Lakshmi Hebbalkar : ಅಧಿಕಾರಿಗೆ ಕಪಾಳಮೋಕ್ಷಕ್ಕೆ ಮುಂದಾಗಿದ್ದ ಸಿಎಂ; ಅಚಾತುರ್ಯ ನಡೆದಿದೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಮರ್ಥನೆ
ಸಿಎಂ ಸಿದ್ದರಾಮಯ್ಯ ಗರಂ ಆಗಿ ವೇದಿಕೆ ಮೇಲೆಯೇ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಲು ಮುಂದಾಗಿದ್ದರು. ಈ ಘಟನೆ ಟೀಕೆ ಹಾಗೂ ಆಕ್ರೋಶಕ್ಕೆ ಕಾರಣವಾಗಿತ್ತು. ಈ ನಡುವಲ್ಲೇ ಇದು ಅಚಾತುರ್ಯದಿಂದಾದ ಘಟನೆ ಎಂದು ಸಚಿವೆ ಲಕ್ಷ್ನೀ ಹೆಬ್ಬಾಳ್ಕರ್ ಅವರು ಸಮರ್ಥಿಸಿಕೊಂಡಿದ್ದಾರೆ.


ಬೆಳಗಾವಿ: ಎರಡು ದಿನಗಳ ಹಿಂದೆ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಇದ್ದ ವೇದಿಕೆ ಬಳಿ ಬಿಜೆಪಿ ಕಾರ್ಯಕರ್ತೆಯರು ಮುತ್ತಿಗೆ ಹಾಕಲು ಪ್ರಯತ್ನಿಸಿದ್ದು, ಸಿಎಂ ಸಿದ್ದರಾಮಯ್ಯ ಗರಂ ಆಗಿ ವೇದಿಕೆ ಮೇಲೆಯೇ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಲು ಮುಂದಾಗಿದ್ದರು. ಈ ಘಟನೆ ಟೀಕೆ ಹಾಗೂ ಆಕ್ರೋಶಕ್ಕೆ ಕಾರಣವಾಗಿತ್ತು. ಈ ನಡುವಲ್ಲೇ ಇದು ಅಚಾತುರ್ಯದಿಂದಾದ ಘಟನೆ ಎಂದು ಸಚಿವೆ ಲಕ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರು ಸಮರ್ಥಿಸಿಕೊಂಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಅಧಿಕಾರಿ ಮೇಲೆ ಕೈ ಮಾಡಿದ್ದನ್ನು ಆ ಕ್ಷಣದಲ್ಲಿ ನಾನು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಸಿದ್ದರಾಮಯ್ಯ ಅವರು ಹಿರಿಯರು, ನಮ್ಮ ಮುಖ್ಯಮಂತ್ರಿಗಳು. ಆ ಕ್ಷಣದಲ್ಲಿ ಆ ರೀತಿ ಆಗಿರಬಹುದು. ಆದರೆ. ಯಾವತ್ತೂ ಅಧಿಕಾರಿಗಳಿಗೆ ತಮ್ಮ ಚೌಕಟ್ಟಿನಲ್ಲಿ ಗೌರವ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಯಾವುದೇ ಉದ್ದೇಶ ಇಟ್ಟುಕೊಂಡು ಈ ರೀತಿ ಮಾಡಿಲ್ಲ. ಪ್ರತಿಯೊಬ್ಬರು ಅವರನ್ನು ಗೌರವಿಸುತ್ತಾರೆ. ಹಿಂದುಳಿದ ವರ್ಗ ಮತ್ತು ತುಳಿತಕ್ಕೊಳಗಾದವರ ಧ್ವನಿಯಾದ ಒಬ್ಬ ಧೀಮಂತ ನಾಯಕ. ಹೀಗಾಗಿ ಆ ಅಚಾತುರ್ಯ ನಡೆದಿದೆ. ಆದರೆ ಇದು ಸರಿ ಅಲ್ಲ ಎಂದು ಅವರು ಹೇಳಿದರು. ಬಿಜೆಪಿ ಮೇಲೆ ಹರಿಹಾಯ್ದ ಸಚಿವೆ "ಬಿಜೆಪಿ ರ್ಯಾಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇದೇ ರೀತಿ ಮಾಡಿದರೆ ಬಿಜೆಪಿ ನಾಯಕರು ಮೌನವಾಗಿರುತ್ತಾರೆಯೇ? ಇಂತಹ ಘಟನೆಗಳು ಮುಂದುವರಿದರೆ ಭವಿಷ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸುಮ್ಮನಾಗುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Physical abuse: ಅರಣ್ಯಾಧಿಕಾರಿಗೆ ಕಪಾಳಮೋಕ್ಷ-ಮಾಜಿ MLA ಜೈಲುಪಾಲು
ಮೊನ್ನೆ ಬಿಜೆಪಿಯವರು ಬೆಳಗಾವಿಯಲ್ಲಿ ಕಾರ್ಯಕ್ರಮ ಮಾಡಿದ್ದ ವೇಳೆ ರಾಹುಲ್ ಗಾಂಧಿ ಸೇರಿ ನಮ್ಮ ನಾಯಕರನ್ನು ಬೈದಿದ್ದಾರೆ. ಸದನದ ಒಳಗೂ ಮತ್ತು ಹೊರಗೂ ರಾಹುಲ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆ ಅಂತಾ ನಾವು ಶಾಂತಿಯಿಂದ ವರ್ತಿಸಿದ್ದೆವು. ಆದರೆ, ಬೆಳಗಾವಿಯಲ್ಲಿ 25 ಸಾವಿರ ಜನರನ್ನು ಸೇರಿಸಿ ವಿಭಾಗ ಮಟ್ಟದ ಕಾರ್ಯಕ್ರಮ ಮಾಡುವಾಗ ಮಧ್ಯದಲ್ಲಿ ಬಂದು ಆ ಮಟ್ಟಕ್ಕೆ ಗದ್ದಲ ಮಾಡುತ್ತಾರೆ ಎಂದರೆ, ಮುಂದಿನ ದಿನಗಳಲ್ಲಿ ಬಿಜೆಪಿ ಸಮಾವೇಶದಲ್ಲಿ ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಈ ರೀತಿ ಮಾಡಿದರೆ ಅವರನ್ನು ಸುಮ್ಮನೇ ಬಿಡುತ್ತಾರಾ? ಎಂದು ಪ್ರಶ್ನಿಸಿದ್ದಾರೆ. ನಾವು ಕೊನೆಯ ಬಾರಿಗೆ ಬಿಜೆಪಿಗೆ ಎಚ್ಚರಿಕೆ ನೀಡುತ್ತೇವೆ ಎಂದು ಎಚ್ಚರಿಸಿದ್ದಾರೆ.