PBKS vs LSG: ಲಕ್ನೋ ವಿರುದ್ಧ ಪಂಜಾಬ್‌ಗೆ 37 ರನ್ ಜಯಭೇರಿ
ಪ್ರಭ್‌ಸಿಮ್ರಾನ್ 48 ಎಸೆತ ಎದುರಿಸಿ 91 ರನ್ ಗಳಿಸಿ ಕೇವಲ 9 ರನ್ ಅಂತರದಿಂದ ಶತಕ ವಂಚಿತರಾದರು. ಅವರ ಈ ಇನಿಂಗ್ಸ್‌ನಲ್ಲಿ 7 ಸೊಗಸಾದ ಸಿಕ್ಸರ್ ಮತ್ತು 6 ಬೌಂಡರಿ ಒಳಗೊಂಡಿತ್ತು. ಅರ್ಧಶತಕದ ಮೂಲಕ ಪ್ರಭ್‌ಸಿಮ್ರಾನ್ 25 ವರ್ಷ ತುಂಬುವ ಮೊದಲು ಪಂಜಾಬ್ ಪರ ಅತಿ ಹೆಚ್ಚು 50+ ಸ್ಕೋರ್ ಗಳಿಸಿ ಮೊದಲ ಆಟಗಾರ ಎನಿಸಿಕೊಂಡರು.


ಧರ್ಮಶಾಲಾ: ಹಿಮಾಲಯದ ತಪ್ಪಲಿನ ರಮಣೀಯ ತಾಣವಾದ ಧರ್ಮಶಾಲಾದಲ್ಲಿ ಭಾನುವಾರ ರಾತ್ರಿ ನಡೆದ ಐಪಿಎಲ್(IPL 2025) ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅಮೋಘ ನಿರ್ವಹಣೆ ನೀಡಿದ ಪಂಜಾಬ್ ಕಿಂಗ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್(PBKS vs LSG) ತಂಡವನ್ನು 37 ರನ್‌ಗಳಿಂದ ಭರ್ಜರಿಯಾಗಿ ಸೋಲಿಸಿದೆ. ಇದು ಧರ್ಮಶಾಲಾದಲ್ಲಿ ನಡೆದ ಹಾಲಿ ಆವೃತ್ತಿಯ ಮೊದಲ ಪಂದ್ಯ. ಗೆಲುವಿನೊಂದಿಗೆ ಪಂಜಾಬ್ ತಂಡ ದ್ವಿತೀಯ ಸ್ಥಾನಕ್ಕೆ ನೆಗೆಯಿತು.
ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ ಕಿಂಗ್ಸ್ ಆರಂಭಿಕ ಆಟಗರ ಪ್ರಭ್‌ಸಿಮ್ರಾನ್ ಸಿಂಗ್(91) ಹಾಗೂ ನಾಯಕ ಶ್ರೇಯಸ್ ಅಯ್ಯರ್(45) ಅವರ ಉತ್ತಮ ಆಟದಿಂದಾಗಿ 5 ವಿಕೆಟ್‌ಗೆ 236 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಲಕ್ನೋ ತಂಡ ಎಡಗೈ ವೇಗಿ ಅರ್ಷದೀಪ್ ಅವರ ನಿಖರ ದಾಳಿಗೆ ತತ್ತರಿಸಿ 7 ವಿಕೆಟ್‌ಗೆ 199 ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
ಚೇಸಿಂಗ್ ನಡೆಸಿದ ಲಕ್ನೋ ತಂಡಕ್ಕೆ ಅರ್ಶ್‌ದೀಪ್ ಸಿಂಗ್ ಒಂದೇ ಓವರ್‌ನಲ್ಲಿ ಅಪಾಯಕಾರಿ ಮಿಚೆಲ್ ಮಾರ್ಷ್(0) ಮತ್ತು ಐಡೆನ್ ಮಾರ್ಕ್ರಮ್(13) ವಿಕೆಟ್ ಕಿತ್ತು ಅವಳಿ ಆಘಾತವಿಕ್ಕಿದರು. ಇಲ್ಲಿಗೆ ಸುಮ್ಮನಾಗದ ಅರ್ಶ್‌ದೀಪ್ ಮುಂದಿನ ಓವರ್‌ನಲ್ಲಿ ನಿಕೋಲಸ್ ಪೂರನ್(6) ವಿಕೆಟ್ ಕಿತ್ತರು. ಅಲ್ಲಿಗೆ ಆರಂಭಿಕ ಮೂರು ವಿಕೆಟ್ ಅರ್ಶ್‌ದೀಪ್ ಪಾಲಾಯಿತು. 27 ರನ್‌ಗೆ 3 ವಿಕೆಟ್ ಕಳೆದುಕೊಂಡ ಲಕ್ನೋ ತೀವ್ರ ಸಂಕಷ್ಟಕ್ಕೆ ಸಿಲುಕಿತು.
ನಾಯಕ ರಿಷಭ್ ಪಂತ್ ಆಟ 2 ಸಿಕ್ಸರ್ ಮತ್ತು ಒಂದು ಬೌಂಡರಿಗೆ ಸೀಮಿತವಾಯಿತು. ಅವರ ಗಳಿಕೆ 18. ಈ ಮೂಲಕ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಕಂಡರು. ಇನ್ನೇನು ತಂಡ ನೂರರೊಳಗೆ ಗಂಟುಮೂಟೆ ಕಟ್ಟುತ್ತದೆ ಎನ್ನುವಷ್ಟರಲ್ಲಿ ಯುವ ಬ್ಯಾಟರ್‌ಗಳಾದ ಅಬ್ದುಲ್ ಸಮದ್ ಮತ್ತು ಬದೋನಿ ಬ್ಯಾಟಿಂಗ್ ಹೋರಾಟವೊಂದನ್ನು ಸಂಘಟಿಸಿ 6ನೇ ವಿಕೆಟ್‌ಗೆ 81 ರನ್‌ಗಳ ಜತೆಯಾಟ ನಡೆಸುವ ಮೂಲಕ ತಂಡದ ಮೊತ್ತವನ್ನು 190 ರ ಗಡಿ ದಾಟಿಸಿದರು. ಸಮದ್ 45 ರನ್ ಬಾರಿಸಿದರೆ, ಬದೋನಿ ಐಪಿಎಲ್‌ನಲ್ಲಿ 6ನೇ ಅರ್ಧಶತಕ ಪೂರೈಸಿ 74 ರನ್ ಬಾರಿಸಿದರು. ಅವರ ಈ ಇನಿಂಗ್ಸ್‌ನಲ್ಲಿ ತಲಾ 5 ಸಿಕ್ಸರ್ ಮತ್ತು ಬೌಂಡರಿ ಒಳಗೊಂಡಿತ್ತು. ಪಂಜಾಬ್ ಪರ ಅರ್ಶ್‌ದೀಪ್ 16 ಕ್ಕೆ 3, ಅಜ್ಮತುಲ್ಲಾ ಒಮರ್ಜಾಯ್ 33 ಕ್ಕೆ 2 ವಿಕೆಟ್ ಕಿತ್ತರು.
ಪ್ರಭ್‌ಸಿಮ್ರಾನ್ ಬೊಂಬಾಟ್ ಬ್ಯಾಟಿಂಗ್
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಪಂಜಾಬ್ ಮೊದಲ ವಿಕೆಟ್ ಬೇಗನೇ ಉರುಳಿದರೂ ಪ್ರಭ್‌ಸಿಮ್ರಾನ್ ಸಿಂಗ್ ದ್ವಿತೀಯ ವಿಕೆಟ್‌ಗೆ ಜೋಶ್ ಇಂಗ್ಲಿಷ್ ಜತೆ ದ್ವಿತೀಯ ವಿಕೆಟ್‌ಗೆ 48 ರನ್, ಆ ಬಳಿಕ ನಾಯಕ ಶ್ರೇಯಸ್ ಅಯ್ಯರ್ ಜತೆ ಮೂರನೇ ವಿಕೆಟಿಗೆ 78 ರನ್ನುಗಳ ಜತೆಯಾಟ ನಡೆಸಿದ್ದರಿಂದ ತಂಡ ಚೇತರಿಸಿಕೊಂಡಿತು. ಬಿರುಸಿನ ಬ್ಯಾಟಿಂಗ್ ನಡೆಸಿದ ಇಂಗ್ಲಿಷ್ ಕೇವಲ 14 ಎಸೆತಗಳಿಂದ 4 ಸಿಕ್ಸರ್ ಒಂದು ಬೌಂಡರಿ ನೆರವಿನಿಂದ 30 ರನ್ ಚಚ್ಚಿದರು. ಅಯ್ಯರ್ ಕೂಡ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ 45(4ಬೌಂಡರಿ, 2 ಸಿಕ್ಸರ್) ಬಾರಿಸಿದರು.
ಪ್ರಭ್‌ಸಿಮ್ರಾನ್ 48 ಎಸೆತ ಎದುರಿಸಿ 91 ರನ್ ಗಳಿಸಿ ಕೇವಲ 9 ರನ್ ಅಂತರದಿಂದ ಶತಕ ವಂಚಿತರಾದರು. ಅವರ ಈ ಇನಿಂಗ್ಸ್‌ನಲ್ಲಿ 7 ಸೊಗಸಾದ ಸಿಕ್ಸರ್ ಮತ್ತು 6 ಬೌಂಡರಿ ಒಳಗೊಂಡಿತ್ತು. ಅರ್ಧಶತಕದ ಮೂಲಕ ಪ್ರಭ್‌ಸಿಮ್ರಾನ್ 25 ವರ್ಷ ತುಂಬುವ ಮೊದಲು ಪಂಜಾಬ್ ಪರ ಅತಿ ಹೆಚ್ಚು 50+ ಸ್ಕೋರ್ ಗಳಿಸಿ ಮೊದಲ ಆಟಗಾರ ಎನಿಸಿಕೊಂಡರು. ಒಟ್ಟು 8 ಬಾರಿ 50+ ಸ್ಕೋರ್ ಗಳಿಸಿದ್ದಾರೆ.
𝐏𝐫𝐚𝐛𝐡 𝐃𝐚 𝐁𝐚𝐧𝐝𝐚! ♥️
— Punjab Kings (@PunjabKingsIPL) May 4, 2025
Three back-to-back fifties, and he’s not done yet. 💪 pic.twitter.com/ADbThG22rM
ಇದನ್ನೂ ಓದಿ KKR vs RR: ಕೆಕೆಆರ್ ಪ್ಲೇ-ಆಫ್ ಆಸೆ ಜೀವಂತ; ರಾಜಸ್ಥಾನ್ ವಿರುದ್ಧ ಒಂದು ರನ್ ರೋಚಕ ಗೆಲುವು
ದುಬಾರಿಯಾದ ಮಾಯಾಂಕ್
ಅಂತಿಮ ಹಂತದಲ್ಲಿ ಶಶಾಂಕ್ ಸಿಂಗ್ ಔಟಾಗದೆ 15 ಎಸೆತಗಳಲ್ಲಿ 33, ಮಾರ್ಕಸ್ ಸ್ಟೋಯಿನಿಸ್ 5 ಎಸೆತಗಳಿಂದ 15* ರನ್ ಚಚ್ಚಿದರು. ಲಕ್ನೋ ಪರ ಆಕಾಶ್ ಮಹಾರಾಜ್ ಸಿಂಗ್ ಮತ್ತು ದಿಗ್ವೇಶ್ ರಾಥಿ ತಲಾ 2 ವಿಕೆಟ್ ಕಿತ್ತರು. ಮಾಯಾಂಕ್ ಯಾದವ್ 60 ರನ್ ಬಿಟ್ಟುಕೊಟ್ಟು ದುಬಾರಿಯಾದರು.