ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

On this day in 1983: ಕಪಿಲ್‌ ದೇವ್‌ ಅವಿಸ್ಮರಣೀಯ 175* ಇನ್ನಿಂಗ್ಸ್‌ಗೆ 42 ವರ್ಷ!

Kapil Dev's iconic 175 Run: ಅಂದು 31 ರನ್‌ಗಳಿಂದ ಜಿಂಬಾಬ್ವೆಯನ್ನು ಪರಾಭವಗೊಳಿಸಿದ ಭಾರತ ತಂಡ ಸೆಮಿಫೈನಲ್‌ಗೇರಿತ್ತು. ಫೈನಲ್ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್‌, ಬಲಿಷ್ಠ ವಿಂಡೀಸ್‌ ಸೋಲಿಸಿ ಚೊಚ್ಚಲ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿತ್ತು.

ಕಪಿಲ್‌ ದೇವ್‌ ಅವಿಸ್ಮರಣೀಯ 175* ಇನ್ನಿಂಗ್ಸ್‌ಗೆ 42 ವರ್ಷ!

Profile Abhilash BC Jun 18, 2025 11:04 AM

ನವದೆಹಲಿ: ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಪಾಲಿಗೆ ಜೂ. 18 ಮರೆಯಲಾಗದ ದಿನ(On this day in 1983). ದಿಗ್ಗಜ ಆಲ್‌ರೌಂಡರ್‌, 1983ರ ವಿಶ್ವಕಪ್‌(1983 World Cup) ವಿಜೇತ ಭಾರತ ತಂಡದ ನಾಯಕ ಕಪಿಲ್‌ ದೇವ್‌(Kapil Dev) ಅವರು ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ ಅಜೇಯ 175 ರನ್‌ ಬಾರಿಸಿದ ಅವಿಸ್ಮರಣೀಯ ಇನ್ನಿಂಗ್ಸ್‌ಗೆ 42 ವರ್ಷ ಪೂರ್ತಿಗೊಂಡಿದೆ. ಅಂದು ಭಾರತ ತಂಡದ ರಕ್ಷಕನಾಗಿ ನಿಂತದ್ದನ್ನು ಕ್ರಿಕೆಟ್ ಪ್ರೇಮಿಗಳು ಮರೆತಿಲ್ಲ. ಆದರೆ ಈ ಪಂದ್ಯವನ್ನು ವೀಕ್ಷಿಸುವ ಸೌಭಾಗ್ಯ ಮಾತ್ರ ಭಾರತೀಯರಿಗೆ ಇಂದಿಗೂ ಸಿಗಲಿಲ್ಲ.

ಹೌದು, ಕಪಿಲ್‌ನ ಈ ಇನ್ನಿಂಗ್ಸ್‌ನ ವಿಡಿಯೊ ಇದೆಯೇ? ಎಂದು ಕೇಳಿದರೆ ಉತ್ತರ ಇಲ್ಲ. ಯಾಕೆಂದರೆ ಆಗ ವಿಶ್ವಕಪ್‌ ಕ್ರಿಕೆಟ್ ಪಂದ್ಯಗಳನ್ನು ಪ್ರಸಾರ ಮಾಡುತ್ತಿದ್ದ ಬಿಬಿಸಿ ಆ ದಿನ ಮುಷ್ಕರ ನಿರತವಾಗಿತ್ತು.ಆ ದಿನ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಬಂದಿದ್ದ ನಾಲ್ಕೂವರೆ ಸಾವಿರ ವೀಕ್ಷಕರು ಸೌಭಾಗ್ಯಶಾಲಿಗಳು. ಅವರಿಗೆ ಮಾತ್ರ ಈ ಇನ್ಸಿಂಗ್ಸ್ ಆಸ್ವಾದಿಸುವ ಭಾಗ್ಯ ಒಲಿದಿತ್ತು.



ಆ ಪಂದ್ಯದಲ್ಲಿ ಭಾರತದ 5 ವಿಕೆಟ್‌ 17 ರನ್ನಿಗೆ ಬಿದ್ದಾಗ ಕಪಿಲ್‌ ಸುಂಟರಗಾಳಿಯಂಥ ಬೀಸುಗೆಯಲ್ಲಿ ಅಜೇಯ 175 ರನ್‌ ಬಾರಿಸಿದ್ದರು. ಇದು ಭಾರತೀಯ ಏಕದಿನ ಚರಿತ್ರೆಯ ಮೊದಲ ಶತಕವಾದರೆ, ಆ ಕಾಲಕ್ಕೆ ವಿಶ್ವದಾಖಲೆಯೂ ಆಗಿತ್ತು. 16 ಬೌಂಡರಿ ಮತ್ತು 6 ಸಿಕ್ಸರ್‌ಗಳಿಂದ ಕಪಿಲ್ ಮಿಂಚಿದ್ದರು. ಈ ಸಿಕ್ಸರ್‌ಗಳಲ್ಲಿ ಒಂದು ಸಿಕ್ಸರ್ ನೆವಿಲ್ ಕ್ರಿಕೆಟ್ ಕ್ರೀಡಾಂಗಣದ ಮೇಲ್ಛಾವಣಿ ಮೇಲೆ ಬಿದ್ದಿತ್ತು. ಆ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಕಪಿಲ್ ಆಗಿದ್ದರು. ಕಪಿಲ್‌ ಆಡಿದ ಆಲ್‌ರೌಂಡ್‌ ಆಟದಿಂದಾಗಿ ಜಿಂಬಾಬ್ವೆ ತಂಡವನ್ನು 235 ರನ್ನಿಗೆ ಕಟ್ಟಿಹಾಕಲು ಸಾಧ್ಯವಾಗಿತ್ತು.

ಅಂದು 31 ರನ್‌ಗಳಿಂದ ಜಿಂಬಾಬ್ವೆಯನ್ನು ಪರಾಭವಗೊಳಿಸಿದ ಭಾರತ ತಂಡ ಸೆಮಿಫೈನಲ್‌ಗೇರಿತ್ತು. ಫೈನಲ್ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್‌, ಬಲಿಷ್ಠ ವಿಂಡೀಸ್‌ ಸೋಲಿಸಿ ಚೊಚ್ಚಲ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿತ್ತು.