Budget Session: ಜ. 31ರಿಂದ ಸಂಸತ್ ಅಧಿವೇಶನ
Budget Session: ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ಭಾಗವು ಜ. 31ರಿಂದ ಫೆ. 13ರವರೆಗೆ ನಡೆಯುವ ಸಾಧ್ಯತೆಯಿದೆ. ಜ. 31ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರನ್ನು ಉದ್ದೇಶಿಸಿ ಮಾತನಾಡುವ ಮೂಲಕ ಅಧಿವೇಶನ ಆರಂಭವಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆ. 1ರಂದು ತಮ್ಮ 8ನೇ ಬಜೆಟ್ ಮಂಡಿಸಲಿದ್ದಾರೆ.
ನವದೆಹಲಿ, ಜ. 17, 2025: ಪ್ರಸ್ತುತ ಸಾಲಿನ ಕೇಂದ್ರ ಬಜೆಟ್ (Budget 2025) ಮಂಡನೆಗೆ ದಿನಗಣನೆ ಆರಂಭವಾಗಿದೆ. ಸಂಸತ್ತಿನ ಬಜೆಟ್ ಅಧಿವೇಶನ (Budget Session)ದ ಮೊದಲ ಭಾಗವು ಜ. 31ರಿಂದ ಫೆ. 13ರವರೆಗೆ ನಡೆಯುವ ಸಾಧ್ಯತೆಯಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಫೆ. 1ರಂದು ತಮ್ಮ 8ನೇ ಬಜೆಟ್ ಮಂಡಿಸಲಿದ್ದಾರೆ.
ಜ. 31ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರನ್ನು ಉದ್ದೇಶಿಸಿ ಮಾತನಾಡುವ ಮೂಲಕ ಅಧಿವೇಶನ ಆರಂಭವಾಗಲಿದೆ. ಇನ್ನು ಬಜೆಟ್ ಅಧಿವೇಶನದ 2ನೇ ಭಾಗ ಮಾರ್ಚ್ 10ರಿಂದ ಏಪ್ರಿಲ್ 4ರಂದು ನಡೆಯಲಿದೆ. ಅಧಿವೇಶನದ ಮೊದಲ ಭಾಗದಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಉಭಯ ಸದನಗಳಲ್ಲಿ ಚರ್ಚೆ ನಡೆಯಲಿದೆ.
ಫೆ. 1ರ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಆಗಲಿದೆ. ಮೊದಲೇ ಹೇಳಿದಂತೆ ಇದು ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ 8ನೇ ಬಜೆಟ್ ಇದಾಗಲಿದ್ದು, ಇದರಲ್ಲಿ 6 ಪೂರ್ಣ ಮತ್ತು 2 ಮಧ್ಯಂತರ ಬಜೆಟ್‌ಗಳು ಸೇರಿವೆ. ಸರ್ಕಾರದ ಅಧಿಕೃತ ವಾಹಿನಿಗಳಾದ ದೂರದರ್ಶನ ಮತ್ತು ಸಂಸದ್ ಟಿವಿಗಳು ಬಜೆಟ್ ಭಾಷಣದ ನೇರ ಪ್ರಸಾರ ಬಿತ್ತರಿಸಲಿವೆ. ಅಲ್ಲದೆ ಸಂಸತ್ತಿನ ಸಂಸದ್ ಟಿವಿ ಮತ್ತು ದೂರದರ್ಶನ ಯೂಟ್ಯೂಬ್ ಪ್ಲಾಟ್‌ಫಾರ್ಮ್‌ಗಳಲ್ಲೂ ವೀಕ್ಷಿಸಬಹುದು.
ಪ್ರಮುಖ ಅಂಶಗಳೇನು?
ಈ ಬಾರಿಯ ಬಜೆಟ್ ದೀರ್ಘಾವಧಿಯ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುತ್ತದೆ ಎಂದು ಹೇಳಲಾಗಿದೆ.
ಆದಾಯ ತೆರಿಗೆ ವಿನಾಯಿತಿ: ವಾರ್ಷಿಕವಾಗಿ 15 ಲಕ್ಷ ರೂ.ವರೆಗೆ ಗಳಿಸುವ ವ್ಯಕ್ತಿಗಳಿಗೆ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಬಹುದು ಎಂದು ಅಂದಾಜಿಸಲಾಗಿದೆ. ಈ ಕ್ರಮವು ಮಧ್ಯಮ ವರ್ಗದವರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಇಂಧನದ ಮೇಲಿನ ಅಬಕಾರಿ ಸುಂಕ: ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ, ಹೆಚ್ಚಿನ ಅಬಕಾರಿ ಸುಂಕದಿಂದಾಗಿ ಇಂಧನ ಬೆಲೆ ಕಡಿಮೆಯಾಗಿಲ್ಲ. ಈ ಸುಂಕಗಳನ್ನು ಕಡಿಮೆ ಮಾಡುವುದರಿಂದ ಹಣದುಬ್ಬರದ ಒತ್ತಡವನ್ನು ನಿವಾರಿಸಬಹುದು. ಇದರಿಂದ ಸಾರ್ವಜನಿಕರ ಮೇಲಿನ ಆರ್ಥಿಕ ಹೊರೆಯನ್ನು ಗಣನೀಯವಾಗಿ ತಗ್ಗಿಸಬಹುದು ಎನ್ನಲಾಗಿದ್ದು, ಹೀಗಾಗಿ ಈ ಬಜೆಟ್‌ನಲ್ಲಿ ಅಬಕಾರಿ ಸುಂಕ ಇಳಿಕೆ ನಿರೀಕ್ಷಿಸಬಹುದು.
ಉದ್ಯೋಗ ಮತ್ತಿತರ ವಲಯಗಳಿಗೆ ಬೆಂಬಲ: ಈ ಬಾರಿಯ ಬಜೆಟ್‌ನಲ್ಲಿ ನಿರುದ್ಯೋಗ ಸಮಸ್ಯೆಗೆ ಪರಿಹಾರವಾಗುವಂತಹ ಕೆಲ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ. ಗಾರ್ಮೆಂಟ್ಸ್, ಪಾದರಕ್ಷೆಗಳು, ಪ್ರವಾಸೋದ್ಯಮ ಮತ್ತು ಎಂಎಸ್‌ಎಂಇಗಳಂತಹ ಉದ್ಯೋಗ-ಭಾರೀ ಕೈಗಾರಿಕೆಗಳ ಮೇಲೆ ಬಜೆಟ್ ಗಮನ ಕೇಂದ್ರೀಕರಿಸಬಹುದು. ಈ ವಲಯಗಳಲ್ಲಿ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ಸರ್ಕಾರವು ಉದ್ಯೋಗಗಳನ್ನು ಸೃಷ್ಟಿಸಬಹುದು. ದೇಶೀಯ ಉತ್ಪಾದನೆಯನ್ನು ಹೆಚ್ಚಿಸಬಹುದು. ಇದು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತವನ್ನು ಪ್ರಬಲಗೊಳಿಸಲು ಸಹಕಾರಿಯಾಗಲಿದೆ.
ಆರೋಗ್ಯ ಮತ್ತು ಶಿಕ್ಷಣ: ಈ ಬಾರಿಯ ಬಜೆಟ್‌ನಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕೇತ್ರಕ್ಕೆ ಹೆಚ್ಚಿನ ಅನುದಾನ ಸಿಗುವ ಸಾಧ್ಯತೆಗಳಿವೆ. ಡಿಜಿಟಲ್ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ಮೇಲೆ ಯೋಜನೆಯನ್ನು ಜಾರಿಗೊಳಿಸುವ ನಿರೀಕ್ಷೆ ಇದೆ. ದೇಶದ ಹಲವು ಕಡೆ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವ ಯೋಜನೆಯನ್ನು ಕೇಂದ್ರ ಹಾಕಿಕೊಂಡಿದೆ ಎಂದು ಹೇಳಲಾಗಿದೆ.
ಈ ಸುದ್ದಿಯನ್ನೂ ಓದಿ: Budget 2025: 8ನೇ ಬಾರಿಗೆ ಬಜೆಟ್ ಮಂಡಿಸಲು ನಿರ್ಮಲಾ ಸೀತಾರಾಮನ್ ಸಜ್ಜು; ಈ ಬಾರಿಯ ಪ್ರಮುಖ ಅಂಶಗಳೇನು?
ಸ್ಟಾರ್ಟ್ ಅಪ್‌ಗಳು ಮತ್ತು ಎಂಎಸ್‌ಎಂಇಗಳಲ್ಲಿ ಸುಧಾರಣೆ: ಜಾಗತಿಕ ಮಾರುಕಟ್ಟೆಯಲ್ಲಿ ಚೀನಾದ ಪ್ರಾಬಲ್ಯ ಭಾರತೀಯ ಕೈಗಾರಿಕೆಗಳಿಗೆ ಹಾನಿ ಮಾಡಿದೆ. ದೇಶೀಯ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಇನ್ನಷ್ಟು ಉತ್ತೇಜನ ದೊರಕಬಹುದು. ಆಮದನ್ನು ಕಡೆಮೆ ಮಾಡಿ ರಫ್ತು ಹೆಚ್ಚು ಮಾಡಲು ಕೆಲ ನಿರ್ಧಾರಗಳನ್ನು ಕೈಗೊಳ್ಳಬಹುದು ಎಂದು ಹೇಳಲಾಗಿದೆ.