ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

NZ vs PAK: ಪಾಕಿಸ್ತಾನಕ್ಕೆ 5ನೇ ಪಂದ್ಯದಲ್ಲಿಯೂ ಸೋಲು, ಕಿವೀಸ್ ಮುಡಿಗೆ ಟಿ20ಐ ಸರಣಿ!

NZ vs PAK 5th T20I Match Highlights: ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಪಾಕಿಸ್ತಾನ ತಂಡ ಐದನೇ ಟಿ20ಐ ಪಂದ್ಯದಲ್ಲಿಯೂ ನ್ಯೂಜಿಲೆಂಡ್‌ ವಿರುದ್ದ 8 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಪಾಕ್‌, ಜೇಮ್ಸ್‌ ನೀಶಮ್‌ ಮಾರಕ ಬೌಲಿಂಗ್‌ ದಾಳಿಗೆ ನಲುಗಿ ಕೇವಲ 128 ರನ್‌ಗಳಿಗೆ ಸೀಮಿತವಾಗಿತ್ತು. ಬಳಿಕ ಗುರಿ ಹಿಂಬಾಲಿಸಿದ ಕಿವೀಸ್‌, ಟಿಮ್‌ ಸಿಫರ್ಟ್‌ ಸ್ಪೋಟಕ ಬ್ಯಾಟಿಂಗ್‌ ಬಲದಿಂದ 131 ರನ್‌ಗಳನ್ನು ಗಳಿಸಿ ಗೆಲುವು ಪಡೆಯಿತು. ಆ ಮೂಲಕ ಐದು ಪಂದ್ಯಗಳ ಟಿ20ಐ ಸರಣಿಯನ್ನು ನ್ಯೂಜಿಲೆಂಡ್‌ ತಂಡ 4-1 ಅಂತರದಲ್ಲಿ ಗೆದ್ದುಕೊಂಡಿದೆ.

ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್‌ಗೆ 8 ವಿಕೆಟ್‌ ಭರ್ಜರಿ ಜಯ!

NZ vs PAK 5th Match Highlights

Profile Ramesh Kote Mar 26, 2025 7:21 PM

ವೆಲ್ಲಿಂಗ್ಟನ್‌: ಜೇಮ್ಸ್‌ ನೀಶಮ್‌ (22ಕ್ಕೆ 5) ಮಾರಕ ಬೌಲಿಂಗ್‌ ದಾಳಿ ಹಾಗೂ ಟಿಮ್‌ ಸಿಫರ್ಟ್‌ (97*) ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ನ್ಯೂಜಿಲೆಂಡ್‌ (New2 Zealand) ತಂಡ, ಐದನೇ ಹಾಗೂ ಟಿ20ಐ ಸರಣಿಯ (NZ vs PAK) ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ (Pakistan) ವಿರುದ್ಧ 8 ವಿಕೆಟ್‌ಗಳಿಂದ ಗೆಲುವು ಪಡೆದಿದೆ. ಆ ಮೂಲಕ ಐದು ಪಂದ್ಯಗಳ ಟಿ20ಐ ಸರಣಿಯನ್ನು ಕಿವೀಸ್‌ 4-1 ಅಂತರದಲ್ಲಿ ಮುಡಿಗೇರಿಸಿಕೊಂಡಿದೆ. ಮಾರ್ಚ್‌ 26 ರಂದು ವೆಲ್ಲಿಂಗ್ಟನ್‌ನ ಸ್ಕೈ ಸ್ಟೇಡಿಯಂನಲ್ಲಿ ನಡೆದಿದ್ದ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಪಾಕಿಸ್ತಾನ 20 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 128 ರನ್‌ಗಳಿಗೆ ಸೀಮಿತವಾಗಿತ್ತು. ಬಳಿಕ ಗುರಿ ಹಿಂಬಾಲಿಸಿದ ನ್ಯೂಜಿಲೆಂಡ್‌ ತಂಡ, ಟಿಮ್‌ ಸಿಫರ್ಟ್‌ ಅವರ ಬ್ಯಾಟಿಂಗ್‌ ಬಲದಿಂದ ಕೇವಲ 10 ಓವರ್‌ಗಳಿಗೆ ಎರಡು ವಿಕೆಟ್‌ ನಷ್ಟಕ್ಕೆ 131 ರನ್‌ಗಳನ್ನು ಗಳಿಸಿ ಗೆಲುವು ಪಡೆಯಿತು.

ಸುಲಭ ಗುರಿಯನ್ನು ಹಿಂಬಾಲಿಸಿದ ನ್ಯೂಜಿಲೆಂಡ್ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಟಿಮ್‌ ಸಿಫರ್ಟ್‌ ಅವರು ಮೊದಲನೇ ಓವರ್‌ನಲ್ಲಿಯೇ ಜಹಂದಾದ್‌ ಖಾನ್‌ಗೆ ಎರಡು ಸಿಕ್ಸರ್‌ ಹಾಗೂ ಒಂದು ಬೌಂಡರಿ ಸಿಡಿಸಿದರು. ಮತ್ತೊಂದು ತುದಿಯಲ್ಲಿ ಫಿನ್‌ ಆಲೆನ್‌ ಅವರು ಮೊಹಮ್ಮದ್‌ ಅಲಿ ಓವರ್‌ನಲ್ಲಿ 14 ರನ್‌ಗಳನ್ನು ಬಾರಿಸಿದ್ದರು. ಈ ಇಬ್ಬರೂ ಕೇವಲ 21 ಎಸೆತಗಳಲ್ಲಿ ಅರ್ಧಶತಕವನ್ನು ಸಿಡಿಸುವ ಮೂಲಕ ಕಿವೀಸ್‌ಗೆ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. ಇನ್ನು ಆರನೇ ಓವರ್‌ನಲ್ಲಿ ಜಹಂದಾದ್‌ಗೆ ಸಿಫರ್ಟ್‌ 25 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಕೇವಲ 23 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದ್ದರು.

NZ vs PAK: 44 ಎಸೆತಗಳಲ್ಲಿ ಸೆಂಚುರಿ ಬಾರಿಸಿ ಬಾಬರ್‌ ಆಝಮ್‌ ದಾಖಲೆ ಮುರಿದ ಹಸನ್‌ ನವಾಝ್‌!

ಪವರ್‌ಪ್ಲೇನಲ್ಲಿ ವಿಕೆಟ್‌ ಪಡೆಯಲು ಎಡವಿದ್ದ ಪಾಕಿಸ್ತಾನ ತಂಡ 7ನೇ ಓವರ್‌ನಲ್ಲಿ ಮೊದಲ ವಿಕೆಟ್‌ ಪಡೆಯಿತು. ಸೂಫಿಯನ್‌ ಮುಖೀಮ್‌ ಅವರು ಫಿನ್‌ ಆಲೆನ್‌ (27 ರನ್‌) ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದ್ದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಮಾರ್ಕ್‌ ಚಾಪ್ಮನ್‌ ಅವರು ಕೇವಲ 3 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತಿದ್ದ ಟಿಮ್‌ ಸಿಫರ್ಟ್‌ ಅವರು ಕೇವಲ 38 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ ಅಜೇಯ 97 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಕಿವೀಸ್‌ ಬಹುಬೇಗ ಗೆಲುವು ಪಡೆಯಲು ನೆರವು ನೀಡಿದರು.



ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ನ್ಯೂಜಿಲೆಂಡ್‌ ತಂಡದ ಪರ ಆರಂಭಿಕ ಹಸನ್‌ ನವಾಝ್‌ ಈ ಸರಣಿಯಲ್ಲಿ ಮೂರನೇ ಬಾರಿ ಡಕ್‌ಔಟ್‌ ಆದರು. ಪಂದ್ಯದ ಎರಡನೇ ಓವರ್‌ನಲ್ಲಿಯೇ ಅವರು ಸ್ಲಿಪ್‌ನಲ್ಲಿ ಕ್ಯಾಚ್‌ ಕೊಟ್ಟರು. ಇವರ ಓಪನಿಂಗ್‌ ಜೊತೆಗಾರ ಮೊಹಮ್ಮದ್‌ ಹ್ಯಾರಿಸ್‌ 17 ಎಸೆತಗಳಲ್ಲಿ 11 ರನ್‌ ಗಳಿಸಿ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ಉಳಿಯಲಿಲ್ಲ. ಆ ಮೂಲಕ ಪಾಕಿಸ್ತಾನ 4.5 ಓವರ್‌ಗಳಲ್ಲಿ 23 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು.



ಸಲ್ಮಾನ್‌ ಅಘಾ ಅರ್ಧಶತಕ

ಎರಡು ವಿಕೆಟ್‌ ಬೇಗ ಕಳೆದುಕೊಂಡ ಬಳಿಕ ಪಾಕ್‌ ನಾಯಕ ಸಲ್ಮಾನ್‌ ಅಘಾ ಅವರು ಸಂಕಷ್ಟಕ್ಕೆ ಸಿಲುಕಿದ್ದ ಪಾಕಿಸ್ತಾನ ತಂಡವನ್ನು ಮೇಲೆತ್ತಿದ್ದರು. ಒಂದು ಕಡೆ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ಸಲ್ಮಾನ್‌ ಅಘಾ ಅವರು 39 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 51 ರನ್‌ ಗಳಿಸಿ ನೀಶಮ್‌ಗೆ ವಿಕೆಟ್‌ ಒಪ್ಪಿಸಿದರು. ಇವರ ಬಳಿಕ ಶದಾಬ್‌ ಖಾನ್‌ 28 ರನ್‌ ಗಳಿಸಿದ್ದು ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಕಿವೀಸ್‌ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾದರು. ಅಂತಿಮವಾಗಿ ಪಾಕ್‌ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 128 ರನ್‌ಗಳಿಗೆ ಸೀಮಿತವಾಯಿತು.



ಜೇಮ್ಸ್‌ ನೀಶಮ್‌ 5 ವಿಕೆಟ್‌ ಸಾಧನೆ

ಪಾಕಿಸ್ತಾನ ತಂಡ ಕಡಿಮೆ ಮೊತ್ತಕ್ಕೆ ಆಲ್‌ಔಟ್‌ ಮಾಡುವಲ್ಲಿ ಕಿವೀಸ್‌ ಫಾಸ್ಟ್‌ ಬೌಲರ್‌ ಜೇಮ್ಸ್‌ ನೀಶಮ್‌ ಅವರು ಪ್ರಮುಖ ಪಾತ್ರವಹಿಸಿದರು. ಸಲ್ಮಾನ್‌ ಅಘಾ, ಅಬ್ದುಲ್‌ ಸಮದ್‌, ಶದಾಬ್‌ ಖಾನ್‌, ಜಹಂದಾದ್‌ ಖಾನ್‌ ಹಾಗೂ ಸೂಫಿಯನ್‌ ಮುಖೀಮ್‌ ಸೇರಿದಂತೆ ಜೇಮ್ಸ್‌ ನೀಶಮ್‌ 5 ವಿಕೆಟ್‌ ಸಾಧನೆ ಮಾಡಿದರು. ಇವರ ಬೌಲ್‌ ಮಾಡಿದ 4 ಓವರ್‌ಗಳಿಗೆ ಕೇವಲ 22 ರನ್‌ ನೀಡಿ 5 ವಿಕೆಟ್‌ ಪಡೆದಿದ್ದಾರೆ.