IPL 2025: ʻಫೇಕ್ ನ್ಯೂಸ್ʼ-ಎಲ್ಎಸ್ಜಿ ತೊರೆಯುವ ಬಗ್ಗೆ ರಿಷಭ್ ಪಂತ್ ಸ್ಪಷ್ಟನೆ!
ಮುಂಬರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ನಿಮಿತ್ತ ಲಖನೌ ಸೂಪರ್ ಜಯಂಟ್ಸ್ ತಂಡದಿಂದ ರಿಷಭ್ ಪಂತ್ ಅವರನ್ನು ರಿಲೀಸ್ ಮಾಡಲಾಗುತ್ತಿದೆ ಎಂದು ಇತ್ತೀಚೆಗೆ ವರದಿಯಾಗಿದೆ. ಈ ಬಗ್ಗೆ ಎಲ್ಎಸ್ಜಿ ನಾಯಕ ಪ್ರತಿಕ್ರಿಯೆ ನೀಡಿದ್ದು, ಇದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.

ಎಲ್ಎಸ್ಜಿ ತೊರೆಯುವ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ ರಿಷಭ್ ಪಂತ್.

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಲಖನೌ ಸೂಪರ್ ಜಯಂಟ್ಸ್ (LSG) ನಾಯಕ ರಿಷಭ್ ಪಂತ್ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಿಷಭ್ ಪಂತ್ (Rishabh Pant) ಅವರನ್ನು ಲಖನೌ ಫ್ರಾಂಚೈಸಿ 2026ರ ಐಪಿಎಲ್ ನಿಮಿತ್ತ ಬಿಡುಗಡೆ ಮಾಡಲಾಗುವುದು ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೆ ಪ್ರತಿಕ್ರಿಯಿಸಿದ ಲಖನೌ ಸೂಪರ್ ಜಯಂಟ್ಸ್ (LSG) ನಾಯಕ ರಿಷಭ್ ಪಂತ್, ಈ ವರದಿಗಳನ್ನು ತಳ್ಳಿ ಹಾಕಿದ್ದು, ಇದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ಅಂದ ಹಾಗೆ 27 ಕೋಟಿ ರೂ.ಗಳನ್ನು ಪಡೆದು ಐಪಿಎಲ್ ಟೂರ್ನಿಯ ಅತ್ಯಂತ ದುಬಾರಿ ಆಟಗಾರನಾಗಿ ಕಣಕ್ಕೆ ಇಳಿದಿದ್ದ ರಿಷಭ್ ಪಂತ್, ಎಲ್ಎಸ್ಜಿ ಒಪರ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಅವರು ಇಲ್ಲಿಯವೆಗೂ ಆಡಿದ 12 ಪಂದ್ಯಗಳಿಂದ 135 ರನ್ಗಳನ್ನು ಮಾತ್ರ ಕಲೆ ಹಾಕಿದ್ದಾರೆ.
2025ರ ಐಪಿಎಲ್ ಟೂರ್ನಿಯ ಪ್ಲೇಆಫ್ಸ್ ರೇಸ್ನಿಂದ ಲಖನೌ ಸೂಪರ್ ಜಯಂಟ್ಸ್ ಹೊರ ಬೀಳಲು ರಿಷಭ್ ಪಂತ್ ಅವರ ಬ್ಯಾಟಿಂಗ್ ವೈಫಲ್ಯ ಕೂಡ ಒಂದು ಕಾರಣವಾಗಿದೆ. ಕಳೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಸೋಲು ಅನುಭವಿಸಿದ ಬಳಿಕ ಲಖನೌ ಸೂಪರ್ ಜಯಂಟ್ಸ್ ಟೂರ್ನಿಯಿಂದ ಅಧಿಕೃತವಾಗಿ ಎಲಿಮಿನೇಟ್ ಆಗಿತ್ತು. ರಿಷಭ್ ಪಂತ್ಗೆ ದುಬಾರಿ ಮೊತ್ತವನ್ನು ನೀಡಲಾಗಿದ್ದು, ಮುಂದಿನ ಐಪಿಎಲ್ ಟೂರ್ನಿಯ ನಿಮಿತ್ತ ಪಂತ್ ಅವರನ್ನು ಲಖನೌ ಫ್ರಾಂಚೈಸಿ ಬಿಡುಗಡೆ ಮಾಡಲಿದೆ ಎಂದು ಎಕ್ಸ್ ಖಾತೆ ಬಳಕೆದಾರರೊಬ್ಬರು ಪೋಸ್ಟ್ ಹಾಕಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ರಿಷಭ್ ಪಂತ್, ಈ ಎಲ್ಲಾ ಊಹಾಪೋಹಗಳಿಗೆ ಸ್ಪಷ್ಟತೆ ನೀಡಿದ್ದಾರೆ.
IPL 2025: ʻಫೇಕ್ ನ್ಯೂಸ್ʼ-ಎಲ್ಎಸ್ಜಿ ತೊರೆಯುವ ಬಗ್ಗೆ ರಿಷಭ್ ಪಂತ್ ಸ್ಪಷ್ಟನೆ!
"ನಕಲಿ ಸುದ್ದಿಗಳು ಹೆಚ್ಚಿನ ಆಕರ್ಷಣೆಯನ್ನು ನೀಡುತ್ತವೆ ಎಂದು ನನಗೆ ಅರ್ಥವಾಗಿದೆ ಆದರೆ, ಇಂಥಾ ಸುದ್ದಿಗಳನ್ನು ಎಲ್ಲೆಡೆ ಹರಡುವುದು ಬೇಡ. ಅಜೆಂಡಾದೊಂದಿಗೆ ನಕಲಿ ಸುದ್ದಿಗಳನ್ನು ಸೃಷ್ಟಿಸುವ ಬದಲು, ಇಟಲ್ ಸೆನ್ಸ್ ಮತ್ತು ವಿಶ್ವಾಸಾರ್ಹ ಸುದ್ದಿಗಳು ಹೆಚ್ಚು ಸಹಾಯ ಮಾಡುತ್ತವೆ. ಧನ್ಯವಾದಗಳು, ಶುಭ ದಿನ. ಸೋಶಿಯಲ್ ಮೀಡಿಯಾದಲ್ಲಿ ನೀವು ಹಂಚಿಕೊಳ್ಳುವ ವಿಷಯಗಳು ತುಂಬಾ ಸೂಕ್ಷ್ಮತೆಯಿಂದ ಕೂಡಿರುತ್ತವೆ ಹಾಗೂ ನೀವು ಅದಕ್ಕೆ ಜವಾಬ್ದಾರರಾಗಿರಬೇಕಾಗುತ್ತದೆ," ಎಂದು ರಿಷಭ್ ಪಂತ್ ಟ್ವೀಟ್ ಮಾಡಿದ್ದಾರೆ.
2025ರ ಐಪಿಎಲ್ನಲ್ಲಿ ರಿಷಭ್ ಪಂತ್ ವೈಫಲ್ಯ
ಕಳೆದ ಹಲವು ಆವೃತ್ತಿಗಳಲ್ಲಿ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು. ಆದರೆ, ಅವರ ನಾಯಕತ್ವದಲ್ಲಿ ಡೆಲ್ಲಿ ಒಮ್ಮೆಯೂ ಚೊಚ್ಚಲ ಪ್ರಶಸ್ತಿಯನ್ನು ಎತ್ತಿ ಹಿಡಿಯಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು 2025ರ ಮೆಗಾ ಹರಾಜಿನ ನಿಮಿತ್ತ ಡೆಲ್ಲಿ ಫ್ರಾಂಚೈಸಿ ಮೆಗಾ ಹರಾಜಿಗೆ ಬಿಡುಗಡೆ ಮಾಡಲಾಗಿತ್ತು. ಅದರಂತೆ ಮೆಗಾ ಹರಾಜಿನಲ್ಲಿ ಲಖನೌ ಫ್ರಾಂಚೈಸಿ ದಾಖಲೆಯ ಮೊತ್ತಕ್ಕೆ ಅವರನ್ನು ಖರೀದಿಸಿತ್ತು. ಆದರೆ, ಲಖನೌ ನಿರೀಕ್ಷೆಯನ್ನು ರಿಷಭ್ ಪಂತ್ ಹುಸಿಗೊಳಿಸಿದ್ದರು.
IPL 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದ ಕಿವೀಸ್ ವಿಕೆಟ್ ಕೀಪರ್ ಟಿಮ್ ಸೀಫರ್ಟ್!
ಈ ಸೀಸನ್ನಲ್ಲಿ ಪಂತ್ ಒಂದೇ ಒಂದು ಅರ್ಧಶತಕವನ್ನು ಸಿಡಿಸಿದ್ದು ಬಿಟ್ಟರೆ ಇನ್ನುಳಿದ ಪಂದ್ಯಗಳಲ್ಲಿ ಸತತ ವೈಫಲ್ಯವನ್ನು ಅನುಭವಿಸಿದ್ದರು. ಅಲ್ಲದೆ ಅವರು ಹಲವು ತಮ್ಮ ಬ್ಯಾಟಿಂಗ್ ಕ್ರಮಾಂಕಗಳನ್ನು ಬದಲಾಯಿಸಿದ್ದರು. ಕೆಲವೊಮ್ಮೆ ಕೆಳ ಕ್ರಮಾಂಕದಲ್ಲಿಯೂ ಬ್ಯಾಟಿಂಗ್ಗೆ ಬಂದಿದ್ದರು. ಆದರೂ ಅವರಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ತೋರಲು ಸಾಧ್ಯವಾಗಿರಲಿಲ್ಲ.