Green Ammonia: ಹಸಿರು ಅಮೋನಿಯಾ ಉತ್ಪಾದನೆ ಗುರಿ ಸಾಧನೆಯತ್ತ ಭಾರತ; ಟೆಂಡರ್ಗೆ ಸಿದ್ಧತೆ
Green Ammonia: 2070ರ ವೇಳೆಗೆ ನಿವ್ವಳ-ಶೂನ್ಯ ಇಂಗಾಲ ಹೊರಸೂಸುವಿಕೆ ಗುರಿ ಸಾಧನೆಯತ್ತ ಸಾಗಿರುವ ಕೇಂದ್ರ ಸರ್ಕಾರ, ಹಸಿರು ಅಮೋನಿಯಾ ಹೊರತೆಗೆಯಲು ಮಹತ್ವದ ಟೆಂಡರ್ ಸಹ ಬಿಡುಗಡೆ ಮಾಡಿದೆ. ಭಾರತದ ರಸಗೊಬ್ಬರ ವಲಯವನ್ನು ಇಂಗಾಲ ಮುಕ್ತಗೊಳಿಸಲು ಭಾರತೀಯ ಸೌರಶಕ್ತಿ ನಿಗಮ ಲಿಮಿಟೆಡ್ (SECI) ಗ್ರೀನ್ ಅಮೋನಿಯಾ ಟೆಂಡರ್ ಸಿದ್ಧಪಡಿಸಿದೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು: ನಿವ್ವಳ-ಶೂನ್ಯ ಇಂಗಾಲ ಗುರಿ ಸಾಧನೆಗೆ ಮುಂದಾಗಿರುವ ಭಾರತ ಪ್ರಮುಖವಾಗಿ ರಸಗೊಬ್ಬರ ವಲಯವನ್ನು ಇಂಗಾಲ ಮುಕ್ತಗೊಳಿಸುವತ್ತ ಸಾಗಿದೆ. ಇದಕ್ಕಾಗಿ ಹಸಿರು ಅಮೋನಿಯಾ ಉತ್ಪಾದನೆಗೆ ಮಹತ್ತರ ಹೆಜ್ಜೆಯಿರಿಸಿದೆ. 2070ರ ವೇಳೆಗೆ ನಿವ್ವಳ-ಶೂನ್ಯ ಇಂಗಾಲ ಹೊರಸೂಸುವಿಕೆ ಗುರಿ ಸಾಧನೆಯತ್ತ ಸಾಗಿರುವ ಕೇಂದ್ರ ಸರ್ಕಾರ (Central government), ಹಸಿರು ಅಮೋನಿಯಾ (Green ammonia) ಹೊರತೆಗೆಯಲು ಮಹತ್ವದ ಟೆಂಡರ್ ಸಹ ಬಿಡುಗಡೆ ಮಾಡಿದೆ. ಭಾರತದ ರಸಗೊಬ್ಬರ ವಲಯವನ್ನು ಇಂಗಾಲ ಮುಕ್ತಗೊಳಿಸಲು ಭಾರತೀಯ ಸೌರಶಕ್ತಿ ನಿಗಮ ಲಿಮಿಟೆಡ್ (SECI) ಗ್ರೀನ್ ಅಮೋನಿಯಾ ಟೆಂಡರ್ ಸಿದ್ಧಪಡಿಸಿದೆ.
ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತಿರುವ SECI, ಹಸಿರು ಅಮೋನಿಯಾ ಹೊರತೆಗೆಯುವ ನಿಟ್ಟಿನಲ್ಲಿ ಮಹತ್ತರವಾದ ಟೆಂಡರ್ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಅಂತಿಮ ಬಿಡ್ಗಳು ಸಲ್ಲಿಕೆಯಾಗಲಿವೆ. ಹಸಿರು ಹೈಡ್ರೋಜನ್ ಪರಿವರ್ತನೆಗಾಗಿ SIGHT ಯೋಜನೆ ಸಹ ರೂಪಿಸಿದ್ದು, ಮೋಡ್ 2A, ಭಾಗ Iರ ಅಡಿಯಲ್ಲಿ ದೇಶದ 13 ರಸಗೊಬ್ಬರ ಸ್ಥಾವರಗಳಲ್ಲಿ ವಾರ್ಷಿಕ 7,24,000 ಟನ್ ಹಸಿರು ಅಮೋನಿಯಾ ಉತ್ಪಾದನೆ ಮತ್ತು ಪೂರೈಕೆಗೆ ಟೆಂಡರ್ ಕರೆಯಲಾಗಿದೆ.
ಈ ಹಸಿರು ಅಮೋನಿಯಾ ಉತ್ಪಾದನೆ ಕ್ರಮವು ʼವಿಕಸಿತ ಭಾರತʼ ವಿಶಾಲ ದೃಷ್ಟಿಕೋನವನ್ನು ಬೆಂಬಲಿಸುತ್ತದೆ. ಬಿಡ್ಡರ್ಗಳು ಅತ್ಯಂತ ಸ್ಪರ್ಧಾತ್ಮಕ ರೀತಿಯಲ್ಲಿ ಪ್ರಸ್ತಾವನೆ ಸಲ್ಲಿಕೆಯನ್ನು ಪ್ರೋತ್ಸಾಹಿಸುತ್ತದೆ. ಅಲ್ಲದೇ, ಶುದ್ಧ ಇಂಧನ ಮಾರುಕಟ್ಟೆಗಳಲ್ಲಿ ನಾವೀನ್ಯತೆ, ಪಾರದರ್ಶಕತೆ ಮತ್ತು ಜಾಗತಿಕ ಪ್ರಭಾವದ ಪರಂಪರೆಯನ್ನು SECI ಮುಂದುವರಿಸುತ್ತದೆ.
ಹೊಸ ಉದ್ಯೋಗಗಳ ಸೃಷ್ಟಿ
SECI, ಹಸಿರು ಅಮೋನಿಯಾ ಬೇಡಿಕೆಗೆ ತಕ್ಕಂತೆ ದೀರ್ಘಾವಧಿಯ ಒಪ್ಪಂದಗಳಿಗೆ ಸಹಿ ಹಾಕುತ್ತಿದ್ದು, ಇದು ಉತ್ಪಾದಕರಿಗೆ 10 ವರ್ಷಗಳ ಅವಧಿಯ ಮಾರುಕಟ್ಟೆ ಒಪ್ಪಂದವನ್ನು ಖಚಿತಪಡಿಸಲಿದೆ. ಅಲ್ಲದೇ, ದೇಶೀಯ ಹಸಿರು ಅಮೋನಿಯಾ ಉತ್ಪಾದನೆ ಭೌಗೋಳಿಕವಾಗಿ ಸ್ಥಿತಿಸ್ಥಾಪಕತ್ವ ಹೆಚ್ಚಿಸುತ್ತದೆ ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂಬ ಆಶಾಭಾವ ವ್ಯಕ್ಯವಾಗುತ್ತಿದೆ. SECI ಯ ಹಸಿರು ಅಮೋನಿಯಾ ಟೆಂಡರ್, ಬೇಡಿಕೆ ಮತ್ತು ಪೂರೈಕೆಯನ್ನು ಏಕ ಕಾಲದಲ್ಲಿ ಉತ್ತೇಜಿಸುವ ಮೂಲಕ ಹೈಡ್ರೋಜನ್ ಎದುರಿಸುತ್ತಿರುವ ಆರ್ಥಿಕತೆ ಸವಾಲನ್ನು ಪರಿಹರಿಸಲಿದೆ. ಹಸಿರು ಹೈಡ್ರೋಜನ್ ಉತ್ಪಾದನೆ, ಎಲೆಕ್ಟ್ರೋಲೈಸರ್ ಉತ್ಪಾದನೆ ಮತ್ತು ಸಂಬಂಧಿತ ಶುದ್ಧ ಇಂಧನ ವಲಯಗಳಲ್ಲಿ ಹೂಡಿಕೆಗೆ ಪ್ರೋತ್ಸಾಹಿಸಲಿದೆ.
ದೇಶೀಯ ರಸಗೊಬ್ಬರ ಉತ್ಪಾದನೆಗೆ ಉತ್ತೇಜನ
SECI, ನವೀಕರಿಸಬಹುದಾದ ಶಕ್ತಿ ಬಳಸಿಕೊಂಡು ಹಸಿರು ಹೈಡ್ರೋಜನ್ ಮತ್ತು ಅಮೋನಿಯಾವನ್ನು ಉತ್ಪಾದಿಸುತ್ತದೆ. ಈ ಮೂಲಕ ಕಡಿಮೆ ಇಂಗಾಲ ಹೊರಸೂಸುವಿಕೆ ಮತ್ತು ದೇಶೀಯ ರಸಗೊಬ್ಬರ ಉತ್ಪಾದನೆಯನ್ನು ಇದು ಉತ್ತೇಜಿಸುತ್ತದೆ. ಸಾಂಪ್ರದಾಯಿಕ ಬೂದು ಹೈಡ್ರೋಜನ್ನಿಂದ 12 ಕೆಜಿ CO₂ ವರೆಗೆ ಹೊರಸೂಸುತ್ತಿತ್ತು. ಇನ್ನು ಮುಂದೆ ಹಸಿರು ಹೈಡ್ರೋಜನ್ ಉತ್ಪಾದನೆಯಿಂದ ಪ್ರತಿ ಕಿಲೋಗ್ರಾಂಗೆ 2 ಕೆಜಿಗಿಂತ ಕಡಿಮೆ CO₂ ಹೊರಸೂಸುತ್ತದೆ.
ಕೇಂದ್ರದಿಂದ ₹1,533.4 ಕೋಟಿ ಪ್ರೋತ್ಸಾಹಧನ
ಕೇಂದ್ರ ಸರ್ಕಾರ ಹಸಿರು ಅಮೋನಿಯಾ ಉತ್ಪಾದನೆಗೆ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿ ಆರ್ಥಿಕ ಪ್ರೋತ್ಸಾಹ ಸಹ ನೀಡುತ್ತಿದ್ದು, ಮೊದಲ ಮೂರು ವರ್ಷಗಳವರೆಗೆ ಕ್ರಮವಾಗಿ ಒಂದು ಕೇಜಿಗೆ ₹ 8.82 ₹ 7.06 ಮತ್ತು ₹ 5.30 ಪ್ರೋತ್ಸಾಹ ಧನದಂತೆ ಒಟ್ಟು ₹1,533.4 ಕೋಟಿ ಅನುದಾನ ನೀಡಲಿದೆ. ರಸಗೊಬ್ಬರ ಕಂಪನಿಗಳಿಂದ ಪಾವತಿ ವಿಳಂಬ ತಡೆಯಲು ಸಹ ಪಿಎಸ್ಎಂ ಭದ್ರತಾ ಕಾರ್ಯವಿಧಾನ ಕೈಗೊಂಡಿದೆ. ಇದು ಹಸಿರು ಅಮೋನಿಯಾ ಪೂರೈಕೆದಾರರಿಗೆ ಸ್ಥಿರವಾದ ಆರ್ಥಿಕ ಭರವಸೆ ಮತ್ತು ಹೆಚ್ಚಿನ ಹಣಕಾಸು ನೆರವನ್ನು ಒದಗಿಸುತ್ತದೆ. ಬಿಡ್ಡಿಂಗ್ ಪ್ರಕ್ರಿಯೆ ಎಸ್ಇಸಿಐನ ಇ-ರಿವರ್ಸ್ ಹರಾಜು ಮಾದರಿಯಂತಿದ್ದು, ಸ್ಪರ್ಧಾತ್ಮಕ ಮತ್ತು ಪಾರದರ್ಶಕ ಬೆಲೆ ಆವಿಷ್ಕಾರದಿಂದ ಕೂಡಿರುತ್ತದೆ.
ಈ ಸುದ್ದಿಯನ್ನೂ ಓದಿ | SBI Recruitment 2025: ಬ್ಯಾಂಕ್ ಉದ್ಯೋಗ ಹುಡುಕುವವರಿಗೆ ಗುಡ್ನ್ಯೂಸ್; ಎಸ್ಬಿಐಯಲ್ಲಿ ಖಾಲಿ ಇದೆ 541 ಪ್ರೊಬೆಷನರಿ ಆಫೀಸರ್ ಹುದ್ದೆ
ದೇಶದಲ್ಲಿ 17-19 ಮಿ.ಟನ್ ಅಮೋನಿಯಾ ಬಳಕೆ
ಭಾರತದಲ್ಲಿ ವಾರ್ಷಿಕ ಸುಮಾರು 17 ರಿಂದ 19 ಮಿಲಿಯನ್ ಟನ್ ಅಮೋನಿಯಾ ಬಳಕೆಯಲ್ಲಿದೆ. ಹೈಡ್ರೋಜನ್ ಅವಶ್ಯಕತೆಯ ಶೇ.50ಕ್ಕಿಂತ ಹೆಚ್ಚನ್ನು ರಸಗೊಬ್ಬರ ಉತ್ಪಾದನೆಗೆ ಬಳಸಲಾಗುತ್ತದೆ. ಆದಾಗ್ಯೂ, ಇದರಲ್ಲಿ ಹೆಚ್ಚಿನದನ್ನು ಆಮದು ಮಾಡಿಕೊಂಡ ನೈಸರ್ಗಿಕ ಅನಿಲದಿಂದ ಪಡೆಯಲಾಗಿದೆ. SECIಯ ಉಪಕ್ರಮವು ಈ ಅವಲಂಬನೆಯನ್ನು ಕಡಿತಗೊಳಿಸುತ್ತದೆ. ಜಾಗತಿಕ ಅನಿಲ ಬೆಲೆ ಏರಿಳಿತ ಸಂದರ್ಭದಲ್ಲಿ ವ್ಯಾಪಾರೊತ್ತಡವನ್ನು ತಗ್ಗಿಸಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.