Tirupati Temple: ತಿರುಮಲದಲ್ಲಿ ಇನ್ನು ದೇವರ ದರ್ಶನ ಸುಲಭ; ಭಕ್ತರ ಅನುಕೂಲಕ್ಕಾಗಿ AI ಸೇವೆಗಾಗಿ ಗೂಗಲ್ ಜತೆ ಕೈಜೋಡಿಸಿದ ಟಿಟಿಡಿ
Tirupati Temple: ತಿರುಪತಿ ತಿಮ್ಮಪ್ಪ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಯಾವುದೇ ಗೊಂದಲಗಳಾಗದಂತೆ ಮತ್ತು ಕಡಿಮೆ ಸಮಯದಲ್ಲೇ ದರ್ಶನ ಸಿಗುವ ವ್ಯವಸ್ಥೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಸೌಲಭ್ಯ ಅಳವಡಿಸಿಕೊಳ್ಳಲು ಟಿಟಿಡಿ ಗೂಗಲ್ ಇಂಕ್ ಜತೆ ಒಪ್ಪಂದ ಮಾಡಿಕೊಂಡಿದೆ.

ತಿರುಪತಿ ತಿಮ್ಮಪ್ಪ ದೇವಸ್ಥಾನ.

ಅಮರಾವತಿ: ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುವ ತಿರುಪತಿ ತಿಮ್ಮಪ್ಪ ದೇವಸ್ಥಾನ (Tirupati Temple)ದ ದರ್ಶನ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಆಡಳಿತ ಮಂಡಳಿ ಸಜ್ಜಾಗಿದೆ. ಹೌದು, ತಿರುಪತಿ ತಿಮ್ಮಪ್ಪ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಯಾವುದೇ ಗೊಂದಲಗಳಾಗದಂತೆ ಮತ್ತು ಕಡಿಮೆ ಸಮಯದಲ್ಲೇ ದರ್ಶನ ಸಿಗುವ ವ್ಯವಸ್ಥೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಸೌಲಭ್ಯ ಅಳವಡಿಸಿಕೊಳ್ಳಲು ಟಿಟಿಡಿ (Tirumala Tirupati Devasthanams) ಗೂಗಲ್ ಇಂಕ್ (Google Inc) ಜತೆ ಒಪ್ಪಂದ ಮಾಡಿಕೊಂಡಿದೆ. ಆ ಮೂಲಕ ಕೃತಕ ಬುದ್ಧಿಮತ್ತೆ ಸಂಯೋಜಿತ ಯಾತ್ರಾ ಸೇವೆಗಳನ್ನು ಪರಿಚಯಿಸುವ ವಿಶ್ವದ ಮೊದಲ ಹಿಂದೂ ದೇವಾಲಯ ಎಂಬ ಹೆಗ್ಗಳಿಕೆಗೆ ತಿರುಮಲ ಪಾತ್ರವಾಗಲಿದೆ.
ಸೋಮವಾರ (ಮಾ. 24) ತಿರುಮಲದಲ್ಲಿ ಟಿಟಿಡಿ ಟ್ರಸ್ಟ್ ಅಧ್ಯಕ್ಷ ಬಿ.ಆರ್.ನಾಯ್ಡು ಅವರ ಅಧ್ಯಕ್ಷತೆಯಲ್ಲಿ ನಡೆದ ಮಂಡಳಿಯ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಈ ಯೋಜನೆಯು ವೆಂಕಟೇಶ್ವರನ ಉಚಿತ ದರ್ಶನಕ್ಕಾಗಿ ಕಾಯುವ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Tirupati temple: ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಹಿಂದುಗಳಿಗೆ ಮಾತ್ರ ಉದ್ಯೋಗ: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು
ಇತರ ನಿರ್ಣಯಗಳು
ಅಲಿಪಿರಿ-ಚೆರ್ಲೋಪಲ್ಲಿ ರಸ್ತೆಯ ಉದ್ದಕ್ಕೂ ಮುಮ್ತಾಜ್ ಹೋಟೆಲ್ಸ್ ಮತ್ತು ದೇವ್ಲೋಕ್ ಯೋಜನೆಗಳಿಗೆ ಈ ಹಿಂದೆ ನೀಡಲಾದ 35 ಎಕರೆ ಭೂಮಿಯನ್ನು ಹಿಂತೆಗೆದುಕೊಳ್ಳಲೂ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹೆಚ್ಚುವರಿಯಾಗಿ ಆಂಧ್ರ ಪ್ರದೇಶ ಪ್ರವಾಸೋದ್ಯಮಕ್ಕೆ ಸೇರಿದ 15 ಎಕರೆ ಭೂಮಿಯನ್ನು ಟಿಟಿಡಿ ಹಿಂಪಡೆಯಲಿದೆ.
ಮಂಡಳಿಯು 2025-26ರ ಹಣಕಾಸು ವರ್ಷಕ್ಕೆ 5,258.68 ಕೋಟಿ ರೂ.ಗಳ ಬಜೆಟ್ ಅನ್ನು ಅನುಮೋದಿಸಿದೆ. ದೇಶಾದ್ಯಂತ ಶ್ರೀವಾರಿ ಆಸ್ತಿಗಳ ರಕ್ಷಣೆ ಮತ್ತು ಪರಿಣಾಮಕಾರಿ ನಿರ್ವಹಣೆಗೆ ಒತ್ತು ನೀಡಲಾಗಿದೆ. ಅತಿಕ್ರಮಣಗಳನ್ನು ತಡೆಗಟ್ಟಲು ಮತ್ತು ವಿವಾದಿತ ಭೂಮಿಗಳ ಕಾನೂನು ಕ್ರಮಗಳನ್ನು ತ್ವರಿತಗೊಳಿಸಲು ತೀರ್ಮಾನಿಸಲಾಗಿದೆ.
ಪ್ರಸ್ತುತ ಟ್ರಸ್ಟ್‌ನಲ್ಲಿ ಕೆಲಸ ಮಾಡುತ್ತಿರುವ ಇತರ ಧರ್ಮಗಳ ನೌಕರರನ್ನು ಅವರ ಸ್ಥಾನಮಾನಕ್ಕೆ ಅನುಗುಣವಾಗಿ ಪರ್ಯಾಯ ಇಲಾಖೆಗಳಿಗೆ ಮರು ನಿಯೋಜಿಸಲಾಗುವುದು. ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ದು ಕಲ್ಪನೆಯಂತೆ ಟಿಟಿಡಿ ಭಾರತದಾದ್ಯಂತ ಎಲ್ಲ ರಾಜ್ಯಗಳ ರಾಜಧಾನಿಗಳಲ್ಲಿ ದೇವಾಲಯಗಳನ್ನು ನಿರ್ಮಿಸಲಿದೆ.
ಸ್ಥಗಿತಗೊಂಡಿರುವ ದೇವಾಲಯ ಯೋಜನೆಗಳನ್ನು ಪುನರಾರಂಭಿಸಲು, ಹಳ್ಳಿಗಳು ಮತ್ತು ದೀನದಲಿತ ಸಮುದಾಯಗಳ ಹೊಸ ದೇವಾಲಯಗಳನ್ನು ನಿರ್ಮಿಸಲು ಆರ್ಥಿಕ ನೆರವು ನೀಡಲು ಮಂಡಳಿ ನಿರ್ಧರಿಸಿದೆ. ಹೊಸದಾಗಿ ಸ್ಥಾಪಿಸಲಾದ ಟ್ರಸ್ಟ್ ಭಾರತ ಮತ್ತು ವಿದೇಶಗಳಲ್ಲಿ ದೇವಾಲಯ ನಿರ್ಮಾಣದ ಮೇಲ್ವಿಚಾರಣೆ ನಡೆಸಲಿದೆ.
ಹಿಂದುಗಳಿಗೆ ಮಾತ್ರ ಉದ್ಯೋಗ: ಚಂದ್ರಬಾಬು ನಾಯ್ಡು
ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹಿಂದುಗಳು ಮಾತ್ರ ಕೆಲಸ ಮಾಡಬೇಕು. ಇದಕ್ಕೆ ಸಂಬಂಧಿಸಿ ಟಿಟಿಡಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಇತ್ತೀಚೆಗೆ ಆದೇಶ ಹೊರಡಿಸಿದ್ದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಟಿಟಿಡಿಯಲ್ಲಿ ಅನ್ಯಧರ್ಮೀಯ ನೌಕರರನ್ನು ಕೆಲಸದಿಂದ ತೆಗೆಯಲು ಆದೇಶ ನೀಡಲಾಗಿದೆ ಎಂದು ತಿಳಿಸಿದ್ದರು.
ಸದ್ಯ ತಿರುಮಲ ತಿರುಪತಿ ದೇವಸ್ಥಾನದಲ್ಲಿ (ಟಿಟಿಡಿ) ಅನ್ಯ ಧರ್ಮೀಯ ನೌಕರರು ಕೆಲಸ ಮಾಡುತ್ತಿದ್ದರೆ ಅವರ ಭಾವನೆಗಳಿಗೆ ಧಕ್ಕೆಯಾಗದಂತೆ ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದು ಎಂದು ಚಂದ್ರಬಾಬು ನಾಯ್ಡು ಸೂಚನೆ ನೀಡಿದ್ದರು.