ಅಡಕೆ, ಕೊಬ್ಬರಿಗೆ ಇರೋ ಕಾಳಜಿ ತೊಗರಿಗೇಕಿಲ್ಲ ?
ಕಳೆದ ಮಾರ್ಚ್ 5ರಂದು ಕಲಬುರಗಿ ನಗರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಜಮಾವಣೆಗೊಂಡು ಹಾಳಾಗಿರುವ ತೊಗರಿಬೆಳೆಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಎತ್ತಿನ ಬಂಡಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿವರೆಗೆ ಆಗಮಿಸಿ, ಪ್ರತಿ ಎಕರೆಗೆ 25 ಸಾವಿರ ರು. ಪರಿಹಾರ ಘೋಷಿಸಬೇಕು ಎಂದು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ರೈತ ಸಂಘಟನೆಗಳು ಎತ್ತಿನ ಬಂಡಿ. ಟ್ರಾಕ್ಟರ್ ಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಸಿದರು


ದೇವೇಂದ ಜಾಡಿ, ಕಲಬುರಗಿ
ಸಂಕಷ್ಟದಲ್ಲಿ ತೊಗರಿ ಬೆಳೆಗಾರ
ಪರಿಹಾರಕ್ಕಾಗಿ ಬೀದಿಗಿಳಿದ ಅನ್ನದಾತ
ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಬೆಳೆ, ದೇಶ, ವಿದೇಶಗಳಿಗೆ ರಫ್ತುಗೊಳ್ಳುವ ಅತ್ಯು ತ್ತಮ ತಳಿಯ ತೊಗರಿ ಬೇಳೆಯನ್ನು ಬೆಳೆಯುವ ಅನ್ನದಾತ ಇವತ್ತು ಸೂಕ್ತ ಬೆಲೆ, ಸರಕಾರದ ಪ್ರೋತ್ಸಾಹ ಇಲ್ಲದೇ ಸಂಪೂರ್ಣವಾಗಿ ಬೀದಿಗೆ ಬಂದಿದ್ದಾನೆ. ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿಯಿಂದ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಸೋಯಾ, ತೊಗರಿ ಸಂಪೂ ರ್ಣ ಹಾಳಾಗಿದ್ದು, ಸಾವಿರಾರು ಹೆಕ್ಟೇರ್ ಬೆಳೆಹಾನಿಯಾಗಿ, ರೈತರು ಸಂಕಷ್ಟಕ್ಕೆ ಸಿಲುಕಿ ಜೀವನ ನಡೆಸುವುದು ಕಷ್ಟಕರವಾಗಿದೆ. ಕಳೆದ ಮಾರ್ಚ್ 5ರಂದು ಕಲಬುರಗಿ ನಗರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಜಮಾವಣೆಗೊಂಡು ಹಾಳಾಗಿರುವ ತೊಗರಿಬೆಳೆಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಎತ್ತಿನ ಬಂಡಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ವರೆಗೆ ಆಗಮಿಸಿ, ಪ್ರತಿ ಎಕರೆಗೆ 25 ಸಾವಿರ ರು. ಪರಿಹಾರ ಘೋಷಿಸಬೇಕು ಎಂದು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ರೈತ ಸಂಘಟನೆಗಳು ಎತ್ತಿನ ಬಂಡಿ. ಟ್ರಾಕ್ಟರ್ ಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: Ranjith H Ashwath Column: ಬಹುಜನ ಹಿತಾಯ, ಬಹುಜನ ಸುಖಾಯ...
ಅಲ್ಲದೇ, ಡಿಸಿ ಕಚೇರಿ ಎದುರಿನ ರಸ್ತೆಯಲ್ಲಿ ಕುಳಿತು ರೊಟ್ಟಿ, ಪುಂಡಿಪಲ್ಯ ಊಟ ಸವಿದು, ಸರಕಾರದ ಧೋರಣೆ ಖಂಡಿಸಿ, ಧಿಕ್ಕಾರ ಘೋಷಣೆ ಕೂಗಿದರು. ಆದರೂ, ಸರಕಾರ ರೈತರಿಗೆ ಪರಿಹಾರ ನೀಡದೇ ಹಿಂದೇಟು ಹಾಕಿ, ರೈತರಿಗೆ ಪೊಳ್ಳು ಭರವಸೆ ನೀಡಿದಂತೂ ಸುಳ್ಳಲ್ಲ. ‘ಏನ್ ಸರ್ ಇದೆಲ್ಲ, ನಮ್ಮೂರಿನ ರೈತ ಬೀದಿಗೆ ಬಂದು, ರಸ್ತೆಯಲ್ಲಿ ಕುಳಿತು, ರೊಟ್ಟಿ ಊಟ ಮಾಡುತ್ತಾನ್ ಸಾರ್, ನೋಡಿದ್ರೆ ಪಾಪ್ ಅನಿಸ್ತಾದ್, ಅವ್ರಿದ್ರಾ ನಾವಿರ್ತೀವಿ, ಇಲ್ಲದಿದ್ರೆ ಖಾಲಿ ಹೊಟ್ಟೇನೇ ನಮ್ಮ ಗತಿ, ಸರಕಾರ ಎನ್ ಮಾಡುತ್ತಾದ್, ನಮ್ಮ ರೈತರು ಹೋರಾಟ ಮಾಡ್ಲಾತಾರ್, ಅವರೇನು ಕಣ್ಣು, ಕೀವಿ ಇಲ್ಲಾರದಂಗ್ ಕುಂತಾರಲ್ಲ. ರೈತರಿಗೆ ಏನ್‌ಬೇಕು ಅದು ಕೊಡ್ಬೇಕ್ ಅಲ್ಲ, ಗವರ್ನಮೆಂಟ್, ಅಕಾಡಿ ಅಡ್ಕಿ, ಕೊಬ್ರಿಗೆ ಅಂದ್ರೆ ಪಟ್ಟನೆ ಪರಿಹಾರ ಕೊಡ್ತಾರಾ, ನಮ್ಮ್ ತೊಗರಿಗೆ ಅಂದ್ರೆ ಕೈನೇ ಬಿಚ್ಚಲ್ಲ ಅಲ್ಲ, ಇವರು’ ಇಂತಹ ಮಾತುಗಳು ಆಡಿದ್ದು, ಕಲಬುರಗಿಯ ಜನತೆ. ತೊಗರಿ ಪರಿಹಾರಕ್ಕಾಗಿ ಮೂರು ದಿನ ರೈತರು ನಡೆಸಿದ ಹೋರಾಟ ಕಂಡ ಕಲಬುರಗಿ ಜನತೆಯ ಆಕ್ರೋಶದ ಮಾತು ರೈತರನ್ನು ಬೆಂಬಲಿಸು ವಂತಿತ್ತು.

ಸುಮಾರು ಶೇ.17ರಷ್ಟು ತೊಗರಿಯನ್ನು ದೇಶದಲ್ಲಿ ಉತ್ಪಾದನೆ ಮಾಡುವ ಕಲಬುರಗಿ ತೊಗರಿ, ಈ ವರ್ಷ 4 ಲಕ್ಷ ಹೆಕ್ಟೇರ್‌ನಷ್ಟು ತೊಗರಿ ನೆಟೆರೋಗಕ್ಕೆ ಹಾನಿಯಾಗಿದ್ದು, ಸರಕಾರ ಪರಿಹಾರ ನೀಡದೇ, ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದೆ ಎಂದು ಹೋರಾಟಗಾರರು ಕಿಡಿಕಾರಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ನೆಟೆರೋಗದಿಂದ ಹಾಳಾದ ತೊಗರಿಗೆ ಸೂಕ್ತ ಪರಿಹಾರ ನೀಡಬೇಕು.
ಜತೆಗೆ ತೊಗರಿ ಪರಿಹಾರಕ್ಕೆ 800 ಕೋಟಿ ರು. ಘೋಷಿ ಸಬೇಕು. ರಾಜ್ಯ ಸರಕಾರವೇ ಸಂಪೂರ್ಣ ವಿಮೆ ನೀಡಬೇಕು. ಜಿಲ್ಲೆಯ ತೊಗರಿ ಬೆಳೆಯುವ ಎಲ್ಲ ರೈತರಿಗೆ ಜಿಐ ಟ್ಯಾಗ್ ಮಾನ್ಯತೆ ನೀಡಬೇಕು. ತೊಗರಿಗೆ ಕನಿಷ್ಠ 10 ಸಾವಿರ ಬೆಂಬಲ ಬೆಲೆ ನೀಡಬೇಕು. ನೆಟೆ ರೋಗ ಬರದಂತೆ ಎಚ್ಚರಿಕೆ ವಹಿಸಬೇಕು. 2024-25ನೇ ಸಾಲಿನಲ್ಲಿ ರೈತರ ಬೆಳೆ ವಿಮೆ ಯಲ್ಲಿ ತಾರತಮ್ಯವಾಗಿದ್ದು, ಪುನಃ ಮಾಪನ ಮಾಡಿ, ನ್ಯಾಯ ಒದಗಿಸಬೇಕು ಎಂಬ ಆಗ್ರಹ ರೈತರದು.
ಅಡಕೆ, ಕೊಬ್ಬರಿಗೆ ಆದ್ಯತೆ
ಕಲಬುರಗಿಯ ತೊಗರಿ ಜಿಐ ಟ್ಯಾಗ್ ಹೊಂದಿದೆ. ದೇಶ, ವಿದೇಶಗಳಿಗೂ ತೊಗರಿ ರಫ್ತು ಆಗುತ್ತದೆ. ಆದರೂ, ಸಹ ಜಿಲ್ಲೆಯ ರೈತ ಸಂಕಷ್ಟದಲ್ಲಿದ್ದಾನೆ. ಅವನ ಸಹಾಯಕ್ಕೆ ಬರ ಬೇಕಿದ್ದ ಸರಕಾರಗಳು ಯಾವಾಗ್ಲೂ ತಾರತಮ್ಯ ತೋರುತ್ತಲೇ ಬಂದಿವೆ. ಅಲ್ಲದೇ, ಅಡಕೆ ಮತ್ತು ಕೊಬ್ಬರಿಗೆ ಸರಕಾರ ಪ್ರತಿಬಾರಿಯೂ ವಿಶೇಷ ಕಾಳಜಿ ತೋರುತ್ತದೆ. ಆದರೆ, ತೊಗರಿಗೆ ಪ್ರೋತ್ಸಾಹ ಸಿಗುತ್ತಿಲ್ಲ. ಪರಿಹಾರ ಮಾರ್ಗಗಳು: ತೊಗರಿ ಬೆಳೆಗಾರರ ಸಂಕಷ್ಟಕ್ಕೆ ಪರಿಹಾರ ನೀಡಲು ಸರಕಾರ ಪ್ರಮುಖ ವಾದ ಕ್ರಮಗಳನ್ನು ಕೈಗೊಳ್ಳಬೇಕು. ಇವುಗಳಲ್ಲಿ ತೊಗರಿಗೆ ಸಂಬಂಧಿಸಿದ ಪ್ರೋತ್ಸಾಹಕರ ಯೋಜನೆಗಳನ್ನು ರೂಪಿಸುವುದು, ಬೆಳೆಗಾರರಿಗೆ ಪೂರಕ ಸೌಲಭ್ಯಗಳನ್ನು ಕಲ್ಪಿಸುವುದು ಮತ್ತು ಮಾರಾಟದ ವಿಚಾರದಲ್ಲಿ ಅನುಕೂಲಕರ ವ್ಯವಸ್ಥೆ ಒದಗಿಸುವುದು. ತೊಗರಿ ಬೆಳೆಗಾರರ ಸಮಸ್ಯೆ ನಿಖರವಾಗಿ ಗುರುತಿಸಿ, ಪರಿಹರಿಸುವುದು.
ತೊಗರಿಗೆ ಕಡೆಗಣನೆ
ಮಲೆನಾಡು ಭಾಗದ ಪ್ರಮುಖ ಬೆಳೆಗಳಾದ ಅಡಕೆ ಹಾಗೂ ಕೊಬ್ಬರಿಗೆ ಸರಕಾರ ತೋರುವ ಕಾಳಜಿ, ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯ ತೊಗರಿಗೆ ನೀಡುತ್ತಿಲ್ಲ. ಇದರಿಂದಾಗಿ ಅಲ್ಲೊಂದು ನ್ಯಾಯ, ಇಲ್ಲೊಂದು ನ್ಯಾಯ ಎನ್ನುವಂತೆ ಸರಕಾರ ತಾರತಮ್ಯ ತೋರುತ್ತಿದ್ದೂ, ತೀರ ಹಿಂದುಳಿದ ಪ್ರದೇಶವಾದ ಕಲಬುರಗಿ ರೈತನಿಗೆ ಸರಕಾರ ಸೂಕ್ತ ಪರಿಹಾರ, ಬೆಂಬಲ ನೀಡದೆ ಕಡೆಗಣಿಸುತ್ತಿದೆ. ಸರಕಾರ ಕರಾವಳಿ, ಮಲೆನಾಡು ಭಾಗದ ಬೆಳೆಗಳಿಗೆ ನೀಡುವ ಕಾಳಜಿ ತೊಗರಿಗೂ ನೀಡಬೇಕು ಎನ್ನುವುದೇ ಈ ರೈತರ ಒತ್ತಾಯ.
*
ಬೇಡಿಕೆಗಳು
ತೊಗರಿ ಪರಿಹಾರಕ್ಕೆ ಜಿಲ್ಲೆಗೆ 800 ಕೋಟಿ ರು. ಪರಿಹಾರ ನೀಡಬೇಕು
ಖಾಸಗಿ ಬೆಳೆ ವಿಮೆ ಯಿಂದ ಅನ್ಯಾಯ, ಸರಕಾರವೇ ವಿಮೆ ಭರಿಸಬೇಕು.
ಕಲಬುರಗಿಯ ತೊಗರಿ ಬೆಳೆಗಾರರಿಗೆ ಜಿಐ ಟ್ಯಾಗ್ ಮಾನ್ಯತೆ ನೀಡಬೇಕು
ತೊಗರಿ ಬೆಳೆಗೆ ೧೦ ಸಾವಿರ ರು. ಕನಿಷ್ಠ ಬೆಂಬಲ ಬೆಲೆ ನೀಡಬೇಕು.