B. Saroja Devi: ಬದುಕನ್ನೇ ಬಣ್ಣದ ಲೋಕಕ್ಕೆ ಧಾರೆ ಎರೆದ ಹಿರಿಯ ನಟಿ ಸರೋಜಾ ದೇವಿ
ಕಿತ್ತೂರುರಾಣಿ ಚೆನ್ನಮ್ಮ, ಅಮರಶಿಲ್ಪಿ ಜಕಣಾಚಾರಿ, ಬಬ್ರುವಾಹನ, ಭಾಗ್ಯವಂತರು ಸೇರಿದಂತೆ ಸುಮಾರು 200 ಚಿತ್ರಗಳಲ್ಲಿ ನಟಿಸಿರುವ ಅಭಿನಯ ಶಾರದೆ ಬಿರುದಾಂಕಿತ ಹಿರಿಯ ನಟಿ ಬಿ. ಸರೋಜಾದೇವಿ ಸೋಮವಾರ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಏಳು ದಶಕಗಳಲ್ಲಿ ಅವರು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದು, ಇವರನ್ನು ಅಭಿನಯ ಸರಸ್ವತಿ, ಕನ್ನಡದ ಗಿಳಿ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿತ್ತು.



ಕಿತ್ತೂರು ಚೆನ್ನಮ್ಮಳಾಗಿ, ಬಭ್ರುವಾಹನ ಚಿತ್ರದಲ್ಲಿ ಚಿತ್ರಾಂಗದೆಯಾಗಿ ಕನ್ನಡ ಬೆಳ್ಳಿತೆರೆಯ ಮೇಲೆ ಮಾತ್ರವಲ್ಲ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಕನ್ನಡದ ಅಭಿನಯ ಸರಸ್ವತಿ, ತಮಿಳಿನ ಕನ್ನಡತು ಪೈಂಗಿಲಿ ಬಿ. ಸರೋಜಾದೇವಿ ಸೋಮವಾರ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಮೊದಲ ಮಹಿಳಾ ಸೂಪರ್ ಸ್ಟಾರ್ ಎಂದೆನಿಸಿಕೊಂಡಿದ್ದ ಸರೋಜಾ ದೇವಿಗೆ ಆಗ ಕೇವಲ 12 ವರ್ಷ. ಅವರು ಮಹಾಕವಿ ಕಾಳಿದಾಸ ಚಿತ್ರದ ಮೂಲಕ ದೊಡ್ಡ ಬ್ರೇಕ್ ಪಡೆದರು. ಪಾಂಡುರಂಗ ಮಹಾತ್ಯಂ ಚಿತ್ರದಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸರೋಜಾ ದೇವಿ ಅವರಿಗೆ ನಾಡೋಡಿ ಮನ್ನನ್ ಚಿತ್ರವು ತಮಿಳು ಚಿತ್ರರಂಗದಲ್ಲಿ ಅವರನ್ನು ಬಹು ಬೇಡಿಕೆಯ ನಟಿಯನ್ನಾಗಿ ಮಾಡಿತು.

1955 ಮತ್ತು 1984 ರ ನಡುವಿನ 29 ವರ್ಷಗಳಲ್ಲಿ ಸತತ 161 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ ಸರೋಜಾ ದೇವಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ, ಪದ್ಮ ಭೂಷಣ ಪ್ರಶಸ್ತಿ ಸೇರಿದಂತೆ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಮತ್ತು ತಮಿಳುನಾಡಿನ ಕಲೈಮಾಮಣಿ ಪ್ರಶಸ್ತಿಯೂ ಲಭಿಸಿದೆ.

ಒಕ್ಕಲಿಗ ಕುಟುಂಬದಲ್ಲಿ ಜನಿಸಿದ ಸರೋಜಾದೇವಿ ಅವರಿಗೆ ಬಾಲ್ಯದಿಂದಲೇ ಲಲಿತಕಲೆಗಳ ಬಗ್ಗೆ ಆಸಕ್ತಿ ಇತ್ತು. ಇವರ ತಂದೆ ಭೈರಪ್ಪ ಮೈಸೂರಿನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದರೆ ತಾಯಿ ರುದ್ರಮ್ಮ ಗೃಹಿಣಿಯಾಗಿದ್ದರು. ಇವರ ನಾಲ್ಕನೇ ಮಗಳಾಗಿ ಜನಿಸಿದ ಸರೋಜಾ ಅವರಿಗೆ ತಂದೆಯೇ ನೃತ್ಯ ಕಲಿಯಲು ಹೇಳಿದರು, ನಟನೆಯನ್ನು ವೃತ್ತಿಯಾಗಿ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿದರು.

ಕನ್ನಡದಲ್ಲಿ ಡಾ. ರಾಜ್ಕುಮಾರ್, ಕಲ್ಯಾಣ್ ಕುಮಾರ್, ಉದಯ ಕುಮಾರ್, ತೆಲುಗಿನಲ್ಲಿ ಎ. ನಾಗೇಶ್ವರ ರಾವ್, ಎನ್.ಟಿ. ರಾಮ ರಾವ್, ತಮಿಳಿನಲ್ಲಿ ಜೆಮಿನಿ ಗಣೇಶನ್, ಶಿವಾಜಿ ಗಣೇಶನ್, ಎಂ.ಜಿ. ರಾಮಚಂದ್ರನ್, ಹಿಂದಿಯಲ್ಲಿ ದಿಲೀಪ್ ಕುಮಾರ್, ರಾಜೇಂದ್ರ ಕುಮಾರ್, ಶಮ್ಮಿ ಕಪೂರ್, ಸುನಿಲ್ ದತ್ ಜೊತೆ ನಟಿಸಿದ ಸರೋಜಾದೇವಿ ಅವರು ಚತುರ್ಭಾಷಾ ತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮೊದಲ ಕನ್ನಡ ನಟಿಯಾಗಿದ್ದಾರೆ.

1955ರಲ್ಲಿ 'ಮಹಾಕವಿ ಕಾಳಿದಾಸ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸರೋಜಾ ದೇವಿ ಅವರು ಕೊನೆಯದಾಗಿ ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ನಟಿಸಿದ್ದರು. 2019ರಲ್ಲಿ ತೆರೆಕಂಡ ನಟ ಸಾರ್ವಭೌಮ ಸಿನಿಮಾದಲ್ಲಿ ನಟಿಸಿದ್ದ ಅವರು 87ನೇ ವಯಸ್ಸಿನಲ್ಲಿ ಸೋಮವಾರ ನಿಧನರಾಗಿದ್ದಾರೆ.