ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Stampede: ಬೆಂಗಳೂರು ಕಾಲ್ತುಳಿತ: ಐಪಿಎಸ್‌ ವಿಕಾಸ್‌ ಕುಮಾರ್‌ ಅಮಾನತು ರದ್ದುಗೊಳಿಸಿದ ಸಿಎಟಿ

Bengaluru Stampede: ಅಮಾನತು ಪ್ರಶ್ನಿಸಿ ವಿಕಾಸ್​ ಕುಮಾರ್ ಅವರು ಸಿಎಟಿ ಮೊರೆ ಹೋಗಿದ್ದರು. ಐಪಿಎಸ್​ ಅಧಿಕಾರಿ ವಿಕಾಸ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ, ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿ ವಿವರಣೆ ಕೋರಿತ್ತು. ಇದೀಗ, ವಿಕಾಸ್ ಕುಮಾರ್ ಅವರ ಅಮಾನತು ಆದೇಶ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಸಿಎಟಿ ನಿರ್ದೇಶನ ನೀಡಿದೆ.

ಕಾಲ್ತುಳಿತ: ಐಪಿಎಸ್‌ ವಿಕಾಸ್‌ ಕುಮಾರ್‌ ಅಮಾನತು ರದ್ದುಗೊಳಿಸಿದ ಸಿಎಟಿ

ಹರೀಶ್‌ ಕೇರ ಹರೀಶ್‌ ಕೇರ Jul 1, 2025 12:39 PM

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಐಪಿಎಲ್ (IPL) ವಿಜಯೋತ್ಸವ ಸಂದರ್ಭ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ್ದ ಕಾಲ್ತುಳಿತ (Bengaluru Stampede, Chinnaswamy Stampede) ಸಂಬಂಧಿಸಿ ಐಪಿಎಸ್‌ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದ ರಾಜ್ಯ ಸರ್ಕಾರಕ್ಕೆ ಈಗ ಮುಖಭಂಗವಾಗಿದೆ. ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅಮಾನತು ನಿರ್ಧಾರವನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (CAT) ಮಂಗಳವಾರ ರದ್ದುಪಡಿಸಿ ಆದೇಶಿಸಿದೆ.

ನ್ಯಾಯಮೂರ್ತಿ ಬಿಕೆ ಶ್ರೀವಾತ್ಸವ ಮತ್ತು ಸಂತೋಷ್ ಮೆಹ್ರಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಹಿಂದಿನ ಎಲ್ಲಾ ಭತ್ಯೆ, ಸೌಲಭ್ಯ ಒದಗಿಸಲು ನಿರ್ದೇಶನ ನೀಡಿದೆ. ವಿಕಾಸ್ ಕುಮಾರ್ ಪರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ವಾದಿಸಿದ್ದರು. ಇದೀಗ, ವಿಕಾಸ್ ಕುಮಾರ್ ಅವರ ಅಮಾನತು ಆದೇಶ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಸಿಎಟಿ ನಿರ್ದೇಶನ ನೀಡಿರುವುದರಿಂದ, ಪೊಲೀಸ್ ಆಯುಕ್ತ ಬಿ ದಯಾನಂದ ಹಾಗೂ ಇತರರ ಅಮಾನತು ಆದೇಶ ಏನಾಗಲಿದೆ ಎಂಬ ಕುತೂಹಲ ಮೂಡಿದೆ.

ಆರ್​ಸಿಬಿ ಗೆಲುವನ್ನು ಸಂಭ್ರಮಿಸಲು ಜೂನ್ 3ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ನೆಚ್ಚಿನ ಆಟಗಾರರನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಲಕ್ಷಾಂತರ ಅಭಿಮಾನಿಗಳು ಆಗಮಿಸಿದ್ದರು. ಆ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಟ್ಟಿದ್ದರು. ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ವಿಕಾಸ್ ಕುಮಾರ್ ಅವರನ್ನು ಅಮಾನತು ಮಾಡಿತ್ತು.

ಈ ಅಮಾನತು ಪ್ರಶ್ನಿಸಿ ವಿಕಾಸ್​ ಕುಮಾರ್ ಅವರು ಸಿಎಟಿ ಮೊರೆ ಹೋಗಿದ್ದರು. ಐಪಿಎಸ್​ ಅಧಿಕಾರಿ ವಿಕಾಸ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ, ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿ ವಿವರಣೆ ಕೋರಿತ್ತು. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎಜಿ ಹೆಚ್ಚುವರಿ ಕಾಲಾವಕಾಶ ಕೋರಿದ್ದರು. ಅದರಂತೆ ವಿಚಾರಣೆ ಮುಂದೂಡಲಾಗಿತ್ತು.

ಘಟನೆಯ ತನಿಖೆಯ ಹೊಣೆಯನ್ನು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಘಟನೆ ಸಂಬಂಧ ಆರ್​ಸಿಬಿ ಮಾರ್ಕೆಟಿಂಗ್​ ಹೆಡ್​​ ನಿಖಿಲ್ ಸೋಸಲೆ, ಸುನಿಲ್‌ ಮ್ಯಾಥ್ಯೂ, ಕಿರಣ್, ಶಮಂತ್ ಅವರನ್ನು ಬಂಧಿಸಿದ್ದ ಸಿಐಡಿ ಅಧಿಕಾರಿಗಳು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಂಧಿತರನ್ನು ಕಸ್ಟಡಿಗೆ ಒಪ್ಪಿಸಲು ನಿರಾಕರಿಸಿದ್ದ ನ್ಯಾಯಾಲಯ, ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿತ್ತು.

ಇದನ್ನೂ ಓದಿ: Bengaluru Stampede: ಕಾಲ್ತುಳಿತ ಪ್ರಕರಣದಲ್ಲಿ ಬಿ. ದಯಾನಂದ, ವಿಕಾಸ್‌ ಕುಮಾರ್‌ ವಿಚಾರಣೆ, ಇಂದು ಮಾಧ್ಯಮ, ಸಾರ್ವಜನಿಕರ ಹೇಳಿಕೆ