ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಕಲೆಯಾಗಿ ಅರಳಿದ ಬೆರ್ಚಪ್ಪಗಳು

ಆಯಾನೊ ತಯಾ ರಿಸಿದ ಪ್ರತಿಯೊಂದು ಬೆರ್ಚಪ್ಪಗೆ ಹೆಸರು, ವ್ಯಕ್ತಿತ್ವ ಮತ್ತು ಕಥೆ ಇದೆ. ಇವುಗಳನ್ನು ಆತ ಬೆರ್ಚಪ್ಪಗಳ ನೋಂದಣಿಯಲ್ಲಿ ದಾಖಲಿಸಿದ್ದಾನೆ. ತೊಗರಿ ಹೊಲಗಳಲ್ಲಿ ಕೃಷಿಕರಂತೆ, ಬಸ್ ನಿಲ್ದಾಣದಲ್ಲಿ ಕಾಯುತ್ತಿರುವವರಂತೆ, ಶಾಲೆಯಲ್ಲಿರುವ ಮಕ್ಕಳಂತೆ ಮತ್ತು ವಿವಿಧ ದೈನಂದಿನ ಚಟು ವಟಿಕೆಗಳಲ್ಲಿ ತೊಡಗಿಸಿಕೊಂಡವರಂತೆ ಅವನ್ನು ನಿಲ್ಲಿಸಲಾಗಿದೆ. ಈ ಬೆರ್ಚಪ್ಪ ಗಳು ಆ ಗ್ರಾಮಕ್ಕೆ ಜೀವಂತಿಕೆ ಮತ್ತು ಕಲಾ ಸೊಗಡನ್ನು ನೀಡಿವೆ

ಕಲೆಯಾಗಿ ಅರಳಿದ ಬೆರ್ಚಪ್ಪಗಳು

ಸಂಪಾದಕರ ಸದ್ಯಶೋಧನೆ

ಜಪಾನಿನ ಟೋಕಿಯೋ ನಗರ ಪ್ರದೇಶವನ್ನು ದಾಟಿ, ಗ್ರಾಮೀಣ ಪ್ರದೇಶಗಳಲ್ಲಿ ಪ್ರಯಾಣ ಮಾಡು ವಾಗ, ಅಲ್ಲಿನ ಹೊಲ-ಗದ್ದೆಗಳಲ್ಲಿ ಬೆರ್ಚಪ್ಪ (ಬೆದರುಬೊಂಬೆ)ಗಳನ್ನು ನಿಲ್ಲಿಸಿರುವುದನ್ನು ಕಾಣ ಬಹುದು. ಬೆರ್ಚಪ್ಪಗಳು ಕೇವಲ ಕೃಷಿಕರ ಹೊಲಗಳಲ್ಲಿ ಪಕ್ಷಿಗಳನ್ನು ತಡೆಯುವ, ಬೆದರಿಸುವ ಸಾಧನಗಳಷ್ಟೇ ಅಲ್ಲ, ಅವುಗಳು ಜಪಾನಿನ ಗ್ರಾಮೀಣ ಸಂಸ್ಕೃತಿಯ ಒಂದು ವಿಶಿಷ್ಟ ಭಾಗವಾಗಿವೆ. ಜಪಾನಿನಲ್ಲಿ ಬೆರ್ಚಪ್ಪಗಳನ್ನು ‘ಕಾಕಾಶಿ’ ಎಂದು ಕರೆಯಲಾಗುತ್ತದೆ. ಇವುಗಳನ್ನು ಪ್ರಾಚೀನ ಕಾಲದಿಂದಲೇ ಕೃಷಿಕರು ತಮ್ಮ ಬೆಳೆಗಳನ್ನು ಪಕ್ಷಿಗಳಿಂದ ರಕ್ಷಿಸಲು ಬಳಸುತ್ತಿದ್ದರು. ಬೆರ್ಚಪ್ಪ ಗಳನ್ನು ಮಾನವನಂತೆ ತಯಾರಿಸಿ, ಹೊಲಗಳಲ್ಲಿ ಸ್ಥಾಪಿಸಲಾಗುತ್ತಿತ್ತು, ಇದರಿಂದಾಗಿ ಪಕ್ಷಿಗಳು ಭಯಪಟ್ಟು ದೂರವಿರುತ್ತವೆ ಎಂಬ ನಂಬಿಕೆ ಇತ್ತು. ಇವುಗಳನ್ನು ತಯಾರಿಸಲು ಹಳೆಯ ಬಟ್ಟೆಗಳು, ಹುಲ್ಲು ಮತ್ತು ಮರದ ಕಂಬಗಳನ್ನು ಬಳಸಲಾಗುತ್ತಿತ್ತು.

ಟೋಕುಶಿಮಾ ಪ್ರಾಂತ್ಯ(ಪ್ರಿಫೆಕ್ಚರ್)ದಲ್ಲಿರುವ ಶಿಕೋಕು ದ್ವೀಪದ ಇಯಾ ಕಣಿವೆಯಲ್ಲಿ ನಗೊರೋ ಎಂಬ ಪುಟ್ಟ ಗ್ರಾಮವಿದೆ. ಈ ಗ್ರಾಮದಲ್ಲಿ ಜನಸಂಖ್ಯೆ ಕಡಿಮೆಯಾಗಿದ್ದು, ಸುಮಾರು 30 ಜನ ಮಾತ್ರ ವಾಸಿಸುತ್ತಿದ್ದಾರೆ. ಆದರೆ, ಈ ಗ್ರಾಮದಲ್ಲಿ 350ಕ್ಕಿಂತ ಹೆಚ್ಚು ಬೆರ್ಚಪ್ಪಗಳಿದ್ದು, ಸೋಜಿಗವೆಂಬಂತೆ ಅವು ಅಲ್ಲಿನ ನಿವಾಸಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿವೆ.

ಇದನ್ನೂ ಓದಿ; Kalladka Prabhakar Bhat: ಹಿಂದೂ ಹೆಣ್ಣು ಮಕ್ಕಳು ಇನ್ನುಮುಂದೆ ಬ್ಯಾಗ್‌ನಲ್ಲಿ ಚೂರಿ ಇಟ್ಕೊಂಡು ಓಡಾಡಿ: ಕಲ್ಲಡ್ಕ ಪ್ರಭಾಕರ ಭಟ್

ಈ ಬೆರ್ಚಪ್ಪಗಳನ್ನು ಸ್ಥಳೀಯ ಕಲಾವಿದರೇ ತಯಾರಿಸುತ್ತಾರೆ. ಆಯಾನೊ ತ್ಸುಕಿಮಿ ಎಂಬ ಬೆರ್ಚಪ್ಪಗಳ ಕಲಾವಿದ ನಗೊರೋ ಗ್ರಾಮದಲ್ಲಿ ಹುಟ್ಟಿ, ನಂತರ ಓಸಾಕಾ ನಗರಕ್ಕೆ ವಲಸೆ ಹೋದ. 2002ರಲ್ಲಿ ಆತ ತನ್ನ ತಂದೆಯ ಆರೈಕೆಗೆ ಗ್ರಾಮಕ್ಕೆ ಮರಳಿದ. ಆತ ತನ್ನ ಹೊಲದಲ್ಲಿ ಬೆಳೆಗಳನ್ನು ಪಕ್ಷಿಗಳಿಂದ ರಕ್ಷಿಸಲು ತನ್ನ ತಂದೆಯ ರೂಪದಲ್ಲಿ ಮೊದಲ ಬೆರ್ಚಪ್ಪನನ್ನು ತಯಾರಿಸಿದ.

ಈ ಬೆರ್ಚಪ್ಪ ನಿಜವಾದ ವ್ಯಕ್ತಿಯಂತೆ ಕಾಣುತ್ತಿದ್ದರಿಂದ, ಸ್ಥಳೀಯರು ಅದನ್ನು ನಿಜವಾದ ವ್ಯಕ್ತಿ ಎಂದು ಭಾವಿಸಿದರು. ಈ ಘಟನೆ ಆಯಾನೊಗೆ ಪ್ರೇರಣೆಯಾಗಿ, ಆತ ತನ್ನ ನೆನಪಿನಲ್ಲಿರುವ ಗ್ರಾಮಸ್ಥರ ಪ್ರತಿರೂಪವಾಗಿ ಬೆರ್ಚಪ್ಪಗಳನ್ನು ತಯಾರಿಸಲು ಪ್ರಾರಂಭಿಸಿದ. ಆಯಾನೊ ತಯಾ ರಿಸಿದ ಪ್ರತಿಯೊಂದು ಬೆರ್ಚಪ್ಪಗೆ ಹೆಸರು, ವ್ಯಕ್ತಿತ್ವ ಮತ್ತು ಕಥೆ ಇದೆ. ಇವುಗಳನ್ನು ಆತ ಬೆರ್ಚಪ್ಪಗಳ ನೋಂದಣಿಯಲ್ಲಿ ದಾಖಲಿಸಿದ್ದಾನೆ. ತೊಗರಿ ಹೊಲಗಳಲ್ಲಿ ಕೃಷಿಕರಂತೆ, ಬಸ್ ನಿಲ್ದಾಣದಲ್ಲಿ ಕಾಯುತ್ತಿರುವವರಂತೆ, ಶಾಲೆಯಲ್ಲಿರುವ ಮಕ್ಕಳಂತೆ ಮತ್ತು ವಿವಿಧ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಂತೆ ಅವನ್ನು ನಿಲ್ಲಿಸಲಾಗಿದೆ. ಈ ಬೆರ್ಚಪ್ಪ ಗಳು ಆ ಗ್ರಾಮಕ್ಕೆ ಜೀವಂತಿಕೆ ಮತ್ತು ಕಲಾ ಸೊಗಡನ್ನು ನೀಡಿವೆ. ಆ ಗ್ರಾಮದ ಹಳೆಯ ಪ್ರಾಥಮಿಕ ಶಾಲೆಯನ್ನು ಆಯಾನೊ ಬೆರ್ಚಪ್ಪಗಳಿಂದ ತುಂಬಿದ್ದಾನೆ. ಇಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಾಲೆಯ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಬೆರ್ಚಪ್ಪಗಳನ್ನು ಕಾಣಬಹುದು.

ಈ ಶಾಲೆಯನ್ನು ಈಗ ಪ್ರವಾಸಿಗರಿಗೆ ತೆರೆಯಲಾಗಿದ್ದು, ಅವರು ಈ ವಿಶಿಷ್ಟ ಅನುಭವವನ್ನು ಅನುಭವಿಸಬಹುದು. ಪ್ರತಿ ವರ್ಷದ ಅಕ್ಟೋಬರ್ ತಿಂಗಳ ಮೊದಲ ಭಾನುವಾರ, ನಗೊರೋ ಗ್ರಾಮದಲ್ಲಿ ಬೆರ್ಚಪ್ಪಗಳ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಆಹಾರದ ಮಳಿಗೆಗಳು, ಮೋಚಿ ತಯಾರಿಕೆ ಮತ್ತು ಫೋಟೋ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.

ಫೋಟೋ ಸ್ಪರ್ಧೆಯ ವಿಜೇತರಿಗೆ ಆಯಾನೊ ವಿಶೇಷ ಬೆರ್ಚಪ್ಪನನ್ನು ತಯಾರಿಸಿ ನೀಡುತ್ತಾನೆ. ನಗೊರೋ ಗ್ರಾಮ ಈಗ ಜಪಾನಿನ ಒಂದು ಪ್ರಮುಖ ಪ್ರವಾಸಿ ಆಕರ್ಷಣೆ. ಪ್ರವಾಸಿಗರು ಈ ಗ್ರಾಮಕ್ಕೆ ಬಂದು ಬೆರ್ಚಪ್ಪಗಳನ್ನು ನೋಡಲು, ಆಯಾನೊ ಕಾರ್ಯಾಗಾರವನ್ನು ಭೇಟಿ ಮಾಡಲು ಮತ್ತು ಈ ವಿಶಿಷ್ಟ ಅನುಭವವನ್ನು ಅನುಭವಿಸಲು ಬರುತ್ತಾರೆ. ಇದು ಗ್ರಾಮಕ್ಕೆ ಆರ್ಥಿಕ ಲಾಭವನ್ನು ತಂದಿದ್ದು, ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದೆ.

ನಗೊರೋ ಗ್ರಾಮದ ಬೆರ್ಚಪ್ಪಗಳು ಜಪಾನಿನ ಗ್ರಾಮೀಣ ಪ್ರದೇಶಗಳಲ್ಲಿ ಜನಸಂಖ್ಯೆ ಕುಸಿತದ ಸಮಸ್ಯೆಯನ್ನು ಹತ್ತಿಕ್ಕಲು ಒಂದು ಮಾದರಿಯಾಗಿವೆ. ಆಯಾನೊ ಕಲಾತ್ಮಕ ಪ್ರಯತ್ನಗಳು ಗ್ರಾಮಕ್ಕೆ ಜೀವಂತಿಕೆ ನೀಡಿವೆ ಮತ್ತು ಸಮಾಜದಲ್ಲಿ ಸಂವಾದವನ್ನು ಪ್ರೇರೇಪಿಸಿವೆ. ಇದು ಕಲೆಯ ಮೂಲಕ ಸಾಮಾಜಿಕ ಬದಲಾವಣೆಯನ್ನು ತರುವಲ್ಲಿ ಒಂದು ದಿಟ್ಟ ಪ್ರಯತ್ನ. ಆಯಾನೊ ಪ್ರತಿ ಮಾಸದ ನಾಲ್ಕನೇ ಬುಧವಾರ, ಹಳೆಯ ಬಾಲವಾಡಿಯಲ್ಲಿ ಬೆರ್ಚಪ್ಪ ತಯಾರಿಕೆ ಕಾರ್ಯಾ ಗಾರಗಳನ್ನು ಆಯೋಜಿಸುತ್ತಾನೆ. ಈ ಕಾರ್ಯಾಗಾರಗಳಲ್ಲಿ ಭಾಗವಹಿಸುವವರು ಬೆರ್ಚಪ್ಪಗಳ ತಲೆಗಳನ್ನು ತಯಾರಿಸಲು ಕಲಿಯುತ್ತಾರೆ ಮತ್ತು ತಮ್ಮದೇ ಆದ ಬೆರ್ಚಪ್ಪಗಳನ್ನು ಮನೆಗೆ ತೆಗೆದುಕೊಂಡು ಹೋಗಬಹುದು.

ಈ ಕಾರ್ಯಾಗಾರಗಳು ಬೆರ್ಚಪ್ಪಗಳ ಕಲೆಯ ಬಗ್ಗೆ ಆಸಕ್ತಿಯುಳ್ಳವರಿಗೆ ಒಂದು ಉತ್ತಮ ಅವಕಾಶ ವನ್ನು ಒದಗಿಸುವುದಂತೂ ನಿಜ. ಇದನ್ನು ನೋಡಲೆಂದೇ ನಗರಪ್ರದೇಶಗಳಿಂದ ಜನ ಬರುತ್ತಿರು ವುದು ಗಮನಾರ್ಹ.