2036 Olympic: ಒಲಿಂಪಿಕ್ ಪ್ರಧಾನ ಕಚೇರಿಗೆ ಭೇಟಿ ನೀಡಿದ ಭಾರತೀಯ ನಿಯೋಗ
ಗುಜರಾತ್ ಕ್ರೀಡಾ ಸಚಿವ ಹರ್ಷ ಸಾಂಘ್ವಿ ನೇತೃತ್ವದ ನಿಯೋಗದಲ್ಲಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷೆ ಪಿಟಿ ಉಷಾ, ಕ್ರೀಡಾ ಕಾರ್ಯದರ್ಶಿ ಹರಿರಂಜನ್ ರಾವ್, ಗುಜರಾತ್ ಮುಖ್ಯ ಕ್ರೀಡಾ ಕಾರ್ಯದರ್ಶಿ ಅಶ್ವಿನಿ ಕುಮಾರ್ ಮತ್ತು ಕಾರ್ಯದರ್ಶಿ ತೆನ್ನರಸನ್ ಭೇಟಿ ನೀಡಿದ ಪ್ರಮುಖರು.


ನವದೆಹಲಿ: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯ ನೂತನ ಅಧ್ಯಕ್ಷೆ ಕಿಸ್ಟ್ರಿ ಕೋವೆಂಟ್ರಿ(Kirsty Coventry) ಅವರು ಒಲಿಂಪಿಕ್ ಆತಿಥೇಯ ನಗರ ಆಯ್ಕೆ ಪ್ರಕ್ರಿಯೆಗೆ ತಡೆಯೊಡ್ಡಿದ್ದ ಬೆನ್ನಲ್ಲೇ, ಕೂಟದ ಬಿಡ್ಡಿಂಗ್ ಪ್ರಯತ್ನದಲ್ಲಿರುವ ಭಾರತ, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಪ್ರಧಾನ ಕಚೇರಿಗೆ ಮೂರು ದಿನಗಳ ಪ್ರಮುಖ ಭೇಟಿಗಾಗಿ ಸ್ವಿಟ್ಜರ್‌ಲ್ಯಾಂಡ್‌ನ ಲೌಸೇನ್ ತಲುಪಿದೆ. ಇದು ಒಲಿಂಪಿಕ್ ರಾಜಧಾನಿಗೆ ಭಾರತದ ಮೊದಲ ಅಧಿಕೃತ ಭೇಟಿಯಾಗಿದೆ.
ಗುಜರಾತ್ ಕ್ರೀಡಾ ಸಚಿವ ಹರ್ಷ ಸಾಂಘ್ವಿ ನೇತೃತ್ವದ ನಿಯೋಗದಲ್ಲಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷೆ ಪಿಟಿ ಉಷಾ, ಕ್ರೀಡಾ ಕಾರ್ಯದರ್ಶಿ ಹರಿರಂಜನ್ ರಾವ್, ಗುಜರಾತ್ ಮುಖ್ಯ ಕ್ರೀಡಾ ಕಾರ್ಯದರ್ಶಿ ಅಶ್ವಿನಿ ಕುಮಾರ್ ಮತ್ತು ಕಾರ್ಯದರ್ಶಿ ತೆನ್ನರಸನ್ ಭೇಟಿ ನೀಡಿದ ಪ್ರಮುಖರು.
ಭಾರತೀಯ ಒಲಿಂಪಿಕ್ ಒಕ್ಕೂಟವು ಕಳೆದ ವರ್ಷವೇ ಆತಿಥ್ಯದ ಪ್ರಸ್ತಾವ ಸಲ್ಲಿಸಿತ್ತು. ಭಾರತದೊಂದಿಗೆ ಕತಾರ್ ಮತ್ತು ಸೌದಿ ಅರೇಬಿಯಾ ಸೇರಿದಂತೆ 10 ರಾಷ್ಟ್ರಗಳು ಆಯೋಜನೆಯ ಇಂಗಿತ ವ್ಯಕ್ತಪಡಿಸಿವೆ. 2036ರ ಒಲಿಂಪಿಕ್ಸ್ ಅನ್ನು ಯಾವ ರಾಷ್ಟ್ರ ಆಯೋಜಿಸಲಿದೆ ಎಂಬುದು 2026ರಲ್ಲೇ ಘೋಷಣೆಯಾಗಲಿದೆ.
ಐಒಸಿ ಪ್ರಧಾನ ಕಚೇರಿಗೆ ಭೇಟಿ ನೀಡಿರುವ ಭಾರತೀಯ ನಿಯೋಗ ಒಲಿಂಪಿಕ್ಸ್ ಆಯೋಜನೆಯ ಸಾಧಕ ಭಾದಕಗಳ ಕುರಿತು ಮತ್ತು ಆಯೋಜನೆಗೆ ಅವಕಾಶ ಕೋರಿ ಅನೌಪಚಾರಿಕ ಮಾತುಕತೆ ನಡೆಸಿದೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ LA 2028 Olympics: ದಕ್ಷಿಣ ಕ್ಯಾಲಿಫೋರ್ನಿಯಾದ ಪೊಮೊನಾ ನಗರದಲ್ಲಿ ಒಲಿಂಪಿಕ್ಸ್ ಕ್ರಿಕೆಟ್ ಆಯೋಜನೆ
ಕೆಲವು ದಿನಗಳ ಹಿಂದೆ ಕೊವೆಂಟ್ರಿ ಅವರು ‘ಕೆಲವೊಂದು ಪ್ರಕ್ರಿಯೆಗಳು ಪ್ರಗತಿಯಲ್ಲಿವೆ. ಭವಿಷ್ಯದಲ್ಲಿ ಯಾವ ರಾಷ್ಟ್ರದಲ್ಲಿ ಒಲಿಂಪಿಕ್ಸ್ ಆಯೋಜನೆಗೊಳ್ಳಲಿದೆ ಎಂಬ ಚರ್ಚೆಯಲ್ಲಿ ಸದಸ್ಯರ ಅಭಿಪ್ರಾಯ ಮುಖ್ಯ. ನನ್ನಲ್ಲೂ ಹಲವು ಆಲೋಚನೆಗಳಿದ್ದು, ಬಹುಶಃ ಮುಂದಿನ ದಿನಗಳಲ್ಲಿ ಅದನ್ನು ಹಂಚಿಕೊಳ್ಳುತ್ತೇನೆ' ಎಂದು ಹೇಳಿದ್ದರು.