Harish Kera Column: ಈ ಕೇಡಿನ ರಕ್ಕಸತಂಗಡಿಗೆ ಕೊನೆ ಹಾಡಿ
ಹಿಂದೊಮ್ಮೆ ಕರಡಿ ಒಬ್ಬ ರೈತರ ಮುಖ ಪರಚಿ ಬಿಟ್ಟಿತ್ತು. ಅವನು ಕುರುಡನಾಗಿ ಹೋಗಿದ್ದ ಅಂತ. ಭಯವಾಗಿ ಅಂದು ಸಂಜೆಯಿಂದ ಗುಡ್ಡದ ಕಡೆಗೆ ಹೋಗುವುದನ್ನು ಬಿಟ್ಟು ಬಿಟ್ಟೆವು. ಅಲ್ಲಿ ಕರಡಿಗಳಿವೆ ಎಂಬುದು ನಮಗೆ ಗೊತ್ತಿಲ್ಲದಿದ್ದರೆ, ನಾವು ಸಂಜೆಯ ವಾಯು ವಿಹಾರ ಮುಂದುವರಿಸಿದ್ದಿದ್ದರೆ ಏನಾಗುತ್ತಿತ್ತು? ದುರದೃಷ್ಟವಿದ್ದರೆ ಕರಡಿ ಮುಖಾಮುಖಿಯಾಗಿ ಹಲ್ಲೆ ಮಾಡುತ್ತಿತ್ತು.

ಸುದ್ದಿ ಸಂಪಾದಕ, ಅಂಕಣಕಾರ ಹರೀಶ್ ಕೇರ

ಕಾಡುದಾರಿ
ಹಲವು ವರ್ಷಗಳ ಹಿಂದೆ ಹಂಪಿಯ ಯೂನಿವರ್ಸಿಟಿಯಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಕಡೆಯಿಂದ ಒಂದು ವಾರದ ಸಾಹಿತ್ಯ ಕಮ್ಮಟ ನಡೆದಿತ್ತು. ಯುವ ಬರಹಗಾರರಾಗಿದ್ದ ನಾವೂ ಒಂದಷ್ಟು ಗೆಳೆಯರೂ ಗೆಳತಿಯರೂ ಉತ್ಸಾಹದಿಂದ ಭಾಗವಹಿಸಿದ್ದೆವು. ಉಳಿಯಲು ಯೂನಿವರ್ಸಿಟಿ ಗೆಸ್ಟ್ ಹೌಸ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆಗ ಗೆಸ್ಟ್ ಹೌಸ್ ನ ಹಿಂದಿನ ಭಾಗ ಪೂರ್ತಿ ಕಾಡು, ಬಂಡೆಗಳು ಇದ್ದವು. ಸಂಜೆಯ ಸೆಷನ್ ಗಳನ್ನು ಮುಗಿಸಿ ಗಾಳಿ ಸೇವನೆಗೆ ಗುಡ್ಡ ಹತ್ತುತ್ತಿದ್ದೆವು. ಮರಳಿ ಬರುವಾಗ ಏಳು ಗಂಟೆಯಾಗುತ್ತಿತ್ತು. ಎರಡು ದಿನಗಳು ಹೀಗೇ ಕಳೆದ ಬಳಿಕ ಗೆಸ್ಟ್ ಹೌಸ್‌ನ ಮೇಟಿ ಹೇಳಿದರು- ಗುಡ್ಡದಲ್ಲಿ ಕರಡಿಗಳಿವೆ. ಹಿಂದೊಮ್ಮೆ ಒಬ್ಬ ರೈತರ ಮುಖ ಪರಚಿ ಬಿಟ್ಟಿತ್ತು. ಅವನು ಕುರುಡನಾಗಿ ಹೋಗಿದ್ದ ಅಂತ. ಭಯವಾಗಿ ಅಂದು ಸಂಜೆಯಿಂದ ಗುಡ್ಡದ ಕಡೆಗೆ ಹೋಗುವುದನ್ನು ಬಿಟ್ಟು ಬಿಟ್ಟೆವು. ಅಲ್ಲಿ ಕರಡಿಗಳಿವೆ ಎಂಬುದು ನಮಗೆ ಗೊತ್ತಿಲ್ಲದಿದ್ದರೆ, ನಾವು ಸಂಜೆಯ ವಾಯು ವಿಹಾರ ಮುಂದುವರಿಸಿದ್ದಿದ್ದರೆ ಏನಾಗುತ್ತಿತ್ತು? ದುರದೃಷ್ಟವಿದ್ದರೆ ಕರಡಿ ಮುಖಾಮುಖಿಯಾಗಿ ಹಲ್ಲೆ ಮಾಡುತ್ತಿತ್ತು, ಅದೃಷ್ಟವಿದ್ದರೆ ಅದು ದರ್ಶನ ನೀಡಿ ಹೋಗುತ್ತಿತ್ತು ಅಥವಾ ಎಂದೂ ಅವುಗಳ ಇರುವಿಕೆ ನಮ್ಮ ಗಮನಕ್ಕೆ ಬರುತ್ತಲೇ ಇರಲಿಲ್ಲ. ಈ ಮೂರೇ ಸಾಧ್ಯತೆಗಳಿದ್ದವು.
ಇದನ್ನೂ ಓದಿ: Harish Kera Column: ಟ್ರಂಪ್ ಮತ್ತು ಡೇರಿಯನ್ ಗ್ಯಾಪ್
ಕರಡಿಯ ವಿಷಯದಲ್ಲಿ ಈ ಮೂರೇ ಸಾಧ್ಯತೆಗಳಿರುವುದು. ಅದರೆ ಮನುಷ್ಯ? ಒಂದು ನಿರ್ಜನ ಹಾದಿಯಲ್ಲಿ ಎದುರಾಗುವ ಮನುಷ್ಯ ನಮ್ಮ ಶತ್ರುವೋ ಮಿತ್ರನೋ ಆಗಬಹುದು; ಕೊಲೆಗಾರನೂ ಅತ್ಯಾಚಾರಿಯೂ ಆಗಬಹುದು. ಶತ್ರುವಾಗಿದ್ದು ಮುಂದೆ ಮಿತ್ರನಾಗುವ, ಈಗ ಗೆಳೆಯನಾಗಿ ಮುಂದೆ ವೈರಿಯಾಗುವ, ಭೌತಿಕವಾಗಿ ಮಿತ್ರನಾದರೂ ಮಾನಸಿಕವಾಗಿ ಹಿಂಸಿಸುವ, ಭೇಟಿಯಾಗಿ ಮರೆಯಾದರೂ ಮನದಲ್ಲಿ ಹಿತವಾಗಿ ನೆಲೆ ನಿಲ್ಲುವ, ಒಂದೇ ಭೇಟಿಯ ಮನದಲ್ಲಿ ಅಳಿಸಲಾಗದ ಗಾಯ ಮಾಡುವ- ಹೀಗೆ ನೂರಾರು ಸಾಧ್ಯತೆಗಳಿವೆ.
ಈ ವಾರ ಹಂಪಿಯ ಹತ್ತಿರದ ಸಾನಾಪುರ ಕೆರೆಯ ಬಳಿ ತುಂಗಭದ್ರಾ ಕಾಲುವೆಯ ಪಕ್ಕದಲ್ಲಿ ನಡೆದ ಘೋರ ಘಟನೆಯ ಸಂತ್ರಸ್ತರನ್ನು ಇದರಲ್ಲಿ ಯಾವುದಕ್ಕೆ ತುತ್ತಾದವರು ಎನ್ನುವುದು? ಕಾಡು ಪ್ರಾಣಿಗಳ ವರ್ತನೆಯನ್ನಾದರೂ ತುಸು ಮಟ್ಟಿಗೆ ನಿರೀಕ್ಷಿಸಬಹುದು; ಆದರೆ ಮನುಷ್ಯರ ವರ್ತನೆಯನ್ನು ನಿರೀಕ್ಷಿಸುವುದೇ ಕಷ್ಟ ಎನ್ನುವುದೇ. ಈ ಘಟನೆಯಲ್ಲಿ ಪ್ರವಾಸೋದ್ಯಮ ಸುರಕ್ಷತೆಯ ನೆಲೆ ಒಂದಷ್ಟು, ಕಾನೂನು ಸುವ್ಯವಸ್ಥೆಯ ಪಾಲು ಇನ್ನೊಂದಷ್ಟು, ಮನೋವೈಜ್ಞಾನಿಕತೆಯ ಪಾಲು ಮತ್ತೊಂದಷ್ಟು, ಮನುಷ್ಯ ವರ್ತನೆಯ ಅನೂಹ್ಯತೆಯ ಪಾಲು ಇನ್ನಿಷ್ಟು- ಇವೆಲ್ಲ ಇದೆ ಎನ್ನೋಣವೇ.

ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಜಾಗಗಳಿಗೆ ಇಂಥ ಪ್ರಕರಣಗಳು ಮಾರಕ ಹೊಡೆತ ಕೊಡುತ್ತವೆ. ಮುಖ್ಯವಾಗಿ ಪ್ರವಾಸಿಗರನ್ನು ನಂಬಿಕೊಂಡು ಬದುಕು ಮಾಡುವವರಿಗೆ. ಈಗ ಹಂಪಿಯ ಉದಾಹರಣೆ ತೆಗೆದುಕೊಂಡರೆ ಅಲ್ಲಿನ ಹೋಂ ಸ್ಟೇಗಳಿಗೂ ರೆಸಾರ್ಟ್‌ಗಳಿಗೂ ನಡುಕ ಹುಟ್ಟಿದೆ. ಹೊರಗಿನ ಬಹಳ ಮಂದಿ ಬುಕಿಂಗ್ ಕ್ಯಾನ್ಸಲ್ ಮಾಡಿದ್ದಾರೆ ಅಥವಾ ಅರ್ಧದಲ್ಲಿ ಹೊರಟು ಹೋಗಿದ್ದಾರೆ. ಈ ಘಟನೆಯಿಂದ ತತ್ತರಿಸಿ ಹೋದವರು ಮರಳಿ ಹೋಗಿ ನೀಡುವ ಫೀಡ್ ಬ್ಯಾಕ್ ಪರಿಣಾಮ ಬಹುಮಂದಿಯ ಮೇಲಾಗಲಿದೆ. ಹಂಪಿ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಮೂಡಿದೆ; ಆದರೆ ಇಲ್ಲಿ ಅತ್ಯಾಚಾರಕ್ಕೊಳಗಾದವರು ವಿದೇಶಿ ಪ್ರವಾಸಿ ಮಾತ್ರ ಅಲ್ಲ, ಹೋಂ ಸ್ಟೇ ಓನರ್ ಕೂಡ. ಇಲ್ಲಿ ಈ ವಿಕೃತಿ ಎಸಗಿದವರಲ್ಲಿ ಅತೃಪ್ತ ಕಾಮದ ಪಾತ್ರವೆಷ್ಟು, ಅಧಿಕಾರ ಸ್ಥಾಪನೆಯ ಪುರುಷ ಸೊಕ್ಕು ಎಷ್ಟು ಕೆಲಸ ಮಾಡಿದೆ ಎಂಬುದೆಲ್ಲ ಯೋಚನೆಗೆ ಅರ್ಹ.
ಹಂಪಿಯಲ್ಲಿಯೇ ಆಗಲಿ, ಬೇರೆಡೆಯೇ ಆಗಲಿ, ಅತ್ಯಾಚಾರಿಗಳು ಸುಲಭವಾಗಿ ಹೊರಗೆ ಬಂದು ತಿರುಗಾಡುವಂತಾದರೆ ಅದು ಕಾನೂನು ಸುವ್ಯವಸ್ಥೆಯ ಸಂಪೂರ್ಣ ಸೋಲು. ಅದನ್ನು ತಿದ್ದಿಕೊಳ್ಳದೇ ಹೋದರೆ ಇನ್ಯಾವ ಪರಿಹಾರ ಕ್ರಮಗಳೂ ದೀರ್ಘಾವಧಿ ಫಲ ಕೊಡವು. ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳದ ಪ್ರದೇಶಗಳಿಗೆ ಯಾರೂ ಪ್ರವಾಸ ಹೋಗುವ ಉದಾಹರಣೆ ಇಲ್ಲ. ಅಫಘಾನಿಸ್ಥಾನಕ್ಕೆ, ಸಿರಿಯಾಗೆ, ರುವಾಂಡಾಗೆ ಈಗ ಯಾರು ಪ್ರವಾಸ ಹೋಗಲು ಮುಂದಾಗುತ್ತಾರೆ? ಏನಿದ್ದರೂ ಸಾಹಸ ಬಯಸುವ ಮೀಡಿಯಾ ಇನ್ ಫ್ಲುಯೆನ್ಸರ್‌ಗಳು, ಕರ್ತವ್ಯದ ಕರೆಯಲ್ಲಿರುವ ಪತ್ರಕರ್ತರು ಹೋಗಬೇಕು ಅಷ್ಟೇ. ಅವರ ಅದೃಷ್ಟ ಚೆನ್ನಾಗಿದ್ದರೆ ಬದುಕಿಕೊಳ್ಳುತ್ತಾರೆ. ನಮ್ಮಲ್ಲಿನ ಕಾಶ್ಮೀರದಲ್ಲಿ ಆಗಾಗ ಪರಿಸ್ಥಿತಿ ಬದಲಾಗುತ್ತಿರುತ್ತದೆ. ಉಗ್ರಗಾಮಿಗಳ ಕಾಟ ಹೆಚ್ಚಾಗಿದ್ದಾಗ ಯಾರೂ ಅತ್ತ ತಲೆಹಾಕುವುದಿಲ್ಲ, ಅಂಥ ಸುದ್ದಿಗಳು ಇಲ್ಲದಿದ್ದಾಗ ಫ್ಲೈಟ್ ಬುಕ್ ಮಾಡುತ್ತಾರೆ. ಒಟ್ಟಾರೆ ಹೇಳಬಹುದಾದರೆ ಪ್ರವಾಸಿ ತಾಣಗಳಲ್ಲಿ ಕ್ರೈಮ್ ರೇಟ್ ಹೆಚ್ಚಿರಬಾರದು. ಅದು ಹೆಚ್ಚಿದ್ದರೆ ಟೂರಿಸಂ ಮಟಾಶ್.
ಟೂರಿಸಂ ಜಾಗಗಳಲ್ಲಿ ಅಪರಾಧ ಯಾರು ಮಾಡುತ್ತಾರೆ? ಇದೂ ಉತ್ತರಿಸಬೇಕಾದ ಪ್ರಶ್ನೆಯೇ. ತಮ್ಮ ಊರು ಚೆನ್ನಾಗಿರಲಿ, ಇಲ್ಲಿಗೆ ಪ್ರವಾಸಿಗರು ಬರಲಿ ಅಂತ ಬಯಸುವ ಯಾರೂ ಅವರ ವಿರುದ್ಧ ಅಪರಾಧ ಎಸಗುವ ಮನಸ್ಸು ಮಾಡುವುದಿಲ್ಲ. ಉತ್ತರ ಪ್ರದೇಶವನ್ನು ಉದಾಹರಣೆಯಾಗಿ ನೋಡಬಹುದು. ಈ ದೇಶದಲ್ಲಿಯೇ ಅತ್ಯಂತ ಹೆಚ್ಚು ತಲಾವಾರು ಅಪರಾಧ ನಡೆಯುವ ರಾಜ್ಯ ಉತ್ತರ ಪ್ರದೇಶ. ಆದರೆ ಪ್ರಯಾಗ್ ರಾಜ್‌ನಲ್ಲಿ ನಡೆದ ಕುಂಭಮೇಳಕ್ಕೆ ಗರಿಷ್ಠ ಸುರಕ್ಷತೆ ನೀಡಿದ್ದರಿಂದ ಅಷ್ಟೊಂದು ಜನ ಅಲ್ಲಿಗೆ ಬರುವ ಧೈರ್ಯ ಮಾಡಿದರು. ಕಾಶಿ, ಅಯೋಧ್ಯೆ, ಮಥುರಾ, ವೃಂದಾವನ ಮೊದಲಾದವು ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಸರಾಗಿವೆ. ಇದನ್ನು ಹೊರತು ಪಡಿಸಿದರೆ, ಉತ್ತರಪ್ರದೇಶದ ಇತರ ಕಡೆ ಹೋಗಬಹುದು ಎನ್ನುವ ಭರವಸೆ ಇಲ್ಲ.
ಮಣಿಪುರಕ್ಕೋ, ಜಾರ್ಖಂಡ್‌ಗೋ ಯಾರು ಯಾಕೆ ಪ್ರವಾಸ ಹೋಗುತ್ತಾರೆ? ಪ್ರವಾಸ ಹೋಗುವವರು ನೆಮ್ಮದಿಯ ತಾಣಗಳನ್ನು ಹುಡುಕುತ್ತಾರೆಯೇ ಹೊರತು, ಗಲಭೆಗ್ರಸ್ತ ಪ್ರದೇಶಗಳನ್ನಲ್ಲವಲ್ಲ. ಮಣಿಪುರದ ಉದಾಹರಣೆ ತೆಗೆದುಕೊಳ್ಳಿ. ಇಲ್ಲಿ 2019-2020ರಲ್ಲಿ ದಾಖಲಾದ ಅಂಕಿಅಂಶಗಳಿಗೆ ಹೋಲಿಸಿದರೆ, ರಾಜ್ಯಕ್ಕೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರ ಆಗಮನದ ಸಂಖ್ಯೆ ಶೇಕಡಾ 79.04 ರಷ್ಟು ಕುಸಿದಿದೆ. ಸರಕಾರದ ಒಂದು ವರದಿಯ ಪ್ರಕಾರ, 2019-20 ರಲ್ಲಿ ಒಟ್ಟು 1,64,468 ದೇಶೀಯ ಮತ್ತು 10936 ವಿದೇಶಿ ಪ್ರವಾಸಿಗರು ರಾಜ್ಯಕ್ಕೆ ಆಗಮಿಸಿದ್ದರು. 2023ರಲ್ಲಿ ಅದು 34,468 ದೇಶೀಯ ಪ್ರವಾಸಿಗರು ಮತ್ತು 2300 ವಿದೇಶಿಗರಿಗೆ ಇಳಿಯಿತು. ಕಳೆದ ವರ್ಷ ಇನ್ನೂ ಕಡಿಮೆಯಾಗಿರಬಹುದು, ಅಂಕಿ ಅಂಶಗಳು ಸಿಗಬೇಕಷ್ಟೆ.
ನನ್ನ ಸೀಮಿತ ಪ್ರವಾಸ ಅನುಭವಗಳನ್ನು ನೆಚ್ಚಿ ಹೇಳುವುದಾದರೆ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡಗಳು ಪ್ರವಾಸಿಗರಿಗೆ ಹೆಚ್ಚಿನ ನೆಮ್ಮದಿ ನೀಡುತ್ತವೆ. ಇಲ್ಲಿ ಹಿಮಾಲಯದ ಸಾನಿಧ್ಯ ಇದೆ ಎಂಬುದು ಮುಖ್ಯ ಕಾರಣ; ಜೊತೆಗೆ ಇಲ್ಲಿನ ಜನತೆ ತುಂಬಾ ಸ್ನೇಹಮಯಿಗಳು ಎಂಬುದು ಮತ್ತೊಂದು ಕಾರಣ. ಇವೆರಡೂ ರಾಜ್ಯಗಳ ಕ್ರೈಮ್ ರೇಟ್ ಬಹಳ ಕಡಿಮೆ. ಹೆಣ್ಣುಮಕ್ಕಳು ಇಲ್ಲಿ ಸೋಲೋ ಟ್ರಿಪ್, ಟ್ರೆಕ್ಕಿಂಗ್ ಹೋಗಬಹುದು. ಇಲ್ಲಿನ ಬೆಟ್ಟಗಳ ಬುಡದಲ್ಲಿ ದಿನಗಟ್ಟಲೆ ಟೆಂಟ್ ಹಾಕಿಕೊಂಡು ಇದ್ದರೂ ಸ್ಥಳೀಯರಾಗಲೀ ಬೇರೆ ಪ್ರವಾಸಿಗಳಾಗಲೀ ನಿಮ್ಮ ಏಕಾಂತಕ್ಕೆ ಭಂಗ ತರುವುದಿಲ್ಲ. ಹಿಮಾಲಯದ ಬೆಟ್ಟಗಳಷ್ಟೇ ಘನತೆಯಿಂದ ನಡೆದುಕೊಳ್ಳುತ್ತಾರೆ. ಇದೇ ಧೈರ್ಯವನ್ನು ಜಾರ್ಖಂಡ್‌ನಲ್ಲಿ ಅಥವಾ ಕೇರಳದಲ್ಲಿ ಮಾಡುವಂತಿಲ್ಲ.
ಜಾರ್ಖಂಡ್‌ನ ದುಮ್ಕಾದಲ್ಲಿ ಕಳೆದ ವರ್ಷ ಟೆಂಟ್ ಹಾಕಿಕೊಂಡು ಮಲಗಿದ್ದ ಸ್ಪೇನ್ ದಂಪತಿ ಮೇಲೆ ಹಲ್ಲೆ ಮಾಡಿ ಮಹಿಳೆ ಮೇಲೆ ರೇಪ್ ಎಸಗಲಾಗಿತ್ತು; ಕೇರಳದ ತಿರುವ ನಂತಪುರದಲ್ಲಿ 2022ರಲ್ಲಿ ಸ್ವಿಸ್ ಪ್ರವಾಸಿ ಯೊಬ್ಬಳನ್ನು ಒಂದು ಗ್ಯಾಂಗ್ ರೇಪ್ ಮಾಡಿ ಕೊಂದುಹಾಕಿತ್ತು. ಇಂಥ ಘಟನೆಗಳು ವಿದೇಶಿಗರನ್ನು ಖಂಡಿತವಾಗಿಯೂ ಅಲ್ಲಿಂದ ದೂರವಿಡುತ್ತವೆ.
ಇದರಲ್ಲಿ ಖಾಸಗಿ ಹೋಂ ಸ್ಟೇಗಳು, ರೆಸಾರ್ಟ್ ಗಳು, ಹೋಟೆಲ್‌ಗಳ ಪಾತ್ರವೂ ಸಾಕಷ್ಟು ಇರುವಂತಿದೆ. ಇವರಲ್ಲಿ ಅಧಿಕೃತ, ಕಾನೂನುಬದ್ಧ ವ್ಯವಹಾರ ನಡೆಸುತ್ತಿರುವವರಷ್ಟೇ ಸಂಖ್ಯೆಯಲ್ಲಿ ಅನಧಿಕೃತ, ಅಕ್ರಮ ದಂಧೆಕೋರರೂ ಇರುವಂತಿದೆ. ಇವರ‍್ಯಾರಿಗೂ ಪ್ರವಾ ಸಿಗರ ಸುರಕ್ಷತೆ ಹಾಗೂ ನೆಮ್ಮದಿಯಿಂದ ದೊರೆಯುವ ದೀರ್ಘಾವಧಿ ಪ್ರಯೋಜನಗಳ ಕಡೆಗೆ ಲಕ್ಷ್ಯವಿದ್ದಂತಿಲ್ಲ.
ತಕ್ಷಣದ ಲಾಭಗಳ ಮೇಲೆ ಮಾತ್ರ ಕಣ್ಣಿಟ್ಟಿರುವ ಇಂಥವರಿಂದ ಅನಾಹುತ ಹೆಚ್ಚು. ಇಲ್ಲೇ ಟೂರಿಸ್ಟ್‌ಗಳ ಭದ್ರತೆಗೆ ಇವರೆಲ್ಲ ಏನು ಕ್ರಮ ಕೈಗೊಂಡಿದ್ದಾರೆ ಎಂದು ಪೊಲೀಸರು ಅಜ ಮಾಯಿಷಿ ಮಾಡಿದರೆ ತಪ್ಪೇನೂ ಇಲ್ಲ. ಆದರೆ ಪೊಲೀಸರಿಗೆ ಇದೇ ಇನ್ನೊಂದು ಬಗೆಯ ಸುಲಿಗೆಗೆ ದಾರಿ ಹಾಕಿಕೊಟ್ಟಂತಾದರೆ ಆಶ್ಚರ್ಯವಿಲ್ಲ. ಎಂಥ ಒಳ್ಳೆಯ ಕಾಯಿದೆ ಯನ್ನೂ ಗುಡಿಸಿ ಗುಂಡಾಂತರ ಮಾಡುವುದರಲ್ಲಿ ನಾವು ನಿಸ್ಸೀಮರು.
ಅವರೇಕೆ ಅಷ್ಟು ರಾತ್ರಿಯಲ್ಲಿ ಆ ನಿರ್ಜನ ಪ್ರದೇಶದಲ್ಲಿ ಹೋಗಬೇಕಿತ್ತು? ಎಂದು ಪ್ರಶ್ನಿಸು ವವರು ಇದ್ದಾರೆ. ಇದು ಕ್ರೈಮ್‌ಗಳನ್ನು ಅಪರಾಧ ಎಂದು ನೋಡದ, ‘ಇವರಿಗೆ ತಕ್ಕ ಶಾಸ್ತಿ ಆಯಿತು’ ಎಂಬ ಕ್ರೌರ್ಯದಿಂದ ನೋಡುವ ಮನಸ್ಥಿತಿ. ‘ಮಹಿಳೆಯರು ಬಟ್ಟೆ ಧರಿಸುವ ರೀತಿಯೇ ಅತ್ಯಾಚಾರಕ್ಕೆ ಕಾರಣ’ ಎಂದು ಹೇಳುವುದಕ್ಕೂ ಇದಕ್ಕೂ ವ್ಯತ್ಯಾಸವಿಲ್ಲ.
ಅತ್ಯಾಚಾರದ ಹಿಂದೆ ಇರುವುದು ಮಹಿಳೆಯ ಬಟ್ಟೆಯಲ್ಲ, ಪುರುಷನ ವಿಕೃತಿ. ಇದರಲ್ಲಿ ಪುುಷನ ಆ ಕ್ಷಣದ ಕಾಮುಕತೆ ಮಾತ್ರ ಇರುವುದಿಲ್ಲ, ಆತ ಬಾಲ್ಯದಿಂದಲೂ ಕಾಪಾಡಿ ಕೊಂಡು ಬಂದಿರುವ ಹಿಡಿತದ, ಅಧಿಕಾರ ಸ್ಥಾಪನೆಯ ಮಾನಸಿಕತೆಯೂ ಇರುತ್ತದೆ. ಇವರಿಗೆ, ನಿಶ್ಶಬ್ದ ರಾತ್ರಿಯಲ್ಲಿ ಸ್ಟಾರ್‌ಗೇಜಿಂಗ್ ಅಥವಾ ತಾರೆಗಳನ್ನು ನೋಡಲು ನಿರ್ಜನ ಜಾಗಗಳಿಗೆ ಹೋಗುವುದು ಅಪರಾಧವಲ್ಲ ಎಂದು ಮನದಟ್ಟು ಮಾಡಿಸುವುದು ಕಷ್ಟ.
ಆದರೂ ನಾವು ಈ ನಿಟ್ಟಿನಲ್ಲಿ ಪುರುಷರನ್ನು ಸುಶಿಕ್ಷಿತರಾಗಿಸದೇ ನಿರ್ವಾಹವಿಲ್ಲ. ಈ ಕೃತ್ಯ ನಡೆದ ಸಾನಾಪುರ ಸರೋವರದ ಆಸುಪಾಸಿನಲ್ಲಿ ಓಡಾಡಿದ ಇತ್ತೀಚಿನ ಅನುಭವದ ಜಾಡು ಹಿಡಿದು ಹೇಳುವುದಾದರೆ, ಇದೊಂದು ಪ್ರಕೃತಿ ರಮಣೀಯ, ಶಾಂತ ಪರಿಸರ. ಹಂಪಿಯ ಜನರ ಗಜಿಬಿಜಿಯಿಂದ ದೂರವಿರುವ ಈ ತಾಣದಲ್ಲಿ ಒಂದು ಮೌನದ ಧ್ಯಾನ ಮಯ ಸ್ಥಿತಿ ಸಾಧ್ಯ.
ವಿಜಯನಗರ ಸಾಮ್ರಾಜ್ಯವನ್ನು ರಕ್ಕಸತಂಗಡಿ ಯುದ್ಧ ಹಾಳುಗೆಡವಿ ಹಂಪಿ ಮಾಡಿತು. ಮನುಷ್ಯನ ಒಳಗಿನ ಕೇಡು ಇನ್ನೊಂದು ರಕ್ಕಸತಂಗಡಿ ಸೃಷ್ಟಿಸಿದೆ. ಇಂಥದ್ದನ್ನು ತಡೆ ಗಟ್ಟುವುದು ಪ್ರವಾಸಿಗರ ಹಿತಕ್ಕಷ್ಟೇ ಅಲ್ಲ, ಸ್ಥಳೀಯರ ನೆಮ್ಮದಿಗೂ ಅಗತ್ಯ. ಸ್ಥಳೀಯ ರನ್ನು ಪ್ರವಾಸೋದ್ಯಮ ಹಾಗೂ ಕಾನೂನು ಪರಿಪಾಲನೆಯಲ್ಲಿ ಹೆಚ್ಚು ಹೆಚ್ಚು ಒಳಗೊ ಳ್ಳುವ ಉಪಕ್ರಮಗಳು ಇತರ ಹಲವು ಕಡೆಗಳಲ್ಲಿ ಯಶಸ್ವಿಯಾಗಿವೆ. ಅವುಗಳ ಮಾದರಿ ಯನ್ನು ನಾವು ಅನುಸರಿಸಬಹುದು.