ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nanjanagud Pradyumna Column: ಮೈಸೂರು ಮೈಲಾರಿ ದೋಸೆ

1900ರ ಪ್ರಾರಂಭದಲ್ಲಿ ಕರಾವಳಿಯ ಹೊಟೆಲ್ ಉದ್ಯಮಿಗಳ ಮೂಲಕ ಸಾಂಸ್ಕೃತಿಕ ನಗರಿ ಮೈಸೂರಿಗೆ ಹೋಟೆಲ್ ಉದ್ಯಮ ಪ್ರವೇಶ ಪಡೆಯಿತಂತೆ. ಜಗತ್ತಿನಾದ್ಯಂತ ದೊಸೆಪ್ರಿಯರಿದ್ದರೂ ನಮ್ಮ ಮೈಸೂರಿ ನಲ್ಲಿನ ‘ಮೈಲಾರಿ’ ದೋಸೆಗೆ ತನ್ನದೇ ಆದ ಫೇನ್ ಬೇಸ್ ಇದೆ.

ಮೈಸೂರು ಮೈಲಾರಿ ದೋಸೆ

Profile Ashok Nayak Feb 15, 2025 2:33 PM

ನಂಜನಗೂಡು ಪ್ರದ್ಯಮ್ನ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೈಲಾರಿ ದೋಸೆ ಹೆಸರುವಾಸಿ. ಮೈಲಾರಿ ಹೊಟೆಲ್‌ನ ಸಾಗು ದೋಸೆ ವಿಶಿಷ್ಟ ಸ್ವಾದವನ್ನು ಹೊಂದಿದ್ದು, ಜನಪ್ರಿಯತೆ ಗಳಿಸಿದೆ.

ಪಂಚತಾರಾ ಹೋಟೆಲ್‌ನಿಂದ ರಸ್ತೆ ಬದಿಯ ಗುಡಿಸಲು ಕ್ಯಾಂಟಿನ್‌ವರೆಗು ಶತಮಾನ ಮೀರಿ ತನ್ನ ಅಸ್ತಿತ್ವವನ್ನು ಭದ್ರವಾಗಿ ಉಳಿಸಿಕೊಂಡಿರುವ ಸರ್ವಜನಪ್ರೀಯ ಖಾದ್ಯ ದೋಸೆ. ದೋಸೆ ಎಂದಾ ಕ್ಷಣ ಯಾರಿಗೆ ತಾನೆ ಬಾಯಲ್ಲಿ ನೀರೂರುವುದಿಲ್ಲ! ಅದೇನೇನೋ ತಿನ್ನಬೇಕೆಂದು ಹೋಟೆಲ್‌ಗೆ ಹೋಗುವ ಮಂದಿ ಅಲ್ಲಿಗೆ ಹೋದವರೇ ಮನಸ್ಸು ಬದಲಿಸಿ ಮೊದಲು ಆರ್ಡರ್ ಮಾಡುವುದು ದೋಸೆಯನ್ನೆ. ಅದಕ್ಕೆ ಮಕ್ಕಳಾಗಲಿ ಮುದುಕರಾಗಲಿ ಹೊರತಲ್ಲ. ಬೆಂಗಳೂರು-ಮೈಸೂರು ಸೇರಿ ದಂತೆ, ನಗರಗ ಪಟ್ಟಣ ಹಳ್ಳಿ ಎನ್ನದೆ ಜನರ ನಾಲಿಗೆ ತಣಿಸುವಲ್ಲಿ ದೋಸೆಗೆ ಪ್ರಥಮ ಸ್ಥಾನ. ದೋಸೆ ಜಗತ್ತಿಗೆ ಪರಿಚಿತವಾದದ್ದು ನಮ್ಮ ನಾಡಿನ ಕರಾವಳಿ ಪ್ರದೇಶದಿಂದ ಎಂಬುದು ಹೆಮ್ಮೆಯ ಸಂಗತಿ.

1900ರ ಪ್ರಾರಂಭದಲ್ಲಿ ಕರಾವಳಿಯ ಹೊಟೆಲ್ ಉದ್ಯಮಿಗಳ ಮೂಲಕ ಸಾಂಸ್ಕೃತಿಕ ನಗರಿ ಮೈಸೂರಿಗೆ ಹೋಟೆಲ್ ಉದ್ಯಮ ಪ್ರವೇಶ ಪಡೆಯಿತಂತೆ. ಜಗತ್ತಿನಾದ್ಯಂತ ದೊಸೆಪ್ರಿಯರಿದ್ದರೂ ನಮ್ಮ ಮೈಸೂರಿನಲ್ಲಿನ ‘ಮೈಲಾರಿ’ ದೋಸೆಗೆ ತನ್ನದೇ ಆದ ಫೇನ್ ಬೇಸ್ ಇದೆ.

ವಿಶ್ವದೆಲ್ಲೆಡೆ ಮಸಾಲೆ ದೋಸೆ ಸಿಗಬಹುದು, ಆದರೆ ಮೈಲಾರಿ ಮಸಾಲೆ ದೋಸೆ ತಿನ್ನಬೇಕೆಂದರೆ ನೀವು ಮೈಸೂರಿಗೇ ಬಂದು ಇದರ ರುಚಿ ಸವಿಯಬೇಕು. ನಗರದ ಪ್ರಸಿದ್ಧ ಬಾಂಬೆ ಇಂದ್ರಭವನ್, ದಾಸಪ್ರಕಾಶ್, ಸಿದ್ದಾರ್ಥ, ರಮ್ಯ, ಜಿಟಿಆರ್ ಮುಂತಾದ ದಶಕಗಳ ಇತಿಹಾಸ ಹೊಂದಿರುವ ಹೋಟೆಲ್‌ಗಳ ನಡುವೆ ಮೈಲಾರಿ ಹೋಟೆಲ್ ತನ್ನದೇ ಆದ ಜನಪ್ರಿಯತೆ ಉಳಿಸಿಕೊಂಡು ಬಂದಿದೆ.

ಸಾಗು ದೋಸೆ : ಬೇರೆಲ್ಲಾ ದೋಸೆಗಳಿಗೆ ಹೋಲಿಸಿದರೆ ಮೈಲಾರಿ ‘ಸಾಗು ದೋಸೆ’ ವಿಶಿಷ್ಟ. ಮೈಲಾರಿ ಮಸಾಲೆ ದೋಸೆ ಎಂದರೆ ದೋಸೆಯ ಹೊಟ್ಟೆಯ ಒಳಗೆ ಸಾಗು ಮಾತ್ರವೇ. ಮಸಾಲೆ ದೋಸೆಗೆ ಜೋಡಿಯಾದ ಈರುಳ್ಳಿ ಆಲುಗಡ್ಡೆ ಪಲ್ಯಕ್ಕೆ ಇಲ್ಲಿ ಪಾಶಸ್ತ್ಯವೇ ಇಲ್ಲ. ದೋಸೆಯ ಮೇಲ್ಭಾಗ ಕೆಂಪು ಗರಿಗರಿ, ಒಳಗೆ ಅಷ್ಟೇ ಮೃದು. ಬಿಸಿಬಿಸಿ ದೋಸೆಯ ಮೇಲೆ ಹೆಬ್ಬೆರಳು ಗಾತ್ರದ ಬೆಣ್ಣೆ ಇಟ್ಟು, ಬಾಳೆಎಲೆ ಇಲ್ಲವೆ ಮುತ್ತುಗದ ಎಲೆಯ ಮೇಲೆ ಹಾಕಿದ ದೋಸೆಯನ್ನು ಸಾಗು- ಕಾಯಿ ಚಟ್ನಿಯೊಂದಿಗೆ ಸರ್ವ್ ಮಾಡುತ್ತಾರೆ.

ಬಾಯಿಗೆ ಇಟ್ಟರೆ ಸಾಕು ದೋಸೆ ಕರಗಿ ಹೊಟ್ಟೆ ಸೇರುವುದೇ ಗೊತ್ತಾಗುವುದಿಲ್ಲ. ಬೆಣ್ಣೆ ಹಾಕಿದ ಬಿಸಿಬಿಸಿ ದೋಸೆ, ಬಾಳೆಎಲೆ ಮೇಲೆ ಬೀಳುವುದೇ ತಡ ಎಲೆ ಮತ್ತು ದೋಸೆ ಮಿಶ್ರಿತ ಘಮ ಮನ ಸೆಳೆಯುತ್ತದೆ. ಇನ್ನು ಮುಂದಕ್ಕೆ ದೋಸೆ ಮೇಲೆ ದೋಸೆ ಅಷ್ಟೆ. ನಂತರ ಬಿಲ್ ನೋಡಿದಾಗಲೇ ನಾವು ತಿಂದ ದೋಸೆಯ ಲೆಕ್ಕ ಸಿಗುವುದು!

ನಗರದಲ್ಲಿ ದಶಕಗಳ ಇತಿಹಾಸ ಹೊಂದಿರುವ ಕೆಲವು ಹೋಟೆಲ್ ಗಳಲ್ಲಿಈ ಮೈಲಾರಿ ಹೋಟೆಲ್ ಕೂಡ ಒಂದು. ಸಂಸ್ಕೃತ ಪಾಠಶಾಲೆಯ ಸಿಗ್ನಲ್‌ನಿಂದ ಅಗ್ರಹಾರ ವೃತ್ತಕ್ಕೆ ಹೋಗುವ ರಸ್ತೆಯ ಎಡಬದಿಯಲ್ಲಿ ಮೈಲಾರಿ ಹೋಟೆಲ್ ಕಾಣಸಿಗುತ್ತದೆ. ಒಟ್ಟಾರೆ ಮೈಲಾರಿ ಹೋಟೆಲ್‌ಗೆ 7-8 ದಶಕ ಗಳ ಇತಿಹಾಸವೇ ಇದೆ. ಅಲ್ಲಿಂದ ಇಲ್ಲಿಯವರೆಗೆ ದೇಶ-ವಿದೇಶದ ಸಾವಿರಾರು ದೋಸೆ ಪ್ರಿಯರಿಗೆ ರುಚಿರುಚಿಯಾದ ದೋಸೆ ಉಣಬಡಿಸಿ ಅವರ ನಾಲಿಗೆಗೆ ಮಧುರ ಅನುಭವ ನೀಡಿದ ಕೀರ್ತಿ ಮೈಲಾರಿ ದೋಸೆಯದ್ದು.

ಮೈಲಾರಿ ಇತಿಹಾಸ: ಮೈಲಾರಿ ಹೋಟೆಲ್ ಪ್ರಾರಂಭವಾಗಿ ಸುಮಾರು 70ವರ್ಷಗಳ ಮೇಲೆ ಆಗಿದೆ. ಮೈಸೂರು -ನಂಜನಗೂಡು ರಸ್ತೆ ಮರ್ಗ ಮಧ್ಯೆ ಸಿಗುವ ಕಡಕೋಳ ಎಂಬ ಊರಿನವರಾದ ಗೌರಮ್ಮ ಎಂಬ ಮಹಿಳೆ ಮೈಲಾರಿ ಹೋಟೆಲ್ ಪ್ರಾರಂಭಕ್ಕೆ ಕಾರಣವಾದವರು. ಪ್ರಾರಂಭದಲ್ಲಿ ಗೌರಮ್ಮ ಮೈಸೂರಿನ ಅಗ್ರಹಾರದ ಬಸವೇಶ್ವರ ರಸ್ತೆಯಲ್ಲಿ ಕುರುಕಲು ತಿಂಡಿ ವ್ಯಾಪಾರ ಪ್ರಾರಂಭಿಸಿ ಅಲ್ಪ ಸಮಯದಲ್ಲೇ ಜನ ಮನ್ನಣೆ ಗಳಿಸಿದ್ದರು. ಅವರ ಕಾಲಾನಂತರ ಆಕೆಯ ಮಗ ‘ಮೈಲಾರ ಸ್ವಾಮಿ’ ನಜರ್‌ಬಾದ್‌ನಲ್ಲಿ ಆರಂಭಿಸಿದ್ದೇ ಈ ಮೈಲಾರಿ ಹೋಟೆಲ್.

ತಮ್ಮ ಪತ್ನಿ ಸುಂದ್ರಮ್ಮ ಹಾಗೂ ಸಹೋದರರ ಸಹಾಯದೊಂದಿಗೆ ಕೇವಲ ಹತ್ತಿಪ್ಪತ್ತು ಜನ ಕೂರುವ ಒಂದು ಸಣ್ಣ ಮಳಿಗೆಯಲ್ಲಿ ಸಾಗು ಮಸಾಲೆ ದೋಸೆ, ಇಡ್ಲಿ-ಚಟ್ನಿಯೊಂದಿಗೆ ಕಾಯಕ ಪ್ರಾಂಭಿಸಿದರು. ಶುಚಿ ಹಾಗೂ ರುಚಿ ಎರಡರಲ್ಲೂ ಜನರ ಮೆಚ್ಚುಗೆ ಗಳಿಸಿದರು. ಅಂದು ದೋಸೆ ಯೊಂದಕ್ಕೆ ಆಣೆಯ ಲೆಕ್ಕ. ನಂತರ ಎರಡು-ಮೂರು ರುಪಾಯಿ. ಈಗ ಮೈಲಾರಿ ಮಸಾಲ ದೋಸೆ ಯೊಂದಕ್ಕೆ ಐವತ್ತು ರುಪಾಯಿ. ಸದ್ಯ ಮೈಲಾರಪ್ಪ ಅವರ ಪುತ್ರ ಲೋಕೇಶ್ ಅವರು ತಮ್ಮ ತಂದೆ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಕಾಲೇಜು ವಿದ್ಯಾಭ್ಯಾಸ ನಂತರ ತಂದೆ ಯೊಂದಿಗೆ ಹೋಟೆಲ್ ವೃತ್ತಿಯಲ್ಲಿ ತೊಡಗಿಸಿಕೊಂಡ ಲೋಕೇಶ್ ಇಂದಿಗೂ ಅವರೇ, ದೋಸೆ ಇಡ್ಲಿ ಹಾಗೂ ಚಟ್ನಿ ಸಿದ್ದಪಡಿಸುವ ಮುಖ್ಯ ಬಾಣಸಿಗ. ಹಿಟ್ಟಿನ ಮಿಶ್ರಣದ ಅಳತೆ ಅಂದಾಜು ಅವರದ್ದೆ. ಅಗ್ರಹಾರದ ಮೈಲಾರಿ ಹೋಟೆಲ್ ಅಲ್ಲದೆ, ತಾನು ಜನ್ಮಪಡೆದ ನಜರ್‌ಬಾದ್‌ನಲ್ಲೂ ಮತ್ತೆರಡು ಮೈಲಾರಿ ಹೋಟೆಲ್ ಅಸ್ಥಿತ್ವದಲ್ಲಿದೆ. ಮೈಲಾರಿ ಕುಟುಂದ ಸೋದರ ಸಂಬಂಧಿಗಳು ಈ ಹೋಟೆಲ್ ನಡೆಸಿಕೊಂಡು ಬರುತ್ತಿದ್ದಾರೆ.

ಸೌದೆ ಒಲೆ ದೋಸೆ ಎಲ್ಲರಗೂ ಆಸೆ: ಬಹುಪಾಲು ಎಲ್ಲಾ ಹೋಟೆಲ್‌ಗಳಲ್ಲಿ ಆಧುನಿಕ ಗ್ಯಾಸ್ ಬಳಸಿ ಅಡುಗೆ ತಯಾರಿಸುವುದು ಅನಿವಾರ್ಯ. ಆದರೆ ಮೈಲಾರ ಸ್ವಾಮಿ ಅವರ ಕಾಲದಿಂದ ಇಂದಿನವರಿವಿಗೂ ಮೈಲಾರಿ ಹೋಟೆಲ್‌ನಲ್ಲಿ ಸೌದೆ ಒಲೆಯಲ್ಲೇ ದೋಸೆ ಮಾಡುವದನ್ನು ಮುಂದು ವರೆಸಿಕೊಂಡು ಬಂದಿದ್ದಾರೆ. ಮಾಲೀಕ ಲೋಕೇಶ್ ಹೇಳುವಂತೆ ‘ಸೌದೆ ಒಲೆಯಲ್ಲಿ ಮಾಡುವ ದೋಸೆಯ ರುಚಿಯೇ ಬೇರೆ. ಅದನ್ನು ಬಲ್ಲವರಿಗೆ ಮಾತ್ರ ಗೊತ್ತು. ನಮ್ಮ ಹೋಟೆಲ್‌ಗೆ ಜನ ಹುಡುಕಿಕೊಂಡು ಬರುವುದೇ ಆ ರುಚಿಯಿಂದ. ಹೀಗಾಗಿ ಇಂದಿಗೂ ನಾವು ಸೌದೆ ಒಲೆಯಲ್ಲೇ ದೋಸೆ ಮಾಡುವುದನ್ನು ಮುಂದುವರೆಸಿಕೊಂಡು ಬಂದಿದ್ದೇವೆ’ ಎನ್ನುತ್ತಾರೆ.

ಮೈಸೂರಿನ ‘ಅಗ್ರಹಾರ ಮೈಲಾರಿ ಹೋಟೆಲ್’ಗೆ ಚಿತ್ರನಟರಾದ ಡಾ.ವಿಷ್ಣುವರ್ಧನ್, ಡಾ.ಅಂಬ ರೀಷ್, ಪದ್ಮವಿಭೂಷಣ ಅನಂತ್‌ನಾಗ್, ತಲೈವರ್ ರಜನಿಕಾಂತ್ ಅವರಿಂದ ಹಿಡಿದು ಈಗಿನ ದರ್ಶನ್, ಡಾ.ಪುನಿತ್‌ರಾಜ್‌ಕುಮಾರ್, ಡಾಲಿ ಧನಂಜಯ್ ಮುಂತಾದವರೆಲ್ಲರೂ ಈ ಸಾಮಾನ್ಯ ಹೋಟೆಲ್‌ಗೆ ಬಂದು ಹಳೇ ಕಾಲದ ಮೇಜು-ಕುರ್ಚಿಯ ಮೇಲೆ ಕುಳಿತು ದೋಸೆ ರುಚಿ ಸವಿದಿದ್ದಾರೆ. ರಾಜಕೀಯ ನಾಯಕರಾದ ಪ್ರಿಯಾಂಕ ವಾಡ್ರಾ, ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್‌ರೊಂದಿಗೆ ಬಂದು ದೋಸೆ ತಿಂದದ್ದೂ ಅಲ್ಲದೇ ಪ್ರಿಯಾಂಕ ವಾಡ್ರಾ ಅವರು ಕಾದ ಹೆಂಚಿನ ಮೇಲೆ ದೋಸೆ ಹೋಯ್ದು ಸಂಭ್ರಮಪಟ್ಟಿದ್ದರು. ರಾಜ್ಯದ ಮುಖ್ಯಮಂತ್ರಿ, ಮೈಸೂರಿನವರೇ ಆದ ಸಿದ್ದರಾಮಯ್ಯ ಅವರಿಗಂತೂ ಮೈಲಾರಿ ದೋಸೆ ಅಂದರೆ ಬಲು ಆಸೆ. ಮೈಸೂರಿಗೆ ಭೇಟಿ ನೀಡಿದಾಗ, ಸಮಯ ಸಿಕ್ಕಾಗಲೆಲ್ಲಾ ಮೈಲಾರಿ ದೋಸೆ....

ರಾಜಕುಮಾರ್‌ಗೆ ದೋಸೆ ಪಾರ್ಸಲ್

ವರನಟ ಡಾ.ರಾಜಕುಮಾರ್ ಅವರಿಗೂ ಮೈಲಾರಿ ದೋಸೆ ಎಂದರೆ ಅಚ್ಚು-ಮೆಚ್ಚಂತೆ. ಹಿಂದೆ ಚಿತ್ರೀ ಕರಣಕ್ಕಾಗಿ ರಾಜ್‌ಕುಮಾರ್ ಮೈಸೂರಿಗೆ ಆಗಮಿಸಿದಾಗಲೆಲ್ಲಾ ಹೈವೇ ಸರ್ಕಲ್‌ನ ಬಳಿ ಇದ್ದ ಸುಜಾತ ಹೋಟೆಲ್ ನಲ್ಲಿ ಉಳಿದು ಕೊಳ್ಳುತ್ತಿದ್ದರಂತೆ. ಆಗ ಅವರಿಗೆ ಬೆಳಗಿನ ಉಪಹಾರ ಮೈಲಾರಿ ಹೋಟೆಲ್‌ನಿಂದಲೇ ಪಾರ್ಸೆಲ್ ಹೋಗುತ್ತಿತ್ತು ಎನ್ನುತ್ತಾರೆ ಲೋಕೇಶ್.

*

ಎಲೆ ಮೇಲೆ ಬಡಿಸಿದ ತಿಂಡಿಯನ್ನು ಸಂಪೂರ್ಣವಾಗಿ ತಿಂದು ಮುಗಿಸುವ ಹಾಗೆ ತಿಂಡಿಯನ್ನು ಶುಚಿ-ರುಚಿಯಿಂದ ತಯಾರಿಸಬೇಕು ಎಂದು ನಮ್ಮ ತಂದೆ ಸದಾ ಹೇಳುತ್ತಿದ್ದರು. ಇಂದಿಗೂ ಅದನ್ನು ಹಾಗೇ ಪಾಲಿಸಿಕೊಂಡು ಬಂದಿದ್ದೇವೆ. ಈ ವೃತ್ತಿಯಲ್ಲಿ ಯಶಸ್ಸು ಕಾಣುತ್ತಿರುವುದು ನಮ್ಮ ತಂದೆ ಹೇಳಿದ ಅದೊಂದೇ ಮಾತಿನಿಂದ.

- ಲೋಕೇಶ್ (ಮೈಲಾರಿ ಲೋಕೇಶ್ ), ಅಗ್ರಹಾರ ಮೈಲಾರಿ ಹೋಟೆಲ್ ಮಾಲೀಕರು