B Sarojadevi: ಬಿ.ಸರೋಜಾದೇವಿ ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರಕ್ಕೆ ನೈಜತೆ ತಂದಿದ್ದರು-ಬೊಮ್ಮಾಯಿ
Basavaraj Bommai: ಕನ್ಮಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾದೇವಿ ಅವರು ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರಕ್ಕೆ ನೈಜತೆ ತಂದಿದ್ದರು. ಅವರ ನಿಧನ ಕರ್ನಾಟಕದ ಕಲಾಕ್ಷೇತ್ರಕ್ಕೆ ಅತ್ಯಂತ ದುಃಖದ ದಿನ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.


ಬೆಂಗಳೂರು: ಕನ್ಮಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾದೇವಿ ಅವರು ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರಕ್ಕೆ ನೈಜತೆ ತಂದಿದ್ದರು. ಅವರ ನಿಧನ ಕರ್ನಾಟಕದ ಕಲಾಕ್ಷೇತ್ರಕ್ಕೆ ಅತ್ಯಂತ ದುಃಖದ ದಿನ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಸಂತಾಪ ಸೂಚಿಸಿದ್ದಾರೆ. ಬಿ. ಸರೋಜಾದೇವಿ ಅವರ ನಿಧನದ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅಭಿನಯ ಸರಸ್ವತಿ, ಚತುರ್ಭಾಷಾ ತಾರೆ ಪೌರಾಣಿಕ ಹಾಗೂ ಸಾಮಾಜಿಕ ಚಲನಚಿತ್ರಗಳಲ್ಲಿ ವಿಭಿನ್ನ ಪಾತ್ರವನ್ನು ಲೀಲಾಜಾಲವಾಗಿ ನಟಿಸುತ್ತಿದ್ದ ಸರೋಜಾದೇವಿ ಇನ್ನಿಲ್ಲ. ಒಂದು ಕಾಲದಲ್ಲಿ ಕನ್ನಡದ ಸೂಪರ್ ಸ್ಟಾರ್ ಆಗಿದ್ದ ಅವರು, ರಾಜಕುಮಾರ್ ಜತೆ, ತೆಲುಗಿನಲ್ಲಿ ಎನ್‌ಟಿಆರ್ ಜತೆ, ಹಿಂದಿಯಲ್ಲಿ ದಿಲೀಪ್ ಕುಮಾರ್ ಜತೆ ನಟಿಸಿ ಇಡೀ ದೇಶದಲ್ಲಿ ಪ್ರಖ್ಯಾತ ನಟಿ ಆಗಿದ್ದರು.
ಕನ್ನಡದಲ್ಲಿ ಹೇಳಬೇಕಾದರೆ ಕಿತ್ತೂರು ರಾಣಿ ಚೆನ್ನಮ್ಮ ಪಾತ್ರಕ್ಕೆ ನೈಜತೆ ತಂದಿದ್ದರು. ಚೆನ್ನಮ್ಮ ಅಂದರೆ ಹೀಗಿದ್ದರು ಅಂತ ಕಲ್ಪನೆ ಮೂಡಿಸಿದ್ದರು. ಅವರ ಅಭಿನಯ, ಕಲ್ಪನೆ ಇಂದಿಗೂ ಮನಸ್ಸಿನಲ್ಲಿ ಇದೆ. ಚೆನ್ನಮ್ಮ ಬ್ರಿಟೀಷರ ವಿರುದ್ಧ ಹೇಗೆ ಹೋರಾಟ ಮಾಡಿದ್ದರು ಅಂತ ಅವರ ನಟನೆ ಮೂಲಕ ತೋರಿಸಿದ್ದರು ಎಂದರು.
ಈ ಸುದ್ದಿಯನ್ನೂ ಓದಿ | B. Saroja Devi: ಬದುಕನ್ನೇ ಬಣ್ಣದ ಲೋಕಕ್ಕೆ ಧಾರೆ ಎರೆದ ಹಿರಿಯ ನಟಿ ಸರೋಜಾ ದೇವಿ
ಮಲ್ಲಮ್ಮನ ಪವಾಡ ಇದೊಂದು ಮನೆಮನೆಯಲ್ಲಿ ಮನಮುಟ್ಟುವ ಚಿತ್ರವಾಗಿತ್ತು. ಲಕ್ಷ್ಮಿ ಸರಸ್ವತಿ, ಬಬ್ರುವಾಹನ, ಶ್ರೀನಿವಾಸ ಕಲ್ಯಾಣ ಸೇರಿದಂತೆ ನೂರಾರು ಚಿತ್ರಗಳಲ್ಲಿ ನಟನೆ ಮಾಡಿದ್ದರು. ಅಭಿನಯದ ಜತೆ ಗಾಂಭೀರತೆಯಲ್ಲಿ ಅಗ್ರಮಾನ್ಯರಾಗಿದ್ದರು. ಐದು ದಶಕದಿಂದ ಚಿತ್ರರಂಗದಲ್ಲಿ ನಟಿಸಿದ್ದು, ನಮ್ಮನ್ನೆಲ್ಲಾ ಅಗಲಿದ್ದಾರೆ. ಆದರೂ ಅವರ ಅಭಿನಯದ ಮೂಲಕ ನಮ್ಮ ಮನದಲ್ಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.