Yagati Raghu Naadig Column: ಪ್ರಾದೇಶಿಕ ಪಕ್ಷವೋ, ಅವಕಾಶವಾದವೋ ?
ಕರ್ನಾಟಕದಲ್ಲೂ ಒಂದು ಪ್ರಬಲ ಪ್ರಾದೇಶಿಕ ಪಕ್ಷವಿದ್ದಿದ್ದರೆ ಅಥವಾ ಕೇಂದ್ರದ ಮೇಲೆ ಪ್ರಭಾವ ಬೀರುವ ಮಟ್ಟಿಗಿನ ಹಿಡಿತ ರಾಜ್ಯದ ಆಳುಗರಿಗೆ ಇದ್ದಿದ್ದರೆ ಎಷ್ಟು ಚೆನ್ನಿತ್ತು ಎನಿಸುವುದು ನಿಜ. ಆದರೆ ಅದೇನು ವಿಚಿತ್ರವೋ, ಕೆಲವೇ ನಿದರ್ಶನಗಳನ್ನು ಹೊರತುಪಡಿಸಿದರೆ ರಾಜ್ಯಕ್ಕೂ ಪ್ರಾದೇಶಿಕ ಪಕ್ಷಗಳ ಅಸ್ತಿತ್ವಕ್ಕೂ ಆಗಿ ಬರುತ್ತಿಲ್ಲ ಎಂಬುದು ಖರೆ!


ಇಲ್ಲಿ ಏಗಲಾರೆ, ಅಲ್ಲಿ ಹೋಗಲಾರೆ...
ಯಗಟಿ ರಘು ನಾಡಿಗ್
ಬಿಜೆಪಿಯಿಂದ ಇತ್ತೀಚೆಗಷ್ಟೇ ಉಚ್ಚಾಟಿಸಲ್ಪಟ್ಟ ಶಾಸಕ ಬಸನಗೌಡ ಪಾಟೀಲ ಯತ್ನಾಳರು, ಉತ್ತರ ಕರ್ನಾಟಕ ಭಾಗದಲ್ಲಿ ತಮಗಿರುವ ವರ್ಚಸ್ಸು, ಹಿಂದೂಗಳ ಬೆಂಬಲವನ್ನು ಬಳಸಿಕೊಂಡು ತಮ್ಮದೇ ಪಕ್ಷವನ್ನು ಹುಟ್ಟು ಹಾಕಲಿದ್ದಾರೆ ಎಂಬ ಗುಸುಗುಸು ಕೆಲ ದಿನಗಳ ಹಿಂದೆ ಕೇಳಿ ಬಂದಿತ್ತು. ಈ ಹಿನ್ನೆಲೆ ಯಲ್ಲಿ, ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳ ಅಸ್ತಿತ್ವದ ಸಾಧ್ಯಾಸಾಧ್ಯತೆಗಳನ್ನು ಅವಲೋಕಿಸುವ ಪುಟ್ಟಯತ್ನ ಇಲ್ಲಿದೆ.
ನಮ್ಮವರು ಯಾರೂ ಇಲ್ಲ!
ಮೇಕೆದಾಟು ಜಲಾಶಯಕ್ಕೆ ಸಂಬಂಧಿಸಿ ನೆರೆ ರಾಜ್ಯ ತಮಿಳುನಾಡು ಎತ್ತುತ್ತಿರುವ ಅಪಸ್ವರ, ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯಕ್ಕೆ ದಶಕಗಳಿಂದ ಆಗುತ್ತಲೇ ಇರುವ ಅನ್ಯಾಯ, ಬೆಳಗಾವಿ ವಿಷಯಕ್ಕೆ ಮಹಾರಾಷ್ಟ್ರದೊಡನೆ ಆಗಾಗ ಶುರುವಾಗುವ ಗಡಿ ತಕರಾರು ಹೀಗೆ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುತ್ತಿದೆ ಎನಿಸಿದಾಗಲೆಲ್ಲಾ ರಾಜಕೀಯ ಬಲದ ನೆಲೆಯಲ್ಲಿ ‘ನಮ್ಮವರು ಯಾರೂ ಇಲ್ಲ’ ಎಂಬ ಅನಾಥಪ್ರಜ್ಞೆ ಕಾಡುವುದುಂಟು.
ಕರ್ನಾಟಕದಲ್ಲೂ ಒಂದು ಪ್ರಬಲ ಪ್ರಾದೇಶಿಕ ಪಕ್ಷವಿದ್ದಿದ್ದರೆ ಅಥವಾ ಕೇಂದ್ರದ ಮೇಲೆ ಪ್ರಭಾವ ಬೀರುವ ಮಟ್ಟಿಗಿನ ಹಿಡಿತ ರಾಜ್ಯದ ಆಳುಗರಿಗೆ ಇದ್ದಿದ್ದರೆ ಎಷ್ಟು ಚೆನ್ನಿತ್ತು ಎನಿಸುವುದು ನಿಜ. ಆದರೆ ಅದೇನು ವಿಚಿತ್ರವೋ, ಕೆಲವೇ ನಿದರ್ಶನಗಳನ್ನು ಹೊರತುಪಡಿಸಿದರೆ ರಾಜ್ಯಕ್ಕೂ ಪ್ರಾದೇಶಿಕ ಪಕ್ಷಗಳ ಅಸ್ತಿತ್ವಕ್ಕೂ ಆಗಿ ಬರುತ್ತಿಲ್ಲ ಎಂಬುದು ಖರೆ!
ಇದನ್ನೂ ಓದಿ: Yagati Raghu Naadig Column: ಕೈತಪ್ಪಿದ ಅಕ್ಷಯಪಾತ್ರೆ, ಕಾಡಿದ ಅನಾಥಪ್ರಜ್ಞೆ...
ಗಿಟ್ಟುತ್ತಿಲ್ಲ ಲೆಕ್ಕಾಚಾರ
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಭದ್ರನೆಲೆ ಕಾಣಲಾಗುತ್ತಿಲ್ಲ. ವಿವಿಧ ಕಾಲಘಟ್ಟಗಳಲ್ಲಿ ರಾಜಕೀಯ ಘಟಾನುಘಟಿಗಳು ಮಾಡಿದ ಕಸರತ್ತೇ ಇದಕ್ಕೆ ಸಾಕ್ಷಿ. ಜನತಾದಳದಿಂದ ಉಚ್ಚಾಟನೆಗೊಂಡಾಗ ರಾಮಕೃಷ್ಣ ಹೆಗಡೆಯವರು ಹುಟ್ಟುಹಾಕಿದ ‘ಲೋಕಶಕ್ತಿ’, ಕಾಂಗ್ರೆಸ್‌ನಿಂದ ಸಿಡಿದು ಹೊರಬಂದ ಎಸ್.ಬಂಗಾರಪ್ಪನವರು ಕಟ್ಟಿದ ‘ಕರ್ನಾಟಕ ಕಾಂಗ್ರೆಸ್ ಪಕ್ಷ’, ಮಾತೃಪಕ್ಷ ಬಿಜೆಪಿಯೊಂದಿಗೆ ಮುನಿದು ಯಡಿಯೂರಪ್ಪನವರು ಜನ್ಮವಿತ್ತ ‘ಕರ್ನಾಟಕ ಜನತಾ ಪಕ್ಷ’, ಅಷ್ಟೇಕೆ ಉದ್ಯಮಿ ವಿಜಯ ಸಂಕೇಶ್ವರರು ಶುರುಮಾಡಿದ ‘ಕನ್ನಡನಾಡು ಪಾರ್ಟಿ’ ಮುಂತಾದವು ಬೇರೂರುವಲ್ಲಿ ವಿಫಲ ವಾಗಿದ್ದು ಜಗಜ್ಜಾಹೀರು.
ಇನ್ನು ಚಿತ್ರನಟ ಉಪೇಂದ್ರರು ‘ಪ್ರಜಾಕೀಯ/ಉತ್ತಮ ಪ್ರಜಾಕೀಯ ಪಾರ್ಟಿ’ ಎಂದೊಮ್ಮೆ ಕನವರಿ ಸಿದ್ದು ಹೌದಾದರೂ ಅದು ನನಸಾಗಲಿಲ್ಲ. ಅಮೆರಿಕದಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ನಂತರ ರಾಜಕಾರಣಕ್ಕೆ ಧುಮುಕಿ ‘ಆಮ್ ಆದ್ಮಿ’ ಪಕ್ಷದಲ್ಲಿ ಕೆಲಕಾಲ ವಿಹರಿಸಿದ ರವಿ ಕೃಷ್ಣಾ ರೆಡ್ಡಿ ಅವರು ತರುವಾಯದಲ್ಲಿ ‘ಕರ್ನಾಟಕ ರಾಷ್ಟ್ರ ಸಮಿತಿ’ ಎಂಬ ಪ್ರಾದೇಶಿಕ ಪಕ್ಷವನ್ನು ಅಸ್ತಿತ್ವಕ್ಕೆ ತಂದು, ಒಂದಷ್ಟು ಜನಪರ ಹೋರಾಟ ಕೈಗೊಂಡಿದ್ದು ಹೌದಾದರೂ, ಅದನ್ನು ರಾಜಕೀಯ ಅಧಿಕಾರವಾಗಿ ರೂಪಾಂತರಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಹಾಗಾದರೆ, ಪ್ರಾದೇಶಿಕ ಪಕ್ಷದ ಲೆಕ್ಕಾಚಾರ ಗಿಟ್ಟುತ್ತಿಲ್ಲವೇಕೆ, ತಪ್ಪಾಗುತ್ತಿರುವುದೆಲ್ಲಿ? ಎಂಬುದು ಪ್ರಶ್ನೆ.
ಅನುಕೂಲಸಿಂಧುತ್ವದಿಂದ ಧಕ್ಕೆ
ರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸುತ್ತಿರುವ ‘ಎನ್‌ಡಿಎ’ ಮತ್ತು ‘ಇಂಡಿಯಾ’ ಮೈತ್ರಿ ಕೂಟಗಳಿಗೆ ಹೊರತಾದ ತೃತೀಯ ರಂಗವನ್ನು ಮುಂಚೂಣಿಗೆ ತರುವುದು ಕಸರತ್ತೇ ಆಗಿರುವಂತೆ, ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ನೆಲೆಗೊಳ್ಳುವುದೂ ಹರಸಾಹಸದ ಬಾಬತ್ತಾಗಿದೆ. “ಎಷ್ಟಾದ್ರೂ ನಾವು ಪ್ರಾದೇ ಶಿಕ ಮಟ್ಟಕ್ಕೆ ಸೀಮಿತವಲ್ಲವೇ, ನಮ್ ಹತ್ರ ಹಣಬಲ-ಜನಬಲ ಎಲ್ಲಿಂದ ಬರಬೇಕು?" ಅಂತ ಕಾಗೆ ಹಾರಿಸುತ್ತಲೇ ಅನುಕೂಲಸಿಂಧು ರಾಜಕಾರಣ ಮಾಡಿದವರು ನಮ್ಮಲ್ಲಿದ್ದಾರೆ ಎನ್ನಿ! ಇಂಥವರು ಸರಕಾರದ ರಚನೆಯ ವೇಳೆ ಬಾಹ್ಯರೂಪದಲ್ಲೋ ಅಥವಾ ಸಹಭಾಗಿಯಾಗುವ ಮೂಲಕವೋ ತಮ್ಮ ಬೇಳೆ ಬೇಯಿಸಿಕೊಂಡಿರುವುದುಂಟು. ಇದನ್ನು ಕಂಡೇ ರಾಜ್ಯದ ಮತದಾರರು ಪ್ರಾದೇಶಿಕ ಪಕ್ಷಗಳಿಗೆ ಬೆಲೆ ಮತ್ತು ಬಲವನ್ನು ನೀಡಿಲ್ಲವೇ? ಆ ಅನುಕೂಲ ಸಿಂಧುತ್ವವೇ ಪ್ರಾದೇಶಿಕ ಪಕ್ಷಗಳಿಗೆ ಮುಳುವಾಯಿತೇ? ಎಂಬುದು ಈ ಸಂದರ್ಭದಲ್ಲಿ ಹೊಮ್ಮುವ ಮತ್ತೊಂದು ಪ್ರಶ್ನೆ.
ತಮಿಳರ ಕಟ್ಟರ್ ಹಠ!
ತಮಿಳುನಾಡಿನಲ್ಲೀಗ ರಾಷ್ಟ್ರೀಯ ಪಕ್ಷ ಬಿಜೆಪಿ ಸದ್ದು ಮಾಡುತ್ತಿದೆಯಾದರೂ, ದಶಕಗಳಿಂದಲೂ ಅಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಪಾರಮ್ಯ. ಅಲ್ಲಿನ ದ್ರಾವಿಡ ಪಕ್ಷಗಳಾದ ಡಿಎಂಕೆ-ಎಐಎಡಿಎಂಕೆಗಳು ‘ಪರ್ಯಾಯ’ದ ರೀತಿಯಲ್ಲಿ ಗದ್ದುಗೆ ಏರುತ್ತಿವೆಯೇ ವಿನಾ, ಅಲ್ಲಿ ರಾಷ್ಟ್ರೀಯ ಪಕ್ಷಗಳ ಒಳತೂರಿಕೆಗೆ ಆಸ್ಪದವಾಗಿಲ್ಲ (ದಶಕಗಳ ಹಿಂದೊಮ್ಮೆ ಕಾಂಗ್ರೆಸ್ ದರ್ಬಾರು ನಡೆಸಿದ್ದು ಬಿಟ್ಟರೆ). ಲೋಕ ಸಭಾ ಚುನಾವಣೆ ವೇಳೆ ರಾಷ್ಟ್ರೀಯ ಪ್ರಾಮುಖ್ಯದ ಚರ್ಚಾವಿಷಯಗಳು/ರಾಷ್ಟ್ರೀಯ ಪಕ್ಷಗಳು ಮುನ್ನೆಲೆಗೆ ಬರುವುದು ವಾಡಿಕೆ; ಆದರೆ ತಮಿಳರದ್ದು ಇಲ್ಲೂ ‘ಕಟ್ಟರ್’ ಹಠ! ಈ ವೇಳೆ ಡಿಎಂಕೆ ಅಥವಾ ಎಐಎಡಿಎಂಕೆ ಪೈಕಿ ಒಂದರ ಅಭ್ಯರ್ಥಿಗಳನ್ನೇ ಅಲ್ಲಿ ಚುನಾಯಿಸು ವುದು ವಾಡಿಕೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಬ್ಬರದ ಹೊರತಾಗಿಯೂ, ಗಣನೀಯ ಸಂಖ್ಯೆಯ ಡಿಎಂಕೆ ಸಂಸದರು ಆಯ್ಕೆಯಾಗಿದ್ದು ಇದಕ್ಕೆ ಸಾಕ್ಷಿ.
ಪ್ರಭಾವಿಸಲು ಸಾಧ್ಯವಿದೆ
ತಮಿಳುನಾಡಿನ ಡಿಎಂಕೆ ಪಕ್ಷವು ‘ಎನ್‌ಡಿಎ’ ಮೈತ್ರಿಕೂಟದ ಸಹಭಾಗಿಯಲ್ಲ, ಹೀಗಾಗಿ ಪ್ರಸ್ತುತ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದಲ್ಲಿ ಡಿಎಂಕೆಯ ಆಟಗಳಿಗೆ ಆಸ್ಪದ ಸಿಗದಿರಬಹುದು; ಆದರೆ ಹೀಗೆ ಸಹಭಾಗಿಯಾಗುವ ಅವಕಾಶ ಸಿಕ್ಕಾಗಲೆಲ್ಲಾ ಡಿಎಂಕೆ ಅಥವಾ ಎಐಎಡಿಎಂಕೆ ಪಕ್ಷಗಳು ತಮ್ಮ ಸಂಖ್ಯಾಬಲವನ್ನು ಬಳಸಿಕೊಂಡು (ಕೆಲವೊಮ್ಮೆ ಸರಕಾರವನ್ನು ಕದಲಿಸುವ ಬೆದರಿಕೆಯನ್ನೂ ಹಾಕಿ!), ತಮಿಳುನಾಡಿಗೆ ಆಗಬೇಕಿರುವ ಕೆಲಸಗಳನ್ನು ಮಾಡಿಸಿ ಕೊಂಡಿದ್ದಿದೆ, ಯೋಜನೆಗಳನ್ನು ಮಂಜೂರು ಮಾಡಿಸಿಕೊಂಡಿದ್ದಿದೆ. ರಾಜ್ಯ ಮಟ್ಟದಲ್ಲಿ ‘ವರ್ಚಸ್ವಿ’ ಪ್ರಾದೇಶಿಕ ಪಕ್ಷವೊಂದಿದ್ದರೆ, ಹೀಗೆ ಅಗತ್ಯ ಕೆಲಸಗಳನ್ನು ಮಾಡಿಸಿಕೊಳ್ಳಬಹುದು ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೇ.
ಭಿನ್ನವಾದವೂ ಇದೆ
‘ಕೇಂದ್ರದ ಮಟ್ಟದಲ್ಲಿನ ಅಥವಾ ನೆರೆರಾಜ್ಯಗಳ ಜತೆಗಿನ ಎಲ್ಲ ಸಮಸ್ಯೆ ಗಳಿಗೂ ಪ್ರಬಲ ಪ್ರಾದೇಶಿಕ ಪಕ್ಷಗಳೇ ಮದ್ದು ಅರೆಯಬಲ್ಲವು, ಅವಿದ್ದರೆ ರಾಜ್ಯ ಪ್ರಗತಿಪಥದತ್ತ ಹೆಜ್ಜೆಹಾಕಬಲ್ಲದು’ ಎಂಬ ವಾದವನ್ನು ನಿರಾಕರಿಸುವವರೂ ಇದ್ದಾರೆ. ‘ಕರ್ನಾಟಕವನ್ನು ಇದುವರೆಗೂ ಪ್ರಾದೇಶಿಕ ಪಕ್ಷ ಆಳಿದ್ದಿಲ್ಲ; ಹಾಗಂತ ರಾಜ್ಯಕ್ಕೇನು ರಾವು ಬಡಿದಿದೆಯೇ, ಮಾಹಿತಿ ತಂತ್ರಜ್ಞಾನ, ಜವಳಿ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಕರ್ನಾಟಕ ಪಾರಮ್ಯ ಸಾಧಿಸಿದ್ದು ಆಯಾ ಕಾಲಘಟ್ಟದಲ್ಲಿ ಅಧಿಕಾರ ದಲ್ಲಿದ್ದ ರಾಷ್ಟ್ರೀಯ ಪಕ್ಷಗಳು ಕಲ್ಪಿಸಿದ ಉದ್ಯಮಿ-ಸ್ನೇಹಿ ವಾತಾವರಣದಿಂದಾಗಿ ಅಲ್ಲವೇ?’ ಎಂಬುದು ಇಂಥ ನಿರಾಕರಣವಾದಿಗಳ ವಾದ! ಜತೆಗೆ, ‘ಕಾವೇರಿ ನದಿನೀರು ಹಂಚಿಕೆ ಸಂಬಂಧಿತ ತಕರಾರಿನಲ್ಲಿ ರಾಜ್ಯಕ್ಕೆ ಪ್ರಾದೇಶಿಕ ಪಕ್ಷಗಳಷ್ಟೇ ನ್ಯಾಯ ಒದಗಿಸಬಲ್ಲವು ಎಂಬ ವಾದದಲ್ಲಿ ಹುರು ಳಿಲ್ಲ; ಇದರ ಇತ್ಯರ್ಥಕ್ಕೆ ಬೇಕಿರುವುದು ರಾಜಕೀಯ ಇಚ್ಛಾಶಕ್ತಿಯಷ್ಟೇ. ಆಳುಗರಲ್ಲಿ ಅದಿಲ್ಲವಾದರೆ ರಾಷ್ಟ್ರೀಯ/ಪ್ರಾದೇಶಿಕ ಹೀಗೆ ಯಾವ ಹಣೆಪಟ್ಟಿಯವರಿದ್ದರೂ ರಾಜ್ಯಕ್ಕೆ ನ್ಯಾಯ ದೊರಕದು’ ಎಂಬುದು ಇಂಥವರ ‘ಭಿನ್ನವಾದ’!
ಜನರ ಒಲವು-ನಿಲುವು
ಪ್ರಾದೇಶಿಕ ಪಕ್ಷಗಳೆಡೆಗೆ ಕನ್ನಡಿಗರ ಒಲವಿಲ್ಲ ಎಂದೇನಿಲ್ಲ; ಆದರೆ ಅವುಗಳ ಹಿಂದಿನ ‘ಗುಪ್ತ ಕಾರ್ಯಸೂಚಿ’ ಕಂಡು ಅವರು ಭ್ರಮನಿರಸನಗೊಂಡಿದ್ದಾರಷ್ಟೇ! ಜನ ಕಲ್ಯಾಣದ ತುಡಿತ ದೊಂದಿಗೆ ಪ್ರಾದೇಶಿಕ ಪಕ್ಷಗಳನ್ನು ಹುಟ್ಟುಹಾಕಿದವರು ನಮ್ಮಲ್ಲಿ ಇರುವಂತೆಯೇ, ತಮ್ಮದೇ ‘ಹಿತಾಸಕ್ತಿ’ಯ ನೆರವೇರಿಕೆಗೆ ಆ ನಿಟ್ಟಿನಲ್ಲಿ ಹಾತೊರೆದವರೂ ಇದ್ದಾರೆ. ಮೊದಲ ವರ್ಗದವರಿಗೆ ಜನ ಮನ್ನಣೆ ದಕ್ಕಲು ಇನ್ನೂ ಒಂದಿಷ್ಟು ಕಾಲ ವಾಗಬಹುದು; ಆದರೆ 2ನೇ ವರ್ಗದವರಿಂದ ಜನರು ಹತಾಶರಾಗಿದ್ದಾರೆ. ಅಂದರೆ, ಈ 2ನೇ ವರ್ಗದವರಿಗೆ ನಿಜಕ್ಕೂ ಜನಹಿತದ ಆಶಯ ಇದ್ದಿದ್ದರೆ ಪ್ರಾಯಶಃ ಜನರು ಅವರಿಗೆ ಓಗೊಡುತ್ತಿದ್ದರೇನೋ? ಆದರೆ ಇಂಥ ನಾಯಕರು ಪ್ರಾದೇಶಿಕ ಪಕ್ಷಕ್ಕೆ ಚಾಲನೆ ನೀಡಿದ್ದೇ ಭಿನ್ನ ಸಂದರ್ಭಗಳಲ್ಲಿ. ಅಂದರೆ, ಮೂಲಪಕ್ಷದಲ್ಲಿ ತಮಗೆ ಮಹತ್ವ - ಮರ್ಯಾದೆ-ಸ್ಥಾನಮಾನ ಸಿಗಲಿಲ್ಲ ಎಂಬ ಕಾರಣಕ್ಕೆ ಹೊರಬಂದು ತಮ್ಮದೇ ಪಕ್ಷವನ್ನು ಕಟ್ಟಿದ ವವರನ್ನು ‘ಇವರದ್ದು ಸ್ವಾರ್ಥಲಾಲಸೆ’ ಎಂದೇ ರಾಜ್ಯದ ಪ್ರಜ್ಞಾವಂತರು ಪರಿಗಣಿಸಿ ಮೂಲೆಗೆ ತಳ್ಳಿದ್ದಾರಷ್ಟೇ!
ಒಗ್ಗಟ್ಟು ಇಲ್ಲ ಕಣ್ರೀ!
ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗಿದೆ ಎನಿಸಿದಾಗೆಲ್ಲಾ, “ನಮ್ಮ ಮನೆಯ ಹಿತ್ತಿಲನ್ನು ನಾವೇ ಕಾಯಬೇಕು" ಎಂಬ ಆಗ್ರಹ ಮುನ್ನೆಲೆಗೆ ಬರುವುದಿದೆ. ಈ ವಿಷಯದಲ್ಲಿ ಎಲ್ಲರೂ ಬೆರಳು ಮಾಡಿ
ತೋರಿಸುವುದು ತಮಿಳುನಾಡಿನೆಡೆಗೆ. ಅಲ್ಲಿ ಶಿಕ್ಷಣದಲ್ಲಿ ಹಿಂದಿ ಹೇರಿಕೆ, ನದಿ ನೀರು ಹಂಚಿಕೆ ಹೀಗೆ ಯಾವುದೇ ವಿಷಯದಲ್ಲಿ ಹುಯಿಲೆದ್ದರೂ ಅಲ್ಲಿನ ಪ್ರಾದೇಶಿಕ ಪಕ್ಷಗಳ ಶಾಸಕರು/ ಸಂಸದರು ಪಕ್ಷ ಭೇದ ಮರೆತು, ರಾಜ್ಯದ ಹಿತ ರಕ್ಷಣೆಯನ್ನು ‘ಸಮಷ್ಟಿ ಗುರಿಯಾಗಿ’ ಪರಿಗಣಿಸಿ ಸಾಧಿಸಿಕೊಳ್ಳುತ್ತಾರೆ. ಆದರೆ ಕರ್ನಾಟಕದಲ್ಲಿ ಇಂಥ ಒಗ್ಗಟ್ಟು ಕಮ್ಮಿ ಎಂಬುದು ಬಹುತೇಕರ ಅಳಲು.
ಪ್ರಾದೇಶಿಕ ಪಕ್ಷಗಳ ಪಕ್ಷಿನೋಟ
‘ಇಂಡಿಯಾ’ ಮೈತ್ರಿಕೂಟದ ಸಹಭಾಗಿಯಾಗಿರುವ ‘ಜಾರ್ಖಂಡ್ ಮುಕ್ತಿ ಮೋರ್ಚಾ’ ಕಳೆದ ವರ್ಷದ ಜುಲೈನಲ್ಲಿ ಜಾರ್ಖಂಡ್‌ನಲ್ಲಿ ಅಧಿಕಾರಕ್ಕೆ ಬಂತು. ಮಹಾರಾಷ್ಟ್ರದಲ್ಲಿ ಈಗಿನದು ಭಿನ್ನ ಪರಿಸ್ಥಿ ತಿಯೇ ಆಗಿದ್ದರೂ, ಬಾಳಾ ಠಾಕ್ರೆ ಅಬ್ಬರವಿದ್ದಾಗ ಮತ್ತು ನಂತರದ ಸಾಕಷ್ಟು ವರ್ಷಗಳವರೆಗೆ ಅಲ್ಲಿನ ‘ಶಿವಸೇನೆ’ ಭಾರಿ ಪ್ರಭಾವವನ್ನು ಹೊಂದಿತ್ತು. ಶರದ್ಪವಾರ್‌ರ ‘ನ್ಯಾಷನಲ್ ಕಾಂಗ್ರೆಸ್ ಪಾರ್ಟಿ’ಗೂ ಈ ಮಾತು ಅನ್ವಯ. ಪಶ್ಚಿಮ ಬಂಗಾಳವನ್ನು ಸಾಕಷ್ಟು ವರ್ಷ ಆಳಿದ ಕಮ್ಯುನಿಸ್ಟ ರನ್ನು ಪಲ್ಲಟಗೊಳಿಸಿದ್ದು ‘ತೃಣಮೂಲ ಕಾಂಗ್ರೆಸ್’. ಇದರ ಅಧಿನಾಯಕಿ ಮಮತಾ ಬ್ಯಾನರ್ಜಿ ರಾಷ್ಟ್ರೀಯ ರಾಜಕಾರಣದ ಮೇಲೂ ಪ್ರಭಾವ ಬೀರಬಲ್ಲಾಕೆ.
ಜಮ್ಮು-ಕಾಶ್ಮೀರದಲ್ಲಿ ಗದ್ದುಗೆಯೇರುವ ಹವಣಿಕೆಯಲ್ಲಿತ್ತು ಬಿಜೆಪಿ; ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಲ್ಲಿನ ಜನ ಓಗೊಟ್ಟಿದ್ದು ‘ಜಮ್ಮು-ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್’ ಪಕ್ಷಕ್ಕೆ.
ಎನ್.ಟಿ.ರಾಮರಾವ್ ಸಿಎಂ ಆಗಿದ್ದಾಗ ತನ್ನದೇ ಆದ ಅಬ್ಬರ ಹೊಂದಿದ್ದ ‘ತೆಲುಗುದೇಶಂ’ ಈಗ ಮತ್ತೊಮ್ಮೆ ಆಂಧ್ರದಲ್ಲಿ ಪಾರಮ್ಯವನ್ನು ಸಾಧಿಸಿದೆ. ತೆಲಂಗಾಣದಲ್ಲಿ ಪ್ರಸ್ತುತ ಕಾಂಗ್ರೆಸ್ ಸರಕಾರ ಇದೆಯಾದರೂ, ಅದಕ್ಕೂ ಮುನ್ನ ಅಲ್ಲಿ ದರ್ಬಾರು ಮಾಡಿದ್ದು ಕೆ.ಸಿ.ಚಂದ್ರಶೇಖರ ರಾವ್ ಅವರ ‘ತೆಲಂಗಾಣ ರಾಷ್ಟ್ರೀಯ ಸಮಿತಿ’. ಒಡಿಶಾದಲ್ಲಿ ಪ್ರಸ್ತುತ ಬಿಜೆಪಿಯ ಕಮಲದ ದಳಗಳು ರಾರಾಜಿಸು ತ್ತಿರಬಹುದು, ಆದರೆ ಅಲ್ಲಿ ಸಾಕಷ್ಟು ವರ್ಷ ದರ್ಬಾರು ಮಾಡಿದ್ದು ‘ಬಿಜು ಜನತಾ ದಳ’ ಎಂಬು ದನ್ನು ಮರೆಯಲಾಗದು.
ಭರಪೂರ ಪಕ್ಷಗಳು
ಡಿಎಂಕೆ ಮತ್ತು ಎಐಎಡಿಎಂಕೆ ಮಾತ್ರವಲ್ಲದೆ ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳ ಮಹಾ ಪೂರವೇ ಇದೆ. ಈ ಪೈಕಿ ಎಲ್ಲಕ್ಕೂ ಅಧಿಕಾರಭಾಗ್ಯ ಸಿಕ್ಕಿಲ್ಲವಾದರೂ, ಅಸ್ತಿತ್ವವನ್ನು ಕಾಪಿಟ್ಟು ಕೊಳ್ಳುವಲ್ಲಿ ಅವು ಸಾಕಷ್ಟು ಕಸರತ್ತು ಮಾಡಿವೆ.
ಅಂಥ ಕೆಲವದರ ಪ್ರವರ ಇಲ್ಲಿದೆ:
? ಮಕ್ಕಳ್ ನೀಧಿ ಮಯ್ಯಂ
? ತಮಿಳಗ ವೆಟ್ರಿ ಕಳಗಂ
? ದೇಸೀಯ ಮೂರ್ಪೊಕ್ಕು ಡ್ರಾವಿಡ ಕಳಗಂ
? ನಾಮ್ ತಮಿಳರ್ ಕಚ್ಚಿ
? ವಿಡುದಲೈ ಚಿರತೈಗಳ್ ಕಚ್ಚಿ
? ಅಮ್ಮಾ ಮಕ್ಕಳ್ ಮುನ್ನೇತ ಕಳಗಂ
? ಇಂಡಿಯಾ ಜನನಾಯಗ ಕಚ್ಚಿ
? ಕೊಂಗುನಾಡು ಮಕ್ಕಳ್ ದೇಸೀಯ ಕಚ್ಚಿ
? ಮರುಮಲರ್ಚಿ ದ್ರಾವಿಡ ಮುನ್ನೇತ ಕಳಗಂ
? ಪಟ್ಟಾಳಿ ಮಕ್ಕಳ್ ಕಚ್ಚಿ
? ಪುರಚ್ಚಿ ಭಾರತಂ ಕಚ್ಚಿ
? ಪುಥಿಯ ತಮಿಳಗಂ
? ತಮಿಳ್ ಮನಿಲಾ ಕಾಂಗ್ರೆಸ್
ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳು
ಜಮ್ಮು ಮತ್ತು ಕಾಶ್ಮೀರ- ಜೆಕೆಎನ್‌ಸಿ
ಪಂಜಾಬ್- ಆಮ್ ಆದ್ಮಿ ಪಾರ್ಟಿ
ಸಿಕ್ಕಿಂ- ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ
ಜಾರ್ಖಂಡ್ -ಜಾರ್ಖಂಡ್ ಮುಕ್ತಿ ಮೋರ್ಚಾ
ಆಂಧ ಪ್ರದೇಶ -ತೆಲುಗುದೇಶಂ
ಪಶ್ಚಿಮ ಬಂಗಾಳ -ತೃಣಮೂಲ ಕಾಂಗ್ರೆಸ್
ಕೇರಳ- ಸಿಪಿಐ(ಎಂ)ನೇತೃತ್ವದ ಎಲ್‌ಡಿಎಫ್
ನಾಗಾಲ್ಯಾಂಡ್ -ಎನ್‌ಡಿಪಿಪಿ
ತಮಿಳುನಾಡು- ಡಿಎಂಕೆ