ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs PBKS: ಆರ್‌ಸಿಬಿ ಬೌಲಿಂಗ್‌ ದಾಳಿಗೆ ಪಂಜಾಬ್‌ ಪಂಚರ್‌, 8 ವರ್ಷಗಳ ಬಳಿಕ ಫೈನಲ್‌ಗೆ ರಾಯಲ್‌ ಚಾಲೆಂಜರ್ಸ್!

RCB vs PBKS: ಜಾಶ್‌ ಹೇಝಲ್‌ವುಡ್‌ ಸೇರಿದಂತೆ ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್‌ ದಾಳಿಯ ಸಹಾಯದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮೊದಲನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಎದುರು 8 ವಿಕೆಟ್‌ ಸುಲಭ ಗೆಲುವು ದಾಖಲಿಸಿತು. ಆ ಮೂಲಕ ಎಂಟು ವರ್ಷಗಳ ಬಳಿಕ ಬೆಂಗಳೂರು ತಂಡ ನಾಲ್ಕನೇ ಬಾರಿ ಐಪಿಎಲ್‌ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

IPL 2025: ಆರ್‌ಸಿಬಿ ಪಂಚ್‌ಗೆ ಪಂಜಾಬ್‌ ವಿಲವಿಲ, ಫೈನಲ್‌ಗೆ ಬೆಂಗಳೂರು!

ಪಂಜಾಬ್‌ ಕಿಂಗ್ಸ್‌ ವಿರುದ್ಧ ಗೆದ್ದು ಫೈನಲ್‌ಗೆ ಪ್ರವೇಶ ಮಾಡಿದ ಆರ್‌ಸಿಬಿ.

Profile Ramesh Kote May 29, 2025 10:21 PM

ಚಂಡೀಗಢ: ಜಾಶ್‌ ಹೇಝಲ್‌ವುಡ್‌ ಸೇರಿದಂತೆ ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್‌ ಹಾಗೂ ಫಿಲ್‌ ಸಾಲ್ಟ್‌ ಸ್ಪೋಟಕ ಅರ್ಧಶತಕದ ಬಲದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ, ಮೊದಲನೇ ಕ್ವಾಲಿಫೈಯರ್‌ ಪಂದ್ಯದಲ್ಲಿ (RCB vs PBKS) ಪಂಜಾಬ್‌ ಕಿಂಗ್ಸ್‌ ಎದುರು 8 ವಿಕೆಟ್‌ಗಳ ಸುಲಭ ಗೆಲುವು ಪಡೆಯಿತು. ಆ ಮೂಲಕ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಫೈನಲ್‌ಗೆ ಪ್ರವೇಶ ಮಾಡಿದೆ. 2009, 2011 ಹಾಗೂ 2016ರ ಬಳಿಕ ಬೆಂಗಳೂರು ತಂಡ ಐಪಿಎಲ್‌ ಟೂರ್ನಿಯಲ್ಲಿ ನಾಲ್ಕನೇ ಬಾರಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ. ಇದರೊಂದಿಗೆ ಚೊಚ್ಚಲ ಕಪ್‌ ಗೆಲ್ಲುವ ಕನಸನ್ನು ನನಸು ಮಾಡುವ ಸನಿಹದಲ್ಲಿದೆ. ಜೂನ್‌ ಒಂದರಂದು ಎರಡನೇ ಕ್ವಾಲಿಫೈಯರ್‌ ಪಂದ್ಯವನ್ನು ಗೆಲ್ಲುವ ತಂಡದ ವಿರುದ್ದ ಆರ್‌ಸಿಬಿ ಜೂನ್‌ 3 ರಂದು ಫೈನಲ್‌ನಲ್ಲಿ ಕಾದಾಟ ನಡೆಸಲಿದೆ.

ಇಲ್ಲಿನ ಮಹಾರಾಜ ಯದವೀಂದ್ರ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದಿದ್ದ ಮೊದಲನೇ ಕ್ವಾಲಿಫೈಯರ್‌ ಪಂದ್ಯ ಹೈಸ್ಕೋರಿಂಗ್‌ ಆಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಆರ್‌ಸಿಬಿ ಬೌಲರ್‌ಗಳು ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಪಂಜಾಬ್‌ ಕಿಂಗ್ಸ್‌ ತಂಡ 14.1 ಒವರ್‌ಗಳಿಗೆ ಕೇವಲ 101 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಬಳಿಕ ಸುಲಭ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ ತಂಡ, ಫಿಲ್‌ ಸಾಲ್ಟ್‌ (56*) ಅವರ ಸ್ಪೋಟಕ ಅರ್ಧಶತಕದ ಬಲದಿಂದ 10 ಓವರ್‌ಗಳ ಅಂತ್ಯಕ್ಕೆ ಎರಡು ವಿಕೆಟ್‌ ನಷ್ಟಕ್ಕೆ 106 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಸುಲಭ ಗೆಲುವನ್ನು ತನ್ನದಾಗಿಸಿಕೊಂಡಿತು.

RCB vs PBKS:ʻಪಂಜಾಬ್‌ ಕಿಂಗ್ಸ್‌ ಫ್ಲಾಪ್‌ ಶೋʼ-ಸಪ್ಪೆ ಮುಖ ಹಾಕಿಕೊಂಡ ಪ್ರೀತಿ ಝಿಂಟಾ!

ಆರ್‌ಸಿಬಿ ಬೌಲಿಂಗ್‌ಗೆ ಪಂಜಾಬ್‌ ತತ್ತರ

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಪಂಜಾಬ್‌ ಕಿಂಗ್ಸ್‌ ತಂಡದ ಎಲ್ಲಾ ಬ್ಯಾಟ್ಸ್‌ಮನ್‌ಗಳು ನೆಲ ಕಚ್ಚಿದರು. ಲೀಗ್‌ನಲ್ಲಿ ಮಿಂಚಿದ್ದ ಪ್ರಿಯಾಂಶ್‌ ಆರ್ಯ (7) ಹಾಗೂ ಪ್ರಭ್‌ ಸಿಮ್ರನ್‌ ಸಿಂಗ್‌ (18) ಅವರು ಪಂಜಾಬ್‌ಗೆ ಉತ್ತಮ ಆರಂಭ ತಂದುಕೊಡುವಲ್ಲಿ ವಿಫಲರಾದರು. ನಂತರ ನಾಯಕ ಶ್ರೇಯಸ್‌ ಅಯ್ಯರ್‌ ತಾಳ್ಮೆ ಕಳೆದುಕೊಂಡು ಜಾಶ್‌ ಹೇಝಲ್‌ವುಡ್‌ಗೆ ವಿಕೆಟ್‌ ಒಪ್ಪಿಸಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಜಾಶ್‌ ಇಂಗ್ಲಿಸ್‌ ಕೂಡ ಹೇಝಲ್‌ವುಡ್‌ ಮಾರಕ ದಾಳಿಗೆ ಶರಣಾದರು. ಆ ಮೂಲಕ ಪಂಜಾಬ್‌ ಕಿಂಗ್ಸ್‌ ಪವರ್‌ಪ್ಲೇನಲ್ಲಿ 38 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.



ಮಧ್ಯಮ ಕ್ರಮಾಂಕದಲ್ಲಿ ಸ್ವಲ್ಪ ಹೊತ್ತು ಕ್ರೀಸ್‌ನಲ್ಲಿ ನಿಂತಿದ್ದ ಮಾರ್ಕಸ್‌ ಸ್ಟೋಯ್ನಿಸ್‌ 26 ರನ್‌ ಗಳಿಸಿ ಭರವಸೆ ಮೂಡಿಸಿದ್ದರಾದರೂ ಅವರನ್ನು ಮುಂದುವರಿಯಲು ಸುಯಶ್‌ ಶರ್ಮಾ ಅವಕಾಶ ನೀಡಲಿಲ್ಲ. ಸ್ಪಿನ್‌ ಮೋಡಿ ಮಾಡಿದ ಸುಯಶ್‌ ಶರ್ಮಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಶಶಾಂಕ್‌ ಸಿಂಗ್‌ ಹಾಗೂ ಮುಶೀರ್‌ ಖಾನ್‌ ಸೇರಿದಂತೆ ಮೂರು ಪ್ರಮುಖ ವಿಕೆಟ್‌ಗಳನ್ನು ಕಿತ್ತರು. ಸ್ಟೋಯ್ನಿಸ್‌, ಪ್ರಭ್‌ ಸಿಮ್ರನ್‌ (18) ಹಾಗೂ ಅಝಮತ್‌ವುಲ್ಲಾ ಒಮರ್ಜಾಯ್‌ (18) ಅವರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್‌ ಎರಡಂಕಿ ವೈಯಕ್ತಿಕ ಮೊತ್ತ ಕಲೆ ಹಾಕಲಿಲ್ಲ. ಜಾಶ್‌ ಹೇಝಲ್‌ವುಡ್‌ ಹಾಗೂ ಸುಯಶ್‌ ಶರ್ಮಾ ತಲಾ ಮೂರು ವಿಕೆಟ್‌ ಪಡೆದರೆ, ಯಶ್‌ ದಯಾಳ್‌ ಎರಡು ವಿಕೆಟ್‌ ಕಿತ್ತರು.



ಫಿಲ್‌ ಸಾಲ್ಟ್‌ ಅಬ್ಬರದ ಬ್ಯಾಟಿಂಗ್‌

ಸಾಧಾರಣ ಗುರಿಯನ್ನು ಹಿಂಬಾಲಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಬ್ಯಾಟಿಂಗ್‌ ಅದ್ಭುತವಾಗಿತ್ತು. ವಿರಾಟ್‌ ಕೊಹ್ಲಿ (12) ಹಾಗೂ ಮಯಾಂಕ್‌ ಅಗರ್ವಾಲ್‌ (19) ಅವರು ಸ್ವಲ್ಪ ಹೊತ್ತು ಆಡಿ ವಿಕೆಟ್‌ ಒಪ್ಪಿಸಿದರು. ಆದರೆ, ಆರಂಭಿಕ ಬ್ಯಾಟ್ಸ್‌ಮನ್‌ ಫಿಲ್‌ ಸಾಲ್ಟ್‌ ಪಿಚ್‌ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಮ್ಮ ನೈಜ ಆಟವನ್ನು ಪ್ರದರ್ಶಿಸಿದರು. ಸ್ಟೋಟಕ ಬ್ಯಾಟ್‌ ಮಾಡಿದ ಸಾಲ್ಟ್‌ ಆಡಿದ ಕೇವಲ 27 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 207ರ ಸ್ಟ್ರೈಕ್‌ ರೇಟ್‌ನಲ್ಲಿ ಅಜೇಯ 56 ರನ್‌ ಗಳಿಸಿ ಇನ್ನೂ 60 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲ್ಲಿಸಿದರು. ನಾಯಕ ರಜತ್‌ ಪಾಟಿದಾರ್‌ ಅಜೇಯ 8 ಎಸೆತಗಳಲ್ಲಿ ಅಜೇಯ 15 ರನ್‌ ಗಳಿಸಿದರು.



ಸ್ಕೋರ್‌ ವಿವರ

ಪಂಜಾಬ್‌ ಕಿಂಗ್ಸ್‌: 14.1 ಓವರ್‌ಗಳಿಗೆ 101-10 (ಮಾರ್ಕಸ್‌ ಸ್ಟೋಯ್ನಿಸ್‌ 26, ಪ್ರಭ್‌ಸಿಮ್ರನ್‌ ಸಿಂಗ್‌ 18, ಅಝಮತ್‌ವುಲ್ಲಾ ಒಮರ್ಜಾಯ್‌ 18; ಜಾಶ್‌ ಹೇಝಲ್‌ವುಡ್‌ 21ಕ್ಕೆ 3, ಸುಯಶ್‌ ಶರ್ಮಾ 17ಕ್ಕೆ 3, ಯಶ್‌ ದಯಾಳ್‌ 26ಕ್ಕೆ 2)

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 10 ಓವರ್‌ಗಳಿಗೆ 106-2 (ಫಿಲ್‌ ಸಾಲ್ಟ್‌ 56*, ಮಯಾಂಕ್‌ ಅಗರ್ವಾಲ್‌ 19, ರಜತ್‌ ಪಾಟಿದಾರ್‌ 15*; ಮುಷೀರ್‌ ಖಾನ್‌ 27 ಕ್ಕೆ 1)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಸುಯಶ್‌ ಶರ್ಮಾ