Yagati Raghu Naadig Column: ಪಾಪಿ ಸಮುದ್ರ ಹೊಕ್ಕರೂ ಮೊಣಕಾಲುದ್ದ ನೀರು !
‘ಮಾವನ ಮನೆಗೆ ಹೋದಮೇಲೆ ಪೊಗದಸ್ತಾದ ಕಡಲೇ ಕಾಳು-ಬದನೇಕಾಯಿ ಹುಳಿ, ಮಿಡಿ ಮಾವಿನ ಕಾಯಿಯ ಉಪ್ಪಿನಕಾಯಿ, ಹುಚ್ಚೆಳ್ಳು ಚಟ್ನೀ ಪುಡಿ, ಕೆನೆ ಮೊಸರು ತಟ್ಟೆಗೆ ಬಿದ್ದೇ ಬೀಳುತ್ತೆ, ಊಟದ ನಂತರ ಸೊಗಸಾಗಿ ಕಳಿತಿರುವ ನಂಜನಗೂಡು ರಸಬಾಳೆ ಹಣ್ಣು ಸಿಕ್ಕೇ ಸಿಗುತ್ತೆ. ಅಲ್ಲಿಯವರೆಗೂ ನಾನು ತಡಕೊಂಡ್ರೆ ಆಯ್ತು’ ಎಂದು ಮತ್ತೆಮತ್ತೆ ಸ್ವಗತದಲ್ಲಿ ಸಮಾ ಧಾನ ಹೇಳಿಕೊಳ್ಳುತ್ತಿದ್ದ ಅಳೀಮಯ್ಯನಿಗೆ ಒಟ್ನಲ್ಲಿ ಮಾವನ ಮನೆಗೆ ಹೋಗಿ ಬಿದ್ದರೆ ಸಾಕೆನಿ ಸಿತ್ತು.


ವಿವಿಧ ವಿನೋದಾವಳಿ...
ಯಗಟಿ ರಘು ನಾಡಿಗ್
ಅವಸರಯ್ಯನ ಮಗ ಅತಂತ್ರರಾಯ ಹಳ್ಳಿಯಲ್ಲಿದ್ದ ತನ್ನ ಮಾವನ ಮನೆಗೆ ಅಪರೂಪಕ್ಕೆ ಹೊರಟಿದ್ದ. ಎಡಗಾಲು ಮುಂದೆ ಮಾಡಿ ಬಸ್ಸಿಗೆ ಹತ್ತಿದ. ‘ಬೇರೆ ಕಡೆ ಹೇಗೋ ಏನೋ ಗೊತ್ತಿಲ್ಲ, ಆದರೆ ಈ ಬಸ್ಸು ಮಾತ್ರ ಖಂಡಿತವಾಗಿ ಸೀಲಿಂಗವೇ ಸರಿ ಎಂಬ ನಿರ್ಧಾರಕ್ಕೆ’ ಈ ಅಳಿಯದೇವರು ಬಂದರು. ಏಕೆಂದರೆ, ನವಮಾಸ ತುಂಬಿದ ಹೆಣ್ಣು ಜೀವದಂತೆ ಬಸ್ಸು ತೂಗುಯ್ಯಾಲೆ ಮಾಡಿ ಕೊಂಡು ಸಾಗುತ್ತಿತ್ತು. ತುಂಬಾ ನಿರಾಳವಾಗಿ, ಜೀವನದ ಜವಾಬ್ದಾರಿ ಯನ್ನೆಲ್ಲಾ ಮುಗಿಸಿ ಕೈತೊಳೆದು ಕೊಂಡ ಹಿರಿಯ ಜೀವವೊಂದರ ‘ವಂಶವಾಹಿನಿ’ಯೋ ಅಥವಾ ಬಸವನ ಹುಳುವಿನ ಕ್ರೋಮೋಸೋಮೋ ಎಂಜಿನ್‌ನಲ್ಲಿ ಸೇರಿರಬಹುದೇ ಎಂಬ ಸಂದೇಹ ಬರುವಷ್ಟು ‘ವೇಗ ವಾಗಿ’(!) ಬಸ್ಸು ತೆವಳುತ್ತಾ ಸಾಗುತ್ತಿತ್ತು. ಅಳಿಯದೇವರು ಹತ್ತಿದ್ದ ಆ ಬಸ್ಸು ಆತನ ‘ಕಾಲ್ಗುಣ’ದಿಂದಲೋ ಅಥವಾ ಡ್ರೈವರ್‌ನ ‘ಕೈಗುಣ’ದಿಂದಲೋ ದಾರಿಯಲ್ಲೇ ಮರಿ ಹಾಕಿತು.
‘ಅಮಾವಾಸ್ಯೆಯ ಕತ್ತಲು, ಜಿಟಿಜಿಟಿ ಮಳೆ ಬೇರೇ, ಬಸ್ಸು ರಿಪೇರಿಯಾಗುವುದೇ ದುಸ್ತರ’ ಎಂಬ ಚಿಂತನೆಯನ್ನು ಅಳೀಮಯ್ಯನ 7ನೇ ಇಂದ್ರಿಯ ಹೊರಸೂಸಿದ್ದರಿಂದ, ಜೀವನ ದಲ್ಲೇ ಮೊದಲಬಾರಿಗೆ ಆತ ಮಿದುಳನ್ನು ಹೆಚ್ಚುವರಿಯಾಗಿ ಉಪಯೋಗಿಸಿ, ಬಸ್ಸಿ ನಿಂದಿಳಿದು, ದಾರಿಯಲ್ಲಿ ಬರುತ್ತಿದ್ದ ಎತ್ತಿನಗಾಡಿಯನ್ನು ಹತ್ತಿ ಕೂತ. ಆ ಎತ್ತಿನ ಗಾಡಿಯ ಚಕ್ರಗಳು ಕೂಡ ನಿಧಾನವಾಗಿ, ಆದರೆ ಬಸ್ಸು ಓಡುತ್ತಿದ್ದುದಕ್ಕಿಂತ ವೇಗವಾಗಿ ಮುಂದು ರುಳುತ್ತಿದ್ದವು.
ಇದನ್ನೂ ಓದಿ: Yagati Raghu Naadig Column: ಪಾಪಿ ಸಮುದ್ರ ಹೊಕ್ಕರೂ ಮೊಣಕಾಲುದ್ದ ನೀರು !
‘ಮಾವನ ಮನೆಗೆ ಹೋದಮೇಲೆ ಪೊಗದಸ್ತಾದ ಕಡಲೇಕಾಳು-ಬದನೇಕಾಯಿ ಹುಳಿ, ಮಿಡಿ ಮಾವಿನ ಕಾಯಿಯ ಉಪ್ಪಿನಕಾಯಿ, ಹುಚ್ಚೆಳ್ಳು ಚಟ್ನೀ ಪುಡಿ, ಕೆನೆ ಮೊಸರು ತಟ್ಟೆಗೆ ಬಿದ್ದೇಬೀಳುತ್ತೆ, ಊಟದ ನಂತರ ಸೊಗಸಾಗಿ ಕಳಿತಿರುವ ನಂಜನಗೂಡು ರಸಬಾಳೆ ಹಣ್ಣು ಸಿಕ್ಕೇ ಸಿಗುತ್ತೆ. ಅಲ್ಲಿಯವರೆಗೂ ನಾನು ತಡಕೊಂಡ್ರೆ ಆಯ್ತು’ ಎಂದು ಮತ್ತೆಮತ್ತೆ ಸ್ವಗತದಲ್ಲಿ ಸಮಾಧಾನ ಹೇಳಿಕೊಳ್ಳುತ್ತಿದ್ದ ಅಳೀಮಯ್ಯನಿಗೆ ಒಟ್ನಲ್ಲಿ ಮಾವನ ಮನೆಗೆ ಹೋಗಿ ಬಿದ್ದರೆ ಸಾಕೆನಿಸಿತ್ತು.
ಹೇಗೋ ಮಾಡಿ ಅಂತೂ ಇಂತೂ ಮಾವನ ಮನೆಯನ್ನು ತಲುಪುವ ಹೊತ್ತಿಗೆ ರಾತ್ರಿ ಹನ್ನೆ ರಡು ಗಂಟೆಯಾಗಿತ್ತು. ಹಳ್ಳಿಯಲ್ಲಿ ಸಾಮಾನ್ಯವಾಗಿ ಜನರು ಮಲಗುವುದು ತಡವಾಗುವು ದಾದ್ದರಿಂದ ಮಾವನ ಮನೆಯ ಮುಂಬಾಗಿಲು ತೆರೆದೇ ಇತ್ತು. ತಾನು ಬಂದದ್ದು ಮಾವನ ಮನೆಯವರಿಗೆ ಗೊತ್ತಾಗಲಿ ಎಂದು ಅಳೀಮಯ್ಯ ಒಮ್ಮೆ ‘ಹುಸಿಕೆಮ್ಮು’ ಕೆಮ್ಮಿದ. ಊಹೂಂ...ಯಾರೂ ಆಚೆಗೆ ಬರಲಿಲ್ಲ!
ಒಮ್ಮೆ ದೀರ್ಘವಾಗಿ ಕ್ಯಾಕರಿಸಿದ. ಅದು ಕೇಳಿದ್ದೇ ತಡ, ಬಂಗಾರದ ಅವಲಕ್ಕಿ ಸರ, ಮಾವಿನಕಾಯಿ ಸರಕ್ಕೆ ಕುತ್ತಿಗೆಯನ್ನು ನೇತುಹಾಕಿಕೊಂಡಿದ್ದ (!), ಕಾಸಗಲ ಕುಂಕುಮದ ಸರಳಮ್ಮನವರು ವಜ್ರ ಖಚಿತ ವಾದ ಚಿನ್ನದ ಬಳೆಗಳನ್ನು ಹೊಂದಿದ್ದ ಕೈಗಳಿಂದ ಹಿತ್ತಾಳೆ ಕೊಳದಪ್ಪಲೆಯಲ್ಲಿ ಕಡಲೇ ಕಾಳು- ಬದನೇಕಾಯಿ ಹುಳಿಯ ಅನ್ನವನ್ನು ಕಲಸುತ್ತಾ ಹೊರಗೆ ಬಂದರು.
ಸರಳಮ್ಮನವರು ಅತಂತ್ರರಾಯನ ಏಕಮಾತ್ರ ಹೆಂಡತಿಯ ಏಕಮಾತ್ರ ತಾಯಿ, ಅರ್ಥಾತ್ ಅತಂತ್ರರಾಯನ ಅತ್ತೆ. ಅರ್ಧರಾತ್ರಿಯಲ್ಲಿ ಅಲ್ಲಾಡಿಸಿಕೊಂಡು ಆಗಮಿಸಿದ ಅಳೀಮಯ್ಯ ಅತಂತ್ರರಾಯನನ್ನು ಅವಲೋಕಿಸುತ್ತಲೇ ಅತ್ತೆ ಸರಳಮ್ಮನ ಮುಖವು ಹಿತ್ತಾಳೆ ಕೊಳ ದಪ್ಪಲೆಗಿಂತ ಅಗಲವಾಯಿತು. “ಓಹೋ ಹೋ... ಬನ್ನಿ ಬನ್ನಿ ಅಳಿಯಂದ್ರೇ, ಚೆನ್ನಾಗಿ ದ್ದೀರಾ? ಅಯ್ಯೋ ಏನ್ ಹೇಳ್ತೀರಿ, ಅನ್ನ-ಹುಳಿ ತುಂಬಾ ಉಳಿದಿತ್ತೂ... ಈಗ್ ತಾನೇ ನಮ್
ಮನೆ ‘ಟಾಮಿ’ಗೆ ಹುಳಿಯನ್ನ ಕಲಸಿ ಹಾಕೋಣಾಂತಿದ್ದೆ... ಅಷ್ಟರಲ್ಲಿ ನೀವೇ ಬಂದ್ಬಿಟ್ರಿ... ಏಳಿ ಊಟಾ ಮಾಡೋವ್ರಂತೇ..." ಎಂದು ಶುದ್ಧ ಸಾವೇರಿ ರಾಗದಲ್ಲಿ ಆಲಾಪನೆ ಮಾಡಿದರು.
‘ದಶಮಗ್ರಹ’ ಎಂದೇ ಹೆಸರಾಗಿರುವ ಅಳಿಯನ ಸ್ಥಾನಮಾನವು ಯಃಕಶ್ಚಿತ್ ಒಂದು ನಾಯಿಯೊಂದಿಗೆ ಗುರುತಿಸಿಕೊಳ್ಳುವಂತೆ ಆಯಿತಲ್ಲಾ ಎಂದು ‘ತಾಯಿ’ ಸರಣಿಯ
ಚಲನಚಿತ್ರ ನಿರ್ಮಾಪಕ ‘ಅಬ್ಬಾಯಿ ನಾಯ್ಡು’ ಶೈಲಿಯಲ್ಲಿ ನೊಂದುಕೊಂಡ ಅತಂತ್ರ ರಾಯ, ‘ಮನೆಯ ನಾಯಿಗೆ ಹಾಕಲೆಂದು ಇಟ್ಟಿದ್ದ ಅನ್ನವನ್ನು ನಾನು ತಿನ್ನಬೇಕೇ?’ ಎಂದು ತನ್ನನ್ನೇ ಒಮ್ಮೆ ಕೇಳಿಕೊಂಡ. ಆದರೆ ವಿಧಿಯಿರಲಿಲ್ಲ, ಆಗಷ್ಟೇ ಹುಟ್ಟಿದ ಇಲಿಮರಿಯ ಬಾಲ ಸೋಕಿದರೂ ಬೀಳುವಷ್ಟು ನಿತ್ರಾಣನಾಗಿದ್ದ ಆತ.
ಹಾಗಂತ, “ಆಯ್ತು ಊಟ ಹಾಕಿ" ಅಂತ ಅತ್ತೆಯವರಲ್ಲಿ ಹೇಳೋಕೆ ಬಿಗುಮಾನ, ಅವ ಮಾನ..! ಆದ್ದರಿಂದ, ‘ಅವಮಾನದಿಂದ ಸಾಯುವುದಕ್ಕಿಂತ, ಹಸಿವಿನಿಂದ ಸಾಯುವುದೇ ಮೇಲು’ ಎಂಬ ‘ಸದೃಢ’ ನಿರ್ಧಾರಕ್ಕೆ ಬಂದ ‘ದುರ್ಬಲ’ ಅತಂತ್ರರಾಯ, ಮುಖದಲ್ಲಿ ಬಲವಂತದ ಹುಸಿ ನಗೆಯನ್ನು ಚೆಲ್ಲುತ್ತಾ, “ಅಯ್ಯೋ... ನನ್ನದಾಗ್ಲೇ ಊಟ ಆಗಿದೆ ಅತ್ತೇ... ಸುಮ್ನೇ ನಿಮಗ್ಯಾಕೆ ತೊಂದ್ರೆ...?" ಅಂತ ರಾಗವೆಳೆದ.
“ಅಯ್ಯೋ, ನೀವೊಳ್ಳೆ ಚೆನ್ನಾಗಿ ಹೇಳಿದ್ರೀ... ಊರಿನಿಂದ ಹೊರಡುವಾಗ ತಿಂದದ್ದು, ಅದೆಲ್ಲಿ ಉಳಿದಿರುತ್ತೆ? ಇಷ್ಟೊತ್ತಿಗೆ ಚೆನ್ನಾಗಿ ಜೀರ್ಣವಾಗಿ ಬಿಟ್ಟಿರುತ್ತೆ. ಏಳೀಪ್ಪಾ ಊಟಕ್ಕೆ.." ಅಂತ ಆಲಾಪನೆಯಿಂದ ಪಲ್ಲವಿಗೆ ಬಂದರು ಸರಳಮ್ಮ..!! “ಅಯ್ಯೋ ಅತ್ತೇ... ನಾಯಿಗೆ ಅಂತ ಕಡಲೇಕಾಳು-ಬದನೇಕಾಯಿ ಹುಳಿಯನ್ನ ಕಲಸ್ತಿದ್ದೀರಿ, ಪಾಪ ಅದಕ್ಕೆ ಹಾಕಿ" ಅಂದ ಅತಂತ್ರರಾಯ.
“ಅಯ್ಯೋ ಸಂಕೋಚ ಪಟ್ಕೋಬೇಡಿ, ಊಟಕ್ಕೆ ಏಳೀಪ್ಪಾ" ಅಂತ ಸರಳಮ್ಮನ ಅನು ಪಲ್ಲವಿ. ಈ ಮಾತಿಗೆ ಅತಂತ್ರರಾಯ, “ನಾವಾದ್ರೆ ಬಾಯಿಬಿಟ್ಟು ‘ಹಸಿವಾಗಿದೆ’ ಅಂತ ಕೇಳ್ತೀವಿ. ಪಾಪ ಆ ನಾಯಿ ಮೂಕಪ್ರಾಣಿ... ಹಸಿವಾದ್ರೆ ಅದು ಹೇಗೆ ತಾನೇ ಕೇಳುತ್ತೆ? ನಾಯಿಗೆ ತುಂಬಾ ಹಸಿವಾಗಿರುತ್ತೆ, ಆ ಹುಳಿಯ ನ್ನಾನ ಅದಕ್ಕೇ ಹಾಕಿ ಅತ್ತೇ.." ಅಂದ ತ್ಯಾಗ ರಾಜನ ಪೋಸ್‌ನಲ್ಲಿ. “ಅಯ್ಯೋ ರಾಮ, ಒಂದು ಪಕ್ಷ ನಾಯಿಗೆ ಹಾಕ್ಬೇಕು ಅಂದ್ರೆ, ಬಿಸಿ ಬಿಸಿಯಾಗಿ ಅಡುಗೆ ಮಾಡಿ ಹಾಕಿದ್ರಾಯ್ತು...ನೀವೀಗ ಈ ಕಲಸಿರೋ ಹುಳಿಯನ್ನ ತಿಂದು ಮಲಕ್ಕೋ ಬಾರದೇ..?" ಅಂತ ಪ್ರೀತಿಪೂರ್ವಕ ಹುಸಿ ಕೋಪದಲ್ಲಿ ಚಿಟ್ಟೆಸ್ವರವನ್ನು ಹಾಡಿದರು ಅತಂತ್ರರಾಯನ ಅತ್ತೆಮ್ಮ... ಸರಳಮ್ಮ..!!
‘ಅಯ್ಯೋ ನನ್ನ ನಾಯಿಪಾಡೇ..’ ಎಂದು ಗೊಣಗಿಕೊಳ್ಳುತ್ತಾ ಅತಂತ್ರರಾಯ ಕೈಕಾಲು ತೊಳೆದುಕೊಳ್ಳಲು ಬಚ್ಚಲಮನೆ ಕಡೆಗೆ ತೂರಾಡುತ್ತಾ ಹೆಜ್ಜೆ ಹಾಕತೊಡಗಿದ!