ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yagati Raghu Naadig Column: ಕುಸಿದ ಕನಸುಗಾರ, ನೀರೆರೆದ ನಟರತ್ನಾಕರ...

ಪುಟ್ಟಣ್ಣ ಇದ್ದಕ್ಕಿದ್ದಂತೆ ಹಿರಣ್ಣಯ್ಯನವರ ಕ್ಯಾಂಪ್ ನತ್ತ ಸುಳಿಯಲೇ ಇಲ್ಲ. ಯಾಕಿ ರಬಹುದು? ಅಂತ ಗೊಂದಲ ಗೊಂಡ ಹಿರಣ್ಣಯ್ಯ ದೊಡ್ಡ ಕ್ಯಾರಿಯರ್‌ನಲ್ಲಿ ಊಟ ತುಂಬಿಸಿಕೊಂಡು ಪುಟ್ಟಣ್ಣ ಇಳಿದುಕೊಂಡಿದ್ದ ಪ್ರವಾಸಿ ಮಂದಿರಕ್ಕೆ ತೆರಳಿದರು. ನೋಡಿ ದರೆ, ವಿಷ್ಣುವರ್ಧನ್ ಸೇರಿದಂತೆ ಕಲಾವಿದರು-ತಂತ್ರಜ್ಞರು ಹ್ಯಾಪುಮೋರೆ ಹಾಕಿಕೊಂಡಿ ದ್ದರು. ಹಿರಣ್ಣಯ್ಯ ತಮ್ಮ ಸಹಜ-ಸಲಿಗೆಯಿಂದ, “ಏನ್ರೋ ದೊಡ್ ರೋಗ, ಯಾಕ್ರೋ ಹಿಂಗಿ ದ್ದೀರಾ? ಪುಟ್ಟ ಎಲ್ರೋ?" ಎಂದು ಕೇಳಿದ್ದಕ್ಕೆ, “ರೂಮ್‌ನೊಳಗೆ ಸೇರ್ಕೊಂಡು ಬಿಟ್ಟಿದ್ದಾರೆ, ಯಾರು ಬೊಂಬಡಾ ಹೊಡ್ಕೊಂಡ್ರೂ ಬಾಗಿಲು ತೆಗೀತಿಲ್ಲ. ನೀವು ಅವರ ಚಡ್ಡಿದೋಸ್ತ್ ಅಲ್ವಾ? ಒಮ್ಮೆ ಯತ್ನಿಸಿ ನೋಡಿ" ಎಂಬ ಉತ್ತರ ಬಂತು!

ಕುಸಿದ ಕನಸುಗಾರ, ನೀರೆರೆದ ನಟರತ್ನಾಕರ...

ಹಿರಿಯ ಉಪಸಂಪಾದಕ ಹಾಗೂ ಅಂಕಣಕಾರ ಯಗಟಿ ರಘು ನಾಡಿಗ್

Profile Ashok Nayak Mar 16, 2025 6:33 AM

ರಸದೌತಣ‌

ಯಗಟಿ ರಘು ನಾಡಿಗ್

naadigru@gmail.com

ಕಲ್ಪನಾ ನಿರಾಕರಿಸಿದ ಒನಕೆ ಓಬವ್ವನ ಕಿರುಪಾತ್ರವನ್ನು ಪುಟ್ಟಣ್ಣನವರ ಮೇಲಿನ ಗೌರವಕ್ಕೆ ಜಯಂತಿಯವರು ಸ್ವೀಕರಿಸಿ ‘ನಾಗರಹಾವು’ ಚಿತ್ರದಲ್ಲಿ ಅಭಿನಯಿಸಿದ ಪ್ರಸಂಗ ವನ್ನು ಕಳೆದ ಸಂಚಿಕೆಯಲ್ಲಿ ಓದಿದಿರಿ. ಈಗ, ಚಿತ್ರದ ಮತ್ತೆರಡು ರಸಪ್ರಸಂಗಗಳು, ಒಪ್ಪಿಸಿ ಕೊಳ್ಳಿ...

***

ನಿರ್ಮಾಪಕರಾಗಲೀ ನಿರ್ದೇಶಕರಾಗಲೀ ಉತ್ತಮ ಹೂರಣವುಳ್ಳ ತಮ್ಮ ಹತ್ವಾಕಾಂಕ್ಷೆಯ ಚಿತ್ರದ ಪ್ರಸ್ತುತಿಗೆ ಮುಂದಾಗುವಾಗ, ಸಾಕಷ್ಟು ಪಳಗಿದ ಕಲಾವಿದರನ್ನೇ ಸಾಮಾನ್ಯವಾಗಿ ಬಳಸಿಕೊಳ್ಳುತ್ತಾರೆಯೇ ವಿನಾ, ಹೊಸಬರನ್ನಿಟ್ಟುಕೊಂಡು ‘ರಿಸ್ಕ್’ ತೆಗೆದುಕೊಳ್ಳಲು ಹೋಗು ವುದಿಲ್ಲ. ಆದರೆ, ಚಿತ್ರೀಕರಣಕ್ಕೂ ಮುಂಚೆಯೇ ‘ನಾಗರಹಾವು’ ಪುಟ್ಟಣ್ಣರ ಮಿದುಳಿನಲ್ಲಿ ಅದೆಷ್ಟರ ಮಟ್ಟಿಗೆ ಕೆನೆಗಟ್ಟಿತ್ತೆಂದರೆ, ‘ಹೊಸಮುಖಗಳಾದರೂ ಪರವಾಗಿಲ್ಲ, ಪಾತ್ರಕ್ಕೆ ಒಪ್ಪುವಂಥವರನ್ನೇ ತೆಗೆದುಕೊಳ್ಳಬೇಕು’ ಎಂಬ ಗಟ್ಟಿನಿರ್ಧಾರಕ್ಕೆ ಅವರು ಬಂದಿದ್ದರು. ಇದಕ್ಕೆ ಸಾಕ್ಷಿಯೆಂಬಂತೆ, ಚಿತ್ರದ ಮತ್ತೊಂದು ಮುಖ್ಯಪಾತ್ರವಾದ ‘ಮಾರ್ಗರೇಟ್’ ಆಗಿ ಆಯ್ಕೆಯಾದವರು ಶುಭಾ; ಅಂದಿಗೆ ತೆಲುಗು ಚಿತ್ರರಂಗದಲ್ಲಿ ಖ್ಯಾತ ನಿರ್ದೇಶಕರಾಗಿದ್ದ ವೇದಾಂತಂ ರಾಘವಯ್ಯನವರ ಮಗಳಾದ ಇವರೂ ‘ನಾಗರಹಾವು’ ಮೂಲಕವೇ ಪದಾ ರ್ಪಣೆ ಮಾಡಿದವರು.

ಇದನ್ನೂ ಓದಿ: Yagati Raghu Naadig Column: ಸುನೀತಾ ವಿಲಿಯಮ್ಸ್‌ ಸ್ವಾಗತಕ್ಕೆ ಮುಹೂರ್ತ ನಿಗದಿ

ಅಲ್ಲಿಗೆ, ವಿಷ್ಣುವರ್ಧನ್, ಅಂಬರೀಶ್, ಶುಭಾ, ಧೀರೇಂದ್ರ ಗೋಪಾಲರಂಥ ಹೊಸಮುಖ ಗಳನ್ನು ತಮ್ಮ ಮಹತ್ವಾಕಾಂಕ್ಷೆಯ ಚಿತ್ರಕ್ಕೆ ಆರಿಸುವಂಥ ಸವಾಲಿಗೆ ಪುಟ್ಟಣ್ಣ ಮೈಯೊ ಡ್ಡಿದ್ದರು ಅಂತಾಯ್ತು. ಈ ಪೈಕಿ ಮೊದಲ ಮೂವರನ್ನು ಪುಟ್ಟಣ್ಣ ಹರಸಾಹಸಪಟ್ಟು ಆರಿಸಿದ್ದರೆ, ಧೀರೇಂದ್ರರ ಆಯ್ಕೆಯಾಗಿದ್ದು ಕೊಂಚ ವಿಲಕ್ಷಣ ಮಾರ್ಗದಲ್ಲಿ! ಇದೊಂಥರಾ, ಗೂಳಿಯೇ ನನ್ನಿಷ್ಟದ ಹೊಲಕ್ಕೆ ನುಗ್ಗಿ ತನಗೆ ಬೇಕಿದ್ದನ್ನು ಗೆಬರಿಕೊಳ್ಳುವ ಹುಚ್ಚುಧೈರ್ಯ ಎಂದರೂ ಪರವಾಗಿಲ್ಲ. ಅದಾಗಿದ್ದು ಹೀಗೆ: ಪುಟ್ಟಣ್ಣ ಹೊಸಬರನ್ನು ಪರಿಚಯಿಸು ತ್ತಿರುವುದು ಗೊತ್ತಾಗುತ್ತಿದ್ದಂತೆ ಅವರು ಠಿಕಾಣಿ ಹೂಡಿದ್ದ ಹೋಟೆಲ್ ಕೋಣೆಗೇ ಭಂಡ ಧೈರ್ಯದಲ್ಲಿ ನುಗ್ಗಿಬಿಟ್ಟ ಧೀರೇಂದ್ರರು, “ಈ ಚಿತ್ರದಲ್ಲಿ ನನಗೊಂದು ಪಾತ್ರ ಕೊಡಬೇಕು" ಎಂದು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಕೇಳಿಬಿಟ್ಟರು!

ಮಿಕ್ಕ ಸಂದರ್ಭದಲ್ಲಿ ಹೀಗಾಗಿದ್ದರೆ ಪುಟ್ಟಣ್ಣ ದೂರ್ವಾಸ ಮುನಿಯೇ ಆಗಿ ಬಿಡುತ್ತಿದ್ದ ರೇನೋ?! ಆದರೆ, ಅಂದು ಧೀರೇಂದ್ರರು ಮುಂಜಾನೆ ಬಲಮಗ್ಗುಲಲ್ಲೇ ಎದ್ದಿದ್ದರೇನೋ, ಗ್ರಹಚಾರ ನೆಟ್ಟಗಿತ್ತೇನೋ... ಒಳನುಗ್ಗಿದಾತನಿಗೆ ಮೊದಲು ಕಾಫಿ ತರಿಸಿಕೊಟ್ಟರು ಪುಟ್ಟಣ್ಣ. ಧೀರೇಂದ್ರರ ನಾಲಗೆ ಕಾಫಿಯನ್ನು ಆಸ್ವಾದಿಸುತ್ತಿದ್ದರೆ, ಪುಟ್ಟಣ್ಣರ ಕಂಗಳು ಅವರ ಮುಖದ ರೇಖೆಗಳನ್ನು ಅಳೆಯುತ್ತಿದ್ದವು! ಅದೇನು ತೋಚಿತೋ ಏನೋ, ಚಿತ್ರಕ್ಕಾಗಿ ತಾವು ಆಯ್ಕೆ ಮಾಡಿದ್ದವರ ಪಟ್ಟಿಯನ್ನೊಮ್ಮೆ ಹೊರ ತೆಗೆದು ಅವಲೋಕಿಸಿದ ಪುಟ್ಟಣ್ಣ, “ಲೋ ಸರ ದಾರಾ... ನೀನು ಮಾಡಬಲ್ಲಂಥ ಪಾತ್ರ ಯಾವುದೂ ಖಾಲಿ ಇಲ್ವಲ್ಲೋ..." ಎಂದರು ಆಪ್ಯಾ ಯತೆಯಿಂದ. ಈ ಮಾತಿಗೆ ಧೀರೇಂದ್ರರ ಮುಖ ಕಪ್ಪಿಟ್ಟಿದ್ದನ್ನು ಕಂಡ ಪುಟ್ಟಣ್ಣ, “ಆದರೆ, ಕಾಲೇಜುಪಡ್ಡೆ ‘ಕರಿಗೊ ರಿಲ್ಲಾ’ ತುಕಾ ರಾಮನ ಪಾತ್ರವಿದೆ ಮಾಡ್ತೀಯಾ? ರಾಮಾಚಾರಿಗೇ ಫಿಟಿಂಗ್ ಇಡೋ ಪಾತ್ರವಿದು..." ಎಂದರು. “ಅಯ್ಯೋ ನನ್ ಒಡೆಯಾ, ಫಿಟಿಂಗೋ ಸಿಟಿಂ ಗೋ, ಪಾತ್ರಕ್ಕೆ ನನ್ನ ‘ಫಿಟ್’ ಮಾಡಿದ್ರಲ್ಲಾ, ಅಷ್ಟು ಸಾಕು" ಎನ್ನುತ್ತಾ ಧೀರೇಂದ್ರರು ಕಣ್ಣೀ ರಾಗಿ ಕಣಗಾಲರ ಕಾಲಿಗೆರಗಿದರು. ಧೀರೇಂದ್ರ ಗೋಪಾಲ್ ಎಂಬ ‘ಕರಿಕಲ್ಲು’, ಚಿತ್ರಶಿಲ್ಪಿಯ ಚಾಣಕ್ಕೆ ಒಡ್ಡಿಕೊಂಡ ಪರಿಯಿದು...!

hirannayya ok

ಇನ್ನೊಂದು ಉಪಕಥೆ ಗೊತ್ತಾ? ಪುಟ್ಟಣ್ಣ ಕಣಗಾಲ್, ಅವರ ಸೋದರ ಕಣಗಾಲ್ ಪ್ರಭಾ ಕರ ಶಾಸ್ತ್ರಿ, ಚಿತ್ರಸಾಹಿತಿಗಳಾದ ಯೋಗಾನರಸಿಂಹ ಮತ್ತು ವಿಜಯನಾರಸಿಂಹ ಇವರೆಲ್ಲಾ ಬಹಳ ಹಿಂದೆ ಮೈಸೂರಿನಲ್ಲಿ ಓದುತ್ತಿದ್ದಾಗ, ಇವರ ಜತೆಗೂಡಿದವರು ನರಸಿಂಹಮೂರ್ತಿ! ಗೊತ್ತಾಗಲಿಲ್ಲವೇ? ಅವರೇ ಮುಂದೆ ರಂಗಭೂಮಿಯಲ್ಲಿ ‘ನಟ ರತ್ನಾಕರ’ ಎಂದು ಖ್ಯಾತ ರಾದ ಮಾಸ್ಟರ್ ಹಿರಣ್ಣಯ್ಯ! ಈ ಐವರು ಆ ಕಾಲಘಟ್ಟದಲ್ಲೇ ಮೈಸೂರಿನಲ್ಲಿ ‘ಪಂಚ ಮಹಾಪಾತಕಿಗಳು’ ಎಂದು ಖ್ಯಾತರಾಗಿದ್ದರು! ‘ಪಾತಕಿಗಳು’ ಅಂದಾಕ್ಷಣ ಅಪಾರ್ಥ ಮಾಡ್ಕೋಬಾರದು, ಮುಂದೆ ತಂತಮ್ಮ ಕ್ಷೇತ್ರದಲ್ಲಿ ಪ್ರಚಂಡ ಸಾಧನೆ ಮಾಡಿ ಬೆಳೆಯಬಲ್ಲ ‘ಮೊಳಕೆಯಲ್ಲಿರುವ ಪೈರುಗಳು’ ಎಂದೇ ಈ ಐವರನ್ನೂ ಅಂದೇ ಗುರುತಿಸಲಾಗಿತ್ತು! ಕಷ್ಟ-ಸುಖಗಳನ್ನು ಹಂಚಿಕೊಂಡು ಬೆಳೆದ ಪಾಂಡವರಿವರು. ಕ್ರಮೇಣ, ಈ ಪೈಕಿ ಮೊದಲ ‘ನಾಲ್ವರು ಪಾತಕಿಗಳು’ ಚಿತ್ರರಂಗದಲ್ಲೂ, ‘ಕೊನೆಯ ಪಾತಕಿ’ ಹಿರಣ್ಣಯ್ಯನವರು ರಂಗ ಭೂಮಿಯಲ್ಲೂ ಬ್ಯುಸಿಯಾಗಿದ್ದರಿಂದ, ನಂಟು ಕೆಲಕಾಲ ಕಳಚಿಹೋಗಿತ್ತು. ಅದು ಮರು ಜೋಡಣೆಯಾದದ್ದು ‘ಸಾಕ್ಷಾತ್ಕಾರ’ ಸಿನಿಮಾದ ವೇಳೆ. ಈ ಭೇಟಿಯಲ್ಲಿ ಮೈಸೂರಿನ ವಿದ್ಯಾರ್ಥಿ ಜೀವನದ ಗತವೈಭವವನ್ನೆಲ್ಲ ನೆನೆದು ಮಿತ್ರರಿಬ್ಬರೂ ಬಾಯಿ ಚಪ್ಪರಿಸಿದರು. ಆಗ ಪುಟ್ಟಣ್ಣ, ‘ಸಾಕ್ಷಾತ್ಕಾರ’ದ ಆರಂಭಿಕ ದೃಶ್ಯಕ್ಕೆ ಕ್ಲಾಪ್ ಮಾಡಿಕೊಟ್ಟು ಹೋಗುವಂತೆ ಆಗ್ರಹಿಸಿದರು, ಹಿರಣ್ಣಯ್ಯ ಅಸ್ತು ಎಂದರು. ನಂಟು ಹೀಗೇ ಮುಂದುವರಿದು ಇಬ್ಬರೂ ಆದಾಗಲೆಲ್ಲಾ ಭೇಟಿಯಾಗುತ್ತಿದ್ದರು. ಹಿರಣ್ಣಯ್ಯನವರ ನಾಟಕ ಕಂಪನಿ ಚಿತ್ರದುರ್ಗದಲ್ಲಿ ಮೊಕ್ಕಾಂ ಹೂಡಿದಾಗ, ಅಚ್ಚರಿ ಮತ್ತು ಕಾಕತಾಳೀಯ ಎಂಬಂತೆ ‘ನಾಗರಹಾವು’ ಚಿತ್ರ ತಂಡವೂ ಅಲ್ಲೇ ಬೀಡುಬಿಟ್ಟಿತ್ತು! ಪ್ರಾಣಸ್ನೇಹಿತರಿಬ್ಬರೂ ಸ್ನೇಹದ ರುಚಿಯನ್ನು ಚಪ್ಪರಿ ಸಲು ಇದಕ್ಕಿಂತ ಸಂದರ್ಭವುಂಟೇ?! ಹೀಗಾಗಿ, ಚಿತ್ರೀಕರಣದ ನಡುವೆ ಬಿಡುವಾದಾಗ ಪುಟ್ಟಣ್ಣರು ಹಿರಣ್ಣಯ್ಯನವರ ಕ್ಯಾಂಪಿಗೆ ಊಟಕ್ಕೆ ಬರುತ್ತಿದ್ದುದುಂಟು, ರಾತ್ರಿಯಾಗು ತ್ತಿದ್ದಂತೆ ಸೈಡ್‌ವಿಂಗ್‌ನಲ್ಲೇ ಕೂತು ನಾಟಕ ವನ್ನು ನೋಡುತ್ತಿದ್ದುದುಂಟು.

ಇಂಥ ಪುಟ್ಟಣ್ಣ ಇದ್ದಕ್ಕಿದ್ದಂತೆ ಹಿರಣ್ಣಯ್ಯನವರ ಕ್ಯಾಂಪ್ ನತ್ತ ಸುಳಿಯಲೇ ಇಲ್ಲ. ಯಾಕಿ ರಬಹುದು? ಅಂತ ಗೊಂದಲ ಗೊಂಡ ಹಿರಣ್ಣಯ್ಯ ದೊಡ್ಡ ಕ್ಯಾರಿಯರ್‌ನಲ್ಲಿ ಊಟ ತುಂಬಿಸಿಕೊಂಡು ಪುಟ್ಟಣ್ಣ ಇಳಿದುಕೊಂಡಿದ್ದ ಪ್ರವಾಸಿ ಮಂದಿರಕ್ಕೆ ತೆರಳಿದರು. ನೋಡಿ ದರೆ, ವಿಷ್ಣುವರ್ಧನ್ ಸೇರಿದಂತೆ ಕಲಾವಿದರು-ತಂತ್ರಜ್ಞರು ಹ್ಯಾಪುಮೋರೆ ಹಾಕಿಕೊಂಡಿ ದ್ದರು. ಹಿರಣ್ಣಯ್ಯ ತಮ್ಮ ಸಹಜ-ಸಲಿಗೆಯಿಂದ, “ಏನ್ರೋ ದೊಡ್ ರೋಗ, ಯಾಕ್ರೋ ಹಿಂಗಿ ದ್ದೀರಾ? ಪುಟ್ಟ ಎಲ್ರೋ?" ಎಂದು ಕೇಳಿದ್ದಕ್ಕೆ, “ರೂಮ್‌ನೊಳಗೆ ಸೇರ್ಕೊಂಡು ಬಿಟ್ಟಿದ್ದಾರೆ, ಯಾರು ಬೊಂಬಡಾ ಹೊಡ್ಕೊಂಡ್ರೂ ಬಾಗಿಲು ತೆಗೀತಿಲ್ಲ. ನೀವು ಅವರ ಚಡ್ಡಿದೋಸ್ತ್ ಅಲ್ವಾ? ಒಮ್ಮೆ ಯತ್ನಿಸಿ ನೋಡಿ" ಎಂಬ ಉತ್ತರ ಬಂತು!

‘ಅರೆ, ಇವನ ಮನೆ ಕಾಯ್ವಾಗಾ..." ಎಂದು ಗೊಣಗುತ್ತಲೇ ಪುಟ್ಟಣ್ಣರ ಕೋಣೆಯ ಬಾಗಿ ಲನ್ನು ದಬದಬ ಬಡಿದರು ಹಿರಣ್ಣಯ್ಯ. “ಯಾರು?" ಎಂಬ ದನಿ ಬಂತು ಒಳಗಿನಿಂದ. ನಿಮಗೇ ಗೊತ್ತಲ್ಲ... ಹಿರಣ್ಣಯ್ಯನವರದ್ದು ನಾಲಗೆಯಲ್ಲ, ಅದೊಂದು ಬ್ಲೇಡು! ಅದರಿಂದ ಹೊಮ್ಮೋದು ಬರೀ ಮಾತಲ್ಲ, ಅದು ಕರ್ಣರಸಾಯನ! ಕೇಳಬೇಕೇ?... “ನಿಮ್ಮಪ್ಪ ಬಂದಿ ದ್ದೀನಿ, ಬಾಗಿಲು ತೆಗೆಯೋ ಬೋ.... ಮಗನೇ" ಅಂದ್ರು ಹಿರಣ್ಣಯ್ಯ! ಆಪ್ತಮಿತ್ರನ ಆವಾಜ್‌ಗೆ ಬಾಗಿಲು ಮೆಲ್ಲಗೆ ‘ಕಿರ್’ ಎಂದು ತೆರೆದುಕೊಂಡಿತು. ಅವರನ್ನು ಒಳಸೆಳೆದು ತಬ್ಬಿಕೊಂಡ ಪುಟ್ಟಣ್ಣ ಒಂದೇ ಸಮನೆ ಅಳತೊಡಗಿದರು...

ಕೊಂಚ ಕರಗಿದ ಹಿರಣ್ಣಯ್ಯ, “ಯಾಕೋ ಪುಟ್ಟಾ, ಏನಾಯ್ತೋ?" ಎನ್ನುತ್ತಾ ತಲೆ ಸವರಿ ದಾಗ, ‘ಗೋಳಿನ ಚಿತ್ರಕಥೆ’ಯ ಪುಟಗಳು ತೆರೆದುಕೊಂಡವು- ಹಿಂದಿನ ದಿನ ಚಿತ್ರದುರ್ಗದ ಬೆಟ್ಟದ ಮೇಲಕ್ಕೆ ಚಿತ್ರೀಕರಣದ ಪರಿಕರಗಳನ್ನು ಹೊತ್ತೊಯ್ಯುವಾಗ, ಚಿತ್ರತಂಡವರು ಮರೆವಿನಲ್ಲೋ ಗಡಿಬಿಡಿಯಲ್ಲೋ ಬ್ಯಾಟರಿಯನ್ನು ಕೆಳಗೇ ಬಿಟ್ಟು ‘ನಾಗರ’ವನ್ನು ಮಾತ್ರ ವೇ ಒಯ್ದಿದ್ದರು (ನಾಗರ ಎಂಬುದು ಒಂದು ಅತ್ಯವಶ್ಯಕ ಧ್ವನಿಮುದ್ರಣ ಸಲಕರಣೆ). ಅದು ಸಂಪೂರ್ಣ ಚಾರ್ಜ್ ಆಗಿರಲಿಲ್ಲ. ವಸ್ತುಸ್ಥಿತಿಯ ಅರಿವಿಲ್ಲದ ಪುಟ್ಟಣ್ಣ, ಚಿತ್ರದುರ್ಗದ ಕೋಟೆಯಲ್ಲಿ ಭರ್ಜರಿ ದೃಶ್ಯಗಳನ್ನು ಚಿತ್ರೀಕರಿಸಿದ್ದರು. “ಬೆಟ್ಟದ ಕಡಿದಾದ ಜಾಗದಲ್ಲಿ ಕ್ಯಾಮರಾ ನಿಂತ್ಕೊಳ್ಳಲ್ಲ ಸರ್" ಅಂತ ಛಾಯಾಗ್ರಾಹಕರು ತಮ್ಮ ಸಂಕಷ್ಟವನ್ನು ಹೇಳಿಕೊಂಡರೆ, “ನೆಲದ ಮೇಲೆ ಕ್ಯಾಮರಾ ನಿಲ್ಲೋಲ್ಲ ಅಂದ್ರೆ, ಹೆಗಲ ಮೇಲೆ ಹೊತ್ಕೊಂ ಡು ನಿಂತ್ಕೊಳ್ಳ್ರೀ... ನಂಗೆ ನಾನು ಹೇಳಿದ ಕೋನದಲ್ಲೇ ದೃಶ್ಯ ಬೇಕು" ಎಂದು ಹಠ ಮಾಡಿ ದ್ದರು. ಛಾಯಾಗ್ರಾಹಕರೂ ಜೀವವನ್ನು ಅಂಗೈಯಲ್ಲಿಟ್ಟುಕೊಂಡು ದೃಶ್ಯಗಳನ್ನು ಚಿತ್ರೀ ಕರಿಸಿದ್ದರು. ಆದರೆ ‘ನಾಗರ’ ಸಂಪೂರ್ಣ ಚಾರ್ಜ್ ಆಗಿರದ ಕಾರಣ, ಚಿತ್ರೀಕರಿಸಿದ ಕೆಲ ದೃಶ್ಯ ಗಳು, ಹಾಡಿನ ಭಾಗಗಳು ‘ನಾನ್ ಸಿಂಕ್’ ಆಗಿಬಿಟ್ಟಿದ್ದವು. ಅಂದರೆ, ಕಲಾವಿದರ ತುಟಿ ಚಲನೆ-ಹಾವಭಾವಕ್ಕೆ ತಕ್ಕಂತೆ ದೃಶ್ಯಗಳು ಸಂಯೋಜನೆಗೊಳ್ಳದೆ -ಮುಗಳು ಏರುಪೇರಾಗಿ ಬಿಟ್ಟಿದ್ದವು!

ದಿನವಿಡೀ ಬೆವರು ಸುರಿಸಿ, ಹತ್ತಾರು ಕಲಾವಿದರಿಂದ ಉತ್ತಮ ಅಭಿನಯ ತೆಗೆಸಿ, ಒಂದೊ ಮ್ಮೆ ಸಮರ್ಥ ಅಭಿವ್ಯಕ್ತಿ ಹೊಮ್ಮದಿದ್ದಾಗ ‘ರೀ-ಟೇಕ್’ ಮಾಡಿಸಿ ಚಿತ್ರವನ್ನು ನೇಯ್ದಿದ್ದ ಈ ಶ್ರಮಜೀವಿಯು, ಯಾರದ್ದೋ ಮೈಮರೆವಿನಿಂದ ಆದ ಲೋಪಕ್ಕೆ ತಮ್ಮ ಅಷ್ಟೂ ಶ್ರಮವು ಹೊಳೆಯಲ್ಲಿ ಹುಣಿಸೇಹಣ್ಣು ಕದಡಿದಂತಾದಾಗ ಗೋಳಾಡುವುದು ಸಹಜವಲ್ಲವೇ? ಹಿರಣ್ಣಯ್ಯರ ತೆಕ್ಕೆಯಲ್ಲಿ ಪುಟ್ಟಣ್ಣ ಅವತ್ತು ಮಾಡಿದ್ದು ಅದನ್ನೇ! ಇದು ವಾಡಿಕೆಯ ‘ರೋದನ’ ಆಗಿರಲಿಲ್ಲ, ತಮ್ಮ ಚಿತ್ರದ ಕುರಿತೇ ಹಗಲಿರುಳೂ ಧ್ಯಾನಿಸುತ್ತಿದ್ದ ತಪಸ್ವಿ ಯೊಬ್ಬನ ‘ಅರಣ್ಯರೋದನ’ವಾಗಿತ್ತು.

ಸಮಸ್ಯೆಯ ಸೂಕ್ಷ್ಮತೆಯನ್ನೂ, ಪುಟ್ಟ ಣ್ಣನವರ ‘ಹಸುಗೂಸು’ ಮನಸ್ಸನ್ನೂ ಗ್ರಹಿಸಿದ ಹಿರಣ್ಣಯ್ಯ ತಮ್ಮ ದನಿಯನ್ನು ಕಷ್ಟ ಪಟ್ಟು ನವಿರಾಗಿಸಿ, “ಲೋ ಪುಟ್ಟೂ, ಇಲ್ಲಿ ತಪ್ಪಾಗಿ ರೋದು ನಿನ್ನಿಂದಲ್ಲ ಕಣೋ... ಯಾವುದೇ ಕ್ಷೇತ್ರದಲ್ಲಿ ಇಂಥ ಕೈಮೀರಿದ ತಾಂತ್ರಿಕ ಸ್ಖಾಲಿತ್ಯ ಆಗೋದುಂಟು. ನಿನ್ನ ಸಂಕಟ ಅರ್ಥವಾಗುತ್ತೆ, ನಿರ್ಮಾಪಕರಿಗೆ ಏನು ಉತ್ತರಿ ಸೋದು ಅಂತ ಒದ್ದಾಡ್ತಾ ಇದ್ದೀಯ; ಏಕೆಂದರೆ, ಈ ಪ್ರಮಾದದಿಂದಾಗಿ ನಿರ್ಮಾಪಕರು ಸದರಿ ದೃಶ್ಯಗಳ ಮರು ಚಿತ್ರೀಕರಣಕ್ಕೆ ಮತ್ತೊಮ್ಮೆ ದುಡ್ಡು ಚೆಲ್ಲಬೇಕಾಗುತ್ತೆ. ತಮ್ಮಿಡೀ ಶಕ್ತಿ ಬಸಿದು ಅಭಿ ನಯಿಸಿದ್ದ ಕಲಾವಿದರು, ಆ ಅಭಿನಯವನ್ನು ಸೆರೆಹಿಡಿಯಲು ಬಿಸಿಲಲ್ಲಿ ಬೆಂಡಾಗಿದ್ದ ತಂತ್ರಜ್ಞರು ಮತ್ತೊಮ್ಮೆ ಆ ಕೆಲಸದಲ್ಲಿ ತೊಡಗಬೇಕಾಗುತ್ತೆ, ವಿಧಿಯಿಲ್ಲ. ಆದರೆ, ಒಂದು ವಿಷಯ ಅರ್ಥಮಾಡ್ಕೋ- ‘ನಾಗರಹಾವು’ ಚಿತ್ರದಲ್ಲಿ ನೀನು ಎಷ್ಟರ ಮಟ್ಟಿಗೆ ನಿಸ್ವಾರ್ಥದಿಂದ ತೊಡಗಿಸಿಕೊಂಡಿದ್ದೀಯೆ, ನಿನ್ನ ಕಮಿಟ್‌ಮೆಂಟ್ ಎಷ್ಟು ಎಂಬು ದೆಲ್ಲಾ ಅವರಿಗೆ ಗೊತ್ತಿದೆ. ಹೀಗಾಗಿ ಮತ್ತೊಮ್ಮೆ ಮಾಡಲು ಕೇಳಿದರೆ ಯಾರೂ ‘ಇಲ್ಲ‘ ಅನ್ನೋಲ್ಲ. ಒಮ್ಮೆ ಹೊರಗೆಬಂದು ನೋಡು, ನೀನು ಹೀಗೆ ಕುಸಿದಿರೋದಕ್ಕೆ ಪಾಪ ಆ ಕಲಾವಿದರು-ತಂತ್ರಜ್ಞರು ಮಂಕಾಗಿ ಬಿಟ್ಟಿದ್ದಾರೆ. ಅವರೆಲ್ಲಾ ನಿನಗಾಗೇ ಕಾಯ್ತಿದ್ದಾರೆ. ಏಳು ಮರೀ, ಮೊದಲು ಊಟ ಮಾಡು; ಫೀನಿಕ್ಸ್ ಪಕ್ಷಿಯಂತೆ ಧೂಳನ್ನೊಮ್ಮೆ ಕೊಡವಿ ಮೇಲೆ ದ್ದು, ಮುಂಚೆ ತೆಗೆದಿದ್ದರ ಅಪ್ಪನಂಥ ದೃಶ್ಯಗಳನ್ನು ಚಿತ್ರೀಕರಿಸು..." ಎಂದು ಬೆನ್ನು ಚಪ್ಪರಿಸಿದರು...

ನಟರತ್ನಾಕರನ ಮಾತು ಕನಸುಗಾರನಿಗೆ ‘ಭೀಮಬಲ’ ನೀಡಿತು. ‘ಟಣ್’ ಅಂತ ಎದ್ದವರೇ ಶೇವಿಂಗ್-ಸ್ನಾನ ಮುಗಿಸಿ, ಊಟ ಮಾಡಿ, ಷಾರ್ಟ್ಸ್-ಟಿ ಶರ್ಟ್-ಕೂಲಿಂಗ್ ಗ್ಲಾಸ್ ತೊಟ್ಟು, ಸ್ಟೈಲಾಗಿ ಸಿಗರೇಟು ಕಚ್ಚಿಕೊಂಡು, ಥೇಟ್ ಸಿನಿಮಾ ಹೀರೋ ನಂತೆ ಬಾಗಿಲು ತೆರೆದು ಕೊಂಡು ಹೊರಬಂದರು. ಅವರ ನಗುಮೊಗವನ್ನು ಕಂಡ ಚಿತ್ರ ತಂಡದವರೆಲ್ಲಾ ‘ಹೋ..’ ಎಂದು ಪುಟ್ಟ ಮಕ್ಕಳಂತೆ ಕೇಕೆ ಹಾಕಿ ಕುಪ್ಪಳಿಸಿದರು, ಚಿತ್ರೀಕರಣದಲ್ಲಿ ತೊಡಗಿಸಿ ಕೊಂಡರು...

ನೀವಿಂದು ‘ನಾಗರಹಾವು’ ಚಿತ್ರದಲ್ಲಿ ಕಾಣುವ ಚಿತ್ರದುರ್ಗದ ಕೋಟೆಯ ಹಿನ್ನೆಲೆಯಲ್ಲಿನ ಒಂದಷ್ಟು ಮಹತ್ತರ ದೃಶ್ಯಗಳು ಹೀಗೆ ಮರು ಚಿತ್ರೀಕರಣಗೊಂಡಿರುವಂಥವೇ! ಈಗ ಎದೆ ಮುಟ್ಟಿಕೊಂಡು ಹೇಳಿ, ಈ ದೃಶ್ಯಗಳನ್ನು ನೀವು ರಸಕವಳದಂತೆ ಚಪ್ಪರಿಸಿದ್ದು ಹೌದಾ ಇಲ್ಲವಾ...?!

(ಮುಂದುವರಿಯುವುದು)