ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Ravi Sajangadde Column: ದೆಹಲಿ ಗದ್ದುಗೆ ಎಂಬ ʼಗುಪ್ತʼಗಾಮಿನಿ !

ದೆಹಲಿಯ ಗದ್ದುಗೆಯೇರಲು ಹಲವು ತಿಂಗಳಿಂದ ನಡೆಯುತ್ತಿದ್ದ ಕಸರತ್ತಿಗೆ, ಚುನಾವಣಾ ಪೂರ್ವ ಕೆಸರೆರಚಾಟಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ಸದ್ಯಕ್ಕೆ ದೆಹಲಿ ಪರಿಸರದ ಗಾಳಿಯ ಗುಣ ಮಟ್ಟ, ವಾತಾವರಣ ಕಲುಷಿತಗೊಂಡಿದ್ದರೂ, ಮುಂದಿನ ಕೆಲ ವರ್ಷಗಳ ಕಾಲ ಬಿಜೆಪಿಯ ‘ಡಬಲ್ ಎಂಜಿನ್’ ಸರಕಾರದ್ದೇ ಇಲ್ಲಿ ‘ಹವಾ’..!

ದೆಹಲಿ ಗದ್ದುಗೆ ಎಂಬ ʼಗುಪ್ತʼಗಾಮಿನಿ !

ಅಂಕಣಕಾರ ರವೀ ಸಜಂಗದ್ದೆ

Profile Ashok Nayak Feb 24, 2025 9:34 AM

ವಿಶ್ಲೇಷಣೆ

ರವೀ ಸಜಂಗದ್ದೆ

ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ಹತ್ತು ದಿನಗಳ ತರುವಾಯ, ಬಿಜೆಪಿಯ ವರಿಷ್ಠರು ಅಂತೂ-ಇಂತೂ, ಅಳೆದು-ಸುರಿದು ಅಲ್ಲಿನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಂಪುಟ ಸಚಿವರ ಹೆಸರುಗಳನ್ನು ಆಖೈರುಗೊಳಿಸಿ, ಕೊನೆಗೂ ಗಜಪ್ರಸವವನ್ನು ಮಾಡಿಸಿದ್ದಾರೆ. ಸಿಎಂ ಗಾದಿಯ ಮೇಲೆ ಕಣ್ಣಿಟ್ಟಿದ್ದ ಹಲವಾರು ಘಟಾ ನುಘಟಿ ಮುಖಂಡರನ್ನು, ಶಾಸಕ ರನ್ನು ಬದಿಗೆ ಸರಿಸಿ, ಪ್ರಥಮ ಬಾರಿಗೆ ಗೆದ್ದ ರೇಖಾ ಗುಪ್ತ ಅವರನ್ನು ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ನಿಯೋಜಿಸಲಾಗಿದೆ. ಬಿಜೆಪಿಯವರು ಮರುದಿನ ರಾಮಲೀಲಾ ಮೈದಾನದಲ್ಲಿ ಭರ್ಜರಿ ಪದಗ್ರಹಣ ಸಮಾರಂಭ ನೆರವೇರಿಸಿ, ತಮ್ಮ ಶಕ್ತಿಯನ್ನು ಸೊಗ ಸಾಗಿ ಪ್ರದರ್ಶಿಸಿದರು. ಒಂದು ಕಾಲಕ್ಕೆ ಇದೇ ಮೈದಾನದಲ್ಲಿ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಅರವಿಂದ ಕೇಜ್ರಿವಾ ಲರು ದೆಹಲಿ ಗದ್ದುಗೆ ಏರಿ ದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ: Ravi Sajangadde Column: ನಿಲ್ಲದ ಕೆಸರೆರಚಾಟ, ಜನರು ಕಂಗಾಲು !

ಒಟ್ಟಿನಲ್ಲಿ, ದೆಹಲಿಯ ಗದ್ದುಗೆಯೇರಲು ಹಲವು ತಿಂಗಳಿಂದ ನಡೆಯುತ್ತಿದ್ದ ಕಸರತ್ತಿಗೆ, ಚುನಾವಣಾಪೂರ್ವ ಕೆಸರೆರಚಾಟಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ಸದ್ಯಕ್ಕೆ ದೆಹಲಿ ಪರಿಸರದ ಗಾಳಿಯ ಗುಣಮಟ್ಟ, ವಾತಾವರಣ ಕಲುಷಿತಗೊಂಡಿದ್ದರೂ, ಮುಂದಿನ ಕೆಲ ವರ್ಷಗಳ ಕಾಲ ಬಿಜೆಪಿಯ ‘ಡಬಲ್ ಎಂಜಿನ್’ ಸರಕಾರದ್ದೇ ಇಲ್ಲಿ ‘ಹವಾ’..!

‘ಧನಸಮೃದ್ಧ’ ರಾಜ್ಯಗಳ/ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ದೆಹಲಿಗೆ ಅಗ್ರಸ್ಥಾನ ವಿದೆ. ಅಂದರೆ, ಅಲ್ಲಿನ ಸರಕಾರದ ವರಮಾನ ಅಧಿಕವಿದ್ದು, ನಗರೋನ್ನತಿಯ ಯೋಜನೆ ಗಳಿಗೆ ಮಾತ್ರ ಅದನ್ನು ಖರ್ಚುಮಾಡುವ ಕಾರಣ, ಇತರ ವಿಭಾಗದ ಖರ್ಚುಗಳು ಕಡಿಮೆ. ಕೃಷಿ, ಗ್ರಾಮೀಣಾಭಿವೃದ್ಧಿ, ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಹೀಗೆ ಯಾವುದೇ ಹೆಚ್ಚು ವರಿ ಯೋಜನೆಗೆ ಹಣವನ್ನು ವ್ಯಯಿಸುವ ಅಗತ್ಯ ಅಲ್ಲಿಲ್ಲ.

ಯಾಕೆಂದರೆ ದೆಹಲಿ ಪರಿಧಿಯಲ್ಲಿ ಹಳ್ಳಿ ಮತ್ತು ಕೃಷಿ ‘ಇಲ್ಲವೇ ಇಲ್ಲ’ ಎನ್ನುವಷ್ಟು ಕಡಿಮೆ. ಸಾಮಾನ್ಯವಾಗಿ, ನಗರ ಪ್ರದೇಶದ ವಿವಿಧ ಮೂಲಗಳಿಂದ ಬರುವ ಆದಾಯ ಅತ್ಯಧಿಕ ವಾಗಿದ್ದು, ಹಳ್ಳಿಗಳಿಗೆ ಹೋಲಿಸಿದರೆ ನಗರ ಪ್ರದೇಶದ ವಿವಿಧ ಕಾಮಗಾರಿಗಳಿಗೆ ಸರಕಾರವು ಸುರಿಯಬೇಕಾಗುವ ಹಣದ ಪ್ರಮಾಣ ಒಂದಷ್ಟು ಕಡಿಮೆಯಿದೆ. ಇಂಥ ರಾಜ್ಯದ ಅಧಿಕಾರ ಎಂದೆಂದಿಗೂ ಹೆಚ್ಚು ಆಕರ್ಷಕ!

ಸಂಪನ್ಮೂಲದ ಗಾತ್ರದ ಆಧಾರದಲ್ಲಿ ದೆಹಲಿಯ ಆರ್ಥಿಕತೆಯು ದೇಶದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದೆ. ಕಳೆದ ದಶಕದಿಂದ, ವರ್ಷ ದಿಂದ ವರ್ಷಕ್ಕೆ ಅಲ್ಲಿನ ಸರಕಾರದ ಆದಾಯವು ಸರಾಸರಿ ಶೇ.9ಕ್ಕಿಂತಲೂ ಹೆಚ್ಚುತ್ತಾ ಉತ್ತಮ ಏರಿಕೆ ಕಂಡಿದೆ. ಹಾಗಿದ್ದೂ ಕಳೆದ ವರ್ಷದ ಬಜೆಟ್ ಪ್ರಕಾರ, ಅಲ್ಲಿನ ಆಯವ್ಯಯ ವನ್ನು ಪರಿಶೀಲಿಸಿದಾಗ, ವ್ಯಯವು ಅಂದಾಜು 78808 ಕೋಟಿ ಹಾಗೂ ವರಮಾನವು ಅಂದಾಜು 64142 ಕೋಟಿ ರುಪಾಯಿಯಷ್ಟಿದೆ. ಅಂದರೆ, ಶೇ.18.6ರಷ್ಟು ವಿತ್ತೀಯ ಕೊರತೆ ಯ ಬಜೆಟ್ ಅನ್ನು ಮಂಡಿಸಲಾಗಿದೆ.

ಕರ್ನಾಟಕದಲ್ಲಿ ಇದೇ ವಿತ್ತೀಯ ಕೊರತೆಯ ಪ್ರಮಾಣವು ಸುಮಾರು ಶೇ.24ರಷ್ಟು. ನಗರ ಪ್ರದೇಶವಾದುದರಿಂದ ಹೆಚ್ಚಿನ ವರಮಾನ ಬರುತ್ತಿರುವ ದೆಹಲಿಯ ಆರ್ಥಿಕ ವ್ಯವಸ್ಥೆ ಯನ್ನು ಹಿಂದಿನ ಸರಕಾರ ಸರಿಯಾಗಿ ನಿರ್ವಹಿಸಲು ವಿಫಲವಾದದ್ದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಅಲ್ಲದೆ ವ್ಯಾಪಕ ಅವ್ಯವಹಾರ ಮತ್ತು ಭ್ರಷ್ಟಾಚಾರದ ಆರೋಪಗಳೂ ಈ ಹಿಂದಿನ ಸರಕಾರದ ಮೇಲಿದ್ದವು. ಜೈಲಿನಲ್ಲಿದ್ದುಕೊಂಡು ಕೆಲಕಾಲ ಆಡಳಿತ ನಡೆಸಿದ ಅಪಖ್ಯಾತಿ ಕೇಜ್ರಿವಾಲರಿಗಿತ್ತು.

ಇವೆಲ್ಲವನ್ನೂ ಗಮನಿಸುತ್ತಿದ್ದ ದೆಹಲಿಯ ಜನರು ಈ ಬಾರಿ ಬಿಜೆಪಿಗೆ ಮಣೆ ಹಾಕಿದ್ದಾರೆ. ವಿಶೇಷವೆಂದರೆ, ಬಿಜೆಪಿ ಮತ್ತು ಆಮ್ ಆದ್ಮಿ ಗಳಿಸಿದ ಒಟ್ಟು ಮತಗಳ ನಡುವಿನ ಅಂತರ ಕೇವಲ 107001ರಷ್ಟಿದ್ದರೆ, ಸುಮಾರು 11 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಅಂತರವು ಕೇವಲ 344ರಿಂದ 3600 ಮತಗಳಷ್ಟರವರೆಗಿತ್ತು. ಅಲ್ಲೆಲ್ಲಾ ಕಾಂಗ್ರೆಸ್ ಪಕ್ಷವು ಒಂದಷ್ಟು ಮತಗಳನ್ನು ಗಳಿಸಿ ಆಮ್ ಆದ್ಮಿಯ ಸೋಲಿನಲ್ಲಿ ನೇರ ಭೂಮಿಕೆ ನಿಭಾ ಯಿಸಿದೆ. ಬಿಜೆಪಿಗೆ ಈ ಎಲ್ಲಾ ಅಂಶಗಳು ವರದಾನವಾಗಿ ಬರೋಬ್ಬರಿ 26 ವರ್ಷಗಳ ನಂತರ ದೆಹಲಿಯ ಗದ್ದುಗೆಯನ್ನು ಮರಳಿ ಪಡೆದಿದೆ.

ಬಿಜೆಪಿಯು ಗೆದ್ದು ಸಂಭ್ರಮಿಸುತ್ತಿರುವುದೇನೋ ಹೌದು, ಆದರೆ ನೂತನ ಸರಕಾರದ ಮುಂದಿನ ಹಾದಿಯು ಮುಳ್ಳಿನದು, ನಡಿಗೆಯು ಹಗ್ಗದ ಮೇಲಿನದು ಎಂಬುದನ್ನು ಮರೆಯ ಲಾಗದು. ಒಂದಷ್ಟು ದುರಾಡಳಿತದಿಂದ ರೋಸಿಹೋಗಿರುವ ವ್ಯವಸ್ಥೆಯನ್ನು ಹಳಿಗೆ ತರಲು ಮತ್ತು ಆರ್ಥಿಕ ಏರುಪೇರನ್ನು ಹತೋಟಿಗೆ ತಂದು ಒಂದಷ್ಟು ಶಿಸ್ತು ಬೆಳೆಸಿ ಕೊಳ್ಳಲು ಹೆಚ್ಚಿನ ಪ್ರಯತ್ನ ಬೇಕೇ ಬೇಕು. ಇವೆಲ್ಲದರ ಜತೆಗೆ, ಚುನಾವಣೆಯ ವೇಳೆ ಗ್ಯಾರಂ ಟಿ ಹೆಸರಿನಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿದ ಆಶ್ವಾಸನೆಗಳನ್ನೂ ಒಂದೊಂದಾಗಿ ನೆರ ವೇರಿಸಬೇಕಿದೆ.

ಗ್ಯಾರಂಟಿ ಹೆಸರಿನಲ್ಲಿ ಉಚಿತವಾಗಿ ದುಡ್ಡು ಹಂಚುವ/ಯೋಜನೆ ಜಾರಿಗೊಳಿಸುವ ವಿಷಯದಲ್ಲಿ ಎಲ್ಲ ಪಕ್ಷಗಳೂ ಒಂದೇ! ಇಂಥ ಯೋಜನೆಗಳ ಅನುಷ್ಠಾನಕ್ಕೆ ಒಂದಷ್ಟು ದೊಡ್ಡ ಮೊತ್ತವನ್ನು ಮೀಸಲಿಟ್ಟು ಸರಕಾರವನ್ನು ನಡೆಸಬೇಕು. ಪ್ರಸ್ತುತ ದೆಹಲಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರಕಾರದೆದುರು ಇರುವ ಸವಾಲುಗಳು ಬೆಟ್ಟದಷ್ಟು, ಜನರು ಇಟ್ಟುಕೊಂಡಿರುವ ಸವಾಲುಗಳು ಆಗಸದಷ್ಟು. ಎಲ್ಲದರಲ್ಲೂ ಸಮತೋಲನ ಕಾಪಾಡಿ ಕೊಂಡು ಜನಸೇವೆಗೆ ಟೊಂಕ ಕಟ್ಟಬೇಕಾದ ಸಂದರ್ಭವಿದು. ಸದ್ಯದ ಸವಾಲುಗಳನ್ನು ಅವಲೋಕಿಸಿದರೆ ಮೊದಲು ಕಾಣುವುದು ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆ ಗಳನ್ನು ಜಾರಿಗೊಳಿಸುವಿಕೆ. ಈ ಪೈಕಿ ಮುಂಚೂಣಿಯಲ್ಲಿರುವುದು ಅರ್ಹ ಮಹಿಳಾ ಫಲಾ ನುಭವಿಗಳಿಗೆ ಮಾಸಿಕ 2500 ರುಪಾಯಿ ನೀಡುವ ಯೋಜನೆ.

ಇದು ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್ 8ರಂದು ಉದ್ಘಾಟನೆಯಾಗುವ ನಿರೀಕ್ಷೆಯಿದೆ. ಮಿಕ್ಕಂತೆ, ಮಾತೃತ್ವ ಸುರಕ್ಷಾ ಯೋಜನೆಯಡಿ ಬಾಣಂತಿಯರಿಗೆ 21000 ರು. ನೀಡುವ ಯೋಜನೆಗೆ ಹಣ ಹೊಂದಿಸಬೇಕು. ಮಹಿಳೆಯರಿಗೆ ಹೋಳಿ ಮತ್ತು ದೀಪಾವಳಿಗೆ ತಲಾ ಒಂದರಂತೆ ಉಚಿತ ಗ್ಯಾಸ್ ಸಿಲಿಂಡರ್‌ನ ಜತೆಗೆ, 500 ರುಪಾಯಿಗೆ ಸಿಲಿಂಡರ್ ಒದಗಿಸಬೇಕು. ಬಡ ಕುಟುಂಬಗಳಿಗೆ ಕೇಂದ್ರದ ಅನುದಾನವಾದ 5 ಲಕ್ಷದ ಜತೆಗೆ ರಾಜ್ಯದ ಅನುದಾನದಡಿ 5 ಲಕ್ಷ ಸೇರಿಸಿ ವೈದ್ಯಕೀಯ ನೆರವು ಒದಗಿಸಬೇಕು. ಹೇಳುತ್ತ ಹೋದರೆ ಇಂಥವು ಸಾಕಷ್ಟಿವೆ. ಇಂಥ ಗ್ಯಾರಂಟಿ ಯೋಜನೆಗಳು ಕರ್ನಾಟಕ, ಹರಿಯಾಣ, ಪಂಜಾಬ್ ರಾಜ್ಯಗಳ ಆರ್ಥಿಕ ಸ್ವಾಸ್ಥ್ಯ ಕೆಡಿಸಿದ್ದು ಗೊತ್ತಿರುವ ಸಂಗತಿಯೇ. ದೆಹಲಿಯ ನೂತನ ಸರಕಾರ ಇವನ್ನೆಲ್ಲ ಹೇಗೆ ನಿಭಾಯಿಸಲಿದೆ ಎಂಬುದು ಕುತೂಹಲ ಹುಟ್ಟಿಸಿದೆ.

ಮಾಲಿನ್ಯದ ವಿಚಾರದಲ್ಲಿ ದೆಹಲಿ ಹೆಚ್ಚು ಸದ್ದು ಮಾಡುತ್ತಿರುವುದು ಹೊಸದೇನಲ್ಲ. ಜೀವಕ್ಕೆ ಸಂಚಕಾರವೊಡ್ಡಿರುವ ಕಲುಷಿತ ಗಾಳಿಯ ಸಮಸ್ಯೆಯನ್ನು ಬಗೆಹರಿಸಿ, ಗಾಳಿಯ ಗುಣಮಟ್ಟ ಹೆಚ್ಚುವಂತೆ ಮಾಡಬೇಕಾದ ಹೊಣೆ ಸರಕಾರದ ಮೇಲಿದೆ. ಇದು ಅಧಿಕಾರ ದಲ್ಲಿ ಇಲ್ಲದಿದ್ದಾಗ ಈ ವಿಚಾರವಾಗಿ ಬೊಬ್ಬೆ ಹಾಕಿದಷ್ಟು ಸುಲಭವಲ್ಲ!

ದೆಹಲಿಯ ಅನೇಕ ಪ್ರದೇಶಗಳಲ್ಲಿ ನೀರಿನ ತೀವ್ರಕೊರತೆಯಿದೆ, ಹೀಗಾಗಿ ನಿಯತವಾಗಿ ಶುದ್ಧನೀರನ್ನು ಪೂರೈಸಬೇಕಿದೆ. ಯಮುನಾನದಿಯ ನೀರನ್ನು ಶುದ್ಧೀಕರಿಸುವ ಸವಾಲೂ ಬೆಟ್ಟದಂತೆ ನಿಂತಿದೆ. ಯಮುನೆಯ ದಡದಲ್ಲಿರುವ ನೂರಾರು ಉತ್ಪಾದನಾ ಘಟಕಗಳ ಕಲುಷಿತ ನೀರು ನದಿಗೆ ಸೇರದಂತೆ ತಡೆಯಬೇಕಿದೆ, ಆ ಭಾಗದ ದೊಡ್ಡ ಮಾಫಿಯಾವನ್ನು ನಿವಾರಿಸಬೇಕಾದ ಒತ್ತಡವೂ ಇದೆ. ಇನ್ನು ದೆಹಲಿಯಾದ್ಯಂತ ನಿರಂತರ ವಿದ್ಯುತ್ ಪೂರೈ ಸುವ ಭರವಸೆಯನ್ನು ಈಡೇರಿಸಲು ವ್ಯವಸ್ಥೆಯ ದುರಸ್ತಿ, ವಿಸ್ತರಣೆ ಹಾಗೂ ಅಭಿವೃದ್ಧಿಗೆ ಟೊಂಕ ಕಟ್ಟಬೇಕಿದೆ. ಹೆಚ್ಚಾಗಿರುವ ಅಪರಾಧ, ದರೋಡೆ/ಕಳ್ಳತನ, ಅತ್ಯಾಚಾರದಂಥ ಅಪಸವ್ಯಗಳಿಗೆ ಸಮರ್ಥವಾಗಿ ಮದ್ದು ಅರೆಯಬೇಕಿದೆ.

ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಿ, ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಕಾನೂ ನು- ಸುವ್ಯವಸ್ಥೆಯನ್ನು ಕಾಪಾಡಬೇಕಿದೆ. ದೆಹಲಿಯ ಮತದಾರರು ಸಾಕಷ್ಟು ನಿರೀಕ್ಷೆ ಗಳನ್ನು ಇಟ್ಟುಕೊಂಡೇ ಬಿಜೆಪಿಯನ್ನು ಪ್ರಚಂಡ ಬಹುಮತದೊಂದಿಗೆ ಚುನಾಯಿಸಿದ್ದಾರೆ. ಮೊದಲ ಬಾರಿಗೆ ಗೆದ್ದು ವಿಧಾನಸಭೆ ಪ್ರವೇಶಿಸಿರುವ ರೇಖಾ ಗುಪ್ತ ನೇತೃತ್ವದ ಸಂಪುಟವು ಹೊಸಬರು ಮತ್ತು ಅನುಭವಿಗಳ ಸಮ್ಮಿಲನವಾಗಿದೆ. ಅನುಭವಿ ಗಳೆನಿಸಿಕೊಂಡವರು, ನಿರಂತರ ಸಂಘರ್ಷ ಮಾಡಿ ಅಲ್ಲಿಗೆ ಬಂದು ತಲುಪಿದವರಾಗಿದ್ದಾರೆ. ಎದುರಿಗೆ ಸವಾಲು ಗಳು ಇರುವಾಗಲೇ ನಮ್ಮೊಳಗಿನ ಸಾಮರ್ಥ್ಯ ಅನಾವರಣಗೊಂಡು, ಹೆಚ್ಚು ಕ್ರಿಯಾಶೀಲ ರಾಗಿ ಮತ್ತಷ್ಟು ಸಾಧಿಸಲು ಸಾಧ್ಯವಾಗುತ್ತದೆ. ಅಂಥ ಉತ್ತಮ ಮತ್ತು ಶ್ರೇಷ್ಠ ಅಡಿಪಾಯ ವನ್ನು ದೆಹಲಿ ಸರಕಾರವು ಹಾಕಿ ಮಾದರಿಯಾಗಲಿ.

‘ಜನಸೇವೆಯೇ ಜನಾರ್ದನನ ಸೇವೆ’ ಎಂಬ ಮಾತನ್ನು ಬಾಯಿಚಪಲಕ್ಕೆ ಆಡುವ ಬದಲಾಗಿ, ಜನಸ್ನೇಹಿ ಕೆಲಸಗಳನ್ನು ನಿರ್ವಹಿಸಿ ತೋರಿಸಲಿ. ಸುಶಾಸನ ಎಂಬ ಗುಪ್ತ’ ಗಾಮಿನಿಯು ದೆಹಲಿಯನ್ನೂ ಯಮುನೆಯನ್ನೂ ಸ್ವಚ್ಛಗೊಳಿಸಲಿ. ಡಬಲ್ ಎಂಜಿನ್ ಸರಕಾರವು ನಿಜಾರ್ಥದಲ್ಲಿ ದೆಹಲಿಯನ್ನು ಉತ್ತುಂಗಕ್ಕೇರಿಸಲು ಶ್ರಮಿಸಲಿ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)