Rename Ramanagara District: ರಾಮನಗರ ಇನ್ನುಮುಂದೆ 'ಬೆಂಗಳೂರು ದಕ್ಷಿಣ ಜಿಲ್ಲೆ'; ಮರುನಾಮಕರಣಕ್ಕೆ ಸಚಿವ ಸಂಪುಟ ಒಪ್ಪಿಗೆ
Rename Ramanagara District: ವಿಶ್ವದಲ್ಲೇ ಬೆಂಗಳೂರು ದಕ್ಷಿಣ ದೊಡ್ಡದಾಗಿ ಬೆಳೆಯುತ್ತಿದೆ. ಕಾನೂನು ಚೌಕಟ್ಟನ್ನು ಗಮನದಲ್ಲಿಟ್ಟುಕೊಂಡು ರಾಮನಗರ ಜಿಲ್ಲೆ ಹೆಸರು ಬದಲಾವಣೆ ಮಾಡಿದ್ದೇವೆ. ಉಳಿದಂತೆ ಕ್ಷೇತ್ರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.


ಬೆಂಗಳೂರು: ರಾಮನಗರ ಜಿಲ್ಲೆಯನ್ನು 'ಬೆಂಗಳೂರು ದಕ್ಷಿಣ ಜಿಲ್ಲೆ' (Bengaluru South District) ಎಂದು ಮರು ನಾಮಕರಣ ಮಾಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಡಿಸಿಎಂ, ರಾಮನಗರ ಜಿಲ್ಲೆಯ (Rename Ramanagara District) ಹೆಸರು ಬದಲಾಯಿಸುವ ಬಗ್ಗೆ ನಿರ್ಧಾರ ಮಾಡಲಾಗಿದೆ. ಈ ಸಂಬಂಧ ಅಧಿಕೃತವಾಗಿ ಆದೇಶ ಹೊರ ಬೀಳಲಿದೆ. ಜಿಲ್ಲೆಗೆ ರಾಮನಗರವೇ ಜಿಲ್ಲಾಕೇಂದ್ರ ಆಗಿರಲಿದೆ ಎಂದು ತಿಳಿಸಿದ್ದಾರೆ.
ರಾಮನಗರ ಹೆಸರು ಬದಲಾವಣೆಯ ಅಧಿಸೂಚನೆ ಇವತ್ತು ಆಗುತ್ತದೆ. ಹೆಸರು ಬದಲಾವಣೆ ಮಾಡಲು ಯಾವುದೇ ಹಣ ಖರ್ಚಾಗಲ್ಲ. ರಾಮನಗರ ಮೊದಲು ಬೆಂಗಳೂರು ಜಿಲ್ಲೆಗೆ ಸೇರಿತ್ತು. ಕನಕಪುರ, ಚನ್ನಪಟ್ಟಣ ಬೆಂಗಳೂರು ಜಿಲ್ಲೆಗೆ ಸೇರಿತ್ತು. ಹಿಂದೆ ನಾನು ಕೂಡ ಬೆಂಗಳೂರು ಜಿಲ್ಲೆಯ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೆ. ಬೆಂಗಳೂರು ಹೆಸರು ಉಳಿಸಬೇಕಿತ್ತು. ಅದಕ್ಕಾಗಿ ಹೆಸರು ಬದಲಾವಣೆ ಮಾಡಿದ್ದೇವೆ.
ನನ್ನನ್ನ ಕೂಡ ನೀವು ಬೆಂಗಳೂರು ದಕ್ಷಿಣ ಜಿಲ್ಲೆಯವರು ಎಂದು ಕರೆಯಬೇಕು. ಹೆಸರು ಬದಲಾವಣೆಗೆ ಕೇಂದ್ರಕ್ಕೆ ಯಾವುದೇ ಅಧಿಕಾರ ಇರಲಿಲ್ಲ. ಕೇಂದ್ರದ ಗಮನಕ್ಕೆ ತರಬೇಕಿತ್ತು, ಹಾಗಾಗಿ ಹೆಸರನ್ನು ಕಳುಹಿಸಿಕೊಟ್ಟಿದ್ದೆವು ಅಷ್ಟೇ. ವಿಶ್ವದಲ್ಲೇ ಬೆಂಗಳೂರು ದಕ್ಷಿಣ ದೊಡ್ಡದಾಗಿ ಬೆಳೆಯುತ್ತಿದೆ. ಕಾನೂನು ಚೌಕಟ್ಟನ್ನು ಗಮನದಲ್ಲಿಟ್ಟುಕೊಂಡು ಹೆಸರು ಬದಲಾವಣೆ ಮಾಡಿದ್ದೇವೆ. ಉಳಿದಂತೆ ಕ್ಷೇತ್ರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈಗ ಹೇಗಿದೆಯೋ ಹಾಗೆಯೇ ಇರಲಿದೆ ಎಂದು ತಿಳಿಸಿದ್ದಾರೆ.
ಇನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ನಾಗರಿಕ ಸೌಲಭ್ಯ ನಿವೇಶನ ಹಂಚಿಕೆ) ನಿಯಮಗಳು, 1989ನ್ನು ಸಡಿಲಿಕೆ ಮಾಡಲಾಗಿದೆ. ಅದರ ಪ್ರಕಾರ, ಒಂದು ಬಾರಿಯ ಕ್ರಮವಾಗಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಾಗರಿಕ ಸೌಲಭ್ಯ ನಿವೇಶನ ಹಂಚಿಕೆ ಪಡೆದಿರುವ ವಿವಿಧ ಸಂಘ/ಸಂಸ್ಥೆಗಳು ಬಾಕಿ ಉಳಿಸಿಕೊಂಡಿರುವ ಸಂಪೂರ್ಣ ಗುತ್ತಿಗೆ ಮೌಲ್ಯವನ್ನು ಪ್ರಾಧಿಕಾರವು ಪ್ರಕಟಣೆ ನೀಡಿದ 120 ದಿನಗಳೊಳಗಾಗಿ ಪಾವತಿಸಿದರೆ, ನಿಯಮಾನುಸಾರ ವಿಧಿಸಲಾಗುವ ಬಡ್ಡಿಯ ಮೊತ್ತವನ್ನು ಸಂಪೂರ್ಣವಾಗಿ ಮನ್ನಾ ಮಾಡಲು ಸಂಪುಟ ಸಭೆ ಅನುಮೋದನೆ ನೀಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತಿಯಾಗುವ ಹಸಿ ತ್ಯಾಜ್ಯ, ಒಣಿ ತ್ಯಾಜ್ಯ, ನೈರ್ಮಲ್ಯ ನೈರ್ಮಲ್ಯ ತ್ಯಾಜ್ಯ ಮತ್ತು ರಸ್ತೆ ತ್ಯಾಜ್ಯದ ಸಂಗ್ರಹಣೆ ಮತ್ತು ಸಾಗಾಣಿಕೆ ಸೇವೆಗಾಗಿ 7 ವರ್ಷಗಳ ಅವಧಿಗೆ 4,791.95 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಪ್ಯಾಕೇಜ್‌ಗಳನ್ನಾಗಿ 33 ವಿಂಗಡಿಸಿ, ಟೆಂಡರ್ ಮೂಲಕ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ ಎಂದು ತಿಳಿಸಿದರು.
ಬೆಂಗಳೂರು ಮೆಟ್ರೋ ರೈಲು ಹಂತ-3 ಯೋಜನೆಯ 40,425.02 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು.
ಈ ಸುದ್ದಿಯನ್ನೂ ಓದಿ | Ranya Rao Case: ರನ್ಯಾ ಮದುವೆಗೆ ಸಚಿವ ಪರಮೇಶ್ವರ್ 25 ಲಕ್ಷ ಗಿಫ್ಟ್ ನೀಡಿದ್ರಾ?; ಡಿಕೆಶಿ ಹೇಳಿದ್ದೇನು?