Dr A Jayakumar Shetty Column: ಆರ್ಥಿಕ ಬೆಳವಣಿಗೆಯ ವೇಗವರ್ಧಕ
2020ರಲ್ಲಿ ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ರೆಪೊ ದರವನ್ನು ಶೇ.40ರಷ್ಟು ಇಳಿಸಲಾಗಿತ್ತು. ನಂತರ ಸುಮಾರು ಐದು ವರ್ಷದಿಂದ ಬಡ್ಡಿದರವನ್ನು ಇಳಿಸಿಲ್ಲ. ಕಳೆದ ಸುಮಾರು 2 ವರ್ಷಗಳಿಂದ ರೆಪೊ ದರ ಸ್ಥಿರವಾಗಿ ಶೇ.6.5ರಲ್ಲೇ ಇತ್ತು. ಈಗ ನಮ್ಮ ಆರ್ಥಿಕತೆಯ ಬೆಳವಣಿಗೆಯು ಕುಂಠಿತಗೊಂಡಿರುವ ಲಕ್ಷಣ ಗಳು ಕಂಡುಬರುತ್ತಿವೆ
![ಆರ್ಥಿಕ ಬೆಳವಣಿಗೆಯ ವೇಗವರ್ಧಕ](https://cdn-vishwavani-prod.hindverse.com/media/original_images/Dr_A_Jayakumr_Shetty_Column_100225.jpg)
ಅಂಕಣಕಾರ ಡಾ.ಎ.ಜಯಕುಮಾರ ಶೆಟ್ಟಿ
![Profile](https://vishwavani.news/static/img/user.png)
ದುಡ್ಡು-ಕಾಸು
ಡಾ.ಎ.ಜಯಕುಮಾರ ಶೆಟ್ಟಿ
ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್ ಬಿಐ) ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃ ತ್ವದ ಹಣಕಾಸು ನೀತಿ ಪರಾಮರ್ಶೆ ಸಮಿತಿಯ (ಎಂಪಿಸಿ) ಸಭೆ ಇತ್ತೀಚೆಗೆ ನಡೆಯಿತು. ರೆಪೊ ದರ ದಲ್ಲಿ 25 ಮೂಲಾಂಶ ಅಂದರೆ ಶೇ.0.25ರಷ್ಟು ಇಳಿಕೆ ಮಾಡಲು ಈ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದರನ್ವಯ, ಪ್ರಸ್ತುತ ಇರುವ ಶೇ.6.5ರಿಂದ ಶೇ.6.25ಕ್ಕೆ ಇದು ಇಳಿಕೆಯಾಗಲಿದೆ. ಹೀಗೆ ರೆಪೊ ದರ ವನ್ನು ಇಳಿಸಲು ನಿರ್ಧರಿಸಿರುವುದು ಆರ್ಥಿಕ ಬೆಳವಣಿಗೆಯ ವೇಗವನ್ನು ಹೆಚ್ಚಿಸುವಲ್ಲಿ ಜನ ಸಾಮಾನ್ಯರ ನಿರೀಕ್ಷೆಗೆ ಅನುಗುಣವಾದ ಹೆಜ್ಜೆಯಾಗಿದೆ. ರೆಪೊ ದರ ಎಂಬುದು ಹಣಕಾಸು ನೀತಿಯ ಒಂದು ಪ್ರಮುಖ ಆಯುಧವಾಗಿದೆ.
ಇದು ಬ್ಯಾಂಕುಗಳು ಯಾವುದೇ ಹಣದ ಕೊರತೆಯ ಸಂದರ್ಭ ದಲ್ಲಿ, ಭದ್ರತೆ ಮತ್ತು ಬಾಂಡ್ ಅಡ ಮಾನದ ಮೇಲೆ ಆರ್‌ಬಿಐನಿಂದ ಪಡೆಯುವ ಸಾಲಕ್ಕೆ ಪಾವತಿ ಸುವ ಬಡ್ಡಿದರವಾಗಿದೆ.
ಇದನ್ನೂ ಓದಿ: Dr A Jayarama Shetty Column: ಕೇಂದ್ರ ಬಜೆಟ್: ಹೊಣೆಯರಿತ ಜಾಣ್ಮೆಯ ಹೆಜ್ಜೆಯಿರಲಿ
ಮಾರುಕಟ್ಟೆಯ ಬಡ್ಡಿದರವು ನೇರವಾಗಿ ರೆಪೊ ದರವನ್ನು ಅವಲಂಬಿಸುತ್ತದೆ. ರೆಪೊ ದರ ಕಡಿಮೆ ಯಾದಾಗ, ವಾಣಿಜ್ಯ ಬ್ಯಾಂಕುಗಳು ಕೇಂದ್ರೀಯ ಬ್ಯಾಂಕ್‌ನಿಂದ ಪಡೆಯುವ ಸಾಲವು ಅಗ್ಗವಾಗು ತ್ತದೆ. ಪ್ರತಿಯಾಗಿ, ವಾಣಿಜ್ಯ ಬ್ಯಾಂಕುಗಳು ತಮ್ಮ ಸಾಲದ ದರಗಳನ್ನು ಕಡಿತಗೊಳಿಸುತ್ತವೆ. ಬ್ಯಾಂಕಿ ನ ಗ್ರಾಹಕರು ಪಡೆಯುವ ಸಾಲದ ಮೇಲಿನ ಬಡ್ಡಿಯ ವೆಚ್ಚ ಕಡಿಮೆಯಾಗಿ, ಸಾಲ ತೆಗೆದು ಕೊಳ್ಳಲು ಪ್ರಚೋದನೆ ದೊರೆಯುತ್ತದೆ.
ಇದರ ಪರಿಣಾಮವಾಗಿ ದ್ರವ್ಯತೆಯ ಪ್ರಮಾಣ ಹೆಚ್ಚಿ ಆರ್ಥಿಕ ಚಟುವಟಿಕೆಗಳು ಚುರುಕುಗೊಳ್ಳು ತ್ತವೆ. ಮಾರುಕಟ್ಟೆಯಲ್ಲಿ ದ್ರವ್ಯತೆ ಹೆಚ್ಚಿಸುವ ಅಗತ್ಯವಿದ್ದಾಗ, ವ್ಯವಹಾರಗಳು ಮತ್ತು ಹೂಡಿಕೆ ಉದ್ದೇಶಗಳಿಗಾಗಿ ಹಣವನ್ನು ಸಾಲ ಪಡೆಯಲು ರೆಪೊ ದರವನ್ನು ಸಡಿಲಗೊಳಿಸಲಾಗುತ್ತದೆ. ಇದು ಆರ್ಥಿಕತೆಯಲ್ಲಿ ಹಣದ ಪೂರೈಕೆಯನ್ನು ಹೆಚ್ಚಿಸುತ್ತದೆ.
ಇಂಥ ಹೆಜ್ಜೆಯು ಆರ್ಥಿಕ ಬೆಳವಣಿಗೆಯ ಮೇಲೆ ಮಹತ್ತರ ಪ್ರಭಾವವನ್ನು ಬೀರುತ್ತದೆ. 2020ರಲ್ಲಿ ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ರೆಪೊ ದರವನ್ನು ಶೇ.40ರಷ್ಟು ಇಳಿಸಲಾಗಿತ್ತು. ನಂತರ ಸುಮಾರು ಐದು ವರ್ಷದಿಂದ ಬಡ್ಡಿದರವನ್ನು ಇಳಿಸಿಲ್ಲ. ಕಳೆದ ಸುಮಾರು 2 ವರ್ಷಗಳಿಂದ ರೆಪೊ ದರ ಸ್ಥಿರವಾಗಿ ಶೇ.6.5ರಲ್ಲೇ ಇತ್ತು. ಈಗ ನಮ್ಮ ಆರ್ಥಿಕತೆಯ ಬೆಳವಣಿಗೆಯು ಕುಂಠಿತಗೊಂಡಿರುವ ಲಕ್ಷಣಗಳು ಕಂಡುಬರುತ್ತಿವೆ.
ಈ ಹಂತದಲ್ಲಿ ಕೇಂದ್ರೀಯ ಬ್ಯಾಂಕು ಹೆಚ್ಚು ಸ್ನೇಹಪರ ಹಣಕಾಸು ನೀತಿಯನ್ನು ಜಾರಿಗೊಳಿಸುವ ಮೂಲಕ ಆರ್ಥಿಕತೆಯ ವೇಗವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.ಭಾರತದ ಹಣದುಬ್ಬರವು ನಿಧಾನವಾಗಿ ಚಲಿಸುವ ಆನೆಯಿಂದ ಚಾಣಾಕ್ಷ ಕುದುರೆಗೆ ರೂಪಾಂತರಗೊಂಡಿದೆ ಮತ್ತು ಈ ಕುದುರೆಯನ್ನು ಈಗ ಯಶಸ್ವಿಯಾಗಿ ಸ್ಥಿರತೆಗೆ ತರಲಾಗಿದೆ ಎಂದು ಅಂದಿನ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಅಕ್ಟೋಬರ್‌ನಲ್ಲಿ ನಡೆದ ಹಣಕಾಸು ನೀತಿ ಸಮಿತಿಯ ಸಭೆಯಲ್ಲಿ ಹೇಳಿಕೆ ನೀಡಿದ್ದರು.
ಆದರೆ ಶೀಘ್ರದಲ್ಲೇ, ಹೆಚ್ಚಿನ ಆಹಾರದ ಬೆಲೆಗಳು ಮತ್ತು ಹೆಚ್ಚುತ್ತಿರುವ ಕೋರ್ ಹಣದುಬ್ಬರ ದಿಂದಾಗಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಹಣದುಬ್ಬರವು ಅದರ ಸಹಿಷ್ಣುತೆಯ ಮಿತಿಗಿಂತ ಶೇ.6.2ಕ್ಕೆ ಏರಿತು. 2024ರ ಹಣಕಾಸು ವರ್ಷದಲ್ಲಿ ದೇಶವು ಚಿಲ್ಲರೆ ಹಣದುಬ್ಬರವನ್ನು ನಾಲ್ಕು ವರ್ಷಗಳ ಕನಿಷ್ಠ ಮಟ್ಟವಾದ ಶೇ.5.4ಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರೂ, ದುರ್ಬಲಗೊಂಡ ರುಪಾಯಿ, ತೂಗಾಡುತ್ತಿರುವ ಹಣದುಬ್ಬರ ಮತ್ತು ಕುಸಿಯುತ್ತಿರುವ ವಿದೇಶಿ ಹೂಡಿಕೆ ಸೇರಿದಂತೆ ಹೊಸ ಆರ್ಥಿಕ ಅಡಚಣೆಗಳು ಸ್ಥೂಲ ಆರ್ಥಿಕ ಸ್ಥಿರತೆಗೆ ಬೆದರಿಕೆ ಹಾಕುತ್ತವೆ.
ಹಣದುಬ್ಬರವು 2025ರಲ್ಲಿ ನೀತಿ ನಿರೂಪಕರಿಗೆ ನೋವಿನ ಸವಾಲಾಗಿ ಉಳಿದಿದೆ. ವರ್ಷಾರಂಭದಲ್ಲಿ ಅಮೆರಿಕದ ಡಾಲರ್‌ನ ಎದುರು ಭಾರತೀಯ ರುಪಾಯಿಯು ದಾಖಲೆಯ ಕನಿಷ್ಠ ಮಟ್ಟವಾದ 86.6 ರು.ಗೆ ತಲುಪಿದ್ದು, ಇದು ಆಮದು ವೆಚ್ಚವನ್ನೂ ಹಾಗೂ ಹಣದುಬ್ಬರದ ಒತ್ತಡವನ್ನೂ ಹೆಚ್ಚಿಸು ತ್ತದೆ. ಆಹಾರ ಹಣದುಬ್ಬರವು 2025ರಲ್ಲಿ ಕಡಿಮೆಯಾಗುವ ನಿರೀಕ್ಷೆಯಿದೆ. ಆದರೆ ದುರ್ಬಲವಾದ ರುಪಾಯಿಯು ನಿರಂತರ ಆಮದು ಹಣದುಬ್ಬರಕ್ಕೆ ಕಾರಣವಾಗುತ್ತದೆ.
ಅಮೆರಿಕದ ಕೇಂದ್ರ ಬ್ಯಾಂಕಿನ ನೀತಿ ಬದಲಾವಣೆಗಳು ಮತ್ತು ಡೊನಾಲ್ಡ್ ಟ್ರಂಪ್ ನೇತೃತ್ವದ ನೂತನ ಆಡಳಿತದಿಂದ ಹೊಮ್ಮುವ ಸಂಭಾವ್ಯ ವ್ಯಾಪಾರ ನಿರ್ಬಂಧಗಳಿಂದಾಗಿ ಭಾರತದ ಬಾಹ್ಯ ಆರ್ಥಿಕ ಅಪಾಯಗಳು ಗಮನಾರ್ಹವಾಗಿ ಏರಿವೆ. ಆರ್‌ಬಿಐ ಗವರ್ನರ್ ತಮ್ಮ ಭಾಷಣದ ಆರಂಭ ದಲ್ಲಿ, “ಹಣದುಬ್ಬರ ಗುರಿಯ ಚೌಕಟ್ಟಿನ ಅಳವಡಿಕೆಯ ನಂತರ ಸರಾಸರಿ ಹಣದುಬ್ಬರವು ಕಡಿಮೆ ಯಾಗಿದೆ ಮತ್ತು ಈ ಹೊಂದಿಕೊಳ್ಳುವ ಮಾದರಿಯು ಭಾರತಕ್ಕೆ ಉತ್ತಮವಾಗಿ ಸೇವೆ ಸಲ್ಲಿಸಿದೆ; ಬೆಳವಣಿಗೆಯ ವೇಗವನ್ನು ಕಾಪಾಡಿಕೊಳ್ಳುವಾಗ ಸರಕಾರದ ಹಣಕಾಸಿನ ಕಾರ್ಯ ತಂತ್ರವು ಹಣದುಬ್ಬರವನ್ನು ಸ್ಥಿರಗೊಳಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ" ಎಂದಿದ್ದಾರೆ.
ಸಮೀಕ್ಷೆಯೊಂದರ ಪ್ರಕಾರ, ದೇಶದ ಜನಸಂಖ್ಯೆಯಲ್ಲಿ ಶೇ.31ರಷ್ಟು ಮಂದಿ ಮಧ್ಯಮ ವರ್ಗದವ ರಾಗಿದ್ದಾರೆ. 2031ರ ವೇಳೆಗೆ ಇವರ ಸಂಖ್ಯೆ ಶೇ.38ಕ್ಕೆ ಮತ್ತು 2047ರ ವೇಳೆಗೆ ಶೇ.60ಕ್ಕೆ ಏರಲಿದೆ. ಬೆಳೆಯುತ್ತಿರುವ ಗಾತ್ರ ಮತ್ತು ಪ್ರಭಾವದಿಂದಾಗಿ ಭಾರತದಲ್ಲಿ ಮಧ್ಯಮವರ್ಗವು ಬದಲಾವಣೆ ಹಾಗೂ ಬೆಳವಣಿಗೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. 2025-26ನೇ ಸಾಲಿನ ಬಜೆಟ್ನಲ್ಲಿ, 12 ಲಕ್ಷ ರು.ವರೆಗೆ ಆದಾಯ ಇರುವವರಿಗೆ ಶೂನ್ಯ ತೆರಿಗೆಯನ್ನು ಘೋಷಿಸಲಾಗಿದೆ.
ಇದೀಗ ರೆಪೊ ದರವನ್ನು ತಗ್ಗಿಸುವ ಮೂಲಕ ಕಡಿಮೆ ಬಡ್ಡಿಗೆ ಬ್ಯಾಂಕ್ ಸಾಲವೂ ದೊರೆಯಲಿದೆ. ಈ ಎರಡೂ ಘೋಷಣೆಗಳು ಮಧ್ಯಮ ವರ್ಗದಲ್ಲಿ ಸಂಚಲನ ಮೂಡಿಸಲಿವೆ. ಆರ್ಥಿಕ ವ್ಯವಸ್ಥೆ ಯಲ್ಲಿ ದ್ರವ್ಯತೆ ಹೆಚ್ಚಿ ವೇಗದ ಅಭಿವೃದ್ಧಿಗೆ ಬುನಾದಿಯಾಗಲಿದೆ. ಬಜೆಟ್ ಕುರಿತಂತೆ ಪ್ರಧಾನಿ ಮೋದಿಯವರು ಮಾತನಾಡುತ್ತಾ, “ಬಜೆಟ್ ಸಾಮಾನ್ಯವಾಗಿ, ಸರಕಾರದ ಖಜಾನೆಯನ್ನು ತುಂಬಿ ಸುವುದು ಹೇಗೆಂಬುದನ್ನು ಆಲೋಚಿಸುತ್ತದೆ; ಆದರೆ ಈ ಬಾರಿ ಜನರ ಕಿಸೆಯನ್ನು ಹೇಗೆ ತುಂಬಿಸು ವುದು ಮತ್ತು ಅವರು ದೇಶದ ಅಭಿವೃದ್ಧಿಯಲ್ಲಿ ಹೇಗೆ ಪಾಲುದಾರರಾಗಬಲ್ಲರು ಎಂಬುದನ್ನು ಬಜೆಟ್ ಸೂಚಿಸುತ್ತದೆ.
ಉಳಿತಾಯ, ಹೂಡಿಕೆ ಮತ್ತು ಬೆಳವಣಿಗೆಯನ್ನು ಈ ಬಜೆಟ್ ಹೆಚ್ಚಿಸಲಿದೆಯಲ್ಲದೆ ಜನಸಾಮಾನ್ಯರ ಬಲವರ್ಧನೆಗೆ ನೆರವಾಗಲಿದೆ"ಎಂದಿದ್ದಾರೆ. ಈ ಸಾಲಿನ ಬಜೆಟ್, ದೇಶದ ಜನಸಂಖ್ಯೆಯಲ್ಲಿನ ಮಧ್ಯಮ ವರ್ಗದವರ ಪ್ರಮುಖ ಪಾತ್ರವನ್ನು ಗುರುತಿಸುತ್ತದೆ. ಆದಾಯ ತೆರಿಗೆ ಮಿತಿ ಏರಿಸಿರುವ ಕಾರಣ, ಸುಮಾರು ಒಂದು ಕೋಟಿ ತೆರಿಗೆದಾರರಿಗೆ ಅನುಕೂಲವಾಗಲಿದೆ.
ತೆರಿಗೆ ರಿಯಾಯಿತಿ ಬೆನ್ನಲ್ಲೇ ಅದಕ್ಕೆ ಪೂರಕವಾಗಿ ರೆಪೊ ದರದ ಇಳಿಕೆಯು ಮಧ್ಯಮ ವರ್ಗಕ್ಕೆ ಚೇತೋಹಾರಿಯಾಗಲಿದೆ. ರೆಪೊ ದರ ಇಳಿಕೆಯಾದಾಗ ಸಹಜವಾಗಿ ಬಡ್ಡಿದರವೂ ಇಳಿಕೆಯಾಗು ತ್ತದೆ. ಬ್ಯಾಂಕುಗಳಿಂದ ಪಡೆದಿರುವ ವಾಹನ ಸಾಲ, ಗೃಹಸಾಲಗಳ ಮಾಸಿಕ ಕಂತು ಇಳಿಕೆಯಾಗಿ ಆರ್ಥಿಕತೆಯಲ್ಲಿ ಹಣದ ಪ್ರಮಾಣ ಜಾಸ್ತಿಯಾಗುತ್ತದೆ.
ಅಂದರೆ ಜನರ ಕೈಯಲ್ಲಿ ಹಣ ಓಡಾಡುತ್ತದೆ, ಮಾರುಕಟ್ಟೆಯಲ್ಲಿ ಖರೀದಿಯೂ ಹೆಚ್ಚುತ್ತದೆ. ಇದರ ಪರಿಣಾಮವಾಗಿ ಆರ್ಥಿಕ ಚಟುವಟಿಕೆಗಳಿಗೆ ಹುಮ್ಮಸ್ಸು ಬರುತ್ತದೆ. ವಿಶ್ವದ ಶ್ರೀಮಂತ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆ ಆಶಾದಾಯಕವಾಗಿಯೇ ಇದೆ. ವಿಶ್ವಬ್ಯಾಂಕ್, ಐಎಂಎಫ್ ಸೇರಿದಂತೆ ಜಾಗತಿಕ ಸಂಸ್ಥೆಗಳು ಭಾರತದ ಆರ್ಥಿಕತೆ ಆಶಾದಾಯಕವಾಗಿದೆ ಎಂದೇ ಮುನ್ನೋಟ ವನ್ನು ನೀಡಿವೆ.
ಹಣದುಬ್ಬರವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಬೆಳವಣಿಗೆಯನ್ನು ಬೆಂಬಲಿಸುವಲ್ಲಿ ಕೇಂದ್ರೀಯ ಬ್ಯಾಂಕು ತನ್ನ ಗಮನವನ್ನು ಮುಂದುವರಿಸಿದೆ. ಜನವರಿ 17ರಂದು ಬಿಡುಗಡೆಯಾದ ಜಾಗತಿಕ ಆರ್ಥಿಕ ಮುನ್ನೋಟ ವರದಿಯ ಪ್ರಕಾರ, ಭಾರತದಲ್ಲಿನ ಬೆಳವಣಿಗೆಯು ನಿರೀಕ್ಷೆಗಿಂತ ಹೆಚ್ಚು ನಿಧಾನವಾಗಿದೆ, ಕೈಗಾರಿಕಾ ಚಟುವಟಿಕೆಯಲ್ಲಿ ನಿರೀಕ್ಷಿತ ಮಟ್ಟಕ್ಕಿಂತ ತೀಕ್ಷ್ಣವಾದ ಕುಸಿತದ ಕಾರಣದಿಂದ ಕಿರಿಕಿರಿಯನ್ನು ಉಂಟುಮಾಡಿದೆ.
ಆದರೆ, ವಿಭಿನ್ನ ಮತ್ತು ಅನಿಶ್ಚಿತ ಬೆಳವಣಿಗೆಯ ಜಾಗತಿಕ ಹಿನ್ನೆಲೆ ಹಾಗೂ ಭಾರತದ ಸ್ಥಿರವಾದ ಕಾರ್ಯಕ್ಷಮತೆಯನ್ನು ಗಮನಿಸಿದರೆ ಆತಂಕಕ್ಕೆ ಯಾವುದೇ ಕಾರಣವಿಲ್ಲ ಎಂಬ ಆಶಾಭಾವನೆ ಯನ್ನು ಅದು ವ್ಯಕ್ತಪಡಿಸಿದೆ. ಆದಾಯ ತೆರಿಗೆ ವಿನಾಯಿತಿ ಮಿತಿಯ ಹೆಚ್ಚಳವು ಗೃಹ ಉಳಿತಾಯ ಮತ್ತು ಗ್ರಾಹಕ ಖರ್ಚನ್ನು ಗಣನೀಯವಾಗಿ ಹೆಚ್ಚಿಸಿ, ಮಾರುಕಟ್ಟೆ ಬೇಡಿಕೆ ಹಾಗೂ ದ್ರವ್ಯತೆಯನ್ನು ಹೆಚ್ಚಿಸುತ್ತದೆ. ಈ ಎಲ್ಲಾ ಪ್ರಕ್ರಿಯೆಗಳು ಅಂತಿಮವಾಗಿ ಆರ್ಥಿಕ ಬೆಳವಣಿಗೆ ಮತ್ತು ಸಂಭಾವ್ಯ ಮಾರುಕಟ್ಟೆಯ ಉತ್ಕರ್ಷವನ್ನು ಉತ್ತೇಜಿಸಲಿದೆ. ಇದೀಗ ರೆಪೊ ದರದಲ್ಲಿ ಆಗಿರುವ ಇಳಿಕೆಯು ಆರ್ಥಿಕ ವಲಯದಲ್ಲಿ ಸಕಾರಾತ್ಮಕ ಸಂಚಲನವನ್ನು ಮೂಡಿಸಲಿದೆ.
(ಲೇಖಕರು ನಿವೃತ್ತ ಪ್ರಾಂಶುಪಾಲರು)