Salman Khan: ಬರೋಬ್ಬರಿ 500 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಲಿದೆ ಅಟ್ಲಿ-ಸಲ್ಮಾನ್ ಚಿತ್ರ; ಕನ್ನಡತಿಗೆ ನಾಯಕಿ ಪಟ್ಟ?
ಕಾಲಿವುಡ್ ಸ್ಟಾರ್ ನಿರ್ದೇಶಕ ಅಟ್ಲಿ ಆ್ಯಕ್ಷನ್ ಕಟ್ ಹೇಳುತ್ತಿರುವ ಮುಂದಿನ ಬಾಲಿವುಡ್ ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸುತ್ತಿದ್ದಾರೆ. 2023ರಲ್ಲಿ ತೆರೆಕಂಡ ಶಾರುಖ್ ಖಾನ್-ನಯನತಾರಾ ಅಭಿನಯದ ʼಜವಾನ್ʼ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿರುವ ಅವರು ಮತ್ತೊಂದು ಬಹು ನಿರೀಕ್ಷಿತ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಇದರಲ್ಲಿ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುವ ಸಾಧ್ಯತೆ ಇದೆ.

ಅಟ್ಲಿ-ಸಲ್ಮಾನ್ ಖಾನ್.

ಮುಂಬೈ: ಬಹು ಕೋಟಿ ರೂ. ವೆಚ್ಚದಲ್ಲಿ ಮತ್ತೊಂದು ಅದ್ಧೂರಿ ಚಿತ್ರವೊಂದು ಬಾಲಿವುಡ್‌ನಲ್ಲಿ ತಯಾರಾಗುತ್ತುದೆ. ಹೌದು, 2023ರಲ್ಲಿ ತೆರೆಕಂಡ ಶಾರುಖ್ ಖಾನ್-ನಯನತಾರಾ ಅಭಿನಯದ ʼಜವಾನ್ʼ (Jawan) ಚಿತ್ರದ ಮೂಲಕ ಬಾಲಿವುಡ್‌ಗೆ ಪಾದರ್ಪಣೆ ಮಾಡಿದ್ದ ಕಾಲಿವುಡ್‌ನ ಪ್ರತಿಭಾನ್ವಿತ ನಿರ್ದೇಶಕ ಅಟ್ಲಿ (Atlee) ಇದೀಗ ಸಲ್ಮಾನ್ ಖಾನ್ (Salman Khan) ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ಮುಂದಾಗಿದ್ದು, ಇದಕ್ಕೆ ಸದ್ಯ ಎ6 (A6) ಎನ್ನುವ ತಾತ್ಕಾಲಿಕ ಟೈಟಲ್ ಇಡಲಾಗಿದೆ. ವರದಿಯೊಂದರ ಪ್ರಕಾರ ಚಿತ್ರ ಬರೋಬ್ಬರಿ 500 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಲಿದೆ. ದುಬಾರಿ ಭಾರತೀಯ ಸಿನಿಮಾಗಳಲ್ಲಿ ಇದೂ ಒಂದು ಎನ್ನಲಾಗಿದೆ.
ಅಟ್ಲಿ-ಸಲ್ಮಾನ್ ಖಾನ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಸೆಟ್ಟೇರುವ ಮುನ್ನವೇ ನಿರೀಕ್ಷೆ ಮೂಡಿಸಿದ್ದು, ವಿಭಿನ್ನ ಕಥಾ ಹಂದರದೊಂದಿಗೆ ಪ್ರೇಕ್ಷಕರ ಮುಂದೆ ಬರಲಿದೆ.
ವಿಭಿನ್ನ ಕಥೆ
ಮೂಲಗಳ ಪ್ರಕಾರ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಇದುವರೆಗೆ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡ್ರಾಮ, ಆ್ಯಕ್ಷನ್ ಮತ್ತು ರೊಮ್ಯಾನ್ಸ್ ಅನ್ನು ಹದವಾಗಿ ಬೆರೆಸಿ ಸಿನಿಮಾ ಕಟ್ಟಿಕೊಡಲಾಗುತ್ತದೆ ಎಂದು ಮೂಲಗಳು ತಿಳಿಸಿದೆ. ಪುನರ್ಜನ್ಮದ ಕಥೆಯನ್ನೊಳಗೊಂಡ ಈ ಸಿನಿಮಾ ವಿವಿಧ ಕಾಲಘಟ್ಟದಲ್ಲಿ ಸಾಗಲಿದೆ.
ಬಾಲಿವುಡ್ ಹಂಗಾಮ ವೆಬ್‌ಸೈಟ್ ಪ್ರಕಾರ, ಎ6 ಚಿತ್ರ ಅಟ್ಲಿ ಅವರು ಬಹುನಿರೀಕ್ಷಿತ ಪ್ರಾಜೆಕ್ಟ್ ಆಗಿದ್ದು, ಹೊಸದೊಂದು ಲೋಕವನ್ನು ಪ್ರೇಕ್ಷಕರ ಮುಂದೆ ಅನಾವರಣಗೊಳಿಸಲಿದ್ದಾರಂತೆ. ಇದೇ ಕಾರಣಕ್ಕೆ ಚಿತ್ರದ ಬಜೆಟ್ 500 ಕೋಟಿ ರೂ. ದಾಟಲಿದೆಯಂತೆ. ʼʼಎ6 ನೂರಾರು ವರ್ಷಗಳ ಹಿಂದಿನ ಕಥೆಯನ್ನು ಒಳಗೊಂಡಿದೆ. ಇದರಲ್ಲಿ ಪುನರ್ಜನ್ಮ ಉಲ್ಲೇಖವೂ ಇರಲಿದೆ. ಇದುವರೆಗೆ ಕಂಡುಬರದ ಲೋಕವೊಂದನ್ನು ಮರು ಸೃಷ್ಟಿಸಲು ಅಟ್ಲಿ ಯೋಜನೆ ರೂಪಿಸಿದ್ದಾರೆʼʼ ಎಂದು ಚಿತ್ರತಂಡದ ಸದಸ್ಯರೊಬ್ಬರು ಹೇಳಿದ್ದಾಗಿ ಬಾಲಿವುಡ್ ಹಂಗಾಮ ವರದಿ ಮಾಡಿದೆ. ವಿವಿಧ ಕಾಲಘಟ್ಟಕ್ಕೆ ಅನುಗುಣವಾಗಿ ಅಪರೂಪದ ಸೆಟ್ ಹಾಕಲಾಗುತ್ತಿದ್ದು, ವಿಶೇಷ ರೀತಿಯ ಕಾಸ್ಟ್ಯೂಮ್ ಮತ್ತು ದೃಶ್ಯ ವೈಭವ ಬೆಳ್ಳಿ ಪರದೆ ಮೇಲೆ ತೆರೆದುಕೊಳ್ಳಲಿದೆ.
ಸಲ್ಮಾನ್‌ಗೆ ರಶ್ಮಿಕಾ ಜೋಡಿ
ಸದ್ಯ ಸಲ್ಮಾನ್ ಖಾನ್ ಜತೆಗೆ ರಶ್ಮಿಕಾ ಎ.ಆರ್.ಮುರುಗದಾಸ್ ನಿರ್ದೇಶನದ ʼಸಿಕಂದರ್ʼ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ರಶ್ಮಿಕಾ ಮಂದಣ್ಣ ಎ6 ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಚಿತ್ರದಲ್ಲಿ ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಥವಾ ಕಮಲ್ ಹಾಸನ್ ಅವರೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಚಿತ್ರತಂಡದ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರ ಬೀಳಬೇಕಿದೆ.
ಈ ಸುದ್ದಿಯನ್ನೂ ಓದಿ: Rashmika Mandanna: ಗಾಯದಿಂದ ಸಂಪೂರ್ಣ ಚೇತರಿಸಿಕೊಂಡ ರಶ್ಮಿಕಾ; ವಿಡಿಯೊ ನೋಡಿ ಫ್ಯಾನ್ಸ್ ಫುಲ್ ಖುಷ್
ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕಾಲಿಗೆ ಗಾಯ ಮಾಡಿಕೊಂಡಿದ್ದ ರಶ್ಮಿಕಾ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ರಶ್ಮಿಕಾ ಮೊದಲ ಬಾರಿಗೆ ವಿಕ್ಕಿ ಕೌಶಲ್ ಜತೆ ನಟಿಸಿದ, ಐತಿಹಾಸಿಕ ಬಾಲಿವುಡ್ ಚಿತ್ರ ʼಛಾವಾʼ ತೆರೆಗೆ ಬರಲು ಸಜ್ಜಾಗಿದ್ದು, ಇದರ ಪ್ರಮೋಷನ್‌ನಲ್ಲಿ ನಿರತರಾಗಿದ್ದಾರೆ. ʼಛಾವಾʼ ಫೆ. 14ರಂದು ತೆರೆಗೆ ಬರಲಿದೆ. ಈ ಚಿತ್ರ ದೇಶ ಕಂಡ ಅಪ್ರತಿಮ ದೇಶಪ್ರೇಮಿ, ಅಪ್ರತಿಮ ಹೋರಾಟಗಾರ ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಪುತ್ರ ಸಂಭಾಜಿ ಮಹಾರಾಜ ಜೀವನದ ಮೇಲೆ ಬೆಳಕು ಚೆಲ್ಲಲಿದೆ. ಸಂಭಾಜಿ ಮಹಾರಾಜ ಅವರ ಪತ್ನಿ ಮಹಾರಾಣಿ ಯೆಸುಬಾಯಿ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್, ಹಾಡು ಪ್ರೇಕ್ಷಕರ ಗಮನ ಸೆಳೆದಿದೆ.