ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral News: 24 ವರ್ಷ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಕುಂಭ ಮೇಳದಲ್ಲಿ ಸನ್ಯಾಸಿಯಾಗಿ ಪತ್ತೆ!

ರಮೇಶ ದುಂಡಪ್ಪ ಚೌಧರಿ 24 ವರ್ಷಗಳ ಹಿಂದೆ ಅಂದರೆ 2001ರಲ್ಲಿ ಗ್ರಾಮದಿಂದ ಏಕಾಏಕಿ ನಾಪತ್ತೆಯಾಗಿದ್ದರು. ಕಾಣೆಯಾದ ವ್ಯಕ್ತಿಯ ಪತ್ತೆಗಾಗಿ ಕುಟುಂಬಸ್ಥರು ಸಾಕುಷ್ಟು ಹುಡುಕಾಟ ನಡೆಸಿದ್ದರು. ಆದರೆ ರಮೇಶ ಚೌಧರಿ ಪತ್ತೆಯಾಗಿರಲಿಲ್ಲ. ಆಕಸ್ಮಿಕವಾಗಿ ಗ್ರಾಮದ ಯಾತ್ರಿಕರ ಕಣ್ಣಿಗೆ ಬಿದ್ದು ಮತ್ತೆ ಊರಿಗೆ ಮರಳುವಂತಾಗಿದೆ.

24 ವರ್ಷ ಹಿಂದೆ ಕಾಣೆಯಾಗಿದ್ದವನು ಕುಂಭ ಮೇಳದಲ್ಲಿ ಸನ್ಯಾಸಿಯಾಗಿ ಪತ್ತೆ!

ಕುಂಭ ಮೇಳದಲ್ಲಿ ಪತ್ತೆಯಾದ ರಮೇಶ ದುಂಡಪ್ಪ ಚೌಧರಿ

ಹರೀಶ್‌ ಕೇರ ಹರೀಶ್‌ ಕೇರ Feb 25, 2025 1:06 PM

ವಿಜಯಪುರ: ಸುಮಾರು 24 ವರ್ಷಗಳ ಹಿಂದೆ ಕಣ್ಮರೆಯಾಗಿದ್ದ (missing) ವ್ಯಕ್ತಿಯೊಬ್ಬ ಪ್ರಯಾಗ್‌ರಾಜ್‌ನಲ್ಲಿ (Prayag raj) ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ (Maha Kumbh Mela) ಸನ್ಯಾಸಿಯ ರೂಪದಲ್ಲಿ ಸಿಕ್ಕಿದ ಅಪರೂಪದ ಘಟನೆ ಜರುಗಿದೆ. ಗ್ರಾಮಸ್ಥರು ಆತನನ್ನು ಊರಿಗೆ ಕರೆದುಕೊಂಡು ಕುಟುಂಬದ ಜೊತೆ ಮಾಡಿದ್ದಾರೆ. ವಿಜಯಪುರ vijayapura news) ಜಿಲ್ಲೆಯ ಕೊಲ್ಹಾರ ತಾಲೂಕಿನ ಬಳೂತಿ ಗ್ರಾಮದ ರಮೇಶ ದುಂಡಪ್ಪ ಚೌಧರಿ ಎನ್ನುವ ವ್ಯಕ್ತಿಯೇ ಹೀಗೆ ಪತ್ತೆಯಾದವರು.

ರಮೇಶ ದುಂಡಪ್ಪ ಚೌಧರಿ 24 ವರ್ಷಗಳ ಹಿಂದೆ ಅಂದರೆ 2001ರಲ್ಲಿ ಗ್ರಾಮದಿಂದ ಏಕಾಏಕಿ ನಾಪತ್ತೆಯಾಗಿದ್ದರು. ಕಾಣೆಯಾದ ವ್ಯಕ್ತಿಯ ಪತ್ತೆಗಾಗಿ ಕುಟುಂಬಸ್ಥರು ಸಾಕುಷ್ಟು ಹುಡುಕಾಟ ನಡೆಸಿದ್ದರು. ಆದರೆ ರಮೇಶ ಚೌಧರಿ ಪತ್ತೆಯಾಗಿರಲಿಲ್ಲ. ಕುಟುಂಬಸ್ಥರು ಆತನನ್ನು ಮರೆತೇ ಬಿಟ್ಟಿದ್ದರು. ಆಕಸ್ಮಿಕವಾಗಿ ಗ್ರಾಮದ ಯಾತ್ರಿಕರ ಕಣ್ಣಿಗೆ ಬಿದ್ದು ಮತ್ತೆ ಊರಿಗೆ ಮರಳುವಂತಾಗಿದೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಭಾಗವಹಿಸಲು ಬಳೂತಿ ಗ್ರಾಮದ ಮಲ್ಲನಗೌಡ ಪಾಟೀಲ ಎಂಬವರು ಸ್ನೇಹಿತರೊಡನೆ ತೆರಳಿದ್ದರು. ಈ ಸಂದರ್ಭ ರಮೇಶನನ್ನು ಕಂಡು ಸೂಕ್ಷ್ಮವಾಗಿ ಗಮನಿಸಿದ್ದು, ಆತನ ಪೂರ್ವಾಪರ ವಿಚಾರಿಸಿದ್ದಾರೆ. 24 ವರ್ಷಗಳಿಂದ ಕರ್ನಾಟಕ ರಾಜ್ಯದಿಂದ ದೂರವಿರುವ ರಮೇಶ ಕನ್ನಡವನ್ನು ಭಾಗಶಃ ಮರೆತಿದ್ದಾನೆ. ಹಿಂದಿಯಲ್ಲೇ ಸಂಭಾಷಣೆ ನಡೆಸಿದ್ದಾನೆ. ನಂತರ ಅಸ್ಪಷ್ಟ ಕನ್ನಡದಲ್ಲಿ, ತಾನು ಬಳೂತಿ ಗ್ರಾಮದವನು ಎಂದು ಒಪ್ಪಿಕೊಂಡಿದ್ದಾನೆ.

ಅಲ್ಲದೆ ತನ್ನ ಪೂರ್ವಾಪರ, ತಂದೆ, ತಾಯಿ ಹಾಗೂ ಕುಟುಂಬಸ್ಥರ ಹೆಸರುಗಳನ್ನು ಕೂಡ ಹೇಳಿದ್ದಾನೆ. ಕೂಡಲೇ ಮಲ್ಲನಗೌಡ ಪಾಟೀಲ ಅವರು ರಮೇಶನ ಕುಟುಂಬಸ್ಥರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ರಮೇಶ ಸಿಕ್ಕಿರುವ ವಿಷಯ ತಿಳಿಸಿದ್ದಾರೆ. ಕುಟುಂಬಸ್ಥರು ವಿಡಿಯೋ ಕಾಲ್ ಮೂಲಕ ರಮೇಶನನ್ನು ಮಾತಾಡಿಸಿದ್ದು, ಮಲ್ಲನಗೌಡರು ತಮ್ಮ ವಾಹನದಲ್ಲೇ ರಮೇಶನನ್ನು ಬಳೂತಿ ಗ್ರಾಮಕ್ಕೆ ಕರೆತಂದು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.

ಸುಮಾರು 24 ವರ್ಷಗಳ ಹಿಂದೆ ಕಳೆದುಹೋಗಿದ್ದ ರಮೇಶ ಚೌಧರಿ ಬಳೂತಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಆತನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆತನನ್ನು ಸಂಭ್ರಮದಿಂದ ಬರಮಾಡಿಕೊಂಡರು. "ನಮ್ಮ ಗ್ರಾಮದವನೇ ಆಗಿದ್ದ ರಮೇಶ ಚೌಧರಿ 2001ರಲ್ಲಿ ಕಾಣೆಯಾಗಿದ್ದ. ನಾವು ಸ್ನೇಹಿತರೊಡನೆ ಕುಂಭಮೇಳಕ್ಕೆ ತೆರಳಿದ್ದ ಸಂದರ್ಭ ರಮೇಶ ಸನ್ಯಾಸಿಯ ವೇಷದಲ್ಲಿ ನಮಗೆ ಕಂಡ. ತಕ್ಷಣ ರಮೇಶನ ಕುಟುಂಬಸ್ಥರನ್ನು ಸಂಪರ್ಕಿಸಿ ಆತನನ್ನು ಕರೆದುಕೊಂಡು ಬಂದಿದ್ದೇವೆ" ಎಂದು ಮಲ್ಲನಗೌಡ ಪಾಟೀಲ ತಿಳಿಸಿದ್ದಾರೆ.

"ನಮ್ಮ ಸಂಬಂಧಿಯಾಗಿರುವ ರಮೇಶ ಚೌಧರಿ 24 ವರ್ಷಗಳ ಹಿಂದೆ ಏಕಾಏಕಿ ಕಾಣೆಯಾಗಿದ್ದ. ಎಷ್ಟೇ ಹುಡುಕಿದರೂ ಆತ ಸಿಕ್ಕಿರಲಿಲ್ಲ. ಗ್ರಾಮದ ಕೆಲವರು ಕುಂಭಮೇಳಕ್ಕೆ ತೆರಳಿದ್ದ ಸಂದರ್ಭ ಅವರಿಗೆ ಸಿಕ್ಕಿದ್ದಾನೆ. ರಮೇಶ ಮರಳಿ ಬಂದಿರುವುದು ಸಂತಸ ತಂದಿದೆ" ಎಂದು ಬಳೂತಿ ಗ್ರಾಮದಲ್ಲಿನ ರಮೇಶನ ಹಿರಿಯ ಸಂಬಂಧಿಕ ನಂದಬಸಪ್ಪ ಚೌಧರಿ ಎಂಬವರು ಹೇಳಿದ್ದಾರೆ.

ಇದನ್ನೂ ಓದಿ: Maha Kumbh Mela 2025: ಕುಂಭ, ಗಂಗಾ, ಯಮುನಾ, ಸರಸ್ವತಿ...ಮಹಾ ಕುಂಭಮೇಳದ ವೇಳೆ ಪ್ರಯಾಗ್‌ರಾಜ್‌ನಲ್ಲಿ 12 ಶಿಶುಗಳ ಜನನ