರ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಮೊದಲ ಬಾರಿ ಐಪಿಎಲ್ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದರು. ನಂತರ, 2022ರ ಮೆಗಾ ಹರಾಜಿನ ನಿಮಿತ್ತ ಅವರನ್ನು ರಿಲೀಸ್ ಮಾಡಲಾಗಿತ್ತು. ಆದರೆ, ಲವನೀತ್ ಸಿಸೋಡೊಯ ಗಾಯಕ್ಕೆ ತುತ್ತಾದ ಕಾರಣ ಅವರ ಸ್ಥಾನಕ್ಕೆ ತಡವಾಗಿ ರಜತ್ ಪಾಟಿದಾರ್ ಅವರನ್ನು ಕರೆಸಿಕೊಳ್ಳಲಾಗಿತ್ತು. ಅದರಂತೆ ಅವರು 2022ರ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಎಲಿಮಿನೇಟರ್ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಅಂದಿನಿಂದ ಅವರು ಆರ್‌ಸಿಬಿಯಲ್ಲಿ ಕೀ ಬ್ಯಾಟ್ಸ್‌ಮನ್ ಆಗಿ ಆಡುತ್ತಿದ್ದಾರೆ.
IPL 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಜತ್ ಪಾಟಿದಾರ್ ನಾಯಕ!
ರಜತ್ ಪಾಟಿದಾರ್‌ಗೆ ವಿರಾಟ್ ಕೊಹ್ಲಿ ಸಂದೇಶ
"ರಜತ್ ಮೊದಲಿಗೆ ನಿಮಗೆ ಅಭಿನಂದನೆಗಳು ಹಾಗೂ ನಿಮಗೆ ಶುಭವಾಗಲಿ. ನೀವು ಈ ಫ್ರಾಂಚೈಸಿಯಲ್ಲಿ ಬೆಳೆದ ರೀತಿ, ನೀವು ತೋರಿರುವ ಪ್ರದರ್ಶನ ಭಾರತದಾದ್ಯಂತ ಇರುವ ಆರ್‌ಸಿಬಿ ಅಭಿಮಾನಿಗಳ ಹೃದಯಲ್ಲಿದೆ ಹಾಗೂ ಅವರು ನಾಯಕನಾಗಿ ನಿಮ್ಮ ಪ್ರದರ್ಶನವನ್ನು ಕಣ್ತುಂಬಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ," ಎಂದು ವಿರಾಟ್ ಕೊಹ್ಲಿ ಆರ್‌ಸಿಬಿ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ತಿಳಿಸಿದ್ದಾರೆ.
𝐊𝐢𝐧𝐠 𝐊𝐨𝐡𝐥𝐢 𝐀𝐩𝐩𝐫𝐨𝐯𝐞𝐬! 💌
— Royal Challengers Bengaluru (@RCBTweets) February 13, 2025
“Myself and the other team members will be right behind you, Rajat”: Virat Kohli
“The way you have grown in this franchise and the way you have performed, you’ve made a place in the hearts of all RCB fans. This is very well deserved.”… pic.twitter.com/dgjDLm8ZCN
ಆರ್‌ಸಿಬಿಗೆ ನಾಯಕರಾಗಲು ನೀವು ಅರ್ಹರು
"ಆರ್‌ಸಿಬಿಗೆ ನಾಯಕರಾಗಲು ರಜತ್ ಪಾಟಿದಾರ್ ಅರ್ಹರಾಗಿದ್ದಾರೆ. ನಾಯಕನಾಗಿ ಬೆಳೆಯಲು ನಿಮಗೆ ನಾನು ಹಾಗೂ ನಮ್ಮ ತಂಡದ ಎಲ್ಲಾ ಆಟಗಾರರು ಬೆಂಬಲ ಹಾಗೂ ಪ್ರೋತ್ಸಾಹವನ್ನು ನೀಡಲಿದ್ದೇವೆಂದು ಹೇಳಲು ನಾನು ಬಯಸುತ್ತೇನೆ. ಹೌದು! ಇದು ದೊಡ್ಡ ಜವಾಬ್ದಾರಿಯಾಗಿದೆ. ನಾನು ಈ ಕೆಲಸವನ್ನು ಮಾಡಿದ್ದೇನೆ ಹಾಗೂ ಫಾಫ್ ಕೂಡ ಕೆಲ ವರ್ಷಗಳ ಕಾಲ ಈ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಇದೀಗ ಈ ಜವಾಬ್ದಾರಿಯನ್ನು ಈ ಹುಡುಗ ನಿರ್ವಹಿಸಲಿದ್ದಾರೆ.ಈ ಸ್ಥಾನವನ್ನು ನೀವೇ ಸ್ವತಃ ಗಳಿಸಿದ್ದೀರಿ ಹಾಗೂ ನೀವು ಇನ್ನಷ್ಟು ಎತ್ತರಕ್ಕೆ ಬೆಳೆಯಲಿದ್ದೀರಿ ಎಂಬ ಬಗ್ಗೆ ನನಗ ಖಚಿತವಿದೆ," ಎಂದು ಆರ್‌ಸಿಬಿ ಮಾಜಿ ನಾಯಕ ಹೇಳಿದ್ದಾರೆ.
IPL 2025: ವಿರಾಟ್ ಕೊಹ್ಲಿ ನಾಯಕನಾಗದೇ ಇರಲು ಕಾರಣ ತಿಳಿಸಿದ ಆರ್‌ಸಿಬಿ ಡೈರೆಕ್ಟರ್!
ಪಾಟಿದಾರ್‌ಗೆ ಅಭಿಮಾನಿಗಳು ಬೆಂಬಲಿಸಬೇಕು
"ಒಬ್ಬ ಆಟಗಾರನಾಗಿ ರಜತ್ ಪಾಟಿದಾರ್ ಅವರನ್ನು ಕಳೆದ ಹಲವು ವರ್ಷಗಳಿಂದ ನೋಡಿದ್ದೇನೆ. ಅವರು ಭಾರತ ತಂಡದ ಪರ ಆಡಲು ಕೂಡ ಅವಕಾಶ ಪಡೆದಿದ್ದಾರೆ. ಕಳೆದ ಕೆಲ ವರ್ಷಗಳಿಂದ ಅವರ ಪ್ರದರ್ಶನದಲ್ಲಿ ಸಾಕಷ್ಟು ಬೆಳವಣಿಗೆಯಾಗಿದೆ. ತಮ್ಮ ರಾಜ್ಯ ತಂಡವನ್ನು ಮುನ್ನಡೆಸಿದ ಹಾದಿ ಹಾಗೂ ತಾವು ತೆಗೆದುಕೊಂಡಿದ್ದ ಜವಾಬ್ದಾರಿಯ ಹಾಗೂ ಅದ್ಭುತ ಫ್ರಾಂಚೈಸಿಯನ್ನು ಮುನ್ನಡೆಸುವ ಸಾಮರ್ಥ್ಯವಿದೆ ಎಂಬುದನ್ನು ಅವರು ಪ್ರತಿಯೊಬ್ಬರಿಗೂ ತೋರಿಸಿದ್ದಾರೆ," ಎಂದು ಕಿಂಗ್ ಕೊಹ್ಲಿ ತಿಳಿಸಿದ್ದಾರೆ.
"ನಾನು ಅವರಿಗೆ ಮತ್ತೊಮ್ಮೆ ಅಭಿನಂದನೆಗಳನ್ನು ತಿಳಿಸುತ್ತೇನೆ ಹಾಗೂ ಆರ್‌ಸಿಬಿ ತಂಡವನ್ನು ಯಶಸ್ಸಿನತ್ತ ಮುನ್ನಡೆಸಲು ಅಭಿಮಾನಿಗಳು ಸದಾ ಅವರಿಗೆ ಬೆಂಬಲವಾಗಿ ನಿಲ್ಲಬೇಕು. ಫ್ರಾಂಚೈಸಿಗೆ ಯಾವುದು ಒಳ್ಳೆಯದು ಎಂಬುದು ಅವರಿಗೆ ಗೊತ್ತಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಅವರಿಗೆ ಬೆಂಬಲಿಸಬೇಕು," ಎಂದು ವಿರಾಟ್ ಕೊಹ್ಲಿ ಆಗ್ರಹಿಸಿದ್ದಾರೆ.