Fraud case: ಪಿಎಸ್‌ಐ ಹುದ್ದೆ ಕೊಡಿಸುವುದಾಗಿ 45 ಲಕ್ಷ ವಂಚನೆ; ವೈದ್ಯ ಸೇರಿ ಇಬ್ಬರ ಬಂಧನ
Fraud case: ಈ ಹಿಂದೆ ಕೋವಿಡ್ ಚಿಕಿತ್ಸೆಗೆ ಅನುಮತಿ ಇಲ್ಲದೆ ಚಿಕಿತ್ಸೆ ನೀಡಿ ಹಲವರ ಸಾವಿಗೆ ಕಾರಣವಾಗಿದ್ದ ವೈದ್ಯನ ವಿರುದ್ಧ ಜಿಲ್ಲಾಧಿಕಾರಿ ಆಸ್ಪತ್ರೆ ಮುಚ್ಚುವಂತೆ ಆದೇಶಿಸಿದ್ದರು. ಈ ಮೂಲಕ ಸುದ್ದಿಯಾಗಿದ್ದ ವೈದ್ಯ ಇದೀಗ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ.


ದಾಬಸ್ ಪೇಟೆ: ಸಬ್ ಇನ್ಸ್‌ಪೆಕ್ಟರ್ ಕೆಲಸ ಕೊಡಿಸುವುದಾಗಿ ಆಮಿಷ ಒಡ್ಡಿ 45 ಲಕ್ಷ ಪಡೆದು ವಂಚನೆ (Fraud case) ಮಾಡಿರುವ ಆರೋಪದಡಿ ಆರೋಗ್ಯ ಭಾರತಿ ಆಸ್ಪತ್ರೆ ವೈದ್ಯ ಚಂದ್ರಶೇಖರ್ ಹಾಗೂ ಯೋಗೇಂದ್ರ ಎಂಬುವವರನ್ನು ದಾಬಸ್ ಪೇಟೆ ಪೋಲೀಸರು ಬಂಧಿಸಿದ್ದಾರೆ. ಬಿಲ್ಲನಕೋಟೆ ಗ್ರಾಮದ ಅನಿಲ್ ಕುಮಾರ್ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಈ ಹಿಂದೆ ಕೋವಿಡ್ ಚಿಕಿತ್ಸೆಗೆ ಅನುಮತಿ ಇಲ್ಲದೆ ಚಿಕಿತ್ಸೆ ನೀಡಿ ಹಲವರ ಸಾವಿಗೆ ಕಾರಣವಾಗಿದ್ದ ವೈದ್ಯ ಚಂದ್ರಶೇಖರ್ ವಿರುದ್ಧ ಜಿಲ್ಲಾಧಿಕಾರಿ ಆಸ್ಪತ್ರೆ ಮುಚ್ಚುವಂತೆ ಆದೇಶಿಸಿದ್ದರು. ಈ ಮೂಲಕ ಸುದ್ದಿಯಾಗಿದ್ದ ವೈದ್ಯ ಇದೀಗ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ.
ವೈದ್ಯ ಚಂದ್ರಶೇಖರ್ ಕಾಂಗ್ರೆಸ್, ಬಿಜೆಪಿ ಮುಖಂಡರೊಂದಿಗೆ ಫೋಟೊ ತೆಗೆಸಿಕೊಂಡು ನಾನು ರಾಜಕಾರಣಿ ಎಂದು ಪೋಸ್ ನೀಡುವುದನ್ನೇ ಬಂಡವಾಳ ಮಾಡಿಕೊಂಡು ಅಮಾಯಕರಿಂದ ವೈದ್ಯ ಹಣ ದೋಚಿದ್ದಾನೆ. ಇನ್ನು ಹಲವರಿಗೆ ವಂಚನೆ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದ ಯೋಗೇಂದ್ರ ಒಂದೂವರೆ ವರ್ಷದಿಂದ ದುಬೈನಲ್ಲಿ ತಲೆ ಮರೆಸಿಕೊಂಡಿದ್ದ. ಇತ್ತೀಚೆಗೆ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದೇಶಕ್ಕೆ ವಾಪಸ್ ಆದಾಗ ವಶಕ್ಕೆ ಪಡೆದಿದ್ದರು.
ಇನ್ನು ಮೋಸದ ಜಾಲ ಸೃಷ್ಟಿಸಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ಹಣ ದೋಚಿರುವ ಆರೋಪ ಇವರ ವಿರುದ್ಧ ಕೇಳಿಬಂದಿದೆ. ಆರೋಗ್ಯ ಭಾರತಿ ಆಸ್ಪತ್ರೆ ವೈದ್ಯ ಚಂದ್ರಶೇಖರ್, ದಾಬಸ್ ಪೇಟೆ ಸೇರಿ ಹಲವೆಡೆ ಕೋಟ್ಯಂತರ ಬೆಲೆ ಬಾಳುವ ಆಸ್ತಿ, ಬಂಗಲೆ ಹೊಂದಿದ್ದಾರೆ.
ದೂರುದಾರ ಅನಿಲ್ ಕುಮಾರ್ ಅವರ ಬಾಮೈದ ಪುರುಷೋತ್ತಮ್ ಡಿಗ್ರಿ ಮುಗಿಸಿ, ಪಿಎಸ್‌ಐ ಪರೀಕ್ಷೆ ಬರೆದಿದ್ದರು. ಅನಿಲ್ ಕುಮಾರ್ ಆಗಾಗ ಆರೋಗ್ಯ ಭಾರತಿ ಆಸ್ಪತ್ರೆಗೆ ಹೋಗುತ್ತಿದ್ದರಿಂದ ವೈದ್ಯ ಚಂದ್ರಶೇಖರ್ ಪರಿಚಯವಾಗಿತ್ತು. ಹೀಗಾಗಿ ಯಾರಿಗಾದರೂ ಸರ್ಕಾರಿ ಕೆಲಸ ಬೇಕಿದ್ದರೆ ಹೇಳಿ, ಮಾಡಿಸಿಕೊಡುತ್ತೇವೆ ಎಂದು ಹೇಳಿದ್ದರು. ಅವರ ಮಾತನ್ನು ನಂಬಿ ಅನಿಲ್ ಕುಮಾರ್, ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 45 ಲಕ್ಷ ವರ್ಗಾವಣೆ ಮಾಡಿದ್ದರು.
ಈ ಸುದ್ದಿಯನ್ನೂ ಓದಿ | Kodi Mutt Swamiji: ಸಿದ್ದರಾಮಯ್ಯರನ್ನು ಸಿಎಂ ಕುರ್ಚಿಯಿಂದ ಇಳಿಸುವುದು ಅಷ್ಟು ಸುಲಭವಲ್ಲ: ಕೋಡಿಮಠ ಶ್ರೀ ಭವಿಷ್ಯ
ಕೆಲಸವೂ ಇಲ್ಲದೆ ಹಣವೂ ನೀಡದೆ ವಂಚನೆ ಬಗ್ಗೆ ಕೇಳಲು ಹೋದರೆ ಬೆದರಿಕೆ ಹಾಗೂ ಜಾತಿ ನಿಂದನೆ ಕೇಸ್ ಹಾಕುವ ಬೆದರಿಕೆ ಆರೋಪದಡಿ ಪ್ರಕರಣ ದಾಖಲಾಗಿದೆ. ಇಬ್ಬರನ್ನು ಅರೆಸ್ಟ್ ಮಾಡಿ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ.